ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರಲ್ಲೂ ಆಪರೇಷನ್ ಕಮಲ?

Last Updated 13 ಜನವರಿ 2011, 9:35 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಅತಂತ್ರ ಸ್ಥಿತಿ ಏರ್ಪಟ್ಟಿದ್ದು, ನಿರ್ಣಾಯಕ ಪಾತ್ರ ವಹಿಸಬೇಕಾದ ಮೂವರು ಕಾಂಗ್ರೆಸ್ ಸದಸ್ಯರನ್ನು ಆಪರೇಷನ್ ಕಮಲ ಅಥವಾ ಆಪರೇಷನ್ ಜೆಡಿಎಸ್ ಭೀತಿಯಿಂದಾಗಿ ಗುಪ್ತಸ್ಥಳದಲ್ಲಿ ಬಚ್ಚಿಡಲಾಗಿದೆ.

ತಾಲ್ಲೂಕು ಪಂಚಾಯಿತಿಯಲ್ಲಿ 17 ಸ್ಥಾನಗಳಿದ್ದು, ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತಲಾ 7 ಸ್ಥಾನ ಪಡೆದಿವೆ. ಕಾಂಗ್ರೆಸ್ ಪಕ್ಷ ಮೂರು ಸ್ಥಾನ ಗಳಿಸಿತ್ತು. ಜೆಡಿಎಸ್ ಅಥವಾ ಬಿಜೆಪಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ನ ಬೆಂಬಲ ಅಗತ್ಯ. ಈ ಹಿನ್ನೆಲೆಯಲ್ಲಿ ಮೂವರು ಕಾಂಗ್ರೆಸ್ ಸದಸ್ಯರಿಗೆ ಭಾರಿ ಬೇಡಿಕೆ ಉಂಟಾಗಿದೆ.

ಚುನಾವಣಾ ಫಲಿತಾಂಶ ಹೊರಬಿದ್ದ ಕೆಲ ಗಂಟೆಗಳಲ್ಲಿಯೇ ಕಾಂಗ್ರೆಸ್ ಸದಸ್ಯರನ್ನು ಸೆಳೆಯಲು ಬಿಜೆಪಿ ಮತ್ತು ಜೆಡಿಎಸ್ ಯತ್ನ ನಡೆಸಿದ್ದವು. ಒಂದು ಹೆಜ್ಜೆ ಮುಂದೆ ಹೋಗಿದ್ದ ಬಿಜೆಪಿ ಅನುಘಟ್ಟ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಪವಿತ್ರ ಎಂಬುವವರನ್ನು ತನ್ನೆಡೆಗೆ ಸೆಳೆದಿತ್ತು. ಆದರೆ, ಈ ವಿಚಾರ ತಿಳಿದ ಕೆಲ ಕಾಂಗ್ರೆಸ್ ಮುಖಂಡರು ಪವಿತ್ರ ಇರುವ ಜಾಗ ಪತ್ತೆಹಚ್ಚಿ ವಾಪಸ್ ಕರೆತಂದು ಪತ್ರಿಕಾಗೋಷ್ಠಿ ನಡೆಸಿದ್ದರು.

ಈಗ ಸದ್ಯ ಮೂವರು ಕಾಂಗ್ರೆಸ್ ಸದಸ್ಯರು ತಾ.ಪಂ ಮಾಜಿ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ವೈ.ಟಿ.ದಾಮೋದರ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್‌ಗೌಡ, ಎಚ್.ಡಿ.ತುಳಸೀದಾಸ್ ನೇತೃತ್ವದಲ್ಲಿ ಸುರಕ್ಷಿತ ಸ್ಥಳದಲ್ಲಿ ಇಡಲಾಗಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿದ ವೈ.ಟಿ.ದಾಮೋದರ್, ‘ರಾಜ್ಯಮಟ್ಟದಲ್ಲಿ ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಬೇಲೂರು ತಾ.ಪಂ. ವಿಚಾರಕ್ಕೆ ಸಂಬಂಧಿಸಿದಂತೆ ಮುಖಂಡರೊಂದಿಗೆ ಚರ್ಚಿಸಿ ಸ್ಥಳೀಯವಾಗಿಯೇ ನಿರ್ಧಾರ ಕೈಗೊಳ್ಳುವುದಾಗಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT