ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾಪರಾಧಿ ಬಿಡುಗಡೆ ಮುಂದೂಡಲು ಮನವಿ

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ
Last Updated 14 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ರಾಜಧಾನಿಯಲ್ಲಿ 2012ರ ಡಿಸೆಂಬರ್ 16ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ  ಬಾಲಕನನ್ನು ವೀಕ್ಷಣಾಲಯದಿಂದ ಬಿಡುಗಡೆ ಮಾಡುವುದನ್ನು ಮುಂದೂ ಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ.

ಈ ತಿಂಗಳ 20ರಂದು ಬಾಲಕನನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಆತನ ಬಿಡುಗಡೆ ನಂತರದ ಪುನರ್ವಸತಿ ಯೋಜನೆಯಲ್ಲಿ ಕಡ್ಡಾಯವಾಗಿ ಇರಬೇಕಿದ್ದ ಹಲವು ಅಂಶಗಳು ಇಲ್ಲ.  ಹಾಗಾಗಿ ಆತನನ್ನು ಈಗ ಬಿಡುಗಡೆ ಮಾಡಬಾರದು ಎಂದು ಮನವಿ ಮಾಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್, ಬಿಡುಗಡೆ ನಂತರ ಏನೇನು ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂಬ ವಿವರಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದರು.

ವಾದ ಮತ್ತು ಪ್ರತಿವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಜಯಂತ್ ನಾಥ್ ಅವರನ್ನು ಒಳಗೊಂಡ ನ್ಯಾಯಪೀಠವು, ಆತನ ಬಿಡುಗಡೆಗೆ ತಡೆ ನೀಡಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯಂ ಸ್ವಾಮಿ ಸಲ್ಲಿಸಿದ ಅರ್ಜಿಯ ಆದೇಶವನ್ನು ಕಾದಿರಿಸಿದೆ.

ಮಾನಸಿಕ ಸ್ವಾಸ್ಥ್ಯ ಸ್ಥಿತಿ ಸೇರಿದಂತೆ ಬಿಡುಗಡೆ ನಂತರ ಸರ್ಕಾರ ಅನುಸರಿ ಸಬೇಕಾದ ಕ್ರಮಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು. ಆದ್ದರಿಂದ ಇನ್ನೂ ಕೆಲವು ದಿನಗಳ ಕಾಲ ಬಾಲಕ ವೀಕ್ಷಣಾಲಯದಲ್ಲಿಯೇ ಇರುವಂತೆ ಆದೇಶಿಸಬೇಕು ಎಂದು ಜೈನ್ ಮನವಿ ಮಾಡಿದರು.

ನಿರ್ಬಂಧಕ್ಕೆ ಮನವಿ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸ್ವಾಮಿ ಅವರು, ‘ಬಾಲಾಪರಾಧಿಯ ವೀಕ್ಷಣಾಲಯ ವಾಸದ ಅವಧಿ ಮುಗಿದಿದ್ದರೂ ನ್ಯಾಯಾಲಯ ಆತನ ಚಲನವಲನಗಳ ಮೇಲೆ ನಿರ್ಬಂಧ ಹೇರಬಹುದು’ ಎಂದು ಹೇಳಿದರು. ‘ಒಬ್ಬ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಲು ಸಾಧ್ಯವೆ’ ಎಂದು ನ್ಯಾಯಪೀಠ ಆಶ್ಚರ್ಯ ವ್ಯಕ್ತಪಡಿಸಿತು. 2011ರಲ್ಲಿ ತಿದ್ದುಪಡಿಯಾದ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಲ್ಲಿ ಕೆಲವು ಲೋಪಗಳಿವೆ ಎಂದು ಸ್ವಾಮಿ  ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ವೀಕ್ಷಣಾಲಯದಲ್ಲಿ ಗರಿಷ್ಠ ಮೂರು ವರ್ಷ ಕಳೆದ ನಂತರವೂ ಪಶ್ಚಾತ್ತಾಪ ತೋರದ ಬಾಲಾಪರಾಧಿಗಳ ಮನ ಪರಿವರ್ತನೆಗೆ ಏನು ಮಾಡಬೇಕು ಎಂಬ ಅಂಶ ಕಾಯ್ದೆಯಲ್ಲಿ ಇಲ್ಲ. ಸಮಾಜಕ್ಕೆ ಕಂಟಕವಾಗುವ ರೀತಿ ಇರುವ ಬಾಲಾಪರಾಧಿಗಳನ್ನು ಮತ್ತಷ್ಟು ಕಾಲ ವೀಕ್ಷಣಾಲಯದಲ್ಲಿ ಇರಿಸುವ ನಿಯಮ ಬೇಕು ಎಂದು ಸ್ವಾಮಿ ವಾದಿಸಿದ್ದಾರೆ.

2012ರ ಡಿಸೆಬಂರ್ 16ರಂದು ಈ ಬಾಲ ಅಪರಾಧಿಯೂ ಸೇರಿದಂತೆ ಆರು ಜನ ಚಲಿಸುತ್ತಿರುವ ಬಸ್ಸಿನಲ್ಲಿ 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ನಂತರ ಸಂತ್ರಸ್ತ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಿಂಗಪುರ ಆಸ್ಪತ್ರೆಯಲ್ಲಿ ಮೃತಪಟ್ಟರು. ಮುಕೇಶ್, ವಿನಯ್, ಪವನ್ ಮತ್ತು ಅಕ್ಷಯ್‌ಗೆ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಮರಣ ದಂಡನೆಯನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ನಂತರ ಈ ಅಪರಾಧಿಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT