ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿತ: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

Last Updated 13 ಡಿಸೆಂಬರ್ 2013, 7:54 IST
ಅಕ್ಷರ ಗಾತ್ರ

ಯಲಬುರ್ಗಾ:  ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮದ ಈರುಳ್ಳಿ ಬೆಳೆಗಾರರು ಆತಂಕಕೊಳಗಾಗಿದ್ದಾರೆ. ಕೃಷಿ ಚಟುವಟಿಕೆಗೆ ಮಾಡಿದ ಖರ್ಚು ನಿಭಾಯಿಸಿದರೆ ಸಾಕು ಎಂಬ ಮಾತುಗಳು ಬಹುತೇಕ ರೈತರಿಂದ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಬರಬೇಕು ಎಂದು ರೈತ ಸಂಘಟನೆಗಳಿಂದ ಒತ್ತಾಯ ಕೇಳಿಬರುತ್ತಿವೆ.

ಅಡುಗೆ ಮಾಡುವಾಗ ಮಹಿಳೆಯರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ, ಈಗ ಬೆಳೆದ ರೈತರಿಗೆ ಬೆಲೆ ಸಿಗದೇ ಕಣ್ಣೀರು ತರಿಸುತ್ತಿದೆ. ಇದೇ ಧೋರಣೆ ಮುಂದುವರಿದರೆ ರೈತ ಭಾರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಆತಂಕದ ಮಾತುಗಳು ರೈತರಿಂದ ವ್ಯಕ್ತವಾಗುತ್ತಿವೆ.

ಯರೇಹಂಚಿನಾಳ, ಬಿನ್ನಾಳ, ತೊಂಡಿಹಾಳ, ಬಂಡಿಹಾಳ ಹಾಗೂ ಇತರೆ ಯರಿ ಭಾಗ ಸೇರಿದಂತೆ ಮಸಾರಿ ಭಾಗದಲ್ಲಿಯೂ ಅನೇಕ ರೈತರು ನೀರಾವರಿ ಬಳಕೆ ಮಾಡಿಕೊಂಡು ಸಾಕಷ್ಟು ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದಾರೆ. ಒಂದು ತಿಂಗಳ ಮುಂಚೆ ಮಾರುಕಟ್ಟೆಗೆ ಹೋಗಿದ್ದ ಈರುಳ್ಳಿಗೆ ಒಳ್ಳೆಯ ಬೆಲೆ ದೊರೆತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿ­ರುವ ಈರುಳ್ಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಇದರಿಂದ ರೈತರು ತೊಂದರೆ ಸಿಲುಕಿದ್ದಾರೆ ಎಂದು ರೈತ ಮುಖಂಡ ಶರಣಯ್ಯ ಮುಳ್ಳೂರಮಠ ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ರೈತರು ಬೆಂಗಳೂರು, ಹುಬ್ಬಳ್ಳಿ ಮಾರುಕಟ್ಟೆಗಳಿಗೆ ಸಾವಿರಾರು ರೂಪಾಯಿ ಲಾರಿ ಬಾಡಿಗೆ ಕೊಟ್ಟು ಒಯ್ದರೆ ಸೂಕ್ತ ಬೆಲೆ ಸಿಗದೇ ಇರುವುದರಿಂದ ಬೆಳೆ ಸಾಲ ಹಾಗೂ ಲಾರಿ ಬಾಡಿಗೆ ವೆಚ್ಚ ಮೈಮೇಲೆ ಬರುವಂತಾಗಿದೆ. ಕಳೆದ ತಿಂಗಳಲ್ಲಿ ಈರುಳ್ಳಿಗೆ ಭಾರಿ ಬೆಲೆ ಇದ್ದುದರಿಂದ ಈರುಳ್ಳಿ ಕೀಳಲು ಹಾಗೂ ಇನ್ನಿತರ ಕೃಷಿ ಚಟುವಟಿಕೆಗೆ ಬರುವ ಕೃಷಿ ಕಾರ್ಮಿಕರ ವೇತನವು ಕೂಡಾ ಎರಡು ಪಟ್ಟಾಗಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ಹಿತ ಕಾಪಾಡಲು ಬೆಂಬಲ ಬೆಲೆ ಘೋಷಿಸಬೇಕಾಗಿದೆ ಎಂದು ರೈತ ರುದ್ರಪ್ಪ ಗೆದಗೇರಿ ಆಗ್ರಹಿಸಿದ್ದಾರೆ.

ತರಕಾರಿ ವ್ಯಾಪಾರಸ್ಥರಿಗೆ ಲಾಭ: ಸಗಟು ವ್ಯಾಪಾರಸ್ಥರು ರೈತರು ಬೆಳೆದ ಈರುಳ್ಳಿಯನ್ನು ತೀರಾ ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿದ್ದಾರೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಮಾತ್ರ ಕಡಿಮೆಯಾಗಿಲ್ಲ, ಕ್ವಿಂಟಲ್‌ಗೆ ₨3ರಿಂದ 4ಸಾವಿರ ಬೆಲೆ ಇದ್ದ ಸಂದರ್ಭದಲ್ಲಿ ಎಷ್ಟು ದರಕ್ಕೆ ಮಾರಾಟವಾಗುತ್ತಿತ್ತೋ ಈಗಲೂ ಅದೇ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಕೃಷಿ ಉತ್ಪನ್ನ ಮಾರುಕಟ್ಟೆಗ­ಳಲ್ಲಿಯೇ ರೈತರಿಗೆ ಸೂಕ್ತ ಬೆಲೆ ನಿಗದಿಯಾಗ­ದಿರುವುದು ಕಂಡು ಬರುತ್ತಿದೆ.

ಈ ನಿಟ್ಟಿನಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಿ ರೈತರಿಗೆ ಅನ್ಯಾಯವಾಗದಂತೆ ಮುಂಜಾಗೃತೆ ಕ್ರಮ ಕೈಗೊಳ್ಳಬೇಕಾಗಿದೆ. ಕಳೆದ ವರ್ಷ ಇದೇ ಸನ್ನಿವೇಶ ನಿರ್ಮಾಣವಾಗಿದ್ದರ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈರುಳ್ಳಿ ಖರೀದಿಸಿ ವಿವಿಧ ಶಾಲೆಗಳಿಗೆ ಹಂಚಿಕೆ ಮಾಡಿತ್ತು. ಅದೇ ರೀತಿ ರೈತರು ಅನುಭವಿಸಬಹುದಾದ ಸಂಕಷ್ಟ ನಿವಾರಣೆಗೆ ಈರುಳ್ಳಿ ಖರೀದಿ ಕೇಂದ್ರವನ್ನು ತೆರೆದು ಬೆಂಬಲ ಬೆಲೆಯೊಂದಿಗೆ ಕೊಳ್ಳಬೇಕು ಎಂಬುದು ರೈತರು ಒತ್ತಯಿಸಿದ್ದಾರೆ.
–ಉಮಾಶಂಕರ ಬ. ಹಿರೇಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT