ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು- ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ಅಪಘಾತದಿಂದ ಪಾರು

Last Updated 19 ಜನವರಿ 2012, 10:15 IST
ಅಕ್ಷರ ಗಾತ್ರ

ಗ್ವಾಲಿಯರ್ (ಪಿಟಿಐ): ಬಿರ್ಲಾನಗರ ನಿಲ್ದಾಣದಲ್ಲಿ ಗೂಡ್ಸ್ ರೈಲುಗಾಡಿಯೊಂದು ಹಳಿತಪ್ಪಿದ ಪರಿಣಾಮವಾಗಿ ಸಂಭವಿಸಬಹುದಾಗಿದ್ದ ಭಾರಿ ಅಪಘಾತವೊಂದರಿಂದ  ಗುರುವಾರ ನಸುಕಿನ ಜಾವ 2.30 ಗಂಟೆಗೆ ಸಿಹಿನಿದ್ದೆಯಲ್ಲಿದ್ದ  ಬೆಂಗಳೂರು- ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರು ಅದೃಷ್ಟವಶಾತ್  ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ದೆಹಲಿ ಕಡೆಯಿಂದ ಗೋಧಿ ಹೊತ್ತುಕೊಂಡು ಬರುತ್ತಿದ್ದ ಗೂಡ್ಸ್ ರೈಲುಗಾಡಿ ಬಿರ್ಲಾನಗರ ನಿಲ್ದಾಣದಲ್ಲಿ ಹಳಿ ತಪ್ಪಿದ ಪರಿಣಾಮವಾಗಿ ಅದರ ಕೆಲವು ವ್ಯಾಗನ್ ಗಳು ಹಳಿಯಿಂದ ಜಾರಿ ಬೆಂಗಳೂರು - ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ಸಾಗಬೇಕಾಗಿದ್ದ ಹಳಿಗಳತ್ತ ಉರುಳಿದವು. ಗೂಡ್ಸ್ ರೈಲುಗಾಡಿಯ ಎಂಜಿನ್ ಕಂಬವೊಂದಕ್ಕೆ ಗುದ್ದಿ ಪಕ್ಕಕ್ಕೆ ಉರುಳಿತು ಎಂದು ರೈಲ್ವೇ ಮೂಲಗಳು ಹೇಳಿವೆ.

ಗೂಡ್ಸ್ ಗಾಡಿ ಹಳಿ ತಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ವಾಲಿಯರ್ ನ ರೈಲ್ವೇ ಸಿಬ್ಬಂದಿ ರಾಜಧಾನಿ ಎಕ್ಸ್ ಪ್ರೆಸ್ ರೈಲುಗಾಡಿಯ ಚಾಲಕನನ್ನು ವೈರ್ ಲೆಸ್ ಮೂಲಕ ಸಂಪರ್ಕಿಸಿ ಗ್ವಾಲಿಯರ್ ಗೆ ಮುಂಚಿನ ಸಿಥೌಲಿ ನಿಲ್ದಾಣದಲ್ಲಿ ರೈಲುಗಾಡಿಯನ್ನು ನಿಲ್ಲಿಸುವಂತೆ ಸೂಚಿಸಿದರು.

ಗ್ವಾಲಿಯರ್ ನಲ್ಲಿ ನಿಲುಗಡೆ ಇಲ್ಲದೇ ಇದ್ದುದರಿಂದ ರಾಜಧಾನಿ  ಎಕ್ಸ್ ಪ್ರೆಸ್ ಗೂಡ್ಸ್ ಗಾಡಿ ಹಳಿ ತಪ್ಪಿದ ಜಾಗದಲ್ಲಿ ನಿಲ್ಲದೆಯೇ ಮುಂದಕ್ಕೆ ಸಾಗಬೇಕಿತ್ತು. ಆದರೆ ಗ್ವಾಲಿಯರ್ ಸಿಬ್ಬಂದಿಯ ಸಕಾಲಿಕ ಎಚ್ಚರಿಕೆಯಿಂದಾಗಿ ಭಾರಿ ಅಪಘಾತ ತಪ್ಪಿತು ಎಂದು ಮೂಲಗಳು ಹೇಳಿವೆ.

ಗೂಡ್ಸ್ ರೈಲುಗಾಡಿ ಹಳಿ ತಪ್ಪಿದ ಪರಿಣಾಮವಾಗಿ ಈ ಮಾರ್ಗವಾಗಿ ಸಾಗುವ ಎಲ್ಲ ರೈಲುಗಾಡಿಗಳ ಪಯಣ  ಎರಡು ಗಂಟೆಗಳ ಕಾಲ ವ್ಯತ್ಯಯಗೊಂಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT