ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ಓಣಿಯಲ್ಲಿ ಹೊಸ `ಕಿಸ್ಸರ್ ಬಾಯ್'

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಟಿಸಿರುವ ಮೂರು ಚಿತ್ರಗಳಲ್ಲೂ ಮೂವರು ಬೇರೆ ಬೇರೆ ನಾಯಕಿಯರ ಜತೆ `ಲಿಪ್‌ಲಾಕ್' ಮಾಡಿದ್ದಾರೆ ನಟ ರಸ್ಲಾನ್ ಮುಮ್ತಾಜ್.

ನಟಿಸಿದ ಎಲ್ಲ ಚಿತ್ರಗಳಲ್ಲೂ ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಮಗನ ಬಗ್ಗೆ ರಸ್ಲಾನ್ ತಾಯಿ ಅಂಜನಾ ಕಳವಳಕ್ಕೀಡಾಗಿದ್ದಾರಂತೆ. ಇಮ್ರಾನ್ ಹಶ್ಮಿ ನಂತರ ಬಾಲಿವುಡ್‌ನಲ್ಲಿ ತಮ್ಮ ಮಗನಿಗೆ ಎಲ್ಲಿ `ಸೀರಿಯಲ್ ಕಿಸ್ಸರ್' ಎಂಬ ಹಣೆಪಟ್ಟಿ ಬಿದ್ದುಬಿಡುತ್ತದೆಯೋ ಎಂಬುದು ಅಂಜನಾ ಆತಂಕಕ್ಕೆ ಕಾರಣವಂತೆ.

“ನನ್ನಮ್ಮ ಆತಂಕಗೊಂಡಿದ್ದಾರೆ. `ನಟಿಸಿದ ಚಿತ್ರಗಳಲ್ಲೆಲ್ಲಾ ನೀನು ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಯಾರೂ ಹೆಣ್ಣು ಕೊಡುವುದಿಲ್ಲ' ಎಂದು ಆಗಾಗ ಬೈಯುತ್ತಾರೆ. ಬಾಲಿವುಡ್‌ನಲ್ಲಿ ಇಮ್ರಾನ್ ಹಶ್ಮಿಗೆ `ಸೀರಿಯಲ್ ಕಿಸ್ಸರ್' ಎಂಬ ಬಿರುದಿದೆ. ಆ ಬಿರುದು ಮುಂದೆ ನನ್ನ ಮಗನಿಗೆ ಅಂಟಿಕೊಂಡು ಬಿಟ್ಟರೆ ಏನು ಗತಿ” ಎಂದು ಅಮ್ಮನಿಗೆ ಭಯ ಎನ್ನುತ್ತಾರೆ ರಸ್ಲಾನ್.

ರಸ್ಲಾನ್ ಬಾಲಿವುಡ್‌ನಲ್ಲಿ ಮೊದಲು ಕಾಣಿಸಿಕೊಂಡಿದ್ದು `ಎಂಪಿ-3' ಚಿತ್ರದಲ್ಲಿ. ಈ ಚಿತ್ರದಲ್ಲಿ ಹಜೆಲ್ ಕ್ರೌನೆ ಜತೆ ಲಿಪ್‌ಲಾಕ್ ಮಾಡಿದ್ದರು. ಆನಂತರ ತೆರೆಕಂಡ `ತೇರಿ ಸಂಗ್' ಚಿತ್ರದಲ್ಲಿ ಶೀನಾಗೂ ಮುತ್ತಿನ ಅಭಿಷೇಕ ಮಾಡಿದ್ದರು. ಮೂರನೇ ಚಿತ್ರ `ಐ ಡೋಂಟ್ ಲವ್ ಯೂ' ಚಿತ್ರದಲ್ಲೂ ರಸ್ಲಾನ್ ಸಹನಟಿಯೊಂದಿಗೆ ಲಿಪ್‌ಲಾಕ್ ಮಾಡಿದ್ದಾರೆ.

ಮೇ 17ರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿ ರಸ್ಲಾನ್ ಅವರು ಚೇತನಾ ಪಾಂಡೆ ಜತೆಗೆ ಮುತ್ತಿನಾಟ ಮುಂದುವರಿಸಿದ್ದಾರೆ. ಈ ಚಿತ್ರದ ಕಥೆ ಎಂಎಂಎಸ್ ಸ್ಕ್ಯಾಂಡಲ್ ಸುತ್ತ ಸುತ್ತುತ್ತದೆ. ಒಂದು ಎಂಎಂಎಸ್ ಹಗರಣ ಇಬ್ಬರ ನಡುವಿನ ಸಂಬಂಧವನ್ನು ಹೇಗೆ ಹಾಳುಗೆಡುವುತ್ತದೆ ಎಂಬುದು ಚಿತ್ರದ ತಿರುಳು.

ದಿಗಿಲುಗೊಂಡಿರುವ ಅಮ್ಮನಿಗೆ ರಸ್ಲಾನ್ ಸಮಾಧಾನ ಹೇಳುವುದು ಹೀಗೆ: `ನಾನು ಯಾವುದೇ ಒಂದು ಚಿತ್ರವನ್ನು ಒಪ್ಪಿಕೊಳ್ಳುವುದು ಅಥವಾ ಬಿಡುವುದು ಅದರಲ್ಲಿ ಚುಂಬನ ದೃಶ್ಯ ಇದೆ ಅಥವಾ ಇಲ್ಲ ಅಂತಲ್ಲ. ಕತೆ ಇಷ್ಟವಾದರೆ ಮಾತ್ರ ಚಿತ್ರಕ್ಕೆ ಸಹಿ ಹಾಕುತ್ತೇನೆ. ಆನಂತರದಲ್ಲಿ ಚಿತ್ರಕಥೆ ಚುಂಬನ ದೃಶ್ಯಗಳನ್ನು ಬೇಡುವಂತಿದ್ದರೆ ಮಾತ್ರ ಲಿಪ್‌ಲಾಕ್ ದೃಶ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ'.

ಚುಂಬನ ಅಥವಾ ಮೈನವಿರೇಳಿಸುವಂಥ ದೃಶ್ಯಗಳನ್ನು ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಬರುವುದಿಲ್ಲ ಎಂದು ಬಲವಾಗಿ ನಂಬಿರುವ 29 ವರ್ಷ ವಯಸ್ಸಿನ ರಸ್ಲಾನ್, ಅಂತಹ ದೃಶ್ಯಗಳನ್ನು ನೋಡಲು ಬೇರೆ ಬೇರೆ ಆಯ್ಕೆಗಳಿವೆ ಎನ್ನುತ್ತಾರೆ. ಕಿಸ್ಸಿಂಗ್ ದೃಶ್ಯಗಳ ಚಿತ್ರೀಕರಣದ ತಮ್ಮ ಅನುಭವವನ್ನು ಅವರು ಹೇಳಿಕೊಂಡಿದ್ದಾರೆ.

“ಸಿನಿಮಾದಲ್ಲಿ ಚುಂಬನ ದೃಶ್ಯಗಳಲ್ಲಿ ನಟಿಸುವುದನ್ನು ನಾನು ಎಂದಿಗೂ ವೈಯುಕ್ತಿಕವಾಗಿ ತೆಗೆದುಕೊಂಡಿಲ್ಲ. ಅದು ನಟನೆ ಅಷ್ಟೆ. ಅದರ ಬಗ್ಗೆ ವಿವರಣೆ ನೀಡುವ ಅಗತ್ಯ ಇಲ್ಲ. `ಐ ಡೋಂಟ್ ಲವ್ ಯೂ' ಚಿತ್ರದಲ್ಲಿ ನನ್ನ ಜತೆಗೆ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಳ್ಳುವಾಗ ಚೇತನಾ ತುಂಬಾ ನರ್ವಸ್ ಆಗಿದ್ದರು.

`ದಿಗಿಲು ಬೀಳುವ ಅವಶ್ಯಕತೆ ಇಲ್ಲ. ಈ ದೃಶ್ಯವನ್ನು ಒಂದೇ ಟೇಕ್‌ನಲ್ಲಿ ಮಗಿಸಿಬಿಡೋಣ' ಅಂತ ನಾನು ಆಕೆಗೆ ಧೈರ್ಯ ಹೇಳಿದೆ. ಈ ರೀತಿ ಧೈರ್ಯ ತುಂಬದಿದ್ದರೆ ಆಕೆ ಚುಂಬನ ದೃಶ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಆಗುತ್ತಿರಲಿಲ್ಲ. ಆಗ ಚುಂಬನ ದೃಶ್ಯವನ್ನು ಮತ್ತೇ ಮತ್ತೇ ಚಿತ್ರೀಕರಿಸುವ ಅಗತ್ಯ ಎದುರಾಗುತ್ತಿತ್ತು' ಎನ್ನುತ್ತಾರೆ ರಸ್ಲಾನ್.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT