ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ತಾಪಕ್ಕೆ ಬರಿದಾಗುತ್ತಿರುವ ಕೆರೆಗಳು

Last Updated 29 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಸಂತೇಶಿವರ ಗ್ರಾಮ ದಲ್ಲಿರುವ ಕೆರೆಗೆ ಪ್ರಸಕ್ತ ವರ್ಷದಲ್ಲಿ ನವಿಲೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸದಿರುವುದರಿಂದ ಬೇಸಿಗೆಯ ಬಿರುಬಿಸಿಲಿಗೆ ಮಳೆಯಾಶ್ರಿತ ಕೆರೆಯಲ್ಲಿ ನಿಧಾನವಾಗಿ ನೀರು ಕಡಿಮೆಯಾಗುತ್ತಿದೆ.

ಕಾಮನಾಯಕನಹಳ್ಳಿ ಗ್ರಾಮದಿಂದ ವಿತರಣಾ ನಾಲೆಯಿಂದ ಕಳೆದ ವರ್ಷದ ತನಕ ಗ್ರಾಮದಲ್ಲಿರುವ ಅವೇಈರಣ್ಣನ ಕಟ್ಟೆ, ಕುಂಬಾರಕಟ್ಟೆಗೆ ನೀರು ಹರಿದು ಬರುತ್ತಿತ್ತು. ಅದು ಅಂತಿಮವಾಗಿ ಊರಿನ ಪಕ್ಕದಲ್ಲಿರುವ ದೊಡ್ಡ ಕೆರೆ ಸೇರುತ್ತಿತ್ತು. ಆದರೆ ಈ ವರ್ಷ ಕಾಮನಾಯಕನಹಳ್ಳಿ ಗ್ರಾಮದಲ್ಲಿನ ಮನೆಗಳ ಗೋಡೆಗೆ ಶೀತ ತಗುಲುತ್ತದೆ ಎಂಬ ಕಾರಣದಿಂದ ಕಾಲುವೆಗೆ ನೀರು ಹರಿಸುತ್ತಿಲ್ಲ. ಹಾಗಾಗಿ ಅವೇಈರಣ್ಣನ ಕಟ್ಟೆ, ಕುಂಬಾರಕಟ್ಟೆಗೆ ನೀರು ಬರದೇ ದೊಡ್ಡ ಕೆರೆಗೆ ನೀರು ಬಂದಿಲ್ಲ. ಈ ಸಲದ ಮಳೆಯಿಂದಾಗಿ ಮಾತ್ರ ಕೆರೆಯಲ್ಲಿ ನೀರಿದೆ. ಬಿಸಿಲಿನ ಬೇಗೆಗೆ ನೀರು ಕಡಿಮೆಯಾಗುತ್ತ ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

 ಕಾಮನಾಯಕನಹಳ್ಳಿ ಗ್ರಾಮದಿಂದ 14 ಕಿ.ಮೀ. ದೂರದಲ್ಲಿರುವ ಸಂತೇ ಶಿವರ ಗ್ರಾಮದ ಕೆರೆಗೆ ನೀರು ಹರಿಸುವಾಗ ಮಧ್ಯಭಾಗದಲ್ಲಿ ಸಿಗುವ ಕೆಲ ಹಳ್ಳಿಯವರು ಆಯಾ ಕೆರೆಗೆ ನೀರು ಹರಿಸಿಕೊಳ್ಳುತ್ತಿದ್ದುದರಿಂದ ಊರಿನ ಕೆರೆಗೆ ಸಮರ್ಪಕವಾಗಿ ನೀರು ಬರುತ್ತಿರಲಿಲ್ಲ. ಈಗ ಕಾಮನಾಯಕನಹಳ್ಳಿಯ ವಿತರಣಾ ನಾಲೆಯಿಂದ ಪೈಪ್ ಲೈನ್ ಅಳವಡಿಸಿದರೆ ಕೆರೆಗೆ ನೀರು ಸರಾಗವಾಗಿ ಹರಿದು ಬರುತ್ತದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ.

ಬೇಸಿಗೆಯಲ್ಲೂ ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಸುತ್ತಲಿನ ಹತ್ತಾರು ಹಳ್ಳಿಗಳ ಕೆರೆಗೆ ನೀರು ಲಭ್ಯವಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬ ಆಪೇಕ್ಷೆ ಗ್ರಾಮಸ್ಥರದು.
 ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ ತವರೂರಲ್ಲಿ 400 ಮನೆಗಳಿವೆ. ಹಿರಿಯ ಪ್ರಾಥಮಿಕ ಶಾಲೆ, ಡೇರಿ, ಆಯುರ್ವೇದ ಆಸ್ಪತ್ರೆ ಇದೆ. ಡಾಂಬರು ರಸ್ತೆ, ಚರಂಡಿ ವ್ಯವಸ್ಥೆ ಇದೆ. ಆದರೆ ಇವು ಮತ್ತಷ್ಟು ಸುಧಾರಿಸಬೇಕಿದೆ.

ಭೈರಪ್ಪ ಅವರು ತಾಯಿಯ ಹೆಸರಿನಲ್ಲಿ ಊರವರ ಸಹಕಾರ ಪಡೆದು 2004ರಲ್ಲಿ `ಗೌರಮ್ಮ ಸ್ಮಾರಕ ಭವನ~ ನಿರ್ಮಿಸಿದ್ದಾರೆ. ಒಂದು ಕೊಠಡಿಯಲ್ಲಿ ಗ್ರಂಥಾಲಯ ತೆರೆಯಲಾಗಿದೆ. 3 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಜನರ ಜ್ಞಾನದ ದಾಹ ಇಂಗಿಸಲು ಸಹಾಯಕವಾಗಿದೆ. ಇನ್ನೊಂದು ಕೊಠಡಿಯಲ್ಲಿ ಸಭಾ ಭವನವಿದೆ. ಇದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ಶಿಬಿರಗಳು ನಡೆಯುತ್ತವೆ. ಊರಿನ ಹೆಮ್ಮೆಯ ಪುತ್ರ ಭೈರಪ್ಪ ಅವರ ಬಗ್ಗೆ ಅಭಿಮಾನ ವ್ಯಕ್ತಪಡಿಸುವ ಜನತೆ, ಸಾಹಿತ್ಯ ಕ್ಷೇತ್ರದ ದಿಗ್ಗಜ ಭೈರಪ್ಪನವರು ನಮ್ಮೂರಿನವರು ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿ `ಕಣ~ ನಿರ್ಮಿಸಿದರೆ ಫಸಲು ಒಕ್ಕಣೆ ಮಾಡಲು ಸಹಾಯಕವಾಗುತ್ತದೆ. ಸರ್ಕಾರಿ ಜಮೀನು ಲಭ್ಯವಿದ್ದು ಕೂಡಲೇ ಕಣ ನಿರ್ಮಿಸುವತ್ತ ಗಮನಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT