ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ರಕ್ಷಣೆಗೆ ಸಾವಿರಾರು ರೂಪಾಯಿ ಖರ್ಚು

Last Updated 11 ಅಕ್ಟೋಬರ್ 2011, 8:10 IST
ಅಕ್ಷರ ಗಾತ್ರ

ರಾಯಚೂರು: ಬಾರದ ಮಳೆಗೆ ತತ್ತರಿಸಿದ ಜಿಲ್ಲೆಯ ರೈತ ಈಗ ಬೆಳೆದ ಬೆಳೆ ರಕ್ಷಣೆಗೆ ಏನೆಲ್ಲಾ ಹರ ಸಾಹಸ ಮಾಡುತ್ತಿದ್ದಾನೆ.  ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ.  ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆಯ ವ್ಯಾಪ್ತಿಯ ರೈತರ ಬೆಳೆ ಒಣಗಿಹೋಗುತ್ತವೆ ಎಂಬ ಆತಂಕದಿಂದ ಸಮರ್ಪಕವಾಗಿ ನೀರು ಪೂರೈಕೆಗಾಗಿ ಹೋರಾಟಗಳನ್ನು ನಡೆಸುತ್ತಿದ್ದಾರೆ. ಬೆಳೆ ಸಂರಕ್ಷಣೆಗಾಗಿ ಸಂಕಷ್ಟಕ್ಕೀಡಾದ ರೈತರು ಉದ್ವೇಗಕ್ಕೂ ಒಳಗಾದ ಘಟನೆಗಳು ನಡೆಯುತ್ತಿವೆ.

ಕಾಲುವೆ ವ್ಯಾಪ್ತಿಯ ಅಕ್ಕಪಕ್ಕದ ಗ್ರಾಮದ ರೈತರು ನೀರಿಗಾಗಿ ಹೊಡೆದಾಟ ನಡೆಸಿದ ಘಟನೆಗಳು ನಡೆಯುತ್ತಿವೆ. ಇದು ನೀರಾವರಿ ಕಾಲುವೆ ವ್ಯಾಪ್ತಿ ಪ್ರದೇಶದ ರೈತರ ಗೋಳಾದರೆ, ಮಳೆರಾಯನ್ನನ್ನೇ ನಂಬಿ ಬಿತ್ತನೆ ಮಾಡಿದ ರೈತ ಕಂಗಾಲಾಗಿದ್ದಾನೆ. ಅಲ್ಪಸ್ವಲ್ಪ ಮಳೆಯಲ್ಲಿಯೇ ರೈತರು ಧೈರ್ಯ ಮಾಡಿ ಹತ್ತಿ, ತೊಗರಿ, ಸೂರ್ಯಕಾಂತಿ, ಸಜ್ಜೆಯಂಥ ಪ್ರಮುಖ ಬೆಳೆ ಬಿತ್ತನೆ ಮಾಡಿದ್ದರು. ಬೆಳೆ ಸ್ವಲ್ಪ ಬೆಳೆದು ನಿಂತಿತಷ್ಟೇ. ಮಳೆ ಕೈಕೊಟ್ಟಿದೆ. ಎಕರೆಗೆ ಕನಿಷ್ಠ 10 ಸಾವಿರ ಕರ್ಚು ಮಾಡಿದ ರೈತ ಗೋಳಾಡುತ್ತಿದ್ದಾನೆ.

ಹತ್ತಿ ಹೊಲಗಳು ದಿನದಿಂದ ದಿನಕ್ಕೆ ಒಣಗುತ್ತಿವೆ. ತೊಗರಿ ಹೊಲಗಳು ನೀರಿಗಾಗಿ ಬಾಯ್ಬಿಡುತ್ತಿವೆ. ಇದಕ್ಕಾಗಿ ರೈತರು ಮಾಡದ ಕಸರತ್ತಿಲ್ಲ. ಈ ಸ್ಥಿತಿಯಲ್ಲಿ ರಾಯಚೂರು ತಾಲ್ಲೂಕಿನ ಜಾಲಿಬೆಂಚಿ, ಮಟಮಾರಿ, ಮರ್ಚಟಾಳ, ಆಶಾಪುರ ಸೇರಿದಂತೆ ಸುತ್ತಮುತ್ತಲಿನ ರೈತರು ಹಾಗೂ ಮಾನ್ವಿತಾಲ್ಲೂಕಿನ ಕೆಲ ಭಾಗದ ರೈತರ ಬೆಳೆ ರಕ್ಷಣೆಗೆ ನೀರು ಹರಿಸಲು ಸಾವಿರಾರು ರೂಪಾಯಿ ಕರ್ಚು ಮಾಡಲು ಮುಂದಾಗಿದ್ದಾರೆ.

ಹಳ್ಳ, ಕಾಲುವೆ ಸುತ್ತಮುತ್ತ ನೀರು ಹರಿಯುತ್ತಿದ್ದರೆ ಅಂಥ ಕಡೆ ತೆರಳುವುದು. ಟ್ರ್ಯಾಕ್ಟರ್‌ಗೆ ನೀರು ಪಂಪ್ ಮಾಡುವ ಯಂತ್ರ ಕೂಡ್ರಿಸುವುದು. ಈ ಯಂತ್ರಕ್ಕೆ ಫುಟ್‌ವಾಲ್ವ್ ಅಳವಡಿಸಿ ನೀರೆತುವುದು. ಆ ನೀರನ್ನು ಹೊಲದಲ್ಲಿನ ಬೆಳೆಗೆ ಹರಿಸುವ ಕಸರತ್ತು ಮಾಡುತ್ತಿದ್ದಾರೆ.

ಸ್ವಂತ ಟ್ರ್ಯಾಕ್ಟರ್ ಹೊಂದಿದ್ದವರಿಗೆ, ಅಂಥವರ ಹೊಲ ಹಳ್ಳದ ಪಕ್ಕ, ಕಾಲುವೆ ಪಕ್ಕ ಇದ್ದರಿಗೆ ಸ್ವಲ್ಪ ಕರ್ಚು ಕಡಿಮೆ. ಆದರೆ, ಏನೇ ಆದ್ರೂ ಬೆಳೆ ರಕ್ಷಿಸಿಕೊಳ್ಳಬೇಕು ಎಂದು ಈ ಸಾಹಸಕ್ಕೆ ಮುಂದಾಗುವ ಇತರೆ ರೈತರು ಮತ್ತೊಂದಿಷ್ಟು ಹಣ ಕರ್ಚು ಮಾಡಬೇಕು. ಬಾಡಿಗೆಗೆ ಟ್ರ್ಯಾಕ್ಟರ್ ಪಡೆಯಬೇಕು, ಅದೂ ಕೂಡಾ ತಾಸಿಗಿಷ್ಟು, ಒಂದು ದಿನಕ್ಕೆ ಇಷ್ಟು ಎಂಬ ದರ ನಿಗದಿ ಮಾಡಲಾಗಿದೆ. ಅಷ್ಟೆಲ್ಲ ಹಣ ಕೊಟ್ಟು ನೀರು ಹರಿಸಲು ಅನೇಕ ರೈತರು ಕಷ್ಟಪಡುತ್ತಿದ್ದಾರೆ.

ಏನ್ಮಾಡೂದ್ರಿ. ಹೊಲದಲ್ಲಿ ಬೆಳೆ ಬೆಳೆದು ನಿಂತಿದೆ. ಮಳೆ ಇಲ್ಲ. ಬೆಳೆದ ಬೆಳೆ ಹೊಲದಲ್ಲಿ ಕಣ್ಮುಂದೆ ಒಣಗಿ ಹೋಗುವುದು ನೋಡುವುದಕ್ಕೆ ಆಗುವುದಿಲ್ಲ. ಕನಿಷ್ಠ ಕೈ ಬಂದ ತುತ್ತು ಬಾಯಿಗೆ ಬರಲಿ ಅಂಥಾ ಈ ಪ್ರಯತ್ನವನ್ನು ರೈತರು ಮಾಡ್ತಿದ್ದಾರೆ. ಇಷ್ಟೆಲ್ಲಾ ಮಾಡಿದ್ರೂ ರೈತನಿಗೆ ಏನೂ ಲಾಭ ಇಲ್ಲ. ಮತ್ತೊಂದಿಷ್ಟು ಸಾಲ ಅಷ್ಟೇ.

ಕಣ್ಮುಂದೆ ಬೆಳೆ ಒಣಗಬಾರದು ಅಂಥಾ ಒಂದೇ ಕಾರಣಕ್ಕೆ ಕಷ್ಟಪಡುತ್ತಿದ್ದೇವೆ ಎಂದು ರಾಯಚೂರು ತಾಲ್ಲೂಕಿನ ಜಾಲಿಬೆಂಚಿ ಗ್ರಾಮದ ಲಕ್ಷ್ಮಯ್ಯ, ಹನುಮಂತಪ್ಪ  ಅವರು ಸಮಸ್ಯೆ ವಿವರಿಸಿದರು.

ಹಗಲು-ರಾತ್ರಿ ಪೂರ್ತಿ ಇದೇ ರೀತಿ ಪ್ರಯತ್ನ ರೈತರು ನಡೆಸುತ್ತಿದ್ದಾರೆ. ಆದಷ್ಟು ಬೆಳೆ ರಕ್ಷಣೆ ಮಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅತ್ತ ಜಿಲ್ಲಾಡಳಿತ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಅಧಿಕಾರಿಗಳು ಬರಗಾಲ ಪೀಡಿತ ಘೋಷಣೆ ಹಿನ್ನೆಲೆಯಲ್ಲಿ ಬೆಳೆ, ಹಾನಿ ಪ್ರಮಾಣದ ಅಂದಾಜಿನಲ್ಲಿ ಮುಳುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT