ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಕೆಲಸ ಏನು?

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಗರವಾಸಿಗಳ ವಸತಿ ಕನಸನ್ನು ನನಸಾಗಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಮೂಲ ಉದ್ದೇಶವನ್ನೇ ಮರೆತಂತಿದೆ.

ಬೆಂಗಳೂರು ನಗರ ಎಂಟೂ ದಿಕ್ಕುಗಳಲ್ಲಿ ಶರವೇಗದಲ್ಲಿ ಬೆಳೆಯುತ್ತಿದೆ. ಅದರ ಬೆನ್ನಿಗೇ ವಸತಿ ಸಮಸ್ಯೆಯೂ ಉಲ್ಬಣಿಸಿದೆ. ಜನರ ವಸತಿ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಬೇಕಿದ್ದ ಬಿಡಿಎ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ.
 
ಪ್ರಕರಣವೊಂದರ ವಿಚಾರಣೆ ವೇಳೆ, ಪ್ರಾಧಿಕಾರದ ಅಸ್ತಿತ್ವದ ಅಗತ್ಯವನ್ನು ಹೈಕೋರ್ಟ್ ಪ್ರಶ್ನಿಸಿರುವುದು ಮತ್ತು ಅದರ ಕಾರ್ಯವೈಖರಿಯಲ್ಲಿ ಕ್ಷಮತೆ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವುದು ಈ ಹಿನ್ನೆಲೆಯಲ್ಲಿ ಸರಿಯಾಗಿಯೇ ಇದೆ.

ಬಿಡಿಎ ಕಳೆದ ಆರು-ಏಳು ವರ್ಷಗಳಿಂದ ಜನಸಮಾನ್ಯರಿಗೆ ಒಂದು ನಿವೇಶನ ಹಂಚಿದ ನಿದರ್ಶನವೂ ಕಾಣಸಿಗುವುದಿಲ್ಲ. ಗಣ್ಯಮಾನ್ಯರ ಹೆಸರಿನಲ್ಲಿ ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸುವುದಾಗಿ ಪ್ರಕಟಣೆಗಳು ಮಾತ್ರ ಹೊರಬಿದ್ದಿವೆ.

ನಿವೇಶನ ಹಂಚಿಕೆ ಆಗಿಲ್ಲ. ಆದರೆ, ಖಾಸಗಿ ಬಡಾವಣೆಗಳು ಎಲ್ಲೆಂದರಲ್ಲಿ ತಲೆ ಎತ್ತಿವೆ. ಅವುಗಳಲ್ಲಿ ಎಷ್ಟು ಬಡಾವಣೆಗಳು ಕಾನೂನುಬದ್ಧ ಎಂಬುದು ಪ್ರಶ್ನಾರ್ಹ. ಅನ್ಯಮಾರ್ಗ ಇಲ್ಲದೆ ಜನರು, ಖಾಸಗಿಯವರು ಕೇಳಿದಷ್ಟು ಹಣ ತೆತ್ತು ನಿವೇಶನ ಖರೀದಿಸುತ್ತಿದ್ದಾರೆ.

ಇದಕ್ಕೆ ಬಿಡಿಎ ವೈಫಲ್ಯವೇ ಪ್ರಮುಖ ಕಾರಣ. ಜನರ ಅಗತ್ಯಕ್ಕೆ ತಕ್ಕಂತೆ ಕಾಲಕಾಲಕ್ಕೆ ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚಿದ್ದರೆ ಜನರು ಖಾಸಗಿ ಬಡಾವಣೆಗಳ ಮೊರೆ ಹೋಗುವ ಪ್ರಮೇಯ ಒದಗುತ್ತಿರಲಿಲ್ಲ.

ಜನರ ವಿಶ್ವಾಸ ಕಳೆದುಕೊಂಡಿದ್ದ ಬಿಡಿಎ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಕೊಡವಿಕೊಂಡಿತ್ತು. ಆಯುಕ್ತರಾಗಿದ್ದ ಜೈಕರ್ ಜರೋಂ ಅವರು ಅದನ್ನು ಕ್ರಿಯಾಶೀಲಗೊಳಿಸಿದ್ದರು. ಆ ಅವಧಿಯಲ್ಲಿ ಹೊಸ ಬಡಾವಣೆಗಳು ರೂಪುಗೊಂಡು ಜನರಿಗೆ ನಿವೇಶನಗಳೂ ಹಂಚಿಕೆಯಾದವು. ಅಕ್ರಮ ಕಟ್ಟಡಗಳು ನೆಲಸಮಗೊಂಡವು.
 
ಒತ್ತುವರಿ ತೆರವಾಯಿತು. ಸಂಪನ್ಮೂಲ ಕ್ರೋಡೀಕರಿಸಿ ಮೇಲ್ಸೇತುವೆಗಳ ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲ ಸೌಕರ್ಯ ವೃದ್ಧಿಗೆ ಬಳಸಲಾಯಿತು. ಅವರು ಅಲ್ಲಿಂದ ವರ್ಗವಾಗುತ್ತಲೇ ಬಿಡಿಎ ಮತ್ತೆ ನಿದ್ರಾವಸ್ಥೆಗೆ ಹೊರಳಿತು. ಅವರ ಅವಧಿಯಲ್ಲಿ ಸಾಧ್ಯವಾದದ್ದು ನಂತರ ಏಕೆ ಆಗಲಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
 
ಈ ನಡುವಣ ಅವಧಿಯಲ್ಲಿ ಜನಸಾಮಾನ್ಯರಿಗೆ ನಿವೇಶನ ಹಂಚಿಕೆ ಆಗದಿದ್ದರೂ ಶಾಸಕರು, ಸಚಿವರು ಮತ್ತು ಅವರ ಬೆಂಬಲಿಗರಿಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಅಡಿಯಲ್ಲಿ ಬಿಡಿ ನಿವೇಶನಗಳು ಮಾತ್ರ ವಿವೇಚನಾರಹಿತವಾಗಿ ಬಿಕರಿಯಾಗಿವೆ.
 
ಈ ಕ್ರಮ ಕೂಡ ಹೈಕೋರ್ಟ್‌ನಿಂದ ತರಾಟೆಗೆ ಒಳಗಾಗಿದೆ. ಕೆಟ್ಟ ಕಾರಣಗಳಿಗಾಗಿಯೇ ಬಿಡಿಎ ಪದೇ ಪದೇ ಸುದ್ದಿಯ ಬಿಂದುವಾಗಿರುವುದು ವಿಷಾದದ ಸಂಗತಿ.
 
ನಗರದ ವಸತಿ ಸಮಸ್ಯೆಯ ತೀವ್ರತೆಯನ್ನು ಬಿಡಿಎ ಈಗಲಾದರೂ ಗಂಭೀರವಾಗಿ ಪರಿಗಣಿಸಬೇಕು. ಸೂರು ಹೊಂದುವ ಜನರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಾಧಿಕಾರಕ್ಕೆ ಸರ್ಕಾರ ಚುರುಕು ಮುಟ್ಟಿಸಬೇಕು. ಇದು ಸಾಧ್ಯವಾಗದಿದ್ದರೆ ಪ್ರಾಧಿಕಾರ, ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಲಿದೆ. ಜನರ ತೆರಿಗೆ ಹಣ ಈ ರೂಪದಲ್ಲಿ ಪೋಲಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT