ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ರಾಜ್ಯಕ್ಕೆ ಶಾಪ: ಮಧು ಬಂಗಾರಪ್ಪ

Last Updated 25 ಫೆಬ್ರುವರಿ 2012, 7:45 IST
ಅಕ್ಷರ ಗಾತ್ರ

ಬಳ್ಳಾರಿ: ಜನರ ಆಶೀರ್ವಾದದಿಂದ ಅಸ್ತಿತ್ವಕ್ಕೆ ಬಂದಿರುವ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದ ಕಾರ್ಯವೈಖರಿ, ಮುಖಂಡರ ಒಳಜಗಳ ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ಪಕ್ಷದ ರಾಜ್ಯ ಯುವ ಘಟಕದ ಯುವಚೇತನ ಯಾತ್ರೆಯ ಅಂಗವಾಗಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಯುವ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಬೈಸಿಕಲ್, ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮತ್ತಿತರ ಜನಪರ ಯೋಜನೆಗಳನ್ನು ಜೆಡಿಎಸ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿರುವಾಗ ಎಚ್.ಡಿ. ಕುಮಾರಸ್ವಾಮಿ ಜಾರಿಗೆ ತಂದಿದ್ದು, ಅವೆಲ್ಲ ಸಾಧನೆಗಳನ್ನು ಬಿ.ಎಸ್. ಯಡಿಯೂರಪ್ಪ ಅವರು ತಮ್ಮದೇ ಎಂದು ಘೋಷಿಸಿಕೊಂಡಿರುವುದು ನಾಚಿಕೆಗೇಡು ಎಂದು ಅವರು ಟೀಕಿಸಿದರು.

ಮುಖ್ಯಮಂತ್ರಿ ಸದಾನಂದಗೌಡ ಅವರು ನಿತ್ಯವೂ ಯಡಿಯೂರಪ್ಪ, ಈಶ್ವರಪ್ಪ ಅವರ ಮನೆಗಳು, ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡುತ್ತ ಕಾಲ ಕಳೆಯುತ್ತಿದ್ದು, ಜನಸೇವೆಯನ್ನೇ ಮರೆತಿದ್ದಾರೆ. ಒಂದು ಬಾರಿ ಬಿಜೆಪಿಗೆ  ಅವಕಾಶ ನೀಡಿ ಬೇಸತ್ತಿರುವ ಜನ ಜೆಡಿಎಸ್ ಆಡಳಿತವನ್ನು ಮೆಲುಕು ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯೂ ಒಳಗೊಂಡಂತೆ ರಾಜ್ಯವನ್ನು ಸಂಪೂರ್ಣ ಹಾಳುಗೆಡವಿರುವ ಬಿಜೆಪಿ ಮುಖಂಡರು ಸಾಲಾಗಿ ಜೈಲಿಗೆ ಹೋಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗುವುದರಲ್ಲಿ ಸಂದೇಹವೇ ಇಲ್ಲ ಎಂದು ಅವರು ಹೇಳಿದರು.

ಬಳ್ಳಾರಿಯಲ್ಲಿ ರಾಜಕೀಯ ಮುಖಂಡರು ಸಾಮಾನ್ಯ ಜನರ ಕೈಗೆ ಸಿಗುವುದಿಲ್ಲ. ಅಂಥವರನ್ನು ಮುಂದಿನ ಚುನಾವಣೆಗಳಲ್ಲಿ ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಅವರು ಕೋರಿದರು.


ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದ ದಿ.ಎಸ್. ಬಂಗಾರಪ್ಪ ಅವರು ಕಾರಣಾಂತರಗಳಿಂದ ಪಕ್ಷಗಳನ್ನು ಬದಲಿಸಿದರೂ, ಕುಮಾರಸ್ವಾಮಿ ಅವರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡು ಕಡೆಗೆ ಜೆಡಿಎಸ್ ಸೇರಿದ್ದರು ಎಂದು ಅವರು ಹೇಳಿದರು.

ಕುಮಾರಸ್ವಾಮಿ ಅವರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂದು ಕನಸು ಕಂಡಿದ್ದ ಅವರ ಕನಸನ್ನು ಎಲ್ಲರೂ ಸೇರಿ ನನಸಾಗಿಸೋಣ ಎಂದು ಅವರು ತಿಳಿಸಿದರು. ಮನೆಮನೆಗೆ ಭೇಟಿ ನೀಡಿ, ಪಕ್ಷ ಸಂಘಟಿಸುವ ಮೂಲಕ ಯುವ ಜನರನ್ನು ಜಾಗೃತಗೊಳಿಸುವ ಕಾರ್ಯ ಯುವ ಕಾರ್ಯಕರ್ತರಿಂದ ನಡೆಯಬೇಕು ಎಂದು ಅವರು ಮನವಿ ಮಾಡಿದರು.

ಪಕ್ಷಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲವಿದ್ದು, ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಯುವಕರನ್ನು ಸಂಘಟಿಸುವ ಕಾರ್ಯ ನಡೆಯಬೇಕು ಎಂದು ಪಕ್ಷದ ಮುಖಂಡ ಮುಂಡ್ರಿಗಿ ನಾಗರಾಜ್ ತಿಳಿಸಿದರು.

ಪಕ್ಷದ ಮುಖಂಡರಾದ ಸಿ.ಎಚ್. ಚಂದ್ರಶೇಖರ್, ಎನ್. ಭರತ್ ರೆಡ್ಡಿ, ಮೀನಳ್ಳಿ ತಾಯಣ್ಣ, ಮೀನಳ್ಳಿ ಚಂದ್ರಶೇಖರ್, ಹರೀಶಕುಮಾರ್, ರಾಮಕೃಷ್ಣ ರೆಡ್ಡಿ, ಭಾಸ್ಕರ ರೆಡ್ಡಿ, ಶಿವಾ ರೆಡ್ಡಿ, ದೂರ್ವಾಸ, ಮಲ್ಲಿಕಾರ್ಜುನಗೌಡ, ಸುಮಂಗಲಾ ಬಸವರಾಜ್, ಜ್ಯೋತಿ ಪ್ರಸಾದ್, ಸೋಮಲಿಂಗನಗೌಡ, ಮುನ್ನಾಭಾಯಿ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT