ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿಸಿ ಕಚೇರಿ ಎದುರು ಸತ್ಯಾಗ್ರಹ

Last Updated 4 ಜೂನ್ 2013, 5:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಆರ್‌ಟಿಎಸ್ ಯೋಜನೆಯಡಿ ಹುಬ್ಬಳ್ಳಿ-ಧಾರವಾಡದ ನಡುವಣ ಹೆದ್ದಾರಿ ವಿಸ್ತರಣೆಗಾಗಿ 1,800 ಮರಗಳನ್ನು ಈಗಾಗಲೇ ಕಡಿಯಲಾಗಿದ್ದು ಇನ್ನೂ ಸುಮಾರು 2,000 ಮರಗಳನ್ನು ರಸ್ತೆ ವಿಸ್ತರಣೆಗಾಗಿ ಕಡಿಯಲಾಗುತ್ತಿದ್ದು ಅವುಗಳನ್ನು ಉಳಿಸುವ ನಿಟ್ಟಿನಲ್ಲಿ `ಚಿಪ್ಕೋ' ಆಂದೋಲನ ಹಮ್ಮಿಕೊಳ್ಳಲು ರಾಷ್ಟ್ರೋತ್ಥಾನ ಸಂಕಲ್ಪ ಟ್ರಸ್ಟ್ ನಿರ್ಧರಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಸಂತೋಷ ನರಗುಂದ, ಸಾವಿರಾರು ಮರಗಳನ್ನು ಕಡಿದು ಹಾಕಿದ್ದರಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ ಎನ್ನುವ ಕಿಂಚಿತ್ತೂ ಕಲ್ಪನೆ ಮಾಡದ ಬಿಆರ್‌ಟಿಎಸ್ ವಿರುದ್ಧ ವಿಶ್ವಪರಿಸರ ದಿನವಾದ ಜೂನ್ 5ರಂದು ಬೆಳಿಗ್ಗೆ 10 ಗಂಟೆಗೆ ರಾಯಾಪುರದಲ್ಲಿನ ಬಿಆರ್‌ಟಿಎಸ್ ಕಚೇರಿ ಎದುರು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಆರ್‌ಟಿಎಸ್ ಯೋಜನೆ ಅತ್ಯಂತ ಅವೈಜ್ಞಾನಿಕವಾಗಿದ್ದು ಚತುಷ್ಪಥದಿಂದ ಅದನ್ನು ಎಂಟು ಪಥಕ್ಕೆ ಹೆಚ್ಚಿಸುವ ನಿರ್ಧಾರ ಮತ್ತಷ್ಟು ಅಪ್ರಯೋಜಕವಾಗಲಿದೆ. ಇದರಿಂದ ಅವಳಿ ನಗರಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ದೂರಿದರು.

ಬಿಆರ್‌ಟಿಎಸ್ ಯೋಜನೆ ಪೂರ್ಣಗೊಂಡ ಮೇಲೆ ಹೆದ್ದಾರಿ ಬದಿಯಲ್ಲಿ ನಾಲ್ಕು ಸಾವಿರ ಮರಗಳ ನೆಡುತೋಪು ಬೆಳೆಸಬೇಕಿದೆ. ಆದರೆ ಈ ಅರಣ್ಯ ಬೆಳೆಸಲು ಯಾವುದೇ ಸಿದ್ಧತೆ ಈವರೆಗೂ ನಡೆದಿಲ್ಲ. ಮರಗಳನ್ನು ಬೆಳೆಸಲು ಹೆದ್ದಾರಿ ಬದಿಯಲ್ಲಿ ಭೂಮಿಯನ್ನೂ ಗುರುತಿಸಿಲ್ಲ. ಹೀಗಾಗಿ ಕೂಡಲೇ ಮರಗಳನ್ನು ಬೆಳೆಸಲು ಟ್ರಸ್ಟ್ ಆಗ್ರಹಿಸುತ್ತಿದೆ ಎಂದರು.

ಸಾರ್ವಜನಿಕ ಸಹಭಾಗಿತ್ವ ಇಲ್ಲ
ಹುಬ್ಬಳ್ಳಿ-ಧಾರವಾಡದ ನಡುವೆ ಆರಂಭಿಸಿರುವ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಬಿಆರ್‌ಟಿಎಸ್ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯೊಂದಿಗೆ ಚರ್ಚಿಸಿಲ್ಲ. ಜತೆಗೆ ಯಾವುದೇ ಹಂತದಲ್ಲಿಯೂ ನಾಗರಿಕರೊಂದಿಗೆ ಈ ಯೋಜನೆಯ ಲಾಭ ನಷ್ಟದ ಕುರಿತಾಗಿ ಚರ್ಚಿಸುವ ಗೋಜಿಗೆ ಹೋಗಿಲ್ಲ. ಈಗಾಗಲೇ ಕಾಮಗಾರಿ ಆರಂಭಿಸಿ ಸುಮಾರು 1800 ಮರಗಳನ್ನು ಕಡಿದುಹಾಕಿದ್ದು ಅದಕ್ಕೆ ಪ್ರತಿಯಾಗಿ ನಾಲ್ಕು ಸಾವಿರ ಸಸಿಗಳನ್ನು ನೆಡಬೇಕಿತ್ತು. ಆದರೆ ಆ ಕೆಲಸ ಆರಂಭವಾಗಲೇ ಇಲ್ಲ ಎಂದು ಅವರು ಆರೋಪಿಸಿದರು.

ಈ ನಡುವೆ ಈಗಿನ ಚತುಷ್ಪಥವನ್ನು ಎಂಟು ಪಥಕ್ಕೆ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಇನ್ನಷ್ಟು ಮರಗಳ ಮಾರಣಹೋಮ ನಡೆಯಲಿದೆ. ಹೀಗಾಗಿ ಈ ಮರಗಳನ್ನು ಉಳಿಸಿಕೊಳ್ಳಲು `ಚಿಪ್ಕೋ' ಮಾದರಿಯಲ್ಲಿ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ರೈಲ್ವೆ ಸಂಚಾರ ಉತ್ತಮವಾಗಿದೆ. ಅಲ್ಲದೇ ಹೆದ್ದಾರಿಯಿಮದ 100-200 ಮೀಟರ್ ದೂರದಲ್ಲಿಯೇ ರೈಲ್ವೆ ಹಳಿ ಇದೆ. ಹೀಗಾಗಿ ಇದನ್ನೇ ಇನ್ನಷ್ಟು ಅಭಿವೃದ್ಧಿ ಪಡಿಸಿದ್ದರೆ ಲೋಕಲ್ ಟ್ರೈನ್' ವ್ಯವಸ್ಥೆ ಮಾಡಬಹುದಿತ್ತು. 100 ಬಸ್ಸುಗಳ ಜನರು ಒಂದು ಟ್ರೈನ್‌ನಲ್ಲಿ ಸಾಗುತ್ತಿದ್ದರು. ಈ ಬಗ್ಗೆ ಯೋಜನೆ ರೂಪಿಸಬೇಕಿತ್ತು ಎಂದು ಅವರು ಸಲಹೆ ನೀಡಿದರು.

ದೊರಕದ ಮಾಸ್ಟರ್‌ಪ್ಲ್ಯಾನ್
ಅವಳಿ ನಗರದ ನಡುವಣ 19.4 ಕಿಮೀ ಉದ್ದದ ಈ ರಸ್ತೆಗಾಗಿ ಸುಮಾರು 700 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು ಈವರೆಗೂ ಬಿಆರ್‌ಟಿಎಸ್ ತನ್ನ ಯೋಜನೆಯ ಮಾಸ್ಟರ್ ಪ್ಲ್ಯಾನ್ ಅನ್ನು ಬಹಿರಂಗಪಡಿಸಿಲ್ಲ. ಅಲ್ಲದೇ ತನ್ನ ಕಚೇರಿಯ ಮುಂದೆ ಬೋರ್ಡ್ ಕೂಡ ಹಾಕಿಲ್ಲ. ಜನರೊಂದಿಗೆ ಯೋಜನೆಯ ಬಗ್ಗೆ ಕಿಂಚಿತ್ತೂ ಚರ್ಚಿಸುತ್ತಿಲ್ಲ. ಹೀಗಾಗಿ ಪಾರದರ್ಶಕವಲ್ಲದ ಮತ್ತು ವಿಶ್ವಾಸಾರ್ಹವಲ್ಲದ ಈ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ಎಲ್ಲರಿಗೂ ದೊರಕುವಂತಾಗಬೇಕು ಎಂದು ಅವರು ಆಗ್ರಹಿಸಿದರು.

ಒಟ್ಟಾರೆಯಾಗಿ ಈ ಯೋಜನೆಗಾಗಿ ಕತ್ತರಿಸಿದ ಪ್ರತಿ ಮರಕ್ಕೆ ಬದಲಾಗಿ 10 ಸಸಿಗಳನ್ನು ಹೆಚ್ಚು ನೆಡಬೇಕು. ರಸ್ತೆ ಬದಿಯಲ್ಲಿಯೇ ನಾಲ್ಕು ಸಾವಿರ ಮರಗಳನ್ನು ಬೆಳೆಸಬೇಕು ಹಾಗೂ ಈ ಯೋಜನೆಯ ಬಗ್ಗೆ ನಗರದ ನಾಗರಿಕರೊಂದಿಗೆ ಚರ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಸ್ಥೆಯ ಕಾನೂನು ಸಲಹೆಗಾರ ಶಾಮ್ ಕಾಮತ್, ಸತ್ಯ ಸಂಶೋಧನಾ ಸಮಿತಿಯ ಅರವಿಂದ ಮೇಟಿ, ಧಾರವಾಡ ಶಾಲೆಗಳ ಪಾಲಕರ ಸಂಘದ ಸಂದೀಪ ಮೇಲವಂಕಿ, ಭಾರತ ಸ್ವಾಭಿಮಾನ ದಳದ ಎಂ.ಡಿ.ಪಾಟೀಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT