ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ನಗರ; ಬಾಡಿಗೆ ಮನೆ ಬಲು ತುಟ್ಟಿ

Last Updated 17 ಅಕ್ಟೋಬರ್ 2011, 10:25 IST
ಅಕ್ಷರ ಗಾತ್ರ

ಬಾಗಲಕೋಟೆ: ವಿದ್ಯಾಗಿರಿ ಮತ್ತು ಹಳೆ ಬಾಗಲಕೋಟೆಯಲ್ಲಿ ಅಗತ್ಯ ವಸ್ತುಗಳು ಬೇಕೆಂದರೆ ಅಲೆದಾಡುವುದೇ ಬೇಡ, ಕಾಲ್ನಡಿಗೆಯಲ್ಲೇ ಎಲ್ಲ ವಸ್ತುಗಳು ಕೈಗೆಟಕುತ್ತವೆ. ಅಲ್ಲದೇ ಶಾಲೆ-ಕಾಲೇಜು, ಆಸ್ಪತ್ರೆ,  ಹೋಟೆಲ್,  ಗೂಡಂಗಡಿ, ಹೂವು,ಹಣ್ಣು, ಕಾಯಿಪಲ್ಲೆ, ಮೀನು-ಮಾಂಸದ ಮಾರುಕಟ್ಟೆ, ಸರ್ಕಾರಿ ಕಚೇರಿಗಳೂ ಕೂಡ ಅಕ್ಕಪಕ್ಕದಲ್ಲೇ ಇರುವುದರಿಂದ ವಾಹನ ಹತ್ತಿ ತಿರುಗುವ ಪ್ರಮೇಯವೇ ಇಲ್ಲ.

ಆದರೆ ನವನಗರದ ಚಿತ್ರಣವೇ ಬೇರೆ, ಕಾಯಿಪಲ್ಲೇ ಬೇಕೆಂದರೂ ಹಳೆ ಬಾಗಲಕೋಟೆಗೆ ಬರಬೇಕು, ಅಷ್ಟೇ ಅಲ್ಲ ಶಾಲೆ-ಕಾಲೇಜು, ಆಸ್ಪತ್ರೆ, ಅಂಗಡಿ-ಮುಂಗಟ್ಟು, ಸಿನಿಮಾ, ಬಸ್ ನಿಲ್ದಾಣ ಹೀಗೆ ಪ್ರತಿಯೊಂದಕ್ಕೂ ನಾಲ್ಕೈದು ಕಿಲೋ ಮೀಟರ್ ದೂರದ ಹಳೆ ಬಾಗಲಕೋಟೆಗೆ ಇಲ್ಲವೇ ವಿದ್ಯಾಗಿರಿಗೆ ಬರಬೇಕು. ಇನ್ನು ರಾತ್ರಿಯಾದರೆ ಒಂಟಿ ಮನೆಗಳ ಪಾಡು ಹೇಳತೀರದು, ಅಂಜಿಕೆ, ಭಯದಿಂದಲೇ ಹೊರಗೆ ಕಾಲಿಡಬೇಕಾದ ಸ್ಥಿತಿ.

ನವನಗರದ ನಿರ್ಮಾಣದ ಉದ್ದೇಶವೇ ಇನ್ನೂ ಕೈಗೂಡಿಲ್ಲದ ಪರಿಣಾಮ ವಿದ್ಯಾಗಿರಿ ಮತ್ತು ಹಳೆ ಬಾಗಲಕೋಟೆ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಳವಾಗತೊಡಗಿದೆ. ಪರಿಣಾಮ ನಗರದಲ್ಲಿ ಮನೆಗಳಿಗೆ ಬಾಡಿಕೆ ದುಪ್ಪಟ್ಟಾಗಿದೆ. 

 ಕೇಳಿದಷ್ಟು ಬಾಡಿಗೆ ಕೊಟ್ಟರೂ ವಿದ್ಯಾಗಿರಿ ಮತ್ತು ಹಳೆ ಬಾಗಲಕೋಟೆಯಲ್ಲಿ ಮನೆಗಳು ಬಾಡಿಗೆಗೆ ಸಿಗುತ್ತಿಲ್ಲ, ಇನ್ನು ನವನಗರ ನಿರೀಕ್ಷೆಯಂತೆ ಬೆಳವಣಿಗೆಯಾಗದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

`ಮುಳುಗಡೆ ನಗರಿ~  ದಿನದಿಂದ ದಿನಕ್ಕೆ ಪ್ರಗತಿಯಾಗುತ್ತಿದ್ದು ಅದರಲ್ಲೂ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳು ತಲೆ ಎತ್ತುತ್ತಿರುವುದರಿಂದ ನಗರಕ್ಕೆ ವಿವಿಧೆಡೆಯಿಂದ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಆದರೆ ನಗರಕ್ಕೆ ಬರುವವರ ಸಂಖ್ಯೆಗೆ ಅನುಗುಣವಾಗಿ ವಾಸ್ತವ್ಯ ಕಲ್ಪಿಸುವಲ್ಲಿ ನಗರ ವಿಫಲವಾಗಿದೆ.

ಪ್ರಸ್ತುತ 1.2 ಲಕ್ಷ ಜನಸಂಖ್ಯೆ ಹೊಂದಿರುವ ಬಾಗಲಕೋಟೆ ನಗರದಲ್ಲಿ 22 ಸಾವಿರ ಮನೆಗಳಿವೆ. ಹಳೆ ಬಾಗಲಕೋಟೆ ಹಂತಹಂತವಾಗಿ ಮುಳುಗಡೆಯಾದ ಬಳಿಕ ಜನತೆ ನವನಗರದಲ್ಲಿ ತಮಗೆ ನೀಡಿರುವ ನಿವೇಶನದಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ಬದಲು ವ್ಯಾಪಾರ, ವಹಿವಾಟು ಉದ್ದೇಶದಿಂದ ಮತ್ತು ನವನಗರದಲ್ಲಿ ಮೂಲಸೌಲಭ್ಯಗಳ ಕೊರತೆ, ಸಂಚಾರಕ್ಕೆ ತೊಂದರೆ ಇರುವ ಕಾರಣದಿಂದ ಹಳೆ ಬಾಗಲಕೋಟೆ ಮತ್ತು ವಿದ್ಯಾಗಿರಿಯಲ್ಲೇ ಬಾಡಿಗೆ ಮನೆಗಳನ್ನು ಮಾಡಿಕೊಂಡು ವಾಸಿಸತೊಡಗಿದ್ದಾರೆ.

ಪರಿಣಾಮ ನಗರಕ್ಕೆ ಉದ್ಯೋಗ, ವ್ಯವಹಾರದ ಉದ್ದೇಶದಿಂದ ಬರುವವರಿಗೆ ಮನೆಗಳು ಸಿಗುತ್ತಿಲ್ಲ, ಜನ ಸಾಮಾನ್ಯರ ಅಸಹಾಯಕತೆಯನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಮನೆ ಮಾಲೀಕರು ಬಾಡಿಗೆದಾರರಿಂದ ಹೆಚ್ಚಿನ ಹಣ ವಸೂಲಿ ಮಾಡತೊಡಗಿದ್ದಾರೆ. ಕೊಡದಿದ್ದರೆ ಮನೆ ಖಾಲಿ ಮಾಡಿ ಎಂದು ತಾಕೀತು ಮಾಡತೊಡಗಿದ್ದಾರೆ.

ಹಳೆ ಬಾಗಲಕೋಟೆ ನಗರದಲ್ಲಿ ಮುಳುಗಡೆಯಾದ ಸುಮಾರು 7 ಸಾವಿರ ಆಸ್ತಿಗೆ ನವನಗರದಲ್ಲಿ ನಿವೇಶನ ನೀಡಲಾಗಿದೆ. ಆದರೆ ಇದರಲ್ಲಿ ಬಹುಪಾಲು ಕುಟುಂಬಗಳು ಇನ್ನೂ ನವನಗರಕ್ಕೆ ಸ್ಥಳಾಂತರಗೊಳ್ಳದೇ ಇರುವುದು ಸದ್ಯದ ಪರಿಸ್ಥಿತಿಗೆ ಮೂಲ ಕಾರಣವಾಗಿದೆ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಬಿ.ಎ. ಶಿಂಧೆ.

ನವನಗರದಲ್ಲಿ 27 ಸಾವಿರ ನಿವೇಶನಗಳಿದ್ದರೂ ಪ್ರಸ್ತುತ 9 ಸಾವಿರ ಕಟ್ಟಡಗಳು ಮಾತ್ರ ನಿರ್ಮಾಣವಾಗಿದೆ.
ಇದರಿಂದಾಗಿ ಅಳಿದುಳಿದರುವ ಹಳೆ ಬಾಗಲಕೋಟೆ ಮತ್ತು ವಿದ್ಯಾಗಿರಿಯ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಳವಾಗ ತೊಡಗಿದೆ ಎಂದು ಅವರು ಹೇಳುತ್ತಾರೆ.

ನವನಗರದಲ್ಲಿ ಬಿಟಿಡಿಎ ಮತ್ತು ನಗರಸಭೆ ದಿನದಿಂದ ದಿನಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಾಕಿಕೊಳ್ಳುತ್ತಿದ್ದರೂ ಜನತೆ ಅತ್ತ ಹೆಚ್ಚು ಒಲವು ತೋರುತ್ತಿಲ್ಲ ಎಂಬುದು ಅವರ ಆರೋಪವಾಗಿದೆ.

ನವನಗರದಲ್ಲಿ ಕಳೆದ 11 ವರ್ಷದಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಸಂಗ್ರಹಿಸುತ್ತಿಲ್ಲ ಅಲ್ಲದೇ ನೀರಿನ ತೆರಿಗೆಯನ್ನೂ ಸಂಗ್ರಹಿಸುತ್ತಿಲ್ಲ, ಇಷ್ಟಾದರೂ ಜನತೆ ನವನಗರದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿಲ್ಲ ಎನ್ನುತ್ತಾರೆ ಅವರು.

ನಗರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ಜಿಲ್ಲೆಯ ವಿವಿಧ ಭಾಗದಿಂದ ಪೋಷಕರು ನಗರಕ್ಕೆ ಬಂದು ಮನೆ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಅಲ್ಲದೇ ಉದ್ಯೋಗ ನಿಮಿತ್ತ ನಗರಕ್ಕೆ ಬರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಬಾಡಿಗೆ ಮನೆಗಳ ಸಂಖ್ಯೆ ಅಗತ್ಯಕ್ಕೆ ತಕ್ಕಷ್ಟು ಇಲ್ಲದಿರುವುದು ಈ ಎಲ್ಲ ಸಮಸ್ಯೆಗೆ ಮೂಲ ಕಾರಣವಾಗಿದೆ.

ಪರಿಣಾಮ ವಿದ್ಯಾಗಿರಿ, ಹಳೆಬಾಗಲಕೋಟೆಯಲ್ಲಿ ಇರುವ ಸೀಮಿತ ಮನೆಗಳಿಗೆ ಬೇಡಿಕೆ ಹೆಚ್ಚಳವಾಗಿದ್ದು, ಸಿಂಗಲ್ ಬೆಡ್‌ರೂಂ ಮನೆಗೆ ವರ್ಷದ ಹಿಂದೆ ಇದ್ದ ರೂ. 2500 ಒಮ್ಮೆಲೆ ರೂ. 3 ಸಾವಿರದ ಗಡಿ ದಾಟ ತೊಡಗಿದೆ. ಅಲ್ಲದೇ ಬಾಡಿಗೆದಾರರ ಅನಿವಾರ್ಯತೆಯನ್ನು ಬಳಿಸಕೊಂಡು ರೂ. ಮೂರುವರೆ  ಸಾವಿರಕ್ಕಿಂತಲೂ ಅಧಿಕ ಬಾಡಿಗೆ ವಿಧಿಸತೊಡಗಿರುವುದು ಬಾಡಿಗೆದಾರರ ಜೀವನ ನಿರ್ವಹಣೆ ಕಷ್ಟಕರವಾಗತೊಡಗಿದೆ.

ಇನ್ನು ರೂ. 4 ಸಾವಿರದ ಆಸುಪಾಸು ಇದ್ದ ಡಬಲ್ ಬೆಡ್ ರೂಂ. ಮನೆಗಳಿಗೆ ಇದೀಗ ರೂ. 5 ಸಾವಿರ ಬಾಡಿಗೆ ನೀಡಬೇಕಾದ ಸ್ಥಿತಿ ಉದ್ಭವವಾಗಿದೆ. ಇಷ್ಟು ಬಾಡಿಗೆ ನೀಡಿದರೂ ಬೇಕಾದ ಬಡಾವಣೆಯಲ್ಲಿ ಮನೆಗಳು ಸಿಗುತ್ತಿಲ್ಲ.
ನವನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಡಗಳು ನಿರ್ಮಾಣವಾಗದಿದ್ದರೆ ಮುಂದಿನದಿನಗಳಲ್ಲಿ ಬಾಡಿಗೆ ಮನೆಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.

`ಬಾಡಿಗೆ ನಿಯಂತ್ರಣ ಕಾಯ್ದೆ ಜಾರಿಯಾಗಲಿ~

ಬಾಡಿಗೆದಾರರ ಶೋಷಣೆ ತಪ್ಪಿಸುವ ಉದ್ದೇಶದಿಂದ `ಬಾಡಿಗೆ ನಿಯಂತ್ರಣ ಕಾಯ್ದೆ~ಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಕರ್ನಾಟಕ ಜನಾರೋಗ್ಯ ಆಂದೋಲನದದ ಬಾಗಲಕೋಟೆ ಜಿಲ್ಲಾ ಸಂಚಾಲಕಿ ಸ್ವರ್ಣ ಭಟ್ ಮತ್ತು ತಾಲ್ಲೂಕು ಸಂಚಾಲಕಿ ಪ್ರತಿಭಾ ದೇಶಪಾಂಡೆ ಆಗ್ರಹಿಸಿದ್ದಾರೆ.

ಕಾಯ್ದೆ ಜಾರಿಯಾದರೆ ಬಾಡಿಗೆದಾರರಿಗೂ ಮತ್ತು ಮನೆಯ ಮಾಲೀಕರಿಗೂ ಹಾಗೂ ಸರ್ಕಾರಕ್ಕೂ ಅನುಕೂಲವಾಗಲಿದೆ. ಯಾರೊಬ್ಬರು ಶೋಷಣೆಗೆ ಒಳಗಾಗುವುದು ತಪ್ಪುತ್ತದೆ. ಏಕರೂಪದಲ್ಲಿ ನಿರ್ದಿಷ್ಟ ಬಾಡಿಗೆ ಪಾವತಿ ಮಾಡಬೇಕಾದ ಕಾರಣ ಮನಸ್ಸಿಗೆ ಬಂದಂತೆ ಬಾಡಿಗೆ ಹೆಚ್ಚಳ ಮಾಡುವ ಪದ್ಧತಿ ತಪ್ಪಲಿದೆ ಎಂದು ತಿಳಿಸಿದರು.

ನವನಗರದ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಬೇಕು, ಮೂಲಸೌಲಭ್ಯಗಳನ್ನು ಒದಗಿಸುವತ್ತ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT