ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಪಾಲಿಕೆ ಗುತ್ತಿಗೆ ಹಗರಣ: 16 ಅಲ್ಲ, 41 ಕೋಟಿ ರೂಪಾಯಿ!

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಕೇವಲ 16.03 ಕೋಟಿ ರೂಪಾಯಿ ತುಂಡು ಗುತ್ತಿಗೆ ಕಾಮಗಾರಿ ಮಾಡಿಲ್ಲ; ಬರೋಬ್ಬರಿ 41.10 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ತುಂಡು ಗುತ್ತಿಗೆಯಡಿ ಮಾಡಲಾಗಿದೆ.

16.03 ಕೋಟಿ ರೂಪಾಯಿ ವೆಚ್ಚದಲ್ಲಿ 1800ಕ್ಕೂ ಹೆಚ್ಚು ತುಂಡು ಗುತ್ತಿಗೆ ನೀಡಿರುವ ಹಗರಣದ ಕುರಿತು  `ಪ್ರಜಾವಾಣಿ~ ಬೆಳಕು ಚೆಲ್ಲಿತ್ತು. ಆದರೆ ಈಗ ಲಭ್ಯವಾಗಿರುವ ದಾಖಲೆಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 4,741 ಕಾಮಗಾರಿಗಳನ್ನು ರೂ. 41 ಕೋಟಿ  ವೆಚ್ಚದಲ್ಲಿ ತುಂಡು ಗುತ್ತಿಗೆಯಡಿ ಮಾಡಲಾಗಿದೆ!

2008-09ನೇ ಸಾಲಿನಲ್ಲಿ 1,036 ತುಂಡು ಗುತ್ತಿಗೆ ಕಾಮಗಾರಿಗಳನ್ನು 8.83 ಕೋಟಿ ರೂಪಾಯಿ ವೆಚ್ಚದಲ್ಲಿ, 2009-10ನೇ ಸಾಲಿನಲ್ಲಿ 1,696 ಕಾಮಗಾರಿಗಳನ್ನು ರೂ. 14.53 ಕೋಟಿ ವೆಚ್ಚದಲ್ಲಿ, 2010-11ನೇ ಸಾಲಿನಲ್ಲಿ 1,826 ಕಾಮಗಾರಿಗಳನ್ನು ರೂ. 16.03 ಕೋಟಿ ಹಾಗೂ 2011-12ರ ಏಪ್ರಿಲ್‌ನಿಂದ ಜೂನ್‌ವರೆಗೆ 183 ಕಾಮಗಾರಿಗಳನ್ನು ರೂ. 1.7 ಕೋಟಿ ವೆಚ್ಚದಲ್ಲಿ ತೆಗೆದುಕೊಳ್ಳಲಾಗಿದೆ.

ವಿಶ್ವ ಕನ್ನಡ ಸಮ್ಮೇಳನ ಹಾಗೂ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಮಾಡಿದ ಕಾಮಗಾರಿ ಹೊರತು ಪಡಿಸಿದರೆ ಉಳಿದ 25 ಕೋಟಿ ರೂಪಾಯಿಗೂ ಹೆಚ್ಚು ಕಾಮಗಾರಿಗಳಿಗೆ ಪಾಲಿಕೆ ಆಯುಕ್ತರೇ ಆದೇಶ ನೀಡಿದ್ದಾರೆ. ತುಂಡು ಗುತ್ತಿಗೆಯ ಸಿಂಡಿಕೇಟ್‌ನ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ.

ದೀಪಾವಳಿ, ದಸರಾ, ಮೊಹರಂ ಅಂತಹ ಹಬ್ಬದ ಸಂದರ್ಭದಲ್ಲಿ ತುರ್ತು ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಈ ಹಬ್ಬಗಳು ಬರುವುದು, ಆಗ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಪಾಲಿಕೆಯ ಅಧಿಕಾರಿಗಳಿಗೆ ಮೊದಲೇ ಗೊತ್ತಿರಲಿಲ್ಲವೇ ಎಂಬುದು ಪ್ರಶ್ನೆಯಾಗಿದೆ.

ಶಾಸಕರು, ಮೇಯರ್, ಉಪ ಮೇಯರ್ ಹಾಗೂ ಪಾಲಿಕೆ ಸದಸ್ಯರು ವಾರ್ಡಿಗೆ ಭೇಟಿ ನೀಡಿ, ಸೂಚಿಸಿದ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಪ್ರತಿ ವಾರ್ಡ್‌ನಲ್ಲಿ ಇಂತಹ 60ಕ್ಕೂ ಹೆಚ್ಚು ಕಾಮಗಾರಿಗಳನ್ನು ಮಾಡಲಾಗಿದೆ. ಅವರು ಭೇಟಿ ನೀಡುವವರೆಗೂ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ ಎಂಬುದು ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆ.

ಹತ್ತಾರು ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ತುಂಡು ಗುತ್ತಿಗೆಯಡಿ ಕೆಟ್ಟ ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ. ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಗಟಾರು ನಿರ್ಮಿಸಲಾಗಿದೆ. ಇವುಗಳು ತುರ್ತು ಕಾಮಗಾರಿಗಳೇ? ಇವುಗಳನ್ನು ತಿಂಗಳ ಅವಧಿಯಲ್ಲಿ ಟೆಂಡರ್ ಕರೆದು ಮಾಡಿದ್ದರೆ ಏನು ಅನಾಹುತವಾಗುತ್ತಿತ್ತು ಎನ್ನುವುದಕ್ಕೆ ಪಾಲಿಕೆ ಅಧಿಕಾರಿಗಳು ಉತ್ತರ ನೀಡಬೇಕು ಎನ್ನುತ್ತಾರೆ ಪಾಲಿಕೆಯ ಮಾಜಿ ಸದಸ್ಯ ರಮೇಶ ಸೊಂಟಕ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT