ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ-ಜೆಡಿಎಸ್ ಟಿಕೆಟ್ ಹಂಚಿಕೆಗೆ ಹೆಣಗಾಟ!

Last Updated 15 ಏಪ್ರಿಲ್ 2013, 10:39 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದ್ದು, ಹತ್ತಾರು ಲೆಕ್ಕಾಚಾರ ಹಾಕಿ ಕೊನೆಗೂ ಟಿಕೆಟ್ ಫೈನಲ್ ಮಾಡಿದೆ.

ಜಾತ್ಯತೀತ ಜನತಾ ದಳ ಪಕ್ಷವು ಒಂದು ವರ್ಷದ ಹಿಂದೆಯೇ ಚುನಾವಣೆ ತಯಾರಿ, ಸಭೆ ಮಾಡಿ ಹುಮ್ಮಸ್ಸಿನಲ್ಲಿದ್ದು, ಈಗ ಟಿಕೆಟ್ ಹಂಚಿಕೆಯಲ್ಲಿ ಆಮೆ ಹೆಜ್ಜೆ ಇಡುತ್ತಿದೆ. ಇದು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳ ಚುನಾವಣಾ ಹುಮ್ಮಸ್ಸಿಗೆ ತಣ್ಣೀರು ಎರಚಿದ ಅನುಭವ ಆಗುತ್ತಿದೆ.

ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಿಗೆ ಜೆಡಿಎಸ್ ಟಿಕೆಟ್ ಫೈನಲ್ ಮಾಡಿದ್ದರೂ ಎರಡು ಕ್ಷೇತ್ರದಲ್ಲಿ ಇನ್ನೂ ಮುಗುಮ್ಮಾಗಿದೆ!
ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆಗೆ ಸಾಕಷ್ಟು ವಿಳಂಬ ಮಾಡುತ್ತಿದೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳೇ ಈ ಪಕ್ಷಕ್ಕೆ ತಲೆ ನೋವು ತಂದಿಟ್ಟಿದೆ.

ದೇವದುರ್ಗ ಕ್ಷೇತ್ರದಲ್ಲಿ ಈ ಪಕ್ಷ ಅರ್ಹ ಅಭ್ಯರ್ಥಿ ಹುಡುಕಾಟ ಇನ್ನೂ ಜಾರಿಯಲ್ಲಿಟ್ಟಿದೆ! ಕುತೂಹಲ ಕೆರಳಿಸಿರುವುದು ದೇವದುರ್ಗ ಕ್ಷೇತ್ರಕ್ಕಿಂತ ರಾಯಚೂರು ನಗರ ಕ್ಷೇತ್ರದ್ದು. ಡಾ.ಶಿವರಾಜ್ ಪಾಟೀಲ್, ಈ ಆಂಜನೇಯ, ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಕುಂಟ್ನಾಳ ವೆಂಕಟೇಶ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಮುಖರೆಂದು ಪಕ್ಷದ ಮೂಲಗಳು ಹೇಳುತ್ತವೆ.

ಇವರಲ್ಲಿ ಡಾ.ಶಿವರಾಜ್ ಅಥವಾ ಈ ಆಂಜನೇಯ ಅವರಿಗೆ ಟಿಕೆಟ್ ದಕ್ಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದರೂ ಈ ವರೆಗೂ ಆ ಪಕ್ಷ ಟಿಕೆಟ್ ಫೈನಲ್ ಮಾಡಿಲ್ಲ.ಸೋಮವಾರ ಟಿಕೆಟ್ ಫೈನಲ್ ಆಗುವ ಸಾಧ್ಯತೆ ಎಂದು ಎಂದಿನಂತೆ ಪಕ್ಷದ ಪ್ರಮುಖರು ಹೇಳುತ್ತಿದ್ದಾರೆ.

ಇನ್ನು ಬಿಜೆಪಿ ಪಕ್ಷದ್ದು ಇದೇ ಕಥೆ. ಈವರೆಗೂ ಮಾನ್ವಿ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿಲ್ಲ. ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ಆಡಳಿತರೂಢ ಪಕ್ಷವೂ ಮುಳುಗಿದೆ. ಇದು ಕೂಡಾ ಆ ಪಕ್ಷದವರಿಗೆ ತಲೆ ನೋವಾಗಿದೆ. ಮಸ್ಕಿ ಕ್ಷೇತ್ರಕ್ಕೆ ಶಂಕರ ಮೇದಾರ ಹಾಗೂ ಮಾನ್ವಿ ಕ್ಷೇತ್ರಕ್ಕೆ ಅಯ್ಯಮ್ಮ ನಾಯಕ ಎಂಬುವವರಿಗೆ ಬಹುತೇಕ ಟಿಕೆಟ್ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೂ ಪಕ್ಷ ಅಧಿಕೃತ ಟಿಕೆಟ್ ಘೋಷಣೆ ಮಾಡಿಲ್ಲ.

ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕಿಂತ ಕಾಂಗ್ರೆಸ್ ಪಕ್ಷ ಟಿಕೆಟ್ ಹಂಚಿಕೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT