ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ತಿನ್ನುವ ಬಸವನ ಹುಳು

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಮೃದ್ವಂಗಿಗಳು ಕೂಡ ಜಮೀನಿನಲ್ಲಿ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಅವುಗಳಲ್ಲಿ `ಶಂಖ ಬಸವನ ಹುಳು~ (ಅಕ್ಯಾಟಿನಾ ಪುಲಿಕಾ) ಮುಖ್ಯವಾದದ್ದು.
ಶಂಖ ಬಸವನ ಹುಳು ಒಂದು ಪರದೇಶದ (Invasive Alien Species) ಒಳಸುಳಿಯುವ ಪ್ರಭೇದಕ್ಕೆ ಸೇರಿದ ಜೀವಿ. ತನ್ನ ಮೂಲ ಪರಿಸರದಿಂದ ಹೊರತಾದ ಸ್ಥಳದಲ್ಲಿ ಆರ್ಥಿಕ ನಷ್ಟ, ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ಹಾನಿ ಮಾಡುವ, ಬೀಜಗಳು, ಮೊಟ್ಟೆಗಳು, ಬೀಜ ಕಣ ಅಥವಾ ಜೈವಿಕ ವಸ್ತುಗಳಿಂದ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗುವ ಜೀವಿಗಳೇ `ಒಳಸುಳಿಯುವ ಅಥವಾ ಪರದೇಶದ ಪ್ರಭೇದ~ಗಳು.

ಇವು ಸಾಮಾನ್ಯವಾಗಿ ವ್ಯವಸಾಯದ ಮತ್ತು ತೋಟಗಾರಿಕಾ ಸಾಧನ ಸಲಕರಣೆಗಳು, ವಿವಿಧ ಪದಾರ್ಥಗಳ ಮುಖಾಂತರ ಹರಡುತ್ತವೆ. ಇವುಗಳ ಮೂಲ ಪೂರ್ವ ಆಫ್ರಿಕಾ. ಅಲ್ಲಿಂದ ಪ್ರಪಂಚದ ವಿವಿಧೆಡೆ ಸಾಗಿ ಮನೆ ಮಾಡಿಕೊಂಡಿದೆ. ಏಷ್ಯಾಖಂಡದ ನಾನಾ ದೇಶಗಳು  ಮತ್ತು ಅಮೇರಿಕದಲ್ಲಿಯೂ ಇವುಗಳ ಹಾವಳಿ ಹೆಚ್ಚು.

ಇವುಗಳ ಸರಾಸರಿ ಆಯಸ್ಸು 3 ರಿಂದ 5 ವರ್ಷ. ಕೆಲವೊಮ್ಮೆ 9 ವರ್ಷಗಳ ವರೆಗೆ ಬದುಕುತ್ತವೆ. ಒಂದು ವರ್ಷದ ಅವಧಿಯಲ್ಲಿ ಪ್ರಾಯಕ್ಕೆ ಬರುತ್ತವೆ ಮತ್ತು ಜನೇಂದ್ರಿಯಗಳು ಕಾರ್ಯನಿರ್ವಹಿಸಲು ತೊಡಗುತ್ತವೆ. ಇವು ದ್ವಿಲಿಂಗಿ ಜೀವಿಗಳು. ಒಂದು ವರ್ಷದಲ್ಲಿ 300 ರಿಂದ 1000 ಹಳದಿ ಬಣ್ಣದ ಮೊಟ್ಟೆಗಳನ್ನು ಮೂರರಲ್ಲಿ ನಾಲ್ಕು ತಂಡಗಳಲ್ಲಿ ಇಡುತ್ತವೆ.

ಬೇಸಿಗೆಯಲ್ಲಿ ನೆಲದಲ್ಲಿ 10 ರಿಂದ 15 ಸೆಂಟಿಮೀಟರ್ ಆಳದ ಬಿಲ ಕೊರೆದು ಸುಪ್ತಸ್ಥಿತಿಗೆ ಹೋಗುತ್ತವೆ. ಸಾಮಾನ್ಯವಾಗಿ ಮಾನವನು ವಾಸಿಸುವ ಪರಿಸರದ ಸುತ್ತಮುತ್ತ ಅಂದರೆ ಗಿಡಗಳ ಮಧ್ಯೆ, ಹೂವಿನ ತೋಟ, ತೇವವಿರುವ ಪ್ರದೇಶದಲ್ಲಿ ಜೀವಿಸುತ್ತವೆ.

  ಶಂಖ ಬಸವನ ಹುಳು ರಾತ್ರಿ  ವೇಳೆ ಮಾತ್ರ ಚುರುಕಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ. ಹಗಲಿನಲ್ಲಿ ಮಣ್ಣಿನಲ್ಲಿ ಇಟ್ಟಿಗೆಗಳ ಮಧ್ಯೆ, ಮರದ ದಿಂಬಿಗಳ ಕೆಳಗೆ ಕೊಳೆಯುತ್ತಿರುವ ಎಳೆ ರಾಶಿಗಳ ಮಧ್ಯೆ ಮತ್ತು ಹೆಚ್ಚು ಹೆಚ್ಚು ಸಾಂದ್ರತೆಯುಳ್ಳ ಸಸ್ಯಗಳ ಮಧ್ಯೆ, ಹವಾನಿಯಂತ್ರಣ ಸಾಧನಗಳಲ್ಲಿ ಮತ್ತು ಎಸೆದ ತ್ಯಾಜ್ಯವಸ್ತುಗಳಲ್ಲಿ ಆಶ್ರಯ ಪಡೆಯುತ್ತದೆ.
ಇವು ಬಹುಪಾಲು ಸಸ್ಯಹಾರಿಗಳು. ಸುಮಾರು 500 ವಿವಿಧ ಸಸ್ಯ ಪ್ರಭೇದಗಳನ್ನು ತಿಂದು ಬದುಕುತ್ತವೆ. ಪರಿಸರದ ತಾಪಮಾನಕ್ಕೆ ಹೊಂದಿಕೊಂಡು ಜೀವಿಸುತ್ತವೆ. ಅವುಗಳಿಗೆ ಮಳೆ ಅವಶ್ಯಕ. ಮಣ್ಣಲ್ಲಿ ಕ್ಯಾಲ್ಸಿಯಂ ಮತ್ತು ಪಿಎಚ್ (ರಸಸಾರ) ಏಳರಿಂದ ಎಂಟು ಇರಬೇಕು.

ಇವು ನೆಮಟೋಡ್ (ಗುಂಡಾಕಾರದ ಕ್ರಿಮಿಗಳು) ಗುಂಪಿಗೆ ಸೇರಿದ ಆಂಜಿಯೋಸ್ಟ್ರಾಂಗೈಲಸ್ ಕೆಂಟೊನೆನ್ಸಿಸ್ ಮತ್ತು ಆಂಜಿಯೋಸ್ಟ್ರಾಂಗೈಲಸ್ ಕೊಸ್ಟರಿಸೆನ್ಸಿಸ್ ಎಂಬ ಕ್ರಿಮಿಗಳಿಗೆ ಆಶ್ರಯ ನೀಡುತ್ತವೆ. ಇದರಲ್ಲಿ ಮೊದಲಿನ ನೆಮೆಟೋಡ್, ಮನುಷ್ಯರಲ್ಲಿ ಇಸನೋಫಿಲಿಕ್ ಮೆನಿಂಜೈಟಿಸ್ ಎಂಬ ಕಾಯಿಲೆ ಉಂಟು ಮಾಡುತ್ತದೆ. ಎರಡನೆ ನೆಮೆಟೋಡ್ ಮನುಷ್ಯರಲ್ಲಿ ಕರುಳಿನ ಅಂಜಿಯೋಸ್ಟ್ರಾಂಗೈಲೋಸಿಸ್ ಎಂಬ ಕಾಯಿಲೆಗೆ ಕಾರಣವಾಗುತ್ತದೆ. ಶಂಖ ಬಸವನ ಹುಳುಗಳು ಸತ್ತ ನಂತರ ಖಾಲಿಯಾದ ಶಂಖಗಳಲ್ಲಿ ಮಳೆ ನೀರು ತುಂಬಿ ಸೊಳ್ಳೆಗಳು ವೃದ್ಧಿಯಾಗುವುದನ್ನು ಪತ್ತೆ ಹಚ್ಚಲಾಗಿದೆ.

ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ 1975 ರಿಂದ 6 ವರ್ಷ ಸತತವಾಗಿ ಹಾನಿ ಮಾಡುತ್ತಿದ್ದ ಶಂಖ ಬಸವನ ಹುಳುಗಳನ್ನು ನಾಶ ಮಾಡಲು ಲಕ್ಷಾಂತರ ಡಾಲರ್ ವೆಚ್ಚ ಮಾಡಲಾಗಿತ್ತು. ಬ್ರೆಜಿಲ್‌ನಲ್ಲಿ ಇವುಗಳ ಹಾವಳಿ ಸಣ್ಣ ರೈತರನ್ನು ಕಂಗಾಲು ಮಾಡಿತ್ತು.

ಇದರ ಪರಿಣಾಮವಾಗಿ ಆಹಾರದ ಕೊರತೆ, ಬೆಲೆ ಏರಿಕೆಯಿಂದ ಜೀವನ ಸಾಗಿಸಲಾಗದೆ ಜನ ನಗರಗಳ ಕಡೆ ವಲಸೆ ಹೋಗಿದ್ದರು. ಇವು ಅನೇಕ ದೇಶಗಳಲ್ಲಿ ಪರಿಸರದ ಅವನತಿಗೆ ಕಾರಣವಾಗಿವೆ. ಪ್ರವಾಸೀ ತಾಣಗಳಲ್ಲಿ ಅವುಗಳ ಇರುವಿಕೆ ಮತ್ತು ಹಿಕ್ಕೆ ಪ್ರವಾಸೋದ್ಯಮಕ್ಕೆ ತೊಂದರೆ ಮಾಡಿದೆ.

ಹಿನ್ನೆಲೆ, ಹತೋಟಿ
ಮದ್ವಂಗಿ ನಾಶಕಗಳ (Metaldehyde, methiocarb & Iron phosphate) ಬಳಕೆ, ಕೈಗಳಿಂದ ಹೆಕ್ಕಿ ಉಪ್ಪು ಹಾಕಿ ಸಾಯಿಸುವುದು,  ಬೇಸಾಯದ ಕ್ರಮಗಳಲ್ಲಿ ಬದಲಾವಣೆ ಮತ್ತು ಶುದ್ಧೀಕರಣಗಳಿಂದ ಇವನ್ನು ನಿಯಂತ್ರಿಸಬಹುದು. ಆದರೆ ಜೈವಿಕ ನಿಯಂತ್ರಣ ವಿಧಾನಗಳು ಹೆಚ್ಚು ಫಲಕಾರಿಯಾಗಿಲ್ಲ. ಏಕೆಂದರೆ ಎಲ್ಲಾ ಪರಿಸರದಲ್ಲಿ ಜೀವಿಸುವ  ಚಾಕಚಕ್ಯತೆ ಇವಕ್ಕಿದ್ದು, ನಾಶ ಮಾಡುವುದು ತುಂಬ ಕಷ್ಟ.

ಬ್ರಿಟೀಷ್ ಶಂಖಶಾಸ್ತ್ರ ತಜ್ಞ ವಿಲಿಯಂ ಹೆನ್ರಿ ಬೆನ್‌ಸನ್ ಶಂಖ ಬಸವನ ಹುಳುವನ್ನು ಮೊದಲ ಬಾರಿಗೆ 1847ರಲ್ಲಿ ಭಾರತಕ್ಕೆ ತಂದು ಕೋಲ್ಕತ್ತದ ಚೌರಂಗಿ ತೋಟದಲ್ಲಿ ಬಿಟ್ಟಿದ್ದ, ನಂತರ ಅವು ವಿವಿಧೆಡೆ ಹರಡಿದವು ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಈತ ಮಾರಿಷಸ್‌ನಲ್ಲಿದ್ದ ತನ್ನ ಹಳೆಯ ಸಹಪಾಠಿ ಸರ್ ಡೆವಿಡ್ ಬಾರ್‌ಕ್ಲೇಯಿಂದ ಇವನ್ನು ಭಾರತಕ್ಕೆ ತಂದು ಕೋಲ್ಕತ್ತದ ಪಕ್ಕದ ಮನೆಯ ಸ್ನೇಹಿತನಿಗೆ ಕೊಟ್ಟ. ಆತ ಅದನ್ನು ತನ್ನ ತೋಟದಲ್ಲಿ ಬಿಟ್ಟ. ಅಲ್ಲಿಂದ ಇವು ದೇಶದ ವಿವಿಧ ಭಾಗಗಳಿಗೆ ಪ್ರಸಾರವಾದವು. ಇವು ಬೆಂಗಳೂರಿನಲ್ಲಿ ಅಲಂಕಾರಿಕ ಮತ್ತು ತರಕಾರಿ ಸಸ್ಯಗಳನ್ನು ತಿಂದು ನಾಶ ಮಾಡುತ್ತಿವೆ ಎಂದು ಮೊದಲ ಸಲ ಹೇಳಿದ್ದು1979ರಲ್ಲಿ ವೀರೇಶ್ ಮತ್ತು ಅವರ ಸಂಗಡಿಗರು.

ಶಂಖ ಬಸವನ  ಹುಳುವನ್ನು ತಕ್ಷಣ ಹತೋಟಿಗೆ ತರುವ ಕಾರ್ಯಕ್ರಮದ ಅನಿವಾರ್ಯತೆಯಿದೆ. http://www.issg.org/database/welcome ಪ್ರಕಾರ ಶಂಖ ಬಸವನ ಹುಳು ವಿಶ್ವದ ಅತಿ ಕೆಟ್ಟ 100 ಕೀಟಗಳಲ್ಲಿ ಒಂದು.

ಇವನ್ನು ಆಫ್ರಿಕಾ, ಜಪಾನ್, ಚೀನಾ, ದಕ್ಷಿಣ ಪೂರ್ವ ಏಷ್ಯಾ ಭಾಗಗಳಲ್ಲಿ ಆಹಾರಕ್ಕಾಗಿಯೇ ಬೆಳೆಸುತ್ತಾರೆ, ಬೇಯಿಸಿ ತಿನ್ನುತ್ತಾರೆ. ಕೋಳಿ ಮತ್ತು ಹಂದಿಗಳಿಗೆ ಶಂಖ ಬಸವನ ಹುಳುವನ್ನು ಆಹಾರವನ್ನಾಗಿ ನೀಡುವುದರಿಂದಲೂ ಇವುಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಮಾಹಿತಿಗೆ:  99004 18386

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT