ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳದಿಂಗಳಲ್ಲಿ ಪ್ರತಿಭೆ ಅನಾವರಣ

Last Updated 17 ಅಕ್ಟೋಬರ್ 2011, 11:00 IST
ಅಕ್ಷರ ಗಾತ್ರ

ಬಳ್ಳಾರಿ: ಆಕಾಶದಲ್ಲಿ ಮಿನುಗುವ ಪೂರ್ಣಚಂದ್ರನ ಹೊಳಪು, ಆತ ಹೊರಸೂಸಿದ ಹಾಲ ಬೆಳದಿಂಗಳ ಬೆಳಕು, ತಂಗಾಳಿಯ ಒನಪು, ಹೊತ್ತಿ ಉರಿಯು ತ್ತಿರುವ ಕಟ್ಟಿಗೆಯ ಝಳದ ಪಕ್ಕದಲ್ಲಿ ಕುಳಿತ ಯುವಜನರು ಮೆಲುಕು ಹಾಕಿದ ನೆನಪು.

ಇದು ರಂಗತೋರಣ ಸಂಸ್ಥೆಯು ವಾರಾಂತ್ಯಕ್ಕೆ ನಗರದಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವದಲ್ಲಿ ಭಾಗ ವಹಿಸಿದ್ದ ತಂಡಗಳಿಗಾಗಿ ಆಯೋಜಿಸ ಲಾಗಿದ್ದ `ರಂಗ ಬೆಳದಿಂಗಳು~ ಕಾರ್ಯಕ್ರಮದಲ್ಲಿ  ಕಂಡುಬಂದ ಅಪರೂಪದ ಗಳಿಗೆ.

ನಾಟಕೋತ್ಸವದಲ್ಲಿ ಪ್ರದರ್ಶನ ನೀಡಿ, ರಾತ್ರಿ ಊಟ ಮುಗಿಸಿ ಬಂದು ರಾಘವ ಕಲಾಮಂದಿರದ ಎದುರಿನ ಮುನಿಸಿಪಲ್ ಕಾಲೇಜು ಮೈದಾನದಲ್ಲಿ  ನಡೆದ ಕಾರ್ಯಕ್ರಮಕ್ಕೆಂದೇ ಸಿದ್ಧಗೊಂಡಿದ್ದ `ಫೈರ್ ಕ್ಯಾಂಪ್~  ನಲ್ಲಿ ನೆಲದ ಮೇಲೆ ಕುಳಿತು ಹರಟೆಯಲ್ಲಿ ತೊಡಗಿದಾಗ, ಅಲ್ಲಿದ್ದ ಯುವ ಮನಸುಗಳೆಲ್ಲ ತಂಗಾಳಿಯಲ್ಲಿ ಮಿಂದವು.

ನಾಟಕ ಸ್ಫರ್ಧೆಯಲ್ಲಿ ಸರ್ವ ಪ್ರಯತ್ನ ದೊಂದಿಗೆ ತಮ್ಮಲ್ಲಿ ಹುದುಗಿರುವ ಕಲೆಯನ್ನು ಅನಾವರಣ ಗೊಳಿಸಿ ಬಂದಿದ್ದ ಆ ಯುವ ಪ್ರತಿಭೆಗಳು ಒಂದೊಂದಾಗಿ ತಮ್ಮದೇ  ಸಮೂಹ ದೆದುರು ತಮ್ಮತನವನ್ನು ಹೊರಗೆಡಹಿದಾಗ ಕಲಾವಿದರ ಕೈಗಳು ಸುಮ್ಮನಿರಲಾರದೆ ಚಪ್ಪಾಳೆಯ ಕರತಾಡನ ಪ್ರದರ್ಶಿಸಿದವು.

ಯುವಜನರ ಉತ್ಸವಗಳಲ್ಲಿ ಅಪರೂಪಕ್ಕೆ ಕಂಡುಬರುವ ಇಂತಹ ಅಪರೂಪದ ಕಾರ್ಯಕ್ರಮ ದಲ್ಲಿ ಮನಸ್ಸನ್ನು ಹಗುರಾಗಿಸಿಕೊಂಡ ಕಲಾವಿದರು, ಸಂಗೀತ, ಹಾಡು, ಹರಟೆ, ಕುಣಿತದೊಂದಿಗೆ ಅಲ್ಲಿ ಸೇರಿದ್ದ ರಂಗಾಸಕ್ತರ ಮನಸನ್ನೂ ತಣಿಸಿದರು.

ಶಿವಮೊಗ್ಗ, ಚಾಮರಾಜನಗರ, ಮೈಸೂರು, ರಾಯಚೂರು, ಧಾರವಾಡ, ಗಂಗಾವತಿ, ಹಾವೇರಿ, ಹೊನ್ನಾವರ ಮತ್ತಿತರ ಊರುಗಳಿಂದ ದೂರದ ಬಳ್ಳಾರಿಗೆ ಬಂದು ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದ ಆ ಸದಸ್ಯರೆಲ್ಲ ಸಂಜೆಯಷ್ಟೇ ರಂಗ ಶೋಭಾಯಾತ್ರೆ ಗಾಗಿ ವಿಶೇಷ ವೇಷ ಧರಿಸಿ, ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸಿದ್ದರು.

ರಾತ್ರಿಯ ಬೆಳದಿಂಗಳ ಬೆಳಕಿನಡಿ, ಒಬ್ಬ ಯುವಕ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ, ಅಲ್ಲಿ ಸೇರಿದ್ದ ಬಹುತೇಕ ಯುವಹೃದಯಗಳು ಆ ಹಾಡಿಗೆ ದನಿಗೂಡಿಸಿದವು. ಆ ನೃತ್ಯಕ್ಕೆ ಮನಸೋತು ಮನದಲ್ಲೇ ಹೆಜ್ಜೆ ಹಾಕಿದವು.
ಹಿರಿಯ ಕವಿಗಳು ರಚಿಸಿದ ಭಾವಗೀತೆ, ಚಲನಚಿತ್ರಗೀತೆ, ಮಿಮಿಕ್ರಿ, ಭಕ್ತಿಗೀತೆ, ಹಿಂದೂಸ್ತಾನಿ ಗಾಯನ, ನೃತ್ಯ ಒಟ್ಟೊಟ್ಟಿಗೆ ಹದವಾಗಿ ಬೆರೆತದ್ದು ಒಂದೆಡೆ ಕಂಡುಬಂದರೆ, ಸಭ್ಯತೆಯ ಎಲ್ಲೆಯನ್ನು ಮೀರದ ಹಾಸ್ಯ ನೆರೆದವರನ್ನು ನಗೆಗಡಲಲ್ಲಿ ತೇಲಿಸಿತು.

ಸೌಜನ್ಯವನ್ನು ಮೀರದ, ಅಶ್ಲೀಲತೆಯ ಸೋಂಕಿಲ್ಲದ `ರಂಗ ಬೆಳದಿಂಗಳು~  ಆಯಾಸವನ್ನೆಲ್ಲ ಎತ್ತಿ ಎಸೆದು, ಆಹ್ಲಾದ ನೀಡಿತು.

ಸುಮಾರು ಎರಡೂವರೆ ಗಂಟೆ ಕಾಲ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಪ್ರದರ್ಶನವನ್ನು ನೀಡದಿದ್ದರೂ ಮನಸಿಗೆ ಮುದ ನೀಡಿದವರೊಂದಿಗೆ ಒಂದಾದ ನೂರಾರು ಜನ ಯುವ ಕಲಾವಿದರು, ಮಾರನೇ ದಿನ ನಡೆಯಬೇಕಿದ್ದ ತಮ್ಮ ನಾಟಕ ಪ್ರದರ್ಶನದ ತಾಲೀಮಿಗೂ ಕೊಂಚ ವಿರಾಮ ನೀಡಿ ಪುಳಕಗೊಂಡಿದ್ದು ವಿಶಿಷ್ಟ ಅನುಭವ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT