ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಸ್.ಯಡಿಯೂರಪ್ಪ ವಾಪಸ್‌ಗೆ ಬಿಜೆಪಿಯಲ್ಲೇ ಅಡ್ಡಿ?

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಹಟ ಹಿಡಿದು ಕೆಳಗಿಳಿಸಿದ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿಯವರೇ ಈಗ ಪುನಃ ಅವರು ಬಿಜೆಪಿಗೆ ಬಿಎಸ್‌ವೈ ಮರಳುವುದಕ್ಕೂ ಅಡ್ಡಿಯಾಗಿದ್ದಾರೆ ಎಂಬ ಮಾತು ಪಕ್ಷದಲ್ಲೇ ಕೇಳಿಬರುತ್ತಿದೆ.

ಲೋಕಸಭೆ ಚುನಾವಣೆ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರ ಒಂದು ಗುಂಪು ಸತತ ಒತ್ತಡ ಹೇರಿದ್ದರೂ ಹಿರಿಯ ನಾಯಕರು ಇನ್ನೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಜಿ ಮುಖ್ಯಮಂತ್ರಿಯವರ ಮರುಪ್ರವೇಶ ಕುರಿತು ಪ್ರಸ್ತಾಪಿಸಿದರೆ, ಅಡ್ವಾಣಿ ಅವರೆಲ್ಲಿ ಸಿಟ್ಟಿಗೇಳುವರೋ ಎನ್ನುವ ಭಯ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಹಲವು ಮುಖಂಡರನ್ನು ಕಾಡುತ್ತಿದೆ.

ಬಿಜೆಪಿ ವಿರುದ್ಧ ಸಿಡಿದೆದ್ದು `ಕರ್ನಾಟಕ ಜನತಾ ಪಕ್ಷ' ಕಟ್ಟಿರುವ ಯಡಿಯೂರಪ್ಪ ಅವರ ಮರುಸೇರ್ಪಡೆಗೆ ಸಂಸದೀಯ ಮಂಡಳಿ ಅನುಮತಿ ಅಗತ್ಯ. ಈ ವಿಷಯವನ್ನು ಸಂಸದೀಯ ಮಂಡಳಿ ಮುಂದೆ ಪ್ರಸ್ತಾಪಿಸುವ ಧೈರ್ಯ ಯಾವ ಹಿರಿಯ ನಾಯಕರಿಗೂ ಇಲ್ಲ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ರಾಜ್ಯ ನಾಯಕರ ಒಂದು ಗುಂಪು ಯಡಿಯೂರಪ್ಪ ಅವರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳುವುದರಿಂದ ರಾಜ್ಯದಲ್ಲಿ ಕಳೆದುಕೊಂಡಿರುವ ಶಕ್ತಿಯನ್ನು ಬಿಜೆಪಿ ಮರಳಿ ಪಡೆಯಬಹುದು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದು ಎನ್ನುವ ವಾದವನ್ನು ವರಿಷ್ಠರ ಮುಂದಿಟ್ಟಿದೆ.

ಶುಕ್ರವಾರ ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ರಾಜನಾಥ್ ಅವರನ್ನು ಭೇಟಿಯಾಗಿ ಯಡಿಯೂರಪ್ಪ ಮರುಸೇರ್ಪಡೆ ಕುರಿತು ತ್ವರಿತ ತೀರ್ಮಾನ ಮಾಡುವಂತೆ ಒತ್ತಾಯ ಮಾಡಿದರೆಂದು ಮೂಲಗಳು ವಿವರಿಸಿವೆ.

ಭ್ರಷ್ಟಾಚಾರ ಆರೋಪಕ್ಕೊಳಗಾಗಿ ಅಧಿಕಾರ ಬಿಟ್ಟ ಯಡಿಯೂರಪ್ಪ ಅವರ ಮೇಲೆ ಅಡ್ವಾಣಿ ಅವರಿಗಿರುವ ಸಿಟ್ಟು ಇನ್ನೂ ಕಡಿಮೆ ಆಗಿಲ್ಲ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್ ಹಾಗೂ ಮಾಜಿ ಸಚಿವ ಧನಂಜಯ ಕುಮಾರ್ ಅವರು ಅಡ್ವಾಣಿ ಅವರಿಗೆ ಬರೆದ ಪತ್ರ ಮತ್ತು ನೀಡಿರುವ ಹೇಳಿಕೆಗಳು ಹಿರಿಯ ನಾಯಕರನ್ನು ಇನ್ನಷ್ಟು ಕೆರಳಿಸಿವೆ. ಇದರಿಂದಾಗಿ ಬಿಜೆಪಿ ಜತೆ ಕೆಜೆಪಿ ವಿಲೀನ ಇಲ್ಲವೆ ಹೊಂದಾಣಿಕೆ ತೀರ್ಮಾನ ಕಷ್ಟವಾಗಿದೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಪ್ರಚಾರ ಸಮಿತಿ ನೇತೃತ್ವ ವಹಿಸಿದ ನಿರ್ಧಾರದಿಂದ ಅಡ್ವಾಣಿ ಅಸಮಾಧಾನಗೊಂಡಿದ್ದಾರೆ. ಹೇಗೋ ಆರ್‌ಎಸ್‌ಎಸ್ ನಾಯಕರು ಕಷ್ಟಪಟ್ಟು ಅವರನ್ನು ಸಮಾಧಾನ ಮಾಡಿದ್ದಾರೆ. ಪುನಃ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ತೀರ್ಮಾನ ಮಾಡಿದರೆ ಅವರು ಇನ್ನಷ್ಟು ಸಿಟ್ಟಾಗಬಹುದು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಲೋಕಸಭೆ ಚುನಾವಣೆ ಸಮೀಪಿಸಿದಾಗ ಯಡಿಯೂರಪ್ಪನವರ ಸೇರ್ಪಡೆ ಕುರಿತು ವರಿಷ್ಠರು ತೀರ್ಮಾನ ಕೈಗೊಳ್ಳಬಹುದು. ಅಲ್ಲಿಯವರೆಗೆ ಅವರು ಕಾಯಬೇಕಾಗಬಹುದು ಎಂದೂ ಮೂಲಗಳು ಹೇಳಿವೆ.

ಬಿಜೆಪಿಗೆ ಹಿಂತಿರುಗುವುದಕ್ಕೆ ಯಡಿಯೂರಪ್ಪ ತುದಿಗಾಲಲ್ಲಿ ನಿಂತಿದ್ದಾರೆ. ಮೇಲ್ನೋಟಕ್ಕೆ ಪುನಃ ಬಿಜೆಪಿಗೆ ಸೇರುವುದಿಲ್ಲ ಎನ್ನುತ್ತಿದ್ದಾರೆ. ತಾವಾಗಿ ಬಂದರೆ ಷರತ್ತುಗಳನ್ನು ಹಾಕುವುದು ಕಷ್ಟ. ಒತ್ತಾಯಪೂರ್ವಕವಾಗಿ ಸೇರಿದರೆ ವಿರೋಧ ಪಕ್ಷದ ನಾಯಕರ ಸ್ಥಾನ ಅಥವಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಡಬಹುದು ಎನ್ನುವ ಆಲೋಚನೆ ಅವರಿಗಿದೆ.

ರಾಜ್ಯ ಬಿಜೆಪಿಯಲ್ಲಿ ಎರಡು ಗುಂಪುಗಳಿದ್ದು ಒಂದು ಗುಂಪು ಯಡಿಯೂರಪ್ಪನವರ ಸೇರ್ಪಡೆಗೆ ಒಲವು ತೋರಿದೆ. ಇತ್ತೀಚೆಗೆ ಕೆಲ ಸಂಸದರು ಮತ್ತು ಮಾಜಿ ಸಚಿವರ ನಿಯೋಗ ದೆಹಲಿಗೆ ಧಾವಿಸಿ ಹಿರಿಯ ನಾಯಕರನ್ನು ಭೇಟಿ ಮಾಡಿ ಯಡಿಯೂರಪ್ಪನವರ ಪರ ವಕಾಲತ್ತು ವಹಿಸಿತು. ಮಾಜಿ ಸಚಿವ ಅನಂತ ಕುಮಾರ್ ಮತ್ತು ಅವರ ಆತ್ಮೀಯರ ಇನ್ನೊಂದು ಗುಂಪು ಕೆಜೆಪಿ ಅಧ್ಯಕ್ಷರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಎರಡೂ ಬಣಗಳಲ್ಲಿ ಗುರುತಿಸಿಕೊಳ್ಳದ ಕೆಲವರು `ಮಾಜಿ ಮುಖ್ಯಮಂತ್ರಿ ಬರಲಿ, ಅವರ ಹಿಂಬಾಲಿಕರು ಬೇಡ. ಎಲ್ಲರೂ ಬಂದರೆ ಬಿಜೆಪಿಯನ್ನೇ ಅಪಹರಣ ಮಾಡುವ ಅಪಾಯವಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT