ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿರುದ್ಧ ಮತ್ತೊಂದು ದೂರು

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಬೇನಾಮಿಯಾಗಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ವಕೀಲ ಬಿ.ವಿನೋದ್ ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.

ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಬೇನಾಮಿ ಆಸ್ತಿದಾರರು ಎಂದು ಹೆಸರಿಸಲಾದ ಬಿ.ಕೆ.ಸೋಮಶೇಖರ್, ಆದಿಲಕ್ಷ್ಮಮ್ಮ, ಉಮಾದೇವಿ, ರಾಧಾರಮಣಿ, ಎಚ್.ವಿ.ಮಂಜುನಾಥ್ ಮತ್ತಿತರರ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

`ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಶಿವಮೊಗ್ಗದ ಹೊರ ವಲಯದಲ್ಲಿರುವ ಹುಣಸೆಕಟ್ಟೆ ಗ್ರಾಮದಲ್ಲಿ 69 ಎಕರೆ ಕೃಷಿ ಭೂಮಿಯ ಖರೀದಿ ನಡೆದಿದೆ. ಬಿ.ಕೆ.ಸೋಮಶೇಖರ್, ಆದಿಲಕ್ಷ್ಮಮ್ಮ, ಉಮಾದೇವಿ, ರಾಧಾರಮಣಿ ಅವರ ಹೆಸರಿನಲ್ಲಿ ಭೂಮಿ ಖರೀದಿಸಲಾಗಿದೆ.

ಎರಡೇ ತಿಂಗಳ ಅವಧಿಯಲ್ಲಿ ಭೂಮಿಯನ್ನು ಪರಿವರ್ತನೆ ಮಾಡಲಾಗಿದೆ. ನಂತರ ಅದನ್ನು ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ಬೇನಾಮಿಯಾಗಿ ಆಸ್ತಿ ಖರೀದಿಸಿ, ನಂತರ ಅದನ್ನು ಕಂಪೆನಿಗೆ ವರ್ಗಾವಣೆ ಮಾಡಲಾಗಿದೆ~ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

`ಮೊದಲು ಖರೀದಿಸಿದ ನಾಲ್ವರ ಹೆಸರಿನಲ್ಲೇ ಈಚವಾಡಿ ಎಂಬ ಗ್ರಾಮದಲ್ಲಿ 250 ಎಕರೆ ಭೂಮಿ ಖರೀದಿಸಲಾಗಿದೆ. ಭೂ ಪರಿವರ್ತನೆ ಆದೇಶ ಪಡೆಯಲು ಅರ್ಜಿಯನ್ನೂ ಸಲ್ಲಿಸಲಾಗಿದೆ. ಆದರೆ, ಈ ಸಂಬಂಧ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಇನ್ನೂ ಆದೇಶ ಪ್ರಕಟವಾಗಿಲ್ಲ.

ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು~ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ವಕೀಲ ಶ್ಯಾಮಸುಂದರ್ ಅವರೊಂದಿಗೆ ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬಂದ ವಿನೋದ್ ಖಾಸಗಿ ದೂರು ಸಲ್ಲಿಸಿದರು. ಅರ್ಜಿದಾರರ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಧೀಶ ಎನ್. ಕೆ.ಸುಧೀಂದ್ರ ರಾವ್, ಅರ್ಜಿಯ ವಿಚಾರಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT