ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾ ಬಂಧನ: ಬಿಜೆಪಿ ಪ್ರತಿಭಟನೆ

Last Updated 6 ಜೂನ್ 2011, 8:40 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಧಾರವಾಡ: ಭ್ರಷ್ಟಾಚಾರದ ವಿರುದ್ಧ ಸತ್ಯಾಗ್ರಹ ಆರಂಭಿಸಿದ್ದ ಬಾಬಾ ರಾಮದೇವ್ ಅವರನ್ನು ನವದೆಹಲಿಯಲ್ಲಿ ಮಧ್ಯರಾತ್ರಿ ಬಂಧಿ ಸಿದ್ದನ್ನು ವಿರೋಧಿಸಿ ಬಿಜೆಪಿಯಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು. ಸಂಜೆ ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರು 24 ಗಂಟೆಗಳ ಧರಣಿ ಸತ್ಯಾಗ್ರಹವನ್ನೂ ಆರಂಭಿಸಲಾಯಿತು.

ಹುಬ್ಬಳ್ಳಿಯಲ್ಲಿ ಮಧ್ಯಾಹ್ನ ಪಕ್ಷದ ಕಚೇರಿಯಿಂದ ಹೊರಟ ಬಿಜೆಪಿ ಕಾರ್ಯಕರ್ತರು ಕಿಮ್ಸ ಮುಂಭಾಗದ ಮಹಾತ್ಮಾ ಗಾಂಧಿ ಪ್ರತಿಮೆವರೆಗೆ ಮೆರವಣಿಗೆ ನಡೆಸಿದರು.

`ಶಾಂತ ರೀತಿಯಿಂದ ಸತ್ಯಾಗ್ರಹ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಯುಪಿಎ ಸರ್ಕಾರ ಅಶ್ರುವಾಯು ಸಿಡಿಸಿದ್ದಲ್ಲದೆ ಲಾಠಿ ಪ್ರಹಾರ ಸಹ ಮಾಡಿದ್ದು ಇದರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಮೂವತ್ತು ವರ್ಷ ಗಳ ಹಿಂದೆ ಕಾಂಗ್ರೆಸ್ ಸರ್ಕಾರ ಮಧ್ಯ ರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದನ್ನು ಇದು ನೆನಪಿಸುತ್ತದೆ~ ಎಂದು ಸಂಸದ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತ ಪಡಿಸಿದರು.

`ಬಂಧನದಿಂದ ಜನರ ಹೋರಾಟ ವನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಪ್ರಧಾನಿ ಮನಮೋಹನ ಸಿಂಗ್ ಅರಿಯಬೇಕು. ಜನರ ಹೋರಾಟವನ್ನು ಹತ್ತಿಕ್ಕುವ ಮೂಲಕ ಯುಪಿಎ ಸರ್ಕಾರ ತನ್ನ ಪತನದ ಆರಂಭಕ್ಕೆ ಮುನ್ನುಡಿ ಬರೆದು ಕೊಂಡಿದೆ~ ಎಂದು ಹೇಳಿದರು.

`ಬಾಬಾ ರಾಮದೇವ್ ಅವರು ಕೇಳಿದ್ದಾದರೂ ಏನು? ವಿದೇಶದಲ್ಲಿರುವ ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅದನ್ನು ದೇಶಕ್ಕೆ ವಾಪಸು ತೆಗೆದುಕೊಂಡು ಬರಬೇಕು, ವಿಶ್ವಸಂಸ್ಥೆಯ ಭ್ರಷ್ಟಾಚಾರ ತಡೆ ಕಾಯ್ದೆಗೆ ಬೆಂಬಲ ನೀಡಬೇಕು ಎಂದು ಅವರು ಕೇಳಿದ್ದರು. ಅವರ ಬೇಡಿಕೆ ಗಳನ್ನು ಮಾನ್ಯ ಮಾಡದ ಕಾಂಗ್ರೆಸ್ ನೇತೃತ್ವದ ಸರ್ಕಾರ, ತನ್ನಲ್ಲೇ ಭ್ರಷ್ಟರು ತುಂಬಿದ್ದಾರೆ ಎಂಬುದನ್ನು ಬಿಂಬಿಸಿದೆ~ ಎಂದು ಅವರು ಆರೋಪಿಸಿದರು.

`ಅಧಿಕಾರ ಬಂದ ಕೇವಲ ನೂರು ದಿನಗಳಲ್ಲಿ ಕಪ್ಪು ಹಣದ ವಿರುದ್ಧ ವಿಧೇಯಕ ಮಂಡನೆ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಈ ಆಶ್ವಾಸನೆ ಯನ್ನು ಇದುವರೆಗೆ ಈಡೇರಿಸಿಲ್ಲ~ ಎಂದು ಆಕ್ರೊಶ ವ್ಯಕ್ತಪಡಿಸಿದರು. ಬಿಜೆಪಿ ಕಾರ್ಯಕರ್ತರು ಯುಪಿಎ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.

ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನ ಕಾಯಿ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಷಣ್ಮುಖಪ್ಪ ಗುರಿಕಾರ, ಶಾಸಕ ವೀರಭದ್ರಪ್ಪ ಹಾಲಹರವಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ವೀರೇಶ ಸಂಗಳದ, ರಂಗಾ ಬದ್ದಿ ಮತ್ತಿತರರು ಹಾಜರಿದ್ದರು.

ಎರಡನೇ ದಿನಕ್ಕೆ ಉಪವಾಸ
ಬಾಬಾ ರಾಮದೇವ್ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಪತಂಜಲಿ ಯೋಗ ಸಮಿತಿ ಧಾರವಾಡ ಘಟಕದ ಅಧ್ಯಕ್ಷ ಬಿ.ಡಿ. ಹಿರೇಮಠ ಆರಂಭಿಸಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.

`ಶಾಂತಿಯಿಂದ ಹೋರಾಟ ಮಾಡು ತ್ತಿದ್ದ ಜನರ ಮೇಲೆ ದಬ್ಬಾಳಿಕೆ ನಡೆಸಿದ ಕೇಂದ್ರ ಸರ್ಕಾರವನ್ನು ವಜಾಗೊಳಿಸ ಬೇಕು~ ಎಂದು ಹಿರೇಮಠ ರಾಷ್ಟ್ರಪತಿ ಗಳನ್ನು ಒತ್ತಾಯಿಸಿದ್ದಾರೆ. ಸಮಿತಿ ಸದಸ್ಯರು ಮೌನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಶಂಕರ ದೊಡಮನಿ, ಪರ್‌ಬತ್ ಸಿಂಗ್, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿಜಯಾ ನಂದ ಸರಸ್ವತಿ, ಪಾಲಿಕೆ ಸದಸ್ಯ ಶಿವು, ವಿವಿಧ ಸಂಘಟನೆಗಳಾದ ಶ್ರೀಶಕ್ತಿ ಯೋಗ-ವಿಜ್ಞಾನ ಕೇಂದ್ರ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಕದಂಬ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಗುತ್ತಿಗೆ ದಾರರ ಸಂಘ, ಜಯ ಕರ್ನಾಟಕ ಸಂಘ, ಆಜಾದಿ ಬಜಾವೋ ಆಂದೋಲನ, ರಾಮಕೃಷ್ಣ ವಿವೇಕಾ ನಂದ ಆಶ್ರಮ, ನವ ಜವಾನ್ ಭಾರತ ಸಭಾ, ಪ್ರೋಬಸ್ ಕ್ಲಬ್, ಸಾವಯವ ಕೃಷಿಕರ ಸಂಘ, ಮರಾಠಾ ಕಾಲೋನಿ, ಕುಂದಗೋಳದ ಬಸವೇಶ್ವರ ಯೋಗ ಕೇಂದ್ರ ಮುಂತಾದವುಗಳ ಸದಸ್ಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT