ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಕಲಿ ಗೊಬ್ಬರ ಘಟಕ ಪತ್ತೆ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ):  ಗೋಕಾಕ ತಾಲ್ಲೂಕಿನ ಧರ್ಮಟ್ಟಿ ಹಾಗೂ ಗುಜನಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಯಿಂದ ಸೆ. 27 ರಂದು ಜಪ್ತಿ ಮಾಡಲಾದ ನಕಲಿ ಎಂಒಪಿ ಗೊಬ್ಬರ ಬೆಂಗಳೂರು ಸಮೀಪದ ಸಿ.ಕೆ. ಪಾಳ್ಯದಲ್ಲಿ ತಯಾರಿಸಲಾಗಿತ್ತು  ಎಂದು ಇಲ್ಲಿಯ ತನಿಖಾ ತಂಡ ಪತ್ತೆ ಮಾಡಿದೆ.

ಧರ್ಮಟ್ಟಿ ಮತ್ತು ಗುಜನಟ್ಟಿ ಸೊಸೈಟಿಗಳಿಗೆ ಎಂಒಪಿ ಚೀಲಗಳನ್ನು ಪೂರೈಸಿರುವ ಕಲ್ಲೋಳಿಯ ರಾಮಪ್ಪ ವಿಠ್ಠಲ ಮಸಗುಪ್ಪಿ ಇವರ ಬಳಿ ಇದ್ದ ದಾಖಲೆಗಳ ಆಧಾರದ ಮೇಲೆ ಅರಭಾವಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ, ಪಿಎಸ್‌ಐ ಆರ್. ಸುರೇಶಬಾಬು ಮತ್ತು ಜುವಾರಿ ಕಂಪೆನಿಯ ಎಂ. ಮಹೇಶ್ವರ ಅವರನ್ನೊಳಗೊಂಡ ತಂಡವು ನಕಲಿ ಗೊಬ್ಬರವನ್ನು ತಯಾರಿಸುವ ಘಟಕವನ್ನು ಪತ್ತೆ ಹಚ್ಚುವಲ್ಲಿ ಸಫಲವಾಗಿದೆ.

ಮುಖ್ಯ ಆರೋಪಿಯಾಗಿರುವ ಎನ್. ಮನೋಹರಗೌಡ ಎಂಬುವವರು ಬೆಂಗಳೂರು ನಗರ ಜಿಲ್ಲೆಯ ಬನ್ನೇರುಘಟ್ಟದ ಸಿ.ಕೆ. ಪಾಳ್ಯ ಗ್ರಾಮದಲ್ಲಿ, ಟಿ. ಪ್ರಕಾಶರೆಡ್ಡಿ ಎಂಬುವವರ ಕೋಳಿ ಫಾರ್ಮ್‌ನಲ್ಲಿ ನಕಲಿ ಗೊಬ್ಬರವನ್ನು ತಯಾರಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.

ಉಪ್ಪಿಗೆ ಕೇವಲ ರೆಡ್‌ಆಕ್ಸೈಡ್ (ಕೆಂಪು ಬಣ್ಣ/ಹುರಮಂಜು) ಸೇರಿಸಿ ಮ್ಯೂರಿಯೇಟ್ ಆಫ್ ಪೊಟ್ಯಾಷ್ (ಎಂಒಪಿ) ತರಹ ಕಾಣುವಂತೆ ಮಾಡಿ ಅದನ್ನು ಜುವಾರಿಯ ಜೈಕಿಸಾನ ಬ್ರಾಂಡ್ ಚೀಲಗಳಲ್ಲಿ ತುಂಬಿ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಅಕ್ರಮ ದಂಧೆ ನಡೆಸುತ್ತಿರುವ ಎನ್. ಮನೋಹರಗೌಡ  ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬ್ಯಾಂಕ್ ಖಾತೆಯಲ್ಲಿ ನಾಲ್ಕು ತಿಂಗಳದಲ್ಲಿ 20 ಲಕ್ಷ ರೂಪಾಯಿ ವ್ಯವಹಾರ ನಡೆದಿದೆ ಎನ್ನಲಾಗಿದೆ. ನಕಲಿ ಗೊಬ್ಬರ ತಯಾರಿಕೆಗೆ ಬಳಸುತ್ತಿದ್ದ ಸುಮಾರು 40 ಟನ್ ರೆಡ್‌ಆಕ್ಸ್ಯೈಡ್ ಮಿಶ್ರಿತ ಉಪ್ಪಿನ ಚೀಲಗಳನ್ನು ಮೂಡಲಗಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. 

ನಕಲಿ ಸಿಒಪಿಯನ್ನು ರಾಜ್ಯದ ತುಂಬೆಲ್ಲ ಮಾರಾಟ ಮಾಡಿರಬಹುದಾಗಿದ್ದು, ಇದರ ಜಾಲ ಇನ್ನಷ್ಟೇ ಪತ್ತೆಯಾಗಬೇಕಾಗಿದೆ, ರೈತರು ಗೊಬ್ಬರವನ್ನು ಖರೀದಿಸುವಾಗ ಎಚ್ಚರವಹಿಸಬೇಕು ಎಂದು ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ರಂಗಣ್ಣ ನಾಗಣ್ಣವರ ಮತ್ತು ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT