ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿ ಬೆಂಡಾದ ದೇಹ: ಸೇಡಂನಲ್ಲೊಂದು ಸೊಮಾಲಿಯಾ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಬಾಗಿ-ಬೆಂಡಾದ ಸಣಕಲು ದೇಹ... ಭವಿಷ್ಯದ ಹೊಂಗನಸು ಹೊತ್ತ ಕಂಗಳಲ್ಲಿ ಮರೆಯಾಗುತ್ತಿರುವ ಬೆಳಕು... ಕಿತ್ತು ತಿನ್ನುವ ಬಡತನ... ಪ್ರತಿನಿತ್ಯ ತುತ್ತು ಅನ್ನಕ್ಕೂ ಪರದಾಟ... ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದ ಮಕ್ಕಳ ಕರುಣಾಜನಕ ಕಥೆ ಇದು.

ಮುಧೋಳಕ್ಕೆ ಒಮ್ಮೆ ಭೇಟಿ ನೀಡಿದರೆ... ಅಸ್ಥಿ ಪಂಜರದಂತಹ ಗೇಣುದ್ದದ ಮಗುವನ್ನು ಮಡಿಲಲ್ಲಿರಿಸಿ ಶೂನ್ಯದತ್ತ ಕಣ್ಣು ನೆಟ್ಟು ಕುಳಿತ  ನರಪೇತಲ ಅಮ್ಮಂದಿರನ್ನು ಹೊಂದಿದ  ಸೊಮಾಲಿಯಾ ದೇಶ ನೆನಪಾಗುತ್ತದೆ.

ಸುಮಾರು 8500 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದ ಜನ ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. 5 ವರ್ಷದೊಳಗಿನ 815 ಮಕ್ಕಳಲ್ಲಿ 24 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಎನ್ನುತ್ತದೆ ಸರ್ಕಾರಿ  ಲೆಕ್ಕ!

ಈ ಮಕ್ಕಳ ದೇಹವನ್ನು ನೋಡಿದರೆ ಜೋತಾಡುವ ಚರ್ಮದ ಹೊದಿಕೆ ಹೊದ್ದ, ಮೂಳೆಗಳ ಹಂದರ ಎಂಬಂತಿದೆ. ಮುಖ, ಎದೆಗೂಡುಗಳಲ್ಲಿ ಮೂಳೆ ಹೊರಕ್ಕೆ ವಕ್ರವಾಗಿ, ಚಲಿಸುವ ಅಸ್ಥಿಪಂಜರದಂತಿವೆ. ಕೆಲವು ಮಕ್ಕಳು ಅಂಕುಡೊಂಕು ಕೈ-ಕಾಲು, ಗುಡಾಣದಂತ ಹೊಟ್ಟೆ, ಬೆಳಕೇ ಇಲ್ಲದ ಪೇಲವ ಕಣ್ಣು, ಉಸಿರಾಡುವ ಗೊರಗೊರ ಶಬ್ದ, ಜೀರುಂಡೆಯಂತೆ ಅಳುವ ದನಿ...

ಬಡ ಮಹಿಳೆಯರು ಮತ್ತು ಮಕ್ಕಳಿಗೆ ಆಹಾರ ಒದಗಿಸುವುದಕ್ಕಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಂಗನವಾಡಿ ಮೂಲಕ ಪೂರಕ ಪೌಷ್ಟಿಕ ಆಹಾರಗಳನ್ನು ಒದಗಿಸಲಾಗುತ್ತದೆ. ಆದರೂ ಆಹಾರ ಮಕ್ಕಳಿಗೆ ಸಾಕಾಗುವುದಿಲ್ಲ.

ಕೂಲಿ-ನಾಲಿ ಮಾಡಿಕೊಂಡು ಹೊಟ್ಟೆಹೊರೆಯುವ ರತ್ನಮ್ಮಳಿಗೆ 3 ಜನ ಮಕ್ಕಳು. ಇವರ ಕೊನೆಯ ಮಗಳು ಜ್ಯೋತಿ. ಅವಳಿಗೆ ನಾಲ್ಕೂವರೆ ವರ್ಷ ವಯಸ್ಸು. ಜ್ಯೋತಿ ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿದ್ದಾಳೆ. ಅವಳಿಗೆ ಹೀಗಾಗಲು ಕಾರಣ ತಾಯಿ ರತ್ನಮ್ಮಳಿಗೆ 13ನೇ ವಯಸ್ಸಿನಲ್ಲಿ ಮದುವೆ ಆದದ್ದು. ಅಲ್ಲದೇ ಒಂದೂವರೆ ವರ್ಷಕ್ಕೆ ಒಂದರಂತೆ ಮಕ್ಕಳು ಹುಟ್ಟಿರುವುದು. ಕಿತ್ತು ತಿನ್ನುವ ಬಡತನದ ಮಧ್ಯೆ ಪೌಷ್ಟಿಕ ಆಹಾರವನ್ನು ನೀಡಲು ಸಾಧ್ಯವಾಗದೇ ಇರುವುದು.

`ಅಂಗನವಾಡಿಯಲ್ಲಿ ಪ್ರತಿದಿನ ಕುರುಕುರೆ, ಉಪ್ಪಿಟ್ಟು ರವೆ ಮನೆಗೆ ಕೊಡುತ್ತಾರೆ. ಅಲ್ಲದೇ ಅರ್ಧ ಕೆ.ಜಿ. ಅಕ್ಕಿ, ಕಾಲು ಕೆ.ಜಿ. ಬೇಳೆ ತಿಂಗಳಿಗೆ ನೀಡಲಾಗುತ್ತದೆ. ಇದು ಮಕ್ಕಳಿಗೆ ಸಾಕಾಗುವುದಿಲ್ಲ `ಎನ್ನುತ್ತಾರೆ. ಅಲ್ಲದೆ, `...ಜ್ಯೋತಿಗೆ ಇನ್ನು ಆರು ತಿಂಗಳಲ್ಲಿ ಐದು ವರ್ಷ ತುಂಬುತ್ತದೆ. ಹಾಗಾಗಿ ಅಂಗನವಾಡಿಯಲ್ಲಿ ನೀಡುವ ಪೌಷ್ಟಿಕ ಆಹಾರ ಕೈತಪ್ಪುತ್ತದೆ~ ಎಂದು ರತ್ನಮ್ಮ ಬೇಸರ ವ್ಯಕ್ತಪಡಿಸಿದರು.

ಸಬಲ ಕಾರ್ಯಕ್ರಮ: ಕಿಶೋರಿಯರಿಗಾಗಿ (ಕೌಮಾರ, ಹದಿವಯಸ್ಸು) `ಸಬಲ ಯೋಜನೆ~ ಆರಂಭಿಸಲಾಯಿತು. ಈ ಮೊದಲು ಚಾಲನೆಯಲ್ಲಿದ್ದ  `ನ್ಯಾಷನಲ್ ನ್ಯೂಟ್ರಿಷನ್ ಫಾರ್ ಅಡಾಲಸೆಂಟ್ ಗರ್ಲ್ಸ್~ (ಎನ್‌ಪಿಎಜಿ) ಯೋಜನೆಯ ಬದಲಿಗೆ ಇದು ಜಾರಿಗೆ ಬಂದಿದೆ.

`ಸಬಲ~ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದು 11 ರಿಂದ  18 ವರ್ಷದೊಳಗಿರುವ ಕಿಶೋರಿಯರಿಗಾಗಿ ಆಯೋಜಿಸಲಾಗಿದೆ.

ಕಿಶೋರಾಸ್ಥೆಯಲ್ಲೇ ಅವರಿಗೆ ಅತ್ಯಗತ್ಯ ತಿಳುವಳಿಕೆ ನೀಡುವುದರಿಂದ ಮುಂದೆ ಆಗುವ ಅನಾಹುತಗಳನ್ನು ತಡೆಗಟ್ಟಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಯೋಜನೆ ಪೂರ್ಣಪ್ರಮಾಣದಲ್ಲಿ  ಜಾರಿಗೆ ಬಂದರೆ ಶಿಶು ಮರಣ, ಅಪೌಷ್ಟಿಕತೆಯಿಂದ ನರಳುವಂತಹ ಮಕ್ಕಳ ಪ್ರಮಾಣವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಸೇಡಂ ಶಿಶು ಅಭಿವೃದ್ಧಿ ಅಧಿಕಾರಿ (ಸಿಡಿಪಿಒ) ಸಿ.ವಿ. ರಾಮನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT