ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬೆ ಬ್ರಹ್ಮರು!

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಒಂದೆಡೆ ಕಣ್ಣರಳಿಸಿ ಸಾಲಾಗಿ ನಿಂತ ಮರಿಜಿಂಕೆಗಳು. ಅವುಗಳ ಪಕ್ಕದಲ್ಲಿಯೇ ಇದ್ದ ಮೇಕೆ, ಕಡವೆಗಳೂ ನೋಡುಗರನ್ನು ತಮ್ಮತ್ತ ಬನ್ನಿ, ಎತ್ತಿಕೊಳ್ಳಿ ಎಂದು ಆಹ್ವಾನಿಸುವಂತಿದ್ದವು. ಅರೆ, ಇದೇನು ಕಾಡಿನಲ್ಲಿರಬೇಕಾದ ಜಿಂಕೆ, ಕಡವೆಗಳು ಇಲ್ಲಿಗೇಕೆ ಬಂದಿವೆ ಎಂದು ಅಚ್ಚರಿಗೊಂಡು ಬಳಿ ಹೋದರೆ ಗೊತ್ತಾದದ್ದು–ಇವು ಜೀವಂತ ಪ್ರಾಣಿಗಳಲ್ಲ; ಜೀವಂತ ಎನಿಸುವ ಕಲಾಕೃತಿಗಳು. ದೆಹಲಿ  ವ್ಯಾಪಾರಿಗಳ ಕೈಚಳಕದಲ್ಲಿ ಒಡಮೂಡಿರುವ ಈ ಸುಂದರ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತಿರುವುದು ಹೀಗೆ.

ವಾರಾಂತ್ಯ ಈ ಬೊಂಬೆ ವ್ಯಾಪಾರ ಗರಿಗೆದರುವ ಸಮಯ. ವಾರವಿಡೀ ಕಲಾವಿದರು ಕಷ್ಟಪಟ್ಟು ಈ ಬೊಂಬೆಗಳಿಗೆ ರೂಪು ಕೊಡುತ್ತಾರೆ. ವಾರದ ಅಂತ್ಯದಲ್ಲಿ ಅವು ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ರಸ್ತೆಗಳಲ್ಲಿ ಓಡಾಡುವವರು ಒಂದು ಗಳಿಗೆ ನಿಂತು, ಜಿಂಕೆ, ಮೇಕೆ ಬೊಂಬೆಗಳನ್ನು ನೋಡಿ ಅಚ್ಚರಿಗೊಳ್ಳುತ್ತಾರೆ.

ಗೃಹಾಲಂಕಾರದ ಸಾಮಗ್ರಿಗಳಾದ ಈ ಬೊಂಬೆಗಳ ಮಾರಾಟ ಸಾಮಾನ್ಯವಾಗಿ ಕಾಣಸಿಗುವುದು ನಗರದ ಹೊರವರ್ತುಲ ರಸ್ತೆಗಳಲ್ಲಿ. ಆ ರಸ್ತೆಗಳು ವಿಶಾಲವಾದ್ದರಿಂದ, ಅಲ್ಲಿಯೇ ಈ ಬೊಂಬೆಗಳನ್ನು ಹೆಚ್ಚಾಗಿ ವ್ಯಾಪಾರಕ್ಕೆ ಇಡುತ್ತಾರಂತೆ. ವಾಹನ ಚಲಿಸುವವರು ಇವುಗಳಿಂದ ಆಕರ್ಷಿತರಾಗಿ, ಇಳಿದು ಖರೀದಿಸುತ್ತಾರೆ ಎಂಬುದು ವ್ಯಾಪಾರದ ತಂತ್ರ.

ಈ ಬೊಂಬೆ ತಯಾರಕರ ಮೂಲ ದೆಹಲಿ. ದೆಹಲಿಯಿಂದ ನಗರಕ್ಕೆ ಬಂದು ಮೂರು ವರ್ಷಗಳೇ ಕಳೆದಿವೆ. ಮೂರು ವರ್ಷಗಳಿಂದಲೂ ವಿಧ ವಿಧದ ಬೊಂಬೆಗಳನ್ನು ತಯಾರಿಸಿ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಸದ್ಯ ಹೆಗಡೆ ನಗರದಲ್ಲಿ ಇವರು ಬೀಡುಬಿಟ್ಟಿದ್ದಾರೆ. ವಾರಕ್ಕೆ ಮೂರು ಅಥವಾ ನಾಲ್ಕು ದಿನ ಬೊಂಬೆಯ ಸೃಷ್ಟಿ ಕಾರ್ಯದಲ್ಲಿ ಬಿಜಿಯಾಗಿರುತ್ತಾರೆ. ನಂತರ ಏನಿದ್ದರೂ ಇವುಗಳ ವ್ಯಾಪಾರದ ಸರದಿ.

  ಕಡವೆ, ಕುರಿ, ಜಿಂಕೆಗಳ ಬೊಂಬೆಗಳನ್ನು ತಯಾರಿಸುವ ಈ ಮಂದಿ ಈ ಕಲೆಯಲ್ಲಿ ತಂತಾವೇ ಕೈಪಳಗಿಸಿಕೊಂಡವರು. ನಿರುಪಯುಕ್ತವೆನಿಸಿದ ಚರ್ಮ, ತಂತಿ, ವೈರ್‌, ಫೈಬರ್, ಗೋಲಿ, ಬಣ್ಣ ಇವುಗಳನ್ನು ಬಳಸಿಕೊಂಡು ಪ್ರಾಣಿಗಳ ಆಕಾರ ನೀಡುತ್ತಾರೆ. ಇದೇ ಇವರ ಕುಲಕಸುಬು. ಬೊಂಬೆ ತಯಾರಿಕೆಗೆ ಅಗತ್ಯವಾದ ವಸ್ತುಗಳನ್ನು ಮುಂಬೈನಿಂದ ತರಿಸಿಕೊಳ್ಳುತ್ತಾರೆ.

ನಾಲ್ಕು ಕುಟುಂಬಗಳು ಈ ಬೊಂಬೆಗಳ ತಯಾರಿಯಲ್ಲಿ ಪಳಗಿವೆ. ಮನೆ ಮಂದಿಯ ಕೈಗಳೂ ಬೊಂಬೆ ತಯಾರಿಯಲ್ಲಿ ತೊಡಗಿಕೊಳ್ಳುತ್ತವಂತೆ. ದೊಡ್ಡ ಗಾತ್ರದ ಬೊಂಬೆಗಳಾದರೆ ಒಂದನ್ನು ತಯಾರಿಸಲು ಮೂರು ದಿನ ಬೇಕು. ಚಿಕ್ಕ ಬೊಂಬೆಗಳಾದರೆ ಎರಡು ದಿನಗಳಲ್ಲಿ ಐದು ಬೊಂಬೆಗಳನ್ನು ತಯಾರಿಸಬಹುದಂತೆ.

ಹೊಟ್ಟೆ ತುಂಬಿಸುವ ದಾರಿ
ದೆಹಲಿಯಿಂದ ಇಲ್ಲಿಗೆ ಬಂದಿರುವ ಈ ಕಲಾವಿದರು ಅನ್ನ ಸಂಪಾದನೆಗೆ ತೊಡಗಿಸಿಕೊಂಡಿದ್ದು ಬೊಂಬೆ ತಯಾರಿಕೆಯಲ್ಲಿ. ದಿನಗಟ್ಟಲೆ ಅವರು ಬೊಂಬೆ ತಯಾರಿಕೆ ಮಾಡುತ್ತಾರೆ.

‘ಬೊಂಬೆ ತಯಾರಿಸುವುದು ಸೂಕ್ಷ್ಮ ಕಲೆ. ಅವುಗಳನ್ನು ಜೀವಂತ ಎನ್ನುವ ಹಾಗೆ ಕಾಣಿಸಬೇಕೆಂದರೆ ಒಂದೊಂದು ಕುಸುರಿ ಕೆಲಸವನ್ನೂ ಸೂಕ್ಷ್ಮವಾಗಿ ಮಾಡಬೇಕು. ಒಂದು ಕಡೆ ಕೆಲಸ ಕೆಟ್ಟರೂ ಇಡೀ ಬೊಂಬೆಯ ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆ. ಒಂದು ಬೊಂಬೆಯ ಹಿಂದೆ ಹಲವು ಕೈಗಳು ಕೆಲಸ ಮಾಡಿರುತ್ತವೆ. ಆದರೆ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಒಮ್ಮೊಮ್ಮೆ ಸಿಕ್ಕುವುದೇ ಇಲ್ಲ. ನಮಗೆ ಬೊಂಬೆ ಮಾಡುವುದೇ ಹೊಟ್ಟೆ ಹೊರೆಯುವ ದಾರಿಯಾದ್ದರಿಂದ ಇದರಲ್ಲೇ ಮುಂದುವರಿಯಬೇಕು. ಇಲ್ಲಿನ ಕೆಂಗೇರಿ, ಕೊಟ್ಟಿಗೆ ಪಾಳ್ಯ, ನಾಗರಬಾವಿ ಹೀಗೆ  ವರ್ತುಲ ರಸ್ತೆಗಳ ಅನೇಕ ಕಡೆ ವ್ಯಾಪಾರಕ್ಕೆ ಇಡುತ್ತೇವೆ’ ಎನ್ನುತ್ತಾರೆ ರಾಜು.

‘ನಮ್ಮ ಜೀವನ ಅಡಗಿರುವುದೇ ಈ ಬೊಂಬೆಗಳಲ್ಲಿ. ನಾವು ಮಾಡಿದ ಪ್ರಾಣಿಗಳು ಒಮ್ಮೊಮ್ಮೆ ಮನಸ್ಸಿಗೆ ತುಂಬಾ ಹತ್ತಿರವೆನಿಸುತ್ತವೆ. ಅವುಗಳು ಜೀವಂತವಲ್ಲ ಎಂದು ಗೊತ್ತಿದ್ದರೂ ಅವುಗಳೊಂದಿಗೆ ಬಾಂಧವ್ಯ ಬೆಳೆದುಬಿಡುತ್ತದೆ’ ಎಂದು ಮುಗ್ಧವಾಗಿ ನಗುತ್ತಾರೆ ಈ ಬೊಂಬೆ ಸೃಷ್ಟಿಕರ್ತರು. 

ಬೊಂಬೆಗಳಿಗೆ ಬೇಡಿಕೆ

‘ಈ ಬೊಂಬೆಗಳಿಗೆ ಬೇಡಿಕೆ ಹೆಚ್ಚಿದೆ. ವಾರದಲ್ಲಿ ಏನಿಲ್ಲವೆಂದರೂ ಒಂದು ಕಡೆ ಹತ್ತು ಬೊಂಬೆಗಳನ್ನು ವ್ಯಾಪಾರಕ್ಕೆ ಇಡುತ್ತೇವೆ. ಎಲ್ಲವೂ ವ್ಯಾಪಾರವಾಗುತ್ತವೆ. ಹಬ್ಬ ಹರಿದಿನಗಳಲ್ಲಿ ಮಾತ್ರ ಬೆಳಿಗ್ಗೆಯಿಂದ ಸಂಜೆಯವರೆಗೂ ವ್ಯಾಪಾರವಾಗದೇ ಉಳಿಯುತ್ತವೆ. ಕೆಲವೊಮ್ಮೆ ಗ್ರಾಹಕರು ಗಂಟೆಗಟ್ಟಲೆ ಚೌಕಾಸಿ ಮಾಡಿ, ಕೊಳ್ಳದೆ ಹೊರಟು ಹೋಗುವುದೂ ಇದೆ. ಆಗೆಲ್ಲಾ ನಮ್ಮ ಕಸುಬಿಗೆ ಬೆಲೆ ಎಲ್ಲಿದೆ ಎನಿಸಿ ಬೇಸರವಾಗುತ್ತದೆ. ಮೂರು ವರ್ಷಗಳಲ್ಲಿ ಬೇಡಿಕೆ ಸಾಕಷ್ಟು ಹೆಚ್ಚಿದೆ. ಆರುನೂರು ರೂಪಾಯಿಯಿಂದ  ಆರಂಭಗೊಂಡು 3 ಸಾವಿರ ರೂಪಾಯಿವರೆಗೆ ಬೆಲೆಯ ಬೊಂಬೆಗಳನ್ನು ಮಾರುತ್ತೇವೆ’ ಎಂದು ತಮ್ಮ ಬೊಂಬೆ ವ್ಯಾಪಾರದ ಆಗುಹೋಗುಗಳನ್ನು ತಿಳಿಸುತ್ತಾರೆ ರಾಜು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT