ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು ಪುರಸಭೆ: ಚುನಾವಣೆ ರದ್ದು

Last Updated 7 ಸೆಪ್ಟೆಂಬರ್ 2013, 8:11 IST
ಅಕ್ಷರ ಗಾತ್ರ

ಬೇಲೂರು: ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಿಗಧಿಯಾಗಿದ್ದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಆಗಮಿಸಿದ ಜೆಡಿಎಸ್ ಸದಸ್ಯರಿಂದ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಬಿ.ಎ.ಜಗದೀಶ್ ನಾಮಪತ್ರ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ತಹಶೀಲ್ದಾರ್ ಅವರೊಂದಿಗೆ ವಾಗ್ವಾದ ನಡೆಸಿದರು.

ಇಲ್ಲಿನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಆದರೆ ಸದಸ್ಯೆ ಶಾಂತಮ್ಮ ಸಾಮಾನ್ಯ ವರ್ಗಕ್ಕೆ ನಿಗದಿ ಪಡಿಸಿರುವ ಮೀಸಲಾತಿ ಸರಿಯಾಗಿಲ್ಲ.

ಕಳೆದ ಬಾರಿಯೂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಈ ಬಾರಿಯೂ ಇದನ್ನೇ ನಿಗಧಿ ಪಡಿಸಲಾಗಿದೆ. ರೋಸ್ಟರ್ ಪದ್ಧತಿ ಅನುಸರಿಸಿಲ್ಲ. ಪರಿಶಿಷ್ಟ ಜಾತಿ ಮಹಿಳೆಗೆ ಇಲ್ಲಿಯವರೆಗೆ ಅಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಪಡಿಸಿಲ್ಲ ಎಂದು ಆರೋಪಿಸಿ ಹೈಕೋರ್ಟ್‌ನಿಂದ ಗುರುವಾರ ಚುನಾವಣೆಗೆ ತಡೆಯಾಜ್ಞೆ ತಂದಿದ್ದರು.

ಹೈಕೋರ್ಟ್‌ನ ಆದೇಶದ ಪ್ರತಿ ದೊರಕದ ಕಾರಣ ಚುನಾವಣೆ ನಡೆಸುವ ಬಗ್ಗೆ ಬೆಳಿಗ್ಗೆ 11 ಗಂಟೆಯವರೆಗೂ ಗೊಂದಲದ ವಾತವಾರಣ ನಿರ್ಮಾಣವಾಗಿತ್ತು.

ಕೊನೆಗೆ ತಹಶೀಲ್ದಾರ್ ಬಿ.ಎ.ಜಗದೀಶ್ ಅಡ್ವೋಕೇಟ್ ಜನರಲ್ ಮತ್ತು ನಗರಾಭಿವೃದ್ಧಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದರಲ್ಲದೆ, ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಡೆಯಾಜ್ಞೆಯ ಆದೇಶದ ಪ್ರತಿಯನ್ನು ಪಡೆದು ಬೆಳಿಗ್ಗೆ 10.30ರ ಸಮಯ ದಲ್ಲಿ ಚುನಾವಾಣೆ ರದ್ದಾಗಿರುವ ಪ್ರಕಟಣೆ ಹೊರಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ನ ಬಿ.ಡಿ.ಚನ್ನಕೇಶವ ಮತ್ತು ಬಿ.ಗಿರೀಶ್ ನಾಮಪತ್ರ ಸಲ್ಲಿಸಲು ಮುಂದಾದರು. ಇದಕ್ಕೆ ತಹಶೀಲ್ದಾರ್ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಚುನಾವಣೆ ರದ್ದಾಗಿದೆ ಎಂದು ತಿಳಿಸಿದರು.

ಇದಕ್ಕೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮತ್ತು ಇತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ತಡೆಯಾಜ್ಞೆ ನೀಡಿರುವ ಹೈಕೋರ್ಟ್ ಆದೇಶದ ಪ್ರತಿ ನೀಡುವಂತೆ ಒತ್ತಾಯಿಸಿದರು.

ಆದೇಶದ ಪ್ರತಿಯನ್ನು ತಹಶೀಲ್ದಾರ್ ನೀಡಿದರಾದರೂ ಇದನ್ನು ಒಪ್ಪದ ಜೆಡಿಎಸ್ ಸದಸ್ಯರು ನಾಮಪತ್ರ ಸ್ವೀಕರಿಸುವುದಿಲ್ಲ ಎಂದು ಹಿಂಬರಹ ನೀಡಿ ಎಂದು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಮುಖಂಡರು ತಹಶೀಲ್ದಾರ್ ಅವರೊಂದಿಗೆ ವಾಗ್ವಾದವನ್ನೂ ನಡೆಸಿದರು. ಕೊನೆಗೆ ತಹಶೀಲ್ದಾರ್ ಜಗದೀಶ್ ಹಿಂಬರಹ ನೀಡಿದ ನಂತರ ಸ್ಥಳದಿಂದ ತೆರಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ತಹಶೀಲ್ದಾರ್ ಬಿ.ಎ.ಜಗದೀಶ್ ಮೀಸಲಾತಿ ಪಟ್ಟಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಚುನಾವಣೆ ರದ್ದುಪಡಿಸ ಲಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.

ಆರೋಪ
ಚುನಾವಣೆ ರದ್ದಾಗಿರುವ ಕುರಿತು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ನಿಯಮದ ಅನ್ವಯ ಬೆಳಿಗ್ಗೆ 9ರಿಂದ11 ಗಂಟೆಯವರೆಗೆ ನಾಮಪತ್ರವನ್ನು ತಹಶೀಲ್ದಾರ್ ಸ್ವೀಕರಿಸಬೇಕಾಗಿತ್ತು.

ಆದರೆ ಅವರು ಬೆಳಿಗ್ಗೆ 10.30ರವರೆಗೆ ಪುರಸಭಾ ಕಚೇರಿಗೆ ಆಗಮಿಸಲಿಲ್ಲ. ನ್ಯಾಯಾಲಯದ ಆದೇಶದ ಪ್ರತಿ ಇಲ್ಲದಿದ್ದರೂ ನಾಮಪತ್ರ ಸ್ವೀಕರಿಸಲು ಮುಂದಾಗಲಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಶಾಸಕರ ಕೈವಾಡ ಇದೆ. ತಹಶೀಲ್ದಾರ್ ಅವರ ಮೇಲೆ ಒತ್ತಡ ಹೇರಿ ಚುನಾವಣೆ ಮುಂದೂಡಿಸಲಾಗಿದೆ ಎಂದು ಆರೋಪಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಡಿ.ಚಂದ್ರೇಗೌಡ, ಮುಖಂಡರಾದ ಕೆ.ಎಸ್.ಲಿಂಗೇಶ್, ಎಂ.ಎ.ನಾಗರಾಜ್, ನಟರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT