ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶನಿವಾರ ಕರ್ನಾಟಕ ಬಂದ್ ಆಗಿದ್ದು ನಿಜ. ಆದರೆ ಆ ಹುಡುಗನಿಗೆ ಬಹಳ ದುರಾದೃಷ್ಟದ ದಿನ. ಅಂದು ನಡೆದ ಅಪಘಾತ ಆತನ ದೃಷ್ಟಿಗೇ ಕಂಟಕವಾಗಿತು. ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದ ಹುಡುಗನಿಗೆ ನಗರದ ನಾರಾಯಣ ನೇತ್ರಾಲಯದಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಉತ್ತರ ಬೆಂಗಳೂರಿನ ಲಗ್ಗೆರೆಯ ಹೇರ್ ಕಟಿಂಗ್ ಸಲೂನ್‌ಗೆ ಹೋದ ಆರು ವರ್ಷದ ಲೋಹಿತ್ ಬಲಗಣ್ಣು ಗಾಯಗೊಂಡಿದೆ. ಬಾಲಕನಿಗಿನ್ನೂ ಸಂಪೂರ್ಣ ದೃಷ್ಟಿ ಲಭಿಸಿಲ್ಲ. ಪೂರ್ಣ ದೃಷ್ಟಿ ಮರಳಲು ಇನ್ನೂ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕಾಗಿದೆ.

ಹುಡುಗನ ತಂದೆ ಲೋಕೇಶ್ ಹೇಳುವಂತೆ, ಪ್ರತಿಭಟನೆಯ ಮೆರವಣಿಗೆ ಸಲೂನ್ ಮುಂದುಗಡೆಯೇ ಹೋದ ಸಂದರ್ಭದಲ್ಲಿ ಭಯದಿಂದ ಸಲೂನ್ ಮಾಲೀಕ ಬಾಗಿಲು ಎಳೆಯುವ ಭರದಲ್ಲಿ ತನ್ನ ಕೈಯಲ್ಲಿ ಕತ್ತರಿ ಇರುವುದನ್ನೇ ಮರೆತು ಗಡಿಬಿಡಿಯಲ್ಲಿ ಲೋಹಿತ್‌ನ ಬಲಗಣ್ಣಿಗೆ ಕತ್ತರಿಯಿಂದ ಚುಚ್ಚಿದ. 

ಗಾಯದ ಪ್ರಮಾಣದ ಅರಿವೇ ಇಲ್ಲದ ಪೋಷಕರು ಆತನನ್ನು ಮನೆಗೆ ಕರೆದೊಯ್ದರು. ಆತ ಕಣ್ಣಿನಲ್ಲಿ ನೋವಿದೆ ಮತ್ತು ಏನೂ ಕಾಣುತ್ತಿಲ್ಲ ಎಂದು ದೂರಿದಾಗ ನಾರಾಯಣ ನೇತ್ರಾಲಯಕ್ಕೆ ಕರೆತಂದರು. `ಪರೀಕ್ಷಿಸಿದಾಗ ಕತ್ತರಿ ಚುಚ್ಚಿ ಆತನ ಕಾರ್ನಿಯ ಸಂಪೂರ್ಣವಾಗಿ ಛಿದ್ರಗೊಂಡಿತ್ತು. ಕಾರ್ನಿಯಾ ರಿಪೇರಿ ಮಾಡುವಲ್ಲಿ ಯಶಸ್ವಿಯಾದೆವು.

ಆತನಿಗೆ  ಕೆಟರಾಕ್ಟ್ ಉಂಟಾಗಿದ್ದು ಅದಕ್ಕೆ ಮುಂದಿನ ತಿಂಗಳು ಮತ್ತೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಲೋಹಿತ್‌ಗೆ ದೃಷ್ಟಿ ಮರಳಲು ಇನ್ನೂ ಎರಡು ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ~ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗಶೆಟ್ಟಿ ಹೇಳಿದರು. ಈ ಶಸ್ತ್ರಚಿಕಿತ್ಸೆಯ ವೆಚ್ಚ 25,000 ರೂ. ಆಗಿದ್ದು ಎರಡನೇ ಶಸ್ತ್ರಚಿಕಿತ್ಸೆಗೂ ಅಷ್ಟೇ ಹಣ ಬೇಕಾಗುತ್ತದೆ. ರೋಗಿಯ ಪೋಷಕರು ಬಡವರು.ದಿನಗೂಲಿ ಕಾರ್ಮಿಕರು.

ಅವರು ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮಾಡಿಸುವ ಶಕ್ತಿ ಹೊಂದಿಲ್ಲ. ಆದ್ದರಿಂದ ನಾವು ಹುಡುಗನ ಪರವಾಗಿ ವೆಚ್ಚ ಭರಿಸಿದ್ದೇವೆ. ಮುಂದೆಯೂ ಅಗತ್ಯವಿದ್ದರೆ ಉಚಿತವಾಗಿ ಚಿಕಿತ್ಸೆ ಮಾಡುತ್ತೇವೆ ಎಂದು ಡಾ. ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT