ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಂಘಟನೆ ಬಲಪಡಿಸಲು ಸಲಹೆ

Last Updated 23 ಜುಲೈ 2013, 6:15 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಬಿಜೆಪಿ ಕಾರ್ಯಕರ್ತರು ಜನರ ಮಧ್ಯೆ ಕೆಲಸ ಮಾಡುವ ಮೂಲಕ ಪಕ್ಷದ ಸಂಘಟನೆ ಬಲಪಡಿಸಬೇಕು. ಬಿಜೆಪಿ ಆಡಳಿತದಲ್ಲಿ ಜಾರಿಗೆ ತರಲಾದ ಜನಪರ ಕಾರ್ಯಕ್ರಮಗಳನ್ನು ನೆನಪು ಮಾಡಿಕೊಡಬೇಕು. ಮತದಾರರ ಮನ ಗೆಲ್ಲಬೇಕು ಎಂದು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ಜಿ ಸಲಹೆ ಮಾಡಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ  ಮಾತನಾಡಿ, ಬಿಜೆಪಿ ಸರ್ಕಾರ ಜಾರಿಗೆ ತಂದ ವಿನೂತನ ಜನಪರ ಕಾರ್ಯಕ್ರಮಗಳ ಬಗ್ಗೆ ಪ್ರಚಾರದ ಕೊರತೆಯಿಂದಾಗಿ ವಿಧಾನ ಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ರಾಜಕೀಯದಲ್ಲಿ ಸೋಲು- ಗೆಲುವು ಸಾಮಾನ್ಯ. ಕಾರ್ಯಕರ್ತರು ಸೋಲಿನಿಂದ ಹತಾಶರಾಗದೆ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಬೇಕು ಎಂದು ಅಭಿಪ್ರಾಯಪಟ್ಟರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕು. ಅದಕ್ಕೆ ಪೂರಕವಾಗಿ ಕಾರ್ಯಕರ್ತರು ಕೆಲಸ ಮಾಡಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಜನರ ಗಮನ ಸೆಳೆಯಬೇಕು. ಭ್ರಷ್ಟಾಚಾರದ ಬಗ್ಗೆ ತಿಳಿಸಬೇಕು ಎಂದು ಹೇಳಿದರು.

ಪ್ರಧಾನ ಮಂತ್ರಿಗಳು ದೇಶದ ಮಾನವನ್ನು ಹರಾಜಿಗಿಟ್ಟಿದ್ದಾರೆ. ಚೀನಾ ನಮ್ಮ ದೇಶದ ನೆಲವನ್ನು ಆಕ್ರಮಿಸುತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ನೆಲವನ್ನು ಕಬಳಿಸಲು ಬರುವ ದೇಶಗಳಿಗೆ ಬುದ್ಧಿ ಕಲಿಸಬೇಕು. ಹಾಗೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನರೇಂದ್ರ ಮೋದಿ ಅವರ ಆಡಳಿತ ದೇಶಕ್ಕೆ ಮಾದರಿಯಾಗಿದೆ ಎಂದರು.

ಮುಖಂಡ ಶಿವಕುಮಾರ್ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾರೆಡ್ಡಿ, ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರಿದ್ದಾರೆ. ಆದರೆ ಮತ ಗಳಿಸುವಲ್ಲಿ ವಿಫಲತೆ ಉಂಟಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ವೈಫಲ್ಯಕ್ಕೆ ಕಾರಣ ತಿಳಿದುಪಕ್ಷವನ್ನು ಬಲಪಡಿಸಬೇಕು. ಮತದಾರರ ಒಲವು ಗಳಿಸಬೇಕು ಎಂದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಂಗವಾದಿ ಶಿವಶಂಕರ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಕೊಟ್ರಗುಳಿ ನಾರಾಯಣಸ್ವಾಮಿ, ಮುಖಂಡರಾದ ಶಂಕರನಾರಾಯಣರೆಡ್ಡಿ, ಶಿವಕುಮಾರ್, ರಂಗಪ್ಪ, ಮುನಿವೆಂಕಟಪ್ಪ, ಜಯರಾಮರೆಡ್ಡಿ, ಇ.ಶಿವಣ್ಣ, ವೆಂಕಟೇಗೌಡ, ಕೆ.ನಾಗರಾಜ್, ಜಿ.ಎಸ್.ಚಂದ್ರಶೇಖರ್, ರಮೇಶ್, ರವಿತೇಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT