ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳೆಕೇರಿ ಗುರೂಜಿಗೆ ಸ್ವರಶ್ರದ್ಧಾಂಜಲಿ 20ರಂದು

Last Updated 17 ಜುಲೈ 2013, 7:45 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನ ಮಗೇಗಾರಿನ ಮುರಳೀವನ ಮತ್ತು ಪಟ್ಟಣದ `ಸಂಸ್ಕೃತಿ ಸಂಪದ'  ಆಶ್ರಯದಲ್ಲಿ  ಬೆಳ್ಳೆಕೇರಿ ಗುರೂಜಿ (ದಿವಂಗತ ಜಿ.ಎಸ್.ಹೆಗಡೆ ಬೆಳ್ಳೆಕೇರಿ) ಅವರ ನೆನಪು ಮತ್ತು ಅವರಿಗೆ ಸ್ವರ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಪಟ್ಟಣದ ಶಂಕರ ಮಠದಲ್ಲಿ ಇದೇ 20ರಂದು ನಡೆಯಲಿದೆ ಎಂದು ಮುರಳಿವನ ಸಂಸ್ಥೆ ಸಂಚಾಲಕ ಕಿರಣ ಹೆಗಡೆ ಮಗೇಗಾರ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. `ದಿವಂಗತ ಜಿ.ಎಸ್.ಹೆಗಡೆ ಬೆಳ್ಳೆಕೇರಿ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕೆ ಆರಂಭವಾಗಲು ಪ್ರಮುಖ ಕಾರಣಕರ್ತರು. ಸಂಗೀತ ಕಲಿಯುವ ಇಚ್ಛೆಯಿಂದ ತಮ್ಮ 14ನೇ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿದ ಅವರು, ಮೋಹನರಾವ್ ಚಿಕ್ಕರಮನೆ ಅವರಲ್ಲಿ ಸುಮಾರು 20 ವರ್ಷಗಳ ಕಾಲ ಆಗ್ರಾ ಪರಂಪರೆಯ ಸಂಗೀತವನ್ನು ಕಲಿತರು.

ಫಯಾಜ್ ಖಾನ್, ಖಾದೀಮ್ ಹುಸೇನ್ ಖಾನ್, ವಿಲಾಯತ್ ಖಾನ್, ಗಜಾನನರಾವ್ ಜೋಷಿ ಮತ್ತಿತರ ದಿಗ್ಗಜರ ಸಂಪರ್ಕ ಪಡೆದರು. 1958ರಲ್ಲಿ ಶಿರಸಿಯಲ್ಲಿ ಹಿಂದೂಸ್ತಾನಿ ಸಂಗೀತದ ಶಾಲೆ ಪ್ರಾರಂಭಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತದ ಧಾರೆ ಎರೆದರು. ಕಮಲಾಕರ ಭಟ್ಟ ಕೆರೆಕೈ, ಪ್ರಭಾಕರ ಭಟ್ಟ ಕೆರೆಕೈ, ಎನ್.ಎಸ್.ದೇವ, ವತ್ಸಲಾ ಮಾಪಾರಿ, ಮೋಹನ ಹೆಗಡೆ ಹುಣಸೇಕೊಪ್ಪ, ಶೈಲಾ ಮಂಗಳೂರು ಮೊದಲಾದವರು ಬೆಳ್ಳೆಕೇರಿ ಗುರುಗಳಿಂದ ಸಂಗೀತ ಕಲಿತು, ತಾವು ಕಲಿತಿದ್ದನ್ನು ಹಲವರಿಗೆ ನೀಡುವ ಕಾಯಕ ಮುಂದುವರಿಸಿದರು. ರಾಜ್ಯ ಸರ್ಕಾರದ `ಕರ್ನಾಟಕ ಕಲಾ ತಿಲಕ'  ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದ ಬೆಳ್ಳೆಕೇರಿ ಗುರೂಜಿ, ಇದೇ ಜೂನ್‌ನಲ್ಲಿ ಸ್ವರ್ಗಸ್ಥರಾದರು' ಎಂದರು.

ಕಾರ್ಯಕ್ರಮಗಳು: 20ರಂದು ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ವಹಿಸಲಿದ್ದು, ನಿವೃತ್ತ ಪ್ರಾಚಾರ್ಯ ಆರ್.ಎಸ್.ಹೆಗಡೆ ಬೆಳ್ಳೆಕೇರಿ, ಮುರಳೀವನ ಸಂಸ್ಥೆಯ ಮುಖ್ಯಸ್ಥ ಸಿ.ವಿ.ಹೆಗಡೆ ಮಗೇಗಾರ ಮತ್ತು ಹಿರಿಯ ತಬಲಾವಾದಕ  ಮೋಹನ ಹೆಗಡೆ ಮಾತನಾಡಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ  ಕಿರಣ ಕಮಲಾಕರ ಭಟ್ಟ ಕೆರೇಕೈ ಮತ್ತು ಪ್ರಭಾಕರ ಭಟ್ಟ ಕೆರೆಕೈ (ಗಾಯನ), ಎಂ.ಜಿ.ಹೆಗಡೆ ನೆಬ್ಬೂರು ಮತ್ತು ಮೋಹನ ಹೆಗಡೆ(ತಬಲಾ ಸಾಥ್), ಗೌರೀಶ್ ಯಾಜಿ ಕೂಜಳ್ಳಿ(ಸಂವಾದಿನಿ) ಭಾಗವಹಿಸುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಿ.ವಿ.ಹೆಗಡೆ ಮಗೇಗಾರ ಮತ್ತು ಮೋಹನ ಹೆಗಡೆಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT