ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಗಾಗಿ ಮತ್ತೆ ಹಳೆಯ ಹುಯಿಲು

Last Updated 5 ಜನವರಿ 2011, 9:50 IST
ಅಕ್ಷರ ಗಾತ್ರ

‘ಹಾಡು ಹಳೆಯದಾದರೇನು ಭಾವ (ಬಾಯಿ) ನವನವೀನ...’ ಮಹಾರಾಷ್ಟ್ರದ ನೆಲದಿಂದ ಮತ್ತೊಂದು ಬಾಯಿ ಬೊಬ್ಬೆ ಹೊಡೆಯುತ್ತಿದೆ. ಅದೇ ಹಳೆಯ ಹಾಡು... ವೇದಿಕೆ ಮಾತ್ರ ನವನವೀನ... ಉತ್ತಮ ಕಾಂಬಳೆಯ ಉತ್ತರನ ಪೌರುಷ! ಬೆಳಗಾವಿ, ನಿಪ್ಪಾಣಿ, ಕಾರವಾರಗಳನ್ನು ಕಬಳಿಸುವ ಆವೇಶ. ‘ಬೀದಿಗಿಳಿಯಿರಿ, ಇಲ್ಲಾ ಕೋರ್ಟ್ ಕಟ್ಟೆಯನ್ನಾದರೂ ಏರಿ’ ಎಂಬ ಆದೇಶ. ಭೇಷ್!

ಮಹಾರಾಷ್ಟ್ರದ ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಸದ್ದುಮಾಡಿ ಸುದ್ದಿ ಸೃಷ್ಟಿಸುವುದಂತೂ ಇದ್ದೇ ಇದೆ. ಯಾವ್ಯಾವುದೋ ವೇದಿಕೆಗಳಲ್ಲಿ ಗಡಿ ವರಾತ ತೆಗೆದು, ಗಡಿಬಿಡಿಯ ವಾತಾವರಣ ನಿರ್ಮಿಸುವುದು ಅವರ ಜಾಯಮಾನ. ಕೇಂದ್ರ ಸರ್ಕಾರದ ಗಮನ ಸೆಳೆಯುವ ವಿಫಲ ವಿಧಾನ. ಈ ಬಾರಿ 84ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ‘ವೀರ ಸಾವರ್ಕರ್ ವೇದಿಕೆ’ಯನ್ನು ದುರುಪಯೋಗಪಡಿಸಿಕೊಂಡದ್ದು ಮಾತ್ರ ದುರದೃಷ್ಟಕರ.

ಕರ್ನಾಟಕ ಮತ್ತು ಮಹಾರಾಷ್ಟ್ರ ಜನತೆಯ ನಡುವೆ ಸಾಹಿತ್ಯಿಕ, ಸಾಂಸ್ಕೃತಿಕ ಸಂಬಂಧ ಸುಮಧುರವಾಗಿದೆ. ಚುನಾವಣೆಯಲ್ಲಿ ಮತಗಳ ಬೇಟೆಗಾರರು ಏನನ್ನೇ ಹೇಳಲಿ, ಗಡಿ ಗದ್ದಲ ಯಾರಿಗೂ ಬೇಡವಾಗಿದೆ. ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಮಾತು ಕ್ಲೀಷೆ ಎನ್ನಿಸಿಬಿಟ್ಟಿದೆ. ಕನ್ನಡಿಗರು ಅದನ್ನು ಪುನರುಚ್ಚರಿಸುವ ಅಗತ್ಯ ಇಲ್ಲ. 25ನೇ ಅಕ್ಟೋಬರ್ 1966ರಲ್ಲಿ ಮೆಹರ್‌ಚಂದ್ ಮಹಾಜನ್ ಆಯೋಗ ನೇಮಿಸಲ್ಪಟ್ಟದ್ದು;  ಅದರ ವರದಿಯನ್ನು ಅಂತಿಮವಾಗಿ ಒಪ್ಪುವುದಾಗಿ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ವಿ.ಪಿ. ನಾಯಕ್ ಮುಂತಾದ ಎಲ್ಲಾ ನಾಯಕರೂ ಪುನರುಚ್ಚರಿಸಿದ್ದು; ಆಗಸ್ಟ್ 1967 ರಲ್ಲಿ ಆಯೋಗ ತನ್ನ ವರದಿ ಒಪ್ಪಿಸಿದ್ದು, ‘ಆಯೋಗದ ವರದಿ ಹೇಗಿದ್ದರೂ ಅದಕ್ಕೆ ನಾವು ಬದ್ಧರು’ ಎಂಬುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳು 14 ಸೆಪ್ಟೆಂಬರ್ 1967 ರಲ್ಲಿ ಘೋಷಿಸಿದ್ದು... ಇದೆಲ್ಲಾ ಹಳೆಯ ಕಥೆ. ಮತ್ತೀಗ ಯಾಕೆ ಹೊಸ ವ್ಯಥೆ?

ಗಡಿಭಾಗದ ಅನೇಕ ಪ್ರದೇಶಗಳನ್ನು ಕನ್ನಡಿಗರು ಕಳೆದುಕೊಳ್ಳುವಂತಾದರೂ, ಮಹಾಜನ ವರದಿಯ ಅನುಷ್ಠಾನಕ್ಕೆ ಬದ್ಧರಾಗಿದ್ದೇವೆ. ಈಗ ಬೆಳಗಾವಿ, ನಿಪ್ಪಾಣಿ, ಕಾರವಾರಗಳ ಮೇಲೆ ಕಾಕದೃಷ್ಟಿ ಬೀರಿದ್ದು ಯಾಕೆ? ಗೋವಾದ ರಾಜಕಾರಣಿಗಳಿಗೆ ಕೂಡ ಕಾರವಾರದ ಮೇಲೆ ಕಣ್ಣು. ಕನ್ನಡ ಚಳವಳಿಗಾರರು ಚಳಿಗೆ ಬೆಚ್ಚಗೆ ಹೊದ್ದು ಮಲಗಿದ್ದಾರೆ ಎಂದೇನಾದರೂ ಇವರೆಲ್ಲ ಭಾವಿಸಿದ್ದಾರೆಯೇ? ಹೊಸ ವರ್ಷ ಅರಳಿಕೊಳ್ಳುವಾಗ ಹೊಸದೇನಾದರೂ ರಂಪ, ರಾದ್ಧಾಂತಕ್ಕೆ ಮಹಾರಾಷ್ಟ್ರದ ನೆಲದಲ್ಲಿ ವಿಷಯ ಸಿಗಲಿಲ್ಲವೆ?

ಇಷ್ಟಕ್ಕೂ ಗಡಿಭಾಗದ ಶಿಕ್ಷಣ ಸಂಸ್ಥೆಗಳಲ್ಲಿ, ಔದ್ಯೋಗಿಕ ಕ್ಷೇತ್ರಗಳಲ್ಲಿ ಅನ್ಯಾಯ ಆಗುತ್ತಿರುವುದು ಮರಾಠಿಗರಿಗಾ? ಅಥವಾ ಕನ್ನಡಿಗರಿಗಾ? ಕನ್ನಡ ಶಾಲೆಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ. ಮಕ್ಕಳನ್ನು ಗೇಲಿ ಮಾಡಿ, ಕೀಳರಿಮೆ ತುಂಬಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಕಲಿತ ತರುಣರನ್ನು ಉದ್ಯೋಗಾವಕಾಶಗಳಿಂದ ವಂಚಿಸಲಾಗುತ್ತಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಮಹಾಮೇಳಗಳಿಗಂತೂ ‘ಮಿತಿ’ಯೇ ಇಲ್ಲವಾಗಿದೆ. ಇದೀಗ ಪುಢಾರಿಗಳ ಪಂಕ್ತಿಗೆ ‘ಉತ್ತಮ ಕಾಂಬಳೆ ಆ್ಯಂಡ್ ಕಂಪೆನಿ’ ಸೇರಿದ್ದು ಚಪ್ಪಾಳೆ ಗಿಟ್ಟಿಸಲೆಂದೇ? ಅಥವಾ ‘ಆದರ್ಶ ಅಪಾರ್ಟ್‌ಮೆಂಟ್’ ಇತ್ಯಾದಿ ಹಗರಣಗಳನ್ನು ಮರೆಮಾಚಲೆಂದೇ?

ಅವರ ಬೊಬ್ಬೆ ಏನೇ ಇರಲಿ. ಕನ್ನಡಿಗರಿಗಂತೂ ಸದಾ ಎಚ್ಚರದಿಂದ ಇರಬೇಕಾಗಿದೆ. 77ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದೆ. ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ನಡೆಯಲಿದೆ. ಕನ್ನಡದ ಕೆಚ್ಚು, ಸ್ವಾಭಿಮಾನ, ಕರ್ತೃತ್ವ ಶಕ್ತಿ ಎಲ್ಲಾ ವೇದಿಕೆಗಳಲ್ಲೂ ಫಳಫಳಿಸಬೇಕಾಗಿದೆ. ವಿಶ್ವಸಂಪರ್ಕಕ್ಕೆ ಇಂಗ್ಲಿಷ್ ಬೇಕು, ನಿಜ. ಆದರೆ, ಮಾತೃಭಾಷೆ ಪರಮಶ್ರೇಷ್ಠ. ನೆಲದ ಭಾಷೆ, ಆಡುಭಾಷೆ, ಆಡಳಿತ ಭಾಷೆ, ಅಧಿಕೃತ ಭಾಷೆಯಾದ ಕನ್ನಡವನ್ನು ‘ಬಳಸಿ, ಉಳಿಸಿ, ಬೆಳೆಸಿ’ ಎಂಬುದಾಗಿ ಪುನರಪಿ ಗೋಗರೆವ ಪ್ರಮೇಯ ಬರಬಾರದು. ಔದ್ಯೋಗಿಕ ಕ್ಷೇತ್ರದಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆದಿದೆ ಎಂಬುದು   ಸಾಬೀತಾದರೆ, ಕನ್ನಡವನ್ನು ಇನ್ನಷ್ಟು ಪ್ರೀತಿಯಿಂದ ಒಪ್ಪಿಕೊಳ್ಳಲು, ಅಪ್ಪಿಕೊಳ್ಳಲು, ಕನ್ನಡ ಮಾಧ್ಯಮದಲ್ಲೇ ಕಲಿಯಲು ಸಾಧ್ಯವಾಗುತ್ತದೆ. ಅಂತಹ ವಾತಾವರಣವನ್ನು ಕನ್ನಡ ನೆಲದ ಸರ್ಕಾರ (ಯಾವ ಪಕ್ಷದ್ದೇ ಇರಲಿ) ಸಿದ್ಧಪಡಿಸಬೇಕು. ‘ರಾಷ್ಟ್ರಪ್ರಜ್ಞೆ’, ‘ಸಮಗ್ರ ಪರಿಕಲ್ಪನೆ’ ಎಂದರೆ ಪ್ರಾದೇಶಿಕ ಭಾಷೆ, ಭಾವನೆ, ಸಾಹಿತ್ಯ, ಸಂಸ್ಕೃತಿ, ಸಂವಹನಗಳನ್ನು ಸೊರಗಿಸುವುದಲ್ಲ; ಕೊಲ್ಲುವುದಲ್ಲ.

ಒಗ್ಗಟ್ಟನ್ನು ಕಾಯ್ದುಕೊಳ್ಳುವ ಮೂಲಕ, ಕನ್ನಡದ ಪ್ರೀತಿಯನ್ನು ಕೃತಿಗಳಲ್ಲಿ ತೋರಿಸುವ ಮೂಲಕ, ಕೀಳರಿಮೆಯನ್ನು ತೊಡೆದುಹಾಕಿ ಸ್ವಾಭಿಮಾನವನ್ನು ಮೆರೆಸುವ ಮೂಲಕ ಕಿಡಿಗೇಡಿಗಳಿಗೆ ‘ಉತ್ತರ’ (ಕಾಂಬಳೆ) ನೀಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT