ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಪಾಕ್ ಪರಾಕ್ರಮ

ಕ್ರಿಕೆಟ್: ಭಾರತದ ಕೈಯಿಂದ ಗೆಲುವು ಕಿತ್ತುಕೊಂಡ ಹಫೀಜ್, ಮಲಿಕ್
Last Updated 25 ಡಿಸೆಂಬರ್ 2012, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕುತೂಹಲ, ರೋಚಕತೆ, ಹೋರಾಟ, ಮರುಹೋರಾಟ ಹಾಗೂ ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾದ ಪಂದ್ಯದ ಕೊನೆಯಲ್ಲಿ ಗೆಲುವು ಪಾಕಿಸ್ತಾನ ತಂಡವನ್ನು ಅಪ್ಪಿಕೊಂಡಿತು. ಅಂತಿಮ ಓವರ್‌ವರೆಗೂ ಪಟ್ಟುಬಿಡದೆ ಹೋರಾಡಿದ ದೋನಿ ಬಳಗ ನಿರಾಸೆಯ ಕಡಲಲ್ಲಿ ಮುಳುಗಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಮೊಹಮ್ಮದ್ ಹಫೀಜ್ ನೇತೃತ್ವದ ಪಾಕಿಸ್ತಾನ ಐದು ವಿಕೆಟ್‌ಗಳ ಗೆಲುವಿನಿಂದ ಬೀಗಿತು. ಭಾರತದ ವಿರುದ್ಧ ಪಾಕ್‌ಗೆ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ದೊರೆತ ಚೊಚ್ಚಲ ಗೆಲುವು ಇದು. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಪಡೆಯಿತು.

ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದ ಅಭಿಮಾನಿಗಳಿಗೆ ಕ್ರಿಸ್‌ಮಸ್ ಉಡುಗೊರೆ ನೋಡಲು ದೋನಿ ಬಳಗಕ್ಕೆ ಸಾಧ್ಯವಾಗಲಿಲ್ಲ. ಆದರೆ ಉಭಯ ತಂಡಗಳು ರೋಚಕ ಹೋರಾಟ ನೀಡಿ ಕ್ರಿಕೆಟ್‌ನ ಸೌಂದರ್ಯವನ್ನು ಅಭಿಮಾನಿಗಳಿಗೆ ಉಣಬಡಿಸಿದವು.

ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 ರನ್ ಕಲೆಹಾಕಿತು. ಗೌತಮ್ ಗಂಭೀರ್ (43, 41 ಎಸೆತ, 4 ಬೌಂ, 1 ಸಿಕ್ಸರ್) ಮತ್ತು ಅಜಿಂಕ್ಯ ರಹಾನೆ (42, 31 ಎಸೆತ, 5 ಬೌಂ, 1 ಸಿಕ್ಸರ್) ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಬ್ಯಾಟ್ಸ್‌ಮನ್‌ಗಳು ವಿಫಲರಾದ ಕಾರಣ ಭಾರತಕ್ಕೆ ಸವಾಲಿನ ಮೊತ್ತ ಪೇರಿಸಲು ಆಗಲಿಲ್ಲ.

ಪಾಕ್ ತಂಡ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 134 ರನ್ ಗಳಿಸಿ ಜಯ ತನ್ನದಾಗಿಸಿಕೊಂಡಿತು. ಭಾರತದ ಆಟಗಾರರ ಕೈಗೆ ಬಂದಿದ್ದ ಕ್ರಿಸ್‌ಮಸ್ ಕೇಕ್ ಬಾಯಿಗೆ ಬರಲಿಲ್ಲ. ಅದನ್ನು ಕಿತ್ತುಕೊಂಡದ್ದು ನಾಯಕ ಮೊಹಮ್ಮದ್ ಹಫೀಜ್ (61, 44 ಎಸೆತ, 6 ಸಿಕ್ಸರ್, 2 ಬೌಂ) ಮತ್ತು ಶೋಯಬ್ ಮಲಿಕ್ (ಔಟಾಗದೆ 57, 50 ಎಸೆತ, 3 ಬೌಂ, 3 ಸಿಕ್ಸರ್).

ಕೊನೆಯವರೆಗೂ ರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಗೆಲುವು ಪಡೆಯಲು ಪಾಕ್ ತಂಡಕ್ಕೆ ಅಂತಿಮ ಓವರ್‌ನಲ್ಲಿ 10 ರನ್‌ಗಳು ಬೇಕಿದ್ದವು. ರವೀಂದ್ರ ಜಡೇಜ ಬೌಲ್ ಮಾಡಿದ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ನಾಲ್ಕು ರನ್‌ಗಳು ಬಂದವು. ನಾಲ್ಕನೇ ಎಸೆತವನ್ನು ಸಿಕ್ಸರ್‌ಗಟ್ಟಿದ ಮಲಿಕ್ ತಮ್ಮ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಪಾಕ್ ತಂಡದ ಆರಂಭ ಆಘಾತಕಾರಿಯಾಗಿತ್ತು. ಪದಾರ್ಪಣೆ ಪಂದ್ಯದಲ್ಲೇ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ (9ಕ್ಕೆ 3) ಭಾರತಕ್ಕೆ ಗೆಲುವಿನ ಸಾಧ್ಯತೆ ನೀಡಿದ್ದರು. ಪ್ರವಾಸಿ ತಂಡ 12 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಆದರೆ ಹಫೀಜ್ ಮತ್ತು ಮಲಿಕ್ ನಾಲ್ಕನೇ ವಿಕೆಟ್‌ಗೆ 85 ಎಸೆತಗಳಲ್ಲಿ 106 ರನ್ ಸೇರಿಸಿ ಪಾಕ್‌ಗೆ ಆಸರೆಯಾದರು. ಭುವನೇಶ್ವರ್ ಸೋಲಿನ ನಡುವೆಯೂ ಮಿಂಚಿದರು.ಉಮರ್ ಅಕ್ಮಲ್ ಅವರನ್ನು ಔಟ್ ಮಾಡಲು ಭುವನೇಶ್ವರ್ ಪ್ರಯೋಗಿಸಿದ ಎಸೆತ ಸೊಗಸಾಗಿತ್ತು. ಆಫ್‌ಸ್ಟಂಪ್‌ನಿಂದ ತುಂಬಾ ಹೊರಬಿದ್ದ ಚೆಂಡು ಸರಕ್ಕನೆ ಒಳ ತಿರುವು ಪಡೆದುಕೊಂಡು ಬೇಲ್ಸ್‌ನ್ನು ಗಾಳಿಯಲ್ಲಿ ತೇಲಿಸಿತು.

ಉತ್ತಮ ಆರಂಭ, ಹಠಾತ್ ಕುಸಿತ:
ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭದ ಬಳಿಕ ಕುಸಿತದ ಹಾದಿ ಹಿಡಿಯಿತು. ಗೌತಮ್ ಗಂಭೀರ್ ಹಾಗೂ ಅಜಿಂಕ್ಯ ರಹಾನೆ ಅಗತ್ಯವಿದ್ದ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 65 ಎಸೆತಗಳಲ್ಲಿ 77 ರನ್‌ಗಳು ಬಂದವು. ಮೊಹಮ್ಮದ್ ಇರ್ಫಾನ್ ಮತ್ತು ಸೊಹೇಲ್ ತನ್ವೀರ್ ಅವರ ಆರಂಭಿಕ ದಾಳಿಯನ್ನು ಇವರಿಬ್ಬರು ಸಮರ್ಥವಾಗಿ ಮೆಟ್ಟಿನಿಂತರು.

ಬೌಂಡರಿ ಗಿಟ್ಟಿಸುವ ಜೊತೆಗೆ ಸ್ಟ್ರೈಕ್ ರೊಟೇಟ್ ಮಾಡುವತ್ತಲೂ ಇವರು ಗಮನ ನೀಡಿದರು. ಇದರಿಂದ ರನ್‌ಗಳು ಹರಿದುಬಂದವು. ಆದರೆ ಬಳಿಕ ಬಂದ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಗಳತ್ತ ಮಾತ್ರ ಗಮನಹರಿಸಿ ವಿಕೆಟ್ ಒಪ್ಪಿಸಿದರು. ಇದರಿಂದ ಭಾರತಕ್ಕೆ ಸವಾಲಿನ ಮೊತ್ತ ಪೇರಿಸಲು ಆಗಲಿಲ್ಲ. ಶಾಹಿದ್ ಅಫ್ರಿದಿ ಅವರು ರಹಾನೆ ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಐದು ಬೌಂಡರಿ ಸಿಡಿಸಿದ್ದ ರಹಾನೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಉಮರ್ ಅಕ್ಮಲ್‌ಗೆ ಕ್ಯಾಚ್ ನೀಡಿದರು. ಬಳಿಕ ಗಂಭೀರ್ ರನೌಟ್ ಆಗಿ ಮರಳಿದರು.

ಪ್ರೇಕ್ಷಕರ ಸಂಪೂರ್ಣ ಬೆಂಬಲದೊಂದಿಗೆ ಕ್ರೀಸ್‌ಗೆ ಆಗಮಿಸಿದ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ನಿರೀಕ್ಷೆ ಹುಸಿಗೊಳಿಸಿದರು. ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ `ಯುವಿ' ಬಳಿಕ ಹೆಚ್ಚುಹೊತ್ತು ನಿಲ್ಲಲಿಲ್ಲ.

15 ಓವರ್‌ಗಳ ಕೊನೆಗೆ ಭಾರತ ಮೂರು ವಿಕೆಟ್‌ಗೆ 108 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬಳಿಕ ನಡೆದದ್ದು ಪೆವಿಲಿಯನ್ ಪೆರೇಡ್. ಕೊನೆಯ ಐದು ಓವರ್‌ಗಳಲ್ಲಿ ಭಾರತದ ಬಿರುಸಿನ ಬ್ಯಾಟಿಂಗ್ ನೋಡಲು ಕಾದುಕುಳಿತಿದ್ದ ಅಭಿಮಾನಿಗಳ ನಿರಾಸೆ ಹೇಳತೀರದು.

ಅಂತಿಮ ಐದು ಓವರ್‌ಗಳಲ್ಲಿ ಆತಿಥೇಯ ತಂಡ ಪೇರಿಸಿದ್ದು ಕೇವಲ 25 ರನ್ ಮಾತ್ರ. ಈ ಅವಧಿಯಲ್ಲಿ ಆರು ವಿಕೆಟ್‌ಗಳು ಉರುಳಿದವು. ಉಮರ್ ಗುಲ್ (21ಕ್ಕೆ 3) ಮತ್ತು ಸಯೀದ್ ಅಜ್ಮಲ್ (25ಕ್ಕೆ 2) ಪಾಕ್ ಬೌಲರ್‌ಗಳಲ್ಲಿ ಮಿಂಚಿದರು.

ಸ್ಕೋರ್ ವಿವರ : 

ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133
ಗೌತಮ್ ಗಂಭೀರ್ ರನೌಟ್  43
ಅಜಿಂಕ್ಯ ರಹಾನೆ ಸಿ ಉಮರ್ ಅಕ್ಮಲ್ ಬಿ ಅಫ್ರಿದಿ  42
ವಿರಾಟ್ ಕೊಹ್ಲಿ ಸಿ ಕಮ್ರನ್ ಅಕ್ಮಲ್ ಬಿ ಮೊಹಮ್ಮದ್ ಇರ್ಫಾನ್  09
ಯುವರಾಜ್ ಸಿಂಗ್ ಸಿ ಉಮರ್ ಅಕ್ಮಲ್ ಬಿ ಗುಲ್ 10
ಮಹೇಂದ್ರ ಸಿಂಗ್ ದೋನಿ ಬಿ ಸಯೀದ್ ಅಜ್ಮಲ್  01
ಸುರೇಶ್ ರೈನಾ ಬಿ ಸಯೀದ್ ಅಜ್ಮಲ್  10
ರೋಹಿತ್ ಶರ್ಮ ರನೌಟ್  02
ರವೀಂದ್ರ ಜಡೇಜ ಸಿ ಕಮ್ರನ್ ಅಕ್ಮಲ್ ಬಿ ಗುಲ್ 02
ಭುವನೇಶ್ವರ್ ಕುಮಾರ್ ಔಟಾಗದೆ  06
ಇಶಾಂತ್ ಶರ್ಮ ಬಿ ಉಮರ್ ಗುಲ್  00
ಅಶೋಕ್ ದಿಂಡಾ ಔಟಾಗದೆ  03
ಇತರೆ: (ಲೆಗ್‌ಬೈ-2, ವೈಡ್-3)  05
ವಿಕೆಟ್ ಪತನ: 1-77 (ರಹಾನೆ; 10.5), 2-90 (ಗಂಭೀರ್; 12.4), 3-103 (ಕೊಹ್ಲಿ; 14.3), 4-108 (ದೋನಿ; 15.1), 5-115 (ಯುವರಾಜ್; 16.2), 6-122 (ರೈನಾ; 17.3), 7-123 (ರೋಹಿತ್; 17.4), 8-124 (ಜಡೇಜ; 18.1), 9-124 (ಇಶಾಂತ್; 18.2)
ಬೌಲಿಂಗ್: ಮೊಹಮ್ಮದ್ ಇರ್ಫಾನ್ 4-0-25-1, ಸೊಹೇಲ್ ತನ್ವೀರ್ 4-0-22-0, ಉಮರ್ ಗುಲ್ 3-0-21-3, ಸಯೀದ್ ಅಜ್ಮಲ್ 4-0-25-2, ಶಾಹಿದ್ ಅಫ್ರಿದಿ 3-0-26-1, ಮೊಹಮ್ಮದ್ ಹಫೀಜ್ 2-0-12-0
ಪಾಕಿಸ್ತಾನ: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 134
ನಾಸಿರ್ ಜಮ್‌ಶೆದ್ ಬಿ ಭುವನೇಶ್ವರ್ ಕುಮಾರ್  02
ಶೆಹಜಾದ್ ಸಿ ದೋನಿ ಬಿ ಭುವನೇಶ್ವರ್ ಕುಮಾರ್  05
ಹಫೀಜ್ ಸಿ ಭುವನೇಶ್ವರ್ ಬಿ ಇಶಾಂತ್ ಶರ್ಮ  61
ಉಮರ್ ಅಕ್ಮಲ್ ಬಿ ಭುವನೇಶ್ವರ್ ಕುಮಾರ್  00
ಶೋಯಬ್ ಮಲಿಕ್ ಔಟಾಗದೆ  57
ಕಮ್ರನ್ ಅಕ್ಮಲ್ ಸಿ ಇಶಾಂತ್ ಬಿ ಅಶೋಕ್ ದಿಂಡಾ  01
ಶಾಹಿದ್ ಅಫ್ರಿದಿ ಔಟಾಗದೆ  03
ಇತರೆ: (ಲೆಗ್‌ಬೈ-1, ವೈಡ್-3, ನೋಬಾಲ್-1)  05
ವಿಕೆಟ್ ಪತನ: 1-2 (ಜಮ್‌ಶೆದ್; 0.6), 2-11 (ಶೆಹಜಾದ್; 2.2), 3-12 (ಉಮರ್ ಅಕ್ಮಲ್; 2.6), 4-118 (ಹಫೀಜ್; 17.1), 5-123 (ಕಮ್ರನ್ ಅಕ್ಮಲ್; 18.5)
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-9-3, ಅಶೋಕ್ ದಿಂಡಾ 4-0-26-1, ಇಶಾಂತ್ ಶರ್ಮ 4-0-23-1, ವಿರಾಟ್ ಕೊಹ್ಲಿ 2-0-21-0, ಯುವರಾಜ್ ಸಿಂಗ್ 3-0-25-0, ರವೀಂದ್ರ ಜಡೇಜ 2.4-0-29-0

ಫಲಿತಾಂಶ: ಪಾಕಿಸ್ತಾನಕ್ಕೆ 5 ವಿಕೆಟ್ ಗೆಲುವು
ಪಂದ್ಯಶ್ರೇಷ್ಠ: ಹಫೀಜ್
ಎರಡನೇ ಹಾಗೂ ಅಂತಿಮ ಟಿ-20: ಡಿ.28 (ಅಹಮದಾಬಾದ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT