ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ ಮಾನಸ ಸರೋವರದ ಚಿತ್ರಣ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

 ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಆಗಿರುವ ಅನೇಕ ರೀತಿಯ ಸಾಮಾಜಿಕ ಸ್ಥಿತ್ಯಂತರಗಳು ನಮ್ಮ ಜೀವನದ ಮೇಲೆ ಬೇರೆ ಬೇರೆ ಪ್ರಭಾವಗಳನ್ನು ಬೀರಿವೆ. ಉದ್ಯೋಗ, ಆರ್ಥಿಕ ಸಮಸ್ಯೆ, ಖಾಸಗಿ ಸ್ಪರ್ಧೆಗಳು ನಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಅತೀವ ಮಹತ್ವಾಕಾಂಕ್ಷೆ, ಆರ್ಥಿಕ ಒತ್ತಡಗಳಿಂದ ವಿಮುಕ್ತಿ ಹೊಂದುವ ಬಯಕೆ ನಮ್ಮ ಜೀವನದ ಮೇಲೆ ಅನೇಕ ರೀತಿಯ ಆತಂಕಗಳನ್ನು ಒಡ್ಡುತ್ತವೆ. ಇದರ ಪರಿಣಾಮವೆಂದರೆ ಸಾಂಸಾರಿಕ ಜೀವನದಲ್ಲಿ ಅಭದ್ರತೆ. ಈ ಅಭದ್ರತೆಯ ಕಾರಣದಿಂದಾಗಿ ಪಾಲಕರು ಮಕ್ಕಳ ಮೇಲೆ ಬೇರೆ ಬೇರೆ ರೀತಿಯ ಒತ್ತಡಗಳನ್ನು ಹೇರುತ್ತಿದ್ದಾರೆ.
 
ಅನೇಕ ಪಾಲಕರು ತಮ್ಮ ಮಕ್ಕಳು ವೈದ್ಯರಾಗಬೇಕು; ಇಲ್ಲವೇ ಎಂಜಿನಿಯರ್ ಆಗಬೇಕೆಂದು ಹಂಬಲಿಸುವುದು ಪ್ರಾಯಶಃ ಮುಂದೆ ಅವರು ಹೆಚ್ಚು ಸಂಪಾದಿಸಲಿ ಎಂಬ ಕಾರಣಕ್ಕೆ. ಇದರೊಂದಿಗೆ ಅತಿ ಹೆಚ್ಚು ಅಂಕ ಗಳಿಸಿದವರನ್ನು ಬುದ್ಧಿವಂತ ಹುಡುಗರೆಂದು ನಾವು ಹೇಳುತ್ತಿರುತ್ತೇವೆ.ವಾಸ್ತವವಾಗಿ ಅಂಕ ಗಳಿಕೆಗೂ ಬುದ್ಧಿವಂತಿಕೆಗೂ ಯಾವ ಸಂಬಂಧವೂ ಇಲ್ಲ. ಇಂತಹ ಕಟು ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳು ಬೆಳೆಯುತ್ತಿದ್ದಾರೆ.ಹಿರಿಯರಿಂದ ಸಣ್ಣ ಮಕ್ಕಳವರೆಗೆ ಕಾಡುವ ಅನೇಕ ಮಾನಸಿಕ ಸಮಸ್ಯೆಗಳಿಗೆ ದೆವ್ವ ಬಂದವರೂ ಉತ್ತರ ಕೊಡಲಾರರು. ಕಳೆದ ಅನೇಕ ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ/ಪಿಯುಸಿಯಲ್ಲಿ ಫೇಲಾದ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಈಗ ನಾವು ಉತ್ತರ ಕಂಡುಹಿಡಿಯಬೇಕಾಗಿದೆ.

ಸಂಕೀರ್ಣವಾದ ಇಂದಿನ ಶೈಕ್ಷಣಿಕ- ಸಾಮಾಜಿಕ ಸಂದರ್ಭದಲ್ಲಿ ಪಾಲಕರಿಗೆ ಮತ್ತು ಶಿಕ್ಷಕರಿಗೆ ಸರಿಯಾದ ಮಾಹಿತಿ ಕೊಡುವುದಕ್ಕೆ ನಮಗೆ ಈಗ ಬೇಕಾಗಿರುವುದು ಮನೋವೈದ್ಯಕೀಯ ಬರಹಗಳು. ಈ ದೃಷ್ಟಿಯಿಂದ ಡಾ. ಪಿ.ವಿ.ಭಂಡಾರಿಯವರ ‘ಸ್ಕೂಲ್ ಫೋಬಿಯಾ’ ಎಂಬ ಕೃತಿ ಮಹತ್ವದ್ದಾಗಿದೆ.‘ಫೋಬಿಯಾ ಎಂದರೆ ಯಾವುದಾದರೂ ಒಂದು ವಿಷಯದ ಬಗ್ಗೆ ವಿಪರೀತವಾದ, ಅರ್ಥಹೀನವಾದ ಹೆದರಿಕೆ (ಪು.89)’ ಎಂದು ಲೇಖಕರು ವಿವರಿಸಿದ್ದಾರೆ.

ಈ ಕೃತಿಯಲ್ಲಿ ಒಟ್ಟು ಹತ್ತು ಲೇಖನಗಳಿವೆ. ಈ ಎಲ್ಲ ಲೇಖನಗಳಲ್ಲಿಯೂ ಕಂಡುಬರುವುದು ನಿಜವಾದ ಘಟನೆಗಳು. ಇವುಗಳಲ್ಲಿ ಅನೇಕ ನಿಜಾಂಶಗಳು ಎಲ್ಲರ ಜೀವನದಲ್ಲಿಯೂ ಆಗುತ್ತಿರಬಹುದು. ಎಷ್ಟೋ ಸಂದರ್ಭದಲ್ಲಿ ನಮ್ಮ ಮಕ್ಕಳು ಯಾವುದಕ್ಕೋ ಭಯಪಡುತ್ತಿರುತ್ತಾರೆ. ಅಂಥ ಭಯ ಯಾವುದು? ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿಯೇ ಕುಳಿತು ಹೊಟ್ಟೆನೋವು ಎಂದು ಅಳುವುದಕ್ಕೆ ಕಾರಣವೇನು?- ಇಂಥ ವಿಷಯಗಳು ಪಾಲಕರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಶಿಕ್ಷಕರಿಗೂ ಇದರ ಬಗೆಗೆ ಸರಿಯಾದ ಅರಿವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಭಂಡಾರಿ ಅವರ ‘ಸ್ಕೂಲ್ ಫೋಬಿಯಾ’ ಕೃತಿ ಶಿಕ್ಷಕರಿಗೆ-ಪಾಲಕರಿಗೆ ತಿಳಿವಳಿಕೆ ನೀಡುವಂತಿದೆ.

ಇಲ್ಲೊಂದು ಮಾತನ್ನು ಹೇಳಬೇಕು: ನಮ್ಮಲ್ಲಿ ಬೇರೆ ಬೇರೆ ಶಿಸ್ತುಗಳ ಕುರಿತು ಬರುವ ಪುಸ್ತಕಗಳು ತುಂಬಾ ಕಡಿಮೆ; ಬಂದರೂ ಅನೇಕವು ಪಠ್ಯಪುಸ್ತಕ ಮಾದರಿಗಳವು. ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ ಮುಂತಾದ ಕ್ಷೇತ್ರಗಳ ಬಗೆಗೆ ಬಂದಿರುವ ಪುಸ್ತಕಗಳು ಅಪರೂಪ. ಮನಃಶಾಸ್ತ್ರದ ಬಗೆಗಂತೂ ಬೆರಳೆಣಿಕೆ ಲೇಖಕರು ಮಾತ್ರ ಬರೆಯುತ್ತಿದ್ದಾರೆ. ನಮಗೆ ಅಂದರೆ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಅತ್ಯಂತ ಅಗತ್ಯವಾಗಿರುವ ಕ್ಷೇತ್ರವೆಂದರೆ ಮಕ್ಕಳ ಮನಃಶಾಸ್ತ್ರ. ಯಾಕೆಂದರೆ, ಪಾಲಕರು ಮತ್ತು ಮತ್ತು ಶಿಕ್ಷಕರು ಸದಾ ಮಕ್ಕಳ ಜೊತೆಗಿದ್ದರೂ ಅವರಿಗೆ  ಮಕ್ಕಳ ಸಮಸ್ಯೆಯೇನು ಎಂಬುದು ಸರಿಯಾಗಿ ತಿಳಿದಿರುವುದಿಲ್ಲ. ಮನಃಶಾಸ್ತ್ರಜ್ಞರ ಅಗತ್ಯ ಉಂಟಾಗುವುದೇ ಈ ತಿಳಿವಳಿಕೆಯ ಅಗತ್ಯದಿಂದಾಗಿ.

ವಿವಿಧ ಉದಾಹರಣೆಗಳ ಮೂಲಕ ಫೋಬಿಯಾವನ್ನು ಕುರಿತು ಲೇಖಕರು ವಿವರಿಸಿದ್ದು, ಇಡೀ ಕೃತಿಯನ್ನು ಓದಿಮುಗಿಸಿದ ಮೇಲೆ ನಮಗೆ ಥಟ್ಟನೆ ಹೊಳೆಯುವುದು ಫೋಬಿಯಾದ ನಿಜ ಸ್ವರೂಪ. ಇದನ್ನು ಭಂಡಾರಿಯವರು ನಿರೂಪಿಸುವಾಗ ಫೋಬಿಯಾದಿಂದ ಬಳಲಿದ ಅನೇಕ ಮಕ್ಕಳ ಕತೆಯನ್ನು ಹೇಳಿದ್ದಾರೆ. ಹೌದಲ್ಲ, ಇಂತಹ ಮಕ್ಕಳನ್ನು ನಮ್ಮ ನೆರೆಹೊರೆಯಲ್ಲಿಯೇ ನೋಡಿದ್ದೇವಲ್ಲ ಎಂದು ಅನಿಸುತ್ತದೆ. ಅಂದರೆ ಈ ಕೃತಿಯ ಉದ್ದೇಶವಿರುವುದು ಓದುಗರಿಗೆ ಮನರಂಜನೆ ಕೊಡುವುದಲ್ಲ, ನಮ್ಮ ಸಮಾಜದ ನಿಜವಾದ ಪರಿಸ್ಥಿತಿ ಇದಾಗಿದೆ ಎಂದು ವಿವರಿಸುವುದು.
ಸ್ವಾತಿಯ ಗೀಳಿನ ಮನೋಭಾವ, ಮಯೂರನ ತಲೆನೋವು, ಅವನ ಖಿನ್ನತೆ, ಅನಿಯಂತ್ರಿತ ಮೂತ್ರವಿಸರ್ಜನೆ, ಅವಿನಾಶನ ಕಲಿಕೆಯ ತೊಂದರೆ- ಮುಂತಾದ ಸಮಸ್ಯೆಗಳನ್ನು ಲೇಖಕರು ವಿವರಿಸಿದ್ದಾರೆ. ಸಮಸ್ಯೆ ಹಾಗೂ ಪಾಲಕರು ಮತ್ತು ಶಿಕ್ಷಕರು ವಹಿಸಬೇಕಾದ ಎಚ್ಚರಗಳ ಬಗ್ಗೆ ಕೃತಿಯಲ್ಲಿ ಸೂಚನೆಗಳಿವೆ.

ವೈದ್ಯಕೀಯ ಪರಿಭಾಷೆಗಳು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಆದರೆ ಡಾ.ಭಂಡಾರಿಯವರು ವೈದ್ಯಕೀಯ ಪರಿಭಾಷೆಯನ್ನು ಬಳಸಿದರೂ ಅದನ್ನು ಎಲ್ಲರಿಗೂ ತಿಳಿಯುವಂತೆ ಹೇಳಿದ್ದಾರೆ. ಉದಾಹರಣೆಗೆ, ಕಲಿಕೆಯ ನ್ಯೂನತೆ; ಗೀಳು ಮನೋಭಾವ ಮೊದಲಾದವುಗಳನ್ನು ಅವರು ಸರಳವಾಗಿ ಹೇಳಿದ್ದಾರೆ. ಈ ದಷ್ಟಿಯಿಂದಲೂ ಇದು ಮಾರ್ಗದರ್ಶಿ ಕೃತಿ. ಮನೋವೈದ್ಯರೊಬ್ಬರನ್ನು ಹುಚ್ಚು ಹಿಡಿದವರು ಮಾತ್ರ ಭೇಟಿಯಾಗುವುದು ಎಂಬ ಅಪಕಲ್ಪನೆಯನ್ನೂ ಪುಸ್ತಕ ನಿವಾರಿಸುತ್ತದೆ.

ಇಲ್ಲೊಂದು ಕುತೂಹಲದಾಯಕ ಸಂಗತಿ ಪ್ರಸ್ತಾಪಿಸಬೇಕು. ಅದೆಂದರೆ, ಈಚಿನ ದಿನಗಳಲ್ಲಿ ‘ಆಪ್ತ ಸಲಹಾಕೇಂದ್ರ’ಗಳು ಹೆಚ್ಚುತ್ತಿವೆಯಲ್ಲ, ಯಾಕೆ? ಆಪ್ತರಿಲ್ಲದೆ ಹೋದಾಗ ಆಪ್ತಸಲಹೆ ಬೇಕು. ಒಡೆದು ಹೋಗುತ್ತಿರುವ ಮನೆಗಳು, ಮನಸ್ಸುಗಳು, ಸಂಬಂಧಗಳ ನಡುವೆ ಏಳುತ್ತಿರುವ ಗೋಡೆಗಳು- ಈಗ ಆಪ್ತ ಸಲಹೆಯನ್ನು ಬೇಡುತ್ತಿವೆ. ತಂದೆತಾಯಿಗೆ ಮಕ್ಕಳೊಂದಿಗೆ ಆಟವಾಡಲು ಪುರುಸೊತ್ತಿಲ್ಲ. ಗಂಡನಿಗೆ ಹೆಂಡತಿಯೊಂದಿಗೆ; ಹೆಂಡತಿ ಗಂಡನೊಂದಿಗೆ ಸಾವಧಾನದಿಂದ ಮಾತಾಡುವ ಪರಿಸ್ಥಿತಿಯಿಲ್ಲ. ಶಾಲೆಯಲ್ಲಿ ಮೇಷ್ಟ್ರುಗಳು ‘ಶಿಸ್ತು’ ಹೇಳುವುದೇ ಪಾಠವೆಂದುಕೊಂಡಿದ್ದಾರೆ. ಭಂಡಾರಿ ಅವರು ಶಿಕ್ಷೆಯ ಬಗೆಗೆ ನೀಡುವ ವಿವರವು ಆಸಕ್ತಿದಾಯಕವಾಗಿದೆ.

ಧನಾತ್ಮಕ ಅಂಶಗಳು ಸಾಕಷ್ಟಿದ್ದರೂ ಇದನ್ನು ಪರಿಪೂರ್ಣ ಎಂದು ಹೇಳುವಂತಿಲ್ಲ. ಈ ಮಾದರಿಯ ಕೃತಿಗಳು ಯಾವಾಗಲೂ ನಮ್ಮನ್ನು ನಾವೇ ತಿಳಿದುಕೊಳ್ಳುವಂತೆ ಮಾಡುತ್ತದೆ. ಅದು ಮುಖ್ಯ. ವಾಸ್ತವವಾಗಿ ಯಾವುದೇ ಕೃತಿಗಳು ನಾವು ತಿಳಿಯುವುದಕ್ಕೆ ಇರುವ ಕೈಕಂಬಗಳು ಮಾತ್ರ.
‘ಫೋಬಿಯಾ’ದ ಸಾಕಷ್ಟು ವಿವರವುಳ್ಳ ಲೇಖನ; ಆಪ್ತ ಸಲಹೆಯ ಮಾದರಿ; ಅದಕ್ಕೆ ಮಕ್ಕಳು ಕೊಡುವ ಪ್ರತಿಕ್ರಿಯೆ ಹಾಗೂ ಸಾಮಾನ್ಯ ಜನರು ಫೋಬಿಯಾವನ್ನು ಹೇಗೆ ಕಂಡುಹಿಡಿಯಬಹುದು; ಮನೋವೈದ್ಯರಲ್ಲಿ ಹಂಚಿಕೊಳ್ಳಬೇಕಾದ ವಿಷಯಗಳ ಕುರಿತು ಲೇಖಕರು ಬರೆಯಬಹುದಿತ್ತು ಅನಿಸುತ್ತದೆ. ಉದಾಹರಣೆಗೆ ‘ರೂಪಾ’ಳ ಸಮಸ್ಯೆಯಂಥವು ನಮ್ಮ ಗಮನಕ್ಕೆ ಬಾರದಿರುವುದರಿಂದ ನಾವು ವೈದ್ಯರಲ್ಲಿಯೂ ಹೇಳಲಾಗುವುದಿಲ್ಲ. ಮನೋವೈದ್ಯರಿಗೆ ಅತ್ಯಂತ ಮುಖ್ಯವಾಗಿರುವ, ಆದರೆ ನಾವು ಅಲಕ್ಷಿಸುವ ಅನೇಕ ಸಣ್ಣ ವಿವರಗಳಿರುತ್ತವೆ. ಅವುಗಳ ಕುರಿತು ಲೇಖಕರು ಬರೆಯಬಹುದಿತ್ತು ಎನಿಸುತ್ತದೆ.

‘ಸ್ಕೂಲ್ ಫೋಬಿಯ’ ನಮ್ಮ ಮಕ್ಕಳು, ಶಿಕ್ಷಕರು, ಪಾಲಕರಿಗೆ ಉಪಯುಕ್ತವಾದುದೆಂದು ನನ್ನ ಭಾವನೆ. ಅಂದಹಾಗೆ, ‘ಸ್ಕೂಲ್ ಫೋಬಿಯ’ ಭಂಡಾರಿ ಅವರ ಪ್ರಥಮ ಕೃತಿ. ಅವರ ಮುಂದಿನ ಕೃತಿಗಳ ಬಗ್ಗೆ ನನಗೆ ಕುತೂಹಲವಿದೆ.

ಸ್ಕೂಲ್ ಫೋಬಿಯ 
ಸಂ: ಡಾ. ಪಿ.ವಿ.ಭಂಡಾರಿ; ಬೆ: ರೂ.50; ಪ್ರ: ಸರಸ್ವತಿಬಾಯಿ ಪ್ರಕಾಶನ, ಮಾನಸ, ಸದಾನಂದ ಟವರ್ಸ್‌, ಸಿಟಿಬಸ್ ಸ್ಟ್ಯಾಂಡ್, ಉಡುಪಿ.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT