ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜಿಎಸ್ ಗ್ಲೋಬಲ್ ಆಸ್ಪತ್ರೆ:ಹಸುಳೆಯ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ 9 ದಿನದ ಶಿಶುವಿಗೆ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಗಂಡು ಶಿಶುವಿನ ಎರಡು ಪ್ರಮುಖ ರಕ್ತನಾಳಗಳು ತಪ್ಪಾದ ರೀತಿಯಲ್ಲಿ ಜೋಡಣೆ ಹೊಂದಿರುವಂತಹ   (ಟ್ರ್ಯಾನ್ಸ್‌ಪೊಸಿಷನ್ ಆಫ್ ಗ್ರೇಟರ್ ಆರ್ಟರೀಸ್) ಜನ್ಮಜಾತ ಹೃದಯದ ತೊಂದರೆಯಿಂದ ಜನಿಸಿತ್ತು. ಶಿಶುವನ್ನು ಈ ವರ್ಷದ ಮೇ 4 ರಂದು ಆಸ್ಪತ್ರೆಗೆ ಕರೆತರಲಾಗಿತ್ತು. 

ಶಿಶುವಿನಲ್ಲಿ ರೈಟ್ ವೆಂಟ್ರಿಕಲ್ (ಬಲ ಹೃತ್ಕುಹರ)ಗೆ ಅಯೋರ್ಟಾ (ಮಹಾಪಧಮನಿ) ಮತ್ತು ಲೆಫ್ಟ್ ವೆಂಟ್ರಿಕಲ್ (ಎಡ ಹೃತ್ಕುಹರ) ಗೆ ಪಲ್ಮನರಿ ಆರ್ಟರಿ (ಶ್ವಾಸಧಮನಿ) ಜೋಡಣೆಯಾಗಿತ್ತು. ತಾಯಿ ಗರ್ಭಾವಸ್ಥೆಯಲ್ಲಿದ್ದಾಗಲೇ  ಈ ಸಮಸ್ಯೆಯು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಶ್ರೀಕಾಂತ್ ರಾಘವನ್ ಅವರ ಗಮನಕ್ಕೆ ಬಂದಿತ್ತು. 

 ಈ ಸಂದರ್ಭದಲ್ಲಿ ಡಾ. ಶ್ರೀಕಾಂತ್ ಅವರು ಮಾತನಾಡಿ, ಇದು ಅತ್ಯಂತ ಅಪರೂಪದ ಸ್ಥಿತಿಯಾಗಿದ್ದು ಮಧುಮೇಹ ಹೊಂದಿರುವ ತಾಯಂದಿರ ಭ್ರೂಣಗಳಲ್ಲಿ ಕಂಡುಬರುತ್ತದೆ. ಇಂತಹ ಪ್ರಕರಣಗಳಲ್ಲಿ ಶಸ್ತ್ರಕ್ರಿಯೆಯನ್ನು ಒಂದು ವರ್ಷದ ಒಳಗೆ ನಡೆಸದೆ ಇದ್ದರೆ ಸಾವಿನ ಸಾಧ್ಯತೆ ಶೇ 100 ರಷ್ಟಿರುತ್ತದೆ. ಯಶಸ್ವಿ ಶಸ್ತ್ರಕ್ರಿಯೆಗಳಲ್ಲಿ ಶೇ 94ರಷ್ಟು ಬದುಕುಳಿಯುವ ಸಾಧ್ಯತೆ ಇರುತ್ತದೆ ಎಂದರು.

ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಹೃದಯ ಮತ್ತು ಎದೆಭಾಗದ ಸಲಹಾ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಎಸ್.ಪಿ. ಮನೋಜ್ ಅವರು ಮಾತನಾಡಿ, `ರಕ್ತನಾಳಗಳ ಸ್ಥಾನವನ್ನು ಬದಲಾಯಿಸುವಂತಹ ಶಸ್ತ್ರಚಿಕಿತ್ಸೆಗಾಗಿ ರೋಗನಿಧಾನ ಕಾರ‌್ಯವನ್ನು ಪುನರ್ ದೃಢೀಕರಿಸಲಾಯಿತು. ಹೃದಯ ಮತ್ತು ಎದೆಭಾಗದ ಶಸ್ತ್ರಚಿಕಿತ್ಸಾ ತಜ್ಞರ ತಂಡ ಕೈಗೊಂಡ ಈ ಶಸ್ತ್ರಚಿಕಿತ್ಸೆ ಆರು ಗಂಟೆಗಳ ಕಾಲ ನಡೆಯಿತು.
 
ರಕ್ತನಾಳಗಳನ್ನು (ಸುಮಾರು ಒಂದು ಸೆಂಟಿಮೀಟರ್ ವ್ಯಾಸ ಹೊಂದಿರುವ) ಬದಲಾಯಿಸಿ ಸಾಮಾನ್ಯ ಸ್ಥಿತಿಯಲ್ಲಿರುವಂತೆ ಸೇರಿಸಿ ಹೊಲಿಗೆ ಹಾಕಲಾಯಿತು. ಹೃದಯ ರಕ್ತನಾಳಗಳು 3 ರಿಂದ 4 ಎಂಎಂ ವ್ಯಾಸ ಹೊಂದಿದ್ದು ಅವುಗಳನ್ನು ಪುನರ್ ಜೋಡಿಸಲಾಯಿತು. ಮಗುವಿಗೆ ಹೃತ್ಕರ್ಣದ ವಿಭಜನೆಯಲ್ಲಿ (ಏಟ್ರಿಯಲ್ ಸೆಪ್ಟೆಲ್) ದೋಷ ಇದ್ದು ಅದನ್ನೂ ಕೂಡ ಸರಿಪಡಿಸಲಾಯಿತು~ ಎಂದರು.

ಡಾ. ಶ್ರೀಕಾಂತ್ ಅವರು ಮಾತನಾಡಿ, ತಾಯಿ ಭ್ರೂಣದಲ್ಲಿಯೇ ಶಿಶುವಿನ ಶ್ವಾಸಕೋಶ ಕೆಲಸ ಮಾಡುವುದಿಲ್ಲ.  ಆಮ್ಲಜನಕ ಹೊಂದಿರುವ ರಕ್ತದ ಪೂರೈಕೆಯಾಗುತ್ತಿತ್ತು. ಆದರೆ, ಇದರಿಂದ ಶಿಶು ಭ್ರೂಣದೊಳಗೆ ಬೆಳೆಯಲು ಯಾವುದೇ ತೊಂದರೆಯಿರುವುದಿಲ್ಲ.  ಆದರೆ ಶಿಶು ಜನಿಸಿದ ನಂತರ ತೊಂದರೆಗಳು ಆರಂಭವಾಗುತ್ತವೆ.

ಮಗುವಿನ ಬಣ್ಣ ನೀಲಿಯಾಗಿರುತ್ತದೆ. ಏಕೆಂದರೆ ಅದರ ದೇಹ ಆಮ್ಲಜನಕ ಹೊಂದಿರದಂತಹ
ನೀಲಿ ಬಣ್ಣದ ರಕ್ತವನ್ನು ಸ್ವೀಕರಿಸುತ್ತದೆ. ಈ ರೀತಿಯ ಸ್ಥಿತಿಯನ್ನು ಹೊಂದಿರುವ ಬಹುತೇಕ ಶಿಶುಗಳ ರಕ್ತದಲ್ಲಿ ಸಾಮಾನ್ಯವಾಗಿ ಇರಬೇಕಾದ ಶೇ 95ರಿಂದ 100ರಷ್ಟು ಆಮ್ಲಜನಕದ ಬದಲಾಗಿ ಕೇವಲ ಶೇ 35ರಷ್ಟು ಆಮ್ಲಜನಕ ಇರುತ್ತದೆ.

ಇದರಿಂದ ದೇಹದ ಅಂಗಾಂಶಗಳಿಗೆ ಸೂಕ್ತ ಪ್ರಮಾಣದ ಆಮ್ಲಜನಕ ಲಭ್ಯವಾಗುವುದಿಲ್ಲ. ಅಲ್ಲದೆ ಅತಿಯಾದ ಕ್ಷೀರಾಮ್ಲವನ್ನು  (ಹಾಲು ಹುಳಿಯಾದಾಗ ಅದರಲ್ಲಿ ರೂಪುಗೊಳ್ಳುವ ಕಾರ್ಬನಿಕ್ ಆಮ್ಲ) ಉತ್ಪಾದಿಸುತ್ತದೆ. ಶಿಶುಗಳಿಗೆ ಆಮ್ಲವ್ಯಾಧಿ (ರಕ್ತದಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗಿರುವುದು) ಉಂಟಾಗಿ ಅಂಗಗಳು ವೈಫಲ್ಯಗೊಂಡು ಸಾವಿಗೆ ದಾರಿಯಾಗುತ್ತದೆ~ ಎಂದರು.

ಆದರೆ ವಿಶೇಷವಾದ ಫೀಟಲ್ ಇಕೊಕಾರ್ಡಿಯೋಗ್ರಾಮ್ ಪರೀಕ್ಷೆಯಿಂದ  ತೊಂದರೆಯನ್ನು ಪತ್ತೆ  ಮಾಡುವುದರಿಂದ ಹಾಗೂ ಮುಂಚಿತವಾಗಿ ಉತ್ತಮವಾಗಿ ಯೋಜಿಸಲಾದ ಸಿಸೇರಿಯನ್ ಸೆಕ್ಷನ್ ಮೂಲಕ ಯಾವುದೇ ಕ್ಷೀರಾಮ್ಲ ನಿರ್ಮಾಣವಾಗದಂತೆ ಸುರಕ್ಷಿತವಾಗಿ ಮಗುವಿನ ಹೆರಿಗೆಯನ್ನು ನಿರ್ವಹಿಸಲಾಯಿತು. ಇಂತಹ ಗಂಭೀರ ಹೃದಯದ ತೊಂದರೆಗಳನ್ನು ಶೀಘ್ರವಾಗಿ ಪತ್ತೆ ಮಾಡಿದಾಗ ಮತ್ತು ಸೂಕ್ತ ಸಲಹೆ ನೀಡಿದಾಗ ಉತ್ತಮ ಆರೈಕೆ ನೀಡಬಹುದು.

ಶಿಶು ಶಸ್ತ್ರಕ್ರಿಯೆಯನ್ನು ಉತ್ತಮವಾಗಿ ತಡೆದುಕೊಂಡಿದೆ ಅಲ್ಲದೆ ಕೃತಕ ಉಸಿರಾಟ ವ್ಯವಸ್ಥೆಯಿಂದ ಆರು ದಿನಗಳ ಕಾಲ ತೀವ್ರನಿಗಾ ಘಟಕದಲ್ಲಿ, ನಂತರ ವಾರ್ಡ್‌ನಲ್ಲಿ ಇನ್ನೂ ಆರು ದಿನಗಳ ಕಾಲವಿದ್ದ ಮಗುವಿಗೆ ಈಗ ಒಂದೂವರೆ ತಿಂಗಳಾಗಿದ್ದು ಆರೋಗ್ಯಕರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT