ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರ್‌ವೆಲ್‌ ಕಾಮಗಾರಿಯಲ್ಲಿ ಭಾರಿ ಅಕ್ರಮ ಶಂಕೆ

ಸಿಇಒ ನೇತೃತ್ವದಲ್ಲಿ ತನಿಖೆ – ಜಿ.ಪಂ ಸಭೆಯಲ್ಲಿ ನಿರ್ಣಯ
Last Updated 20 ಡಿಸೆಂಬರ್ 2013, 9:07 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಬೋರ್‌ವೆಲ್‌ ಕಾಮಗಾರಿಯಲ್ಲಿ ಭಾರಿ ಅಕ್ರಮ ನಡೆದಿರುವ ಬಗ್ಗೆ ಕೆಲವು ಜಿಲ್ಲಾ ಪಂಚಾಯಿತಿ ಸದಸ್ಯರು ಶಂಕೆ ವ್ಯಕ್ತಡಿಸಿದ ಹಿನ್ನೆಲೆಯಲ್ಲಿ ಈ ಕುರಿತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಇಲ್ಲಿ ಗುರುವಾರ ನಡೆದ ಜಿ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಪ್ರತಿ ಬೋರ್‌ವೆಲ್‌ಗೆ ₨ 1 ಲಕ್ಷ ಮಂಜೂರಾಗುತ್ತದೆ. ಹೆಚ್ಚಿನ ಬೋರ್‌ವೆಲ್‌ಗಳು ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ. ಕೆಲವೆಡೆ ಬೋರ್‌ವೆಲ್‌ಗಳಿಗೆ ಪಂಪುಗಳನ್ನು ಅಳವಡಿಸುತ್ತಿಲ್ಲ’ ಎಂದು ಸದಸ್ಯರು ಪಕ್ಷಬೇಧ ಮರೆತು ಆರೋಪಿಸಿದರು. ಗುತ್ತಿಗೆದಾರರು ಬೋರ್‌ವೆಲ್‌ಗೆ ಅಳವಡಿಸಿದ ಪಂಪ್‌ನ ಗ್ಯಾರಂಟಿ ಕಾರ್ಡ್‌ ಅನ್ನೂ ಪಂಚಾಯಿತಿಗೆ ಹಸ್ತಾಂತರಿಸ­ಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಬಸವ ವಸತಿ ಯೋಜನೆಯಲ್ಲಿ ಅನುದಾನ ಬಿಡುಗಡೆ ತಡೆಹಿಡಿಯಲಾದ ಮನೆಗಳನ್ನು ಗುರುತಿಸಿ, ತೊಡಕು ಸರಿಪಡಿಸಲು ಅವಕಾಶ ಕಲ್ಪಿಸಿದರೂ ಪಿಡಿಒಗಳು ಆಸಕ್ತಿ ತೋರಿಸುತ್ತಿಲ್ಲ. ಪಹಣಿ ಪತ್ರವನ್ನು ಸರ್ಕಾರಕ್ಕೆ ಒಪ್ಪಿಸಿದ್ದರಿಂದ ಫಲಾನುಭವಿಗಳು ಬೇರೆ ಕಡೆ ಸಾಲ ಮಾಡಿ ಮನೆಪೂರ್ಣಗೊಳಿಸಲೂ ಆಗುತ್ತಿಲ್ಲ ಎಂದು ಕೆಲವು ಸದಸ್ಯರು ದೂರಿದರು.

ಮನೆ ನಿರ್ಮಾಣ ಆರಂಭವಾಗಿಯೂ ಫಲಾನುಭವಿಗೆ ಹಣ ಬಿಡುಗಡೆ ಆಗದಿರುವ ಎಲ್ಲಾ ಪ್ರಕರಣಗಳ ವಿವರ ಒಪ್ಪಿಸುವಂತೆ ಹಾಗೂ ಅರ್ಹ ಫಲಾನುಭವಿಗೆ ಹಣ ಸಿಗುವಂತೆ ಮಾಡಲು ಕ್ರಮಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷ ಕೆ.ಕೊರಗಪ್ಪ ನಾಯ್ಕ ಸೂಚಿಸಿದರು.

ಕೊಳೆರೋಗ ಪರಿಹಾರಕ್ಕೂ ದಲ್ಲಾಳಿಗಳು!:
ಕೊಳೆರೋಗ ಪರಿಹಾರ ವಿತರಣೆ ಸರಿಯಾಗಿ ಆಗಿಲ್ಲ. ಕೆಲವೆಡೆ ಫಲಾನುಭವಿಗಳನ್ನು ಗುರುತಿಸುತ್ತಿರುವುದು ದಲ್ಲಾಳಿಗಳು ಎಂದು ಸದಸ್ಯರೊಬ್ಬರು ಗಮನ ಸೆಳೆದರು. ಸುಳ್ಯ ತಾಲ್ಲೂಕಿನಲ್ಲಿ ಅಡಿಕೆ ಬೆಳೆಯದ ವ್ಯಕ್ತಿಗೂ ಪರಿಹಾರ ಪಾವತಿಯಾದ ಬಗ್ಗೆ ಹಾಗೂ ಉಳಾಯಿಬೆಟ್ಟುವಿನಲ್ಲಿ ಭತ್ತ ಬೆಳೆವ ರೈತನಿನೂ ಪರಿಹಾರ ವಿತರಿಸಿದ ಬಗ್ಗೆ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಇದುವರೆಗೆ ಪರಿಹಾರ ವಿತರಿಸಲಾದ ಎಲ್ಲಾ ಫಲಾನುಭವಿಗಳ ಪಟ್ಟಿ ಒದಗಿಸುವಂತೆ ಅಧ್ಯಕ್ಷರು ಸೂಚಿಸಿದರು. ಉಪಾಧ್ಯಕ್ಷ ರಿತೇಶ್‌ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಜಯಶ್ರೀ, ಫಕೀರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಮತ್ತಿತರರಿದ್ದರು.

ಅಡಿಕೆ ಬೆಳೆ ನಿಷೇಧ ಬೇಡ: ಜಿ.ಪಂ. ನಿರ್ಣಯ
‘ಒಂದು ವೇಳೆ ಕೇಂದ್ರ ಸರ್ಕಾರ ಅಡಿಕೆ ಬೆಳೆ ನಿಷೇಧಿಸಿದ್ದೇ ಆದರೆ ಜಿಲ್ಲೆಯ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಲಿದೆ’ ಎಂದು ಸದಸ್ಯರೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಅಡಿಕೆ ಬೆಳೆ ನಿಷೇಧಿಸುವುಲ್ಲ ಎಂದು ಕೇಂದ್ರ ಆರೋಗ್ಯ ಸಚಿವರು ಈಗಾಗಲೇ  ಭರವಸೆ ನೀಡಿದ್ದಾರೆ’ ಎಂದು ಕಾಂಗ್ರೆಸ್‌ ಪಕ್ಷದ ಜಿ.ಪಂ. ಸದಸ್ಯರು ತಿಳಿಸಿದರು. ಮುಂಜಾಗ್ರತಾ ಕ್ರಮವಾಗಿ, ‘ಸರ್ಕಾರ ಯಾವುದೇ ಕಾರಣಕ್ಕೂ ಅಡಿಕೆ ಬೆಳೆಯನ್ನು ನಿಷೇಧಿಸಬಾರದು’ ಎಂದು ಜಿಲ್ಲಾ ಪಂಚಾಯಿತಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT