ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಅಭದ್ರತೆ

Last Updated 22 ಮೇ 2012, 8:55 IST
ಅಕ್ಷರ ಗಾತ್ರ

ಸೊರಬ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು ಸುಮಾರು 4 ವರ್ಷ ಕಳೆದರೂ ಸರ್ಕಾರದ ಆಡಳಿತ ಭ್ರಷ್ಟಾಚಾರ, ಜನವಿರೋಧಿ ನೀತಿ, ದುರಾಡಳಿತದಿಂದ ಕೂಡಿದ್ದು ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ಈ ಸಂಬಂಧ ರಾಜ್ಯಪಾಲರ ಗಮನಸೆಳೆಯಲು ಸೊರಬ ವಿಧಾನಸಭಾ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಗುರುವಾರ ಮನವಿ ಸಲ್ಲಿಸಿದರು.

ಆಡಳಿತಕ್ಕೆ ಬಂದಾಗಿನಿಂದ ಬಿಜೆಪಿ ಸರ್ಕಾರ ಜನಸಾಮಾನ್ಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಜವಾಬ್ದಾರಿ ಮರೆತ ಶಾಸಕರು ಬಡವರಿಗೆ ಪಡಿತರಚೀಟಿ ಕೊಡುವಲ್ಲಿ ವಿಫಲರಾಗಿದ್ದಾರೆ. ಅಸಮರ್ಪಕ ವಿದ್ಯುತ್‌ನಿಂದಾಗಿ ರಾಜ್ಯದ ಜನತೆ ಸಂಕಷ್ಟಕ್ಕೀಡಾಗಿದೆ. ನಿವೇಶನರಹಿತರಿಗೆ ನಿವೇಶನ ನೀಡುವಲ್ಲಿ ಹಾಗೂ ಅರಣ್ಯ ವಾಸಿಗಳಿಗೆ ಹಕ್ಕುಪತ್ರ ನೀಡುವಲ್ಲಿ ಸಹ ಸರ್ಕಾರಕ್ಕೆ ಸಾಧ್ಯವಾಗಿರುವುದಿಲ್ಲ ಎಂದು ದೂರಿದರು.

ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುವಲ್ಲಿ ವಿಳಂಬವಾಗಿದೆ. ಬಿಜೆಪಿಯ ಆಂತರಿಕ ಕಚ್ಚಾಟದಿಂದ ಅಭದ್ರತೆ ಉಂಟಾಗಿದ್ದು, ಹೆಚ್ಚಿನ ಖಾತೆಗಳನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಶಿವಮೊಗ್ಗ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಜನಸಾಮಾನ್ಯರ ಸಂಕಷ್ಟವನ್ನು ಬಗೆಹರಿಸುವಲ್ಲಿ ಸ್ಥಳೀಯ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದು, ಜನಸಾಮಾನ್ಯರನ್ನು ಮರೆತಿರುವ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರದಾಹಿ ಶಾಸಕರ ವರ್ತನೆಯನ್ನು ಸೊರಬ ವಿಧಾನಸಭಾ ಯುವ ಕಾಂಗ್ರೆಸ್ ತೀಕ್ಷ್ಣವಾಗಿ ಖಂಡಿಸುತ್ತದೆ. ಸಮರ್ಥ ಆಡಳಿತ ನೀಡಲು ವಿಫಲವಾಗಿರುವ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸುವಂತೆ ರಾಜ್ಯ ಸರ್ಕಾರವನ್ನು ಎಚ್ಚರಿಸಬೇಕು ಎಂದು ಆಗ್ರಹಿಸಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಮಧುಕೇಶ್ವರ, ಕಾರ್ಯದರ್ಶಿ ಕಿರಣ್‌ಕುಮಾರ್, ಶಿವಮೊಗ್ಗ ಯುವ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ, ಉಮೇಶ ಶಾಂತಗೇರಿ, ಯುವರಾಜ ಓಟೂರು, ಅನಿಲ, ಸಿದ್ದಪ್ಪ, ಪ್ರಸನ್ನ, ಎಂ. ದಿನೇಶ, ಎಚ್. ರಾಮಚಂದ್ರ, ಕೆ. ಯೋಗೀಶ, ಜಗದೀಶ ಮಾಳೆಕೊಪ್ಪ, ಲೋಹಿತ ಕಪ್ಪಗಳಲೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT