ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಬೆಡಗು

ಮೈಸೂರು ಥ್ರೋಬಾಲ್‌ಗೆ
Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪ್ರಾಯೋಜಕತ್ವ ಸಿಗುತ್ತಿಲ್ಲ, ಸರ್ಕಾರದ ಪ್ರೋತ್ಸಾಹ ಸಿಗುತ್ತಿಲ್ಲ. ಆಡುವ ಹುಡುಗರೇ ಕಮ್ಮಿಯಾಗಿದ್ದಾರೆ ಎಂಬ ಹಲವು ಮಾತುಗಳನ್ನು ಕ್ರೀಡೆಯ ಬಗ್ಗೆ ಕೇಳುತ್ತಲೇ ಇರುತ್ತೇವೆ. ಅದರೆ ಮೈಸೂರಿನ ಥ್ರೋಬಾಲ್ ಅಂಗಳದಲ್ಲಿ ಮಾತ್ರ ಇಂತಹ ಮಾತು ಕೇಳಿ ಬರುವುದಿಲ್ಲ!

ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿರುವ ಮೈಸೂರು ಜಿಲ್ಲಾ ಥ್ರೋಬಾಲ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಆಟಗಾರರಲ್ಲಿ ಈ ಕ್ರೀಡೆಯ ಭವಿಷ್ಯದ ಬಗ್ಗೆ ಅಪಾರ ಭರವಸೆ ತುಳುಕಾಡುತ್ತಿದೆ. `ದಿನದಿಂದ ದಿನಕ್ಕೆ ನಮ್ಮ ಕ್ರೀಡೆ ಬೆಳೆಯುತ್ತಿದೆ. ಬಹಳಷ್ಟು ಆಟಗಾರರು ಒಲವು ತೋರುತ್ತಿದ್ದಾರೆ.

ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಆಟಗಾರರು ಇದ್ದಾರೆ' ಎಂಬ ಸಕಾರಾತ್ಮಕ ನುಡಿಗಳು ಹೊರಹೊಮ್ಮುತ್ತವೆ. ಸಂಸ್ಥೆಯ ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಮತ್ತು ತರಬೇತುದಾರ ಕಾಶೀನಾಥ್ ಮೈಸೂರಿನಲ್ಲಿ ಥ್ರೋಬಾಲ್ ಬೆಳವಣಿಗೆಯ ಕುರಿತು ಹೆಮ್ಮೆಯಿಂದ ವಿವರಿಸುತ್ತಾರೆ.

ದಶಕಗಳ ಹಿಂದೆ ಚೆನ್ನೈನ ವೈಎಂಸಿಎಯಿಂದ ಬೆಂಗಳೂರು ಮತ್ತು ಅಲ್ಲಿಂದ ಮೈಸೂರಿಗೆ ಬಂದ ಈ ಕ್ರೀಡೆಗೆ ಒಂದು ಶಿಸ್ತಿನ ಚೌಕಟ್ಟು ಸಿಕ್ಕಿದ್ದು 1988ರಲ್ಲಿ ಸಂಸ್ಥೆಯು ಆರಂಭವಾದಾಗಲೇ. ಆಡುವವರು ಮತ್ತು ಆಟದ ಬಗ್ಗೆ ಪ್ರೀತಿಯಿರುವವರು ನೀಡಿದ ಪ್ರೋತ್ಸಾಹವೇ ಥ್ರೋಬಾಲ್ ಬೆಳವಣಿಗೆಗೆ ಪೂರಕವಾಯಿತು.

ಮೈಸೂರು ನಗರಕ್ಕೆ ಸೀಮಿತವಾಗಿದ್ದ ಆಟ ಕಳೆದ 25 ವರ್ಷಗಳಲ್ಲಿ ತಾಲ್ಲೂಕುಗಳು ಮತ್ತು ಗ್ರಾಮೀಣ ಮಟ್ಟದ ಶಾಲೆ, ಕಾಲೇಜುಗಳಿಗೂ ಕಾಲಿಟ್ಟಿದೆ. ಅದರಲ್ಲೂ ಮೈಸೂರಿನ ನಂಜನಗೂಡು ಈ ಕ್ರೀಡೆಗೆ ನೀಡಿದ ಕೊಡುಗೆ ದೊಡ್ಡದು. ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಸೆಲ್ವಪಿಳ್ಳೈ ಅಯ್ಯಂಗಾರ್ ಅವರ ಆಸಕ್ತಿಯ ಫಲವಾಗಿ ಮೈಸೂರಿನಲ್ಲಿ ಥ್ರೋಬಾಲ್ ಸಂಸ್ಥೆ ಆರಂಭವಾಯಿತು.  ಆಗ  ಪಿ.ಆರ್. ಹರೀಶ್ ಸಂಸ್ಥೆಯ ಪೋಷಕರಾಗಿದ್ದರು.

1992ರಲ್ಲಿ ಅಧ್ಯಕ್ಷರಾಗಿದ್ದ ಬಿ.ಎಲ್. ಆದಿಶೇಷ ಮತ್ತು ಎಂ. ಸತ್ಯನಾರಾಯಣ ಅವರು ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಬಹಳಷ್ಟು ಪ್ರಮುಖ ಟೂರ್ನಿಗಳು ಮೈಸೂರಿನಲ್ಲಿ ನಡೆದವು. ರಾಜ್ಯ ಪುರುಷ ಮತ್ತು ಮಹಿಳಾ ಚಾಂಪಿಯನ್‌ಷಿಪ್‌ಗಳು, ಬೆಡೆನ್ ಪೋವೆಲ್ ಮೈದಾನದಲ್ಲಿ ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಡೆಯಿತು. ನಂಜನಗೂಡಿನಲ್ಲಿಯೂ ಒಂದು ಬಾರಿ ಟೂರ್ನಿ ಆಯೋಜಿತವಾಗಿತ್ತು.

1995ರಲ್ಲಿ ಜಾವೀದ್ ಅಹ್ಮದ್ ಅಧ್ಯಕ್ಷರಾದರು. ಕಾರ್ಯದರ್ಶಿ ಸತ್ಯನಾರಾಯಣ ಅವರೊಂದಿಗೆ ಥ್ರೋಬಾಲ್ ಕ್ರೀಡೆಯನ್ನು ಯಶಸ್ಸಿನ ಪಥದಲ್ಲಿ ಅವರು ಕೊಂಡೊಯ್ದರು. ಮೈಸೂರು ನಗರಕ್ಕೆ ಸೀಮಿತವಾಗಿದ್ದ ಥ್ರೋಬಾಲ್ ಗ್ರಾಮೀಣ ಭಾಗದಲ್ಲೂ ಪುಟಿಯಿತು. ದೈಹಿಕ ಶಿಕ್ಷಕರಾಗಿದ್ದ ಜಾವೀದ್ ಅವರು ನಂಜನಗೂಡಿನಲ್ಲಿ ಒಂದು ತಂಡವನ್ನು ಸಿದ್ಧಗೊಳಿಸಿದರು.

ರಾಷ್ಟ್ರಮಟ್ಟದ ಜೂನಿಯರ್, ಸಬ್ ಜೂನಿಯರ್. ರಾಜ್ಯ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸಿ ಯಶಸ್ವಿಯಾಗಿ ನಡೆಸಿದರು.  ಇಲ್ಲಿಯ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕರ್ನಾಟಕ ಥ್ರೋಬಾಲ್ ತಂಡವು ಆರು ಬಾರಿ ಅಖಿಲ ಭಾರತ ಶಾಲಾ ಕ್ರೀಡೆಗಳಲ್ಲಿ (ಎಸ್‌ಜಿಎಫ್‌ಐ) ಫೈನಲ್ ಹಂತಕ್ಕೆ ತಲುಪಿತ್ತು. ಪ್ರಸ್ತುತ ಕರ್ನಾಟಕ ತಂಡವು ರಾಷ್ಟ್ರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಕಳೆದ 25 ವರ್ಷಗಳಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರೂ ಹೊರಹೊಮ್ಮಿದ್ದಾರೆ. ಸೂರ್ಯಕಲಾ, ಯೋಗಶ್ರೀ, ಮಂಜುನಾಥ, ರಂಜಿತಾ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದರೆ, ವಿನಯ್, ಶ್ರೀನಿವಾಸ್, ಸಿಲ್ವಿ, ಹೇಮಂತ್, ಮಧು, ಹರ್ಷಿತ್ ಶೆಟ್ಟಿ, ಭರತ್ ಭೂಷಣ್,  ಬಿಂದು ನಂಜಪ್ಪ, ಯಶೋಧಾ, ಭವ್ಯಾ, ಸೊನಾಲಿ, ಪೊನ್ನಪ್ಪ, ಅಕ್ಷತಾ ನಾಗೇಶ್ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.

ಭಾರತೀಯ ಥ್ರೋಬಾಲ್ ಫೆಡರೇಷನ್ ನಿರ್ಣಾಯಕರ ಮಂಡಳಿಯಲ್ಲಿ ಕಾಶೀನಾಥ್ ಪದಾಧಿಕಾರಿಯಾಗಿದ್ದವರು. ರಾಜ್ಯದ ನಿಮಂತ್ರಕರಾಗಿದ್ದ ಸುಬ್ರಹ್ಮಣ್ಯ ಅವರು ಇಂಗ್ಲಿಷ್‌ನಲ್ಲಿದ್ದ ನಿಯಮದ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಮಶೂದಾ ಜಾವೀದ್ ( ದಿವಂಗತ ಜಾವೀದ್ ಅಹ್ಮದ್ ಅವರ ಪತ್ನಿ) ಮೈಸೂರು ಸಂಸ್ಥೆಗೆ ಅಧ್ಯಕ್ಷರಾಗಿದ್ದಾರೆ. ಅವರು ಪ್ರಾಚಾರ್ಯರಾಗಿರುವ ನಂಜನಗೂಡಿನ ಸಿಟಿಜನ್ ಶಾಲೆ  ಈಗ ಥ್ರೋಬಾಲ್‌ನ ಪ್ರಮುಖ ಕೇಂದ್ರವಾಗಿದೆ.

`ನಮ್ಮ ಕ್ರೀಡೆಯು ಬೆಳವಣಿಗೆಯ ಹಂತದಲ್ಲಿದೆ. ಮಕ್ಕಳಿಗೆ ಆಸಕ್ತಿ ಬೆಳೆಸಲು ಬೇಸಿಗೆಯಲ್ಲಿ ಉಚಿತ ಶಿಬಿರಗಳನ್ನು ನಡೆಸಲಾಗುತ್ತಿದೆ. ಅಲ್ಲದೇ ಶಾಲೆಗಳು ಆಸಕ್ತಿ ತೋರಿದರೆ ನಾವೇ ಅಲ್ಲಿಗೆ ಹೋಗಿ ತರಬೇತಿ ನೀಡಿ ಬರುತ್ತೇವೆ. ಮೈಸೂರಿನ ಪುಷ್ಕರಣಿ ವಿದ್ಯಾಲಯದಲ್ಲಿ ನಮ್ಮ ತರಬೇತಿ ನಿರಂತರವಾಗಿ ತರಬೇತಿ ನಡೆಯುತ್ತಿದೆ' ಎಂದು ಸುಬ್ರಹ್ಮಣ್ಯ ಹೇಳುತ್ತಾರೆ.
-ಗಿರೀಶ ದೊಡ್ಡಮನಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT