ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧಿಕ ಚಿಂತನೆಗಳ ನಿರ್ವಸತೀಕರಣ ಸಾಧ್ಯವೇ?

Last Updated 6 ಜೂನ್ 2012, 19:30 IST
ಅಕ್ಷರ ಗಾತ್ರ

ಇತ್ತೀಚಿನ ರಾಜಕೀಯ ತಲ್ಲಣಗಳ ನಡುವೆ ಸದ್ದುಗದ್ದಲಗಳಿಲ್ಲದೆ ಒಂದು ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ಮೂಲ ಇರುವುದು ನಮ್ಮ ವಿಶ್ವವಿದ್ಯಾನಿಲಯಗಳನ್ನು, ಬೌದ್ಧಿಕ ಚಿಂತನೆಗಳನ್ನು. ಜ್ಞಾನವನ್ನು, ದಿನನಿತ್ಯದ ಸಂಕಥನಗಳನ್ನು ನಿರ್ವಸತೀಕರಣಗೊಳಿಸಲುಸಾಧ್ಯವೇ? ಎನ್ನುವ ಪ್ರಶ್ನೆಯಲ್ಲಿ.
 
ಇದು ಸಾಧ್ಯವಿದ್ದರೆ ಅದನ್ನು ಹೇಗೆ ಸಾಧಿಸಬಹುದು? ಅಲ್ಲದೇ ಈ ನಿರ್ವಸತೀಕರಣವನ್ನು ಭಾರತಕ್ಕೆ ಮಾತ್ರ ಸೀಮಿತಗೊಳಿಸಬೇಕೆ ಅಥವಾ ಈ ಪ್ರಕ್ರಿಯೆಯಲ್ಲಿ  ಅರಬ್ ಹಾಗೂ ಆಫ್ರಿಕಾ ಖಂಡವನ್ನು ಒಳಗೊಳ್ಳಬೇಕೆ? ಈ ನಿರ್ವಸತೀಕರಣದಲ್ಲಿ  ಯಾವ ಮಾದರಿಯನ್ನು ಸಾರಾಸಗಟಾಗಿ ನಿರಾಕರಿಸಬೇಕು? ಇದಕ್ಕೆ ಬೇಕಾಗಿರುವುದು ಅಮೆರಿಕನ್ ಮಾದರಿಯೇ? ಅಥವಾ ಪಾಶ್ಚಾತ್ಯ ಮಾದರಿಯ ಮೂಲವೇ?- ಇಂತಹ ಚರ್ಚೆ ಭಾರತದಲ್ಲಿ  ನೆಲೆಸಿರುವ ಸಂಶೋಧಕರಿಗೆ ಮಾತ್ರ ಸೀಮಿತವಾಗಿಲ್ಲ, ಭಾರತದಿಂದ ಹೊರಗಿರುವ ಚಿಂತಕರೂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ.
 
ಇತ್ತೀಚಿನ `ಅಕ್ಯುಪ್ಯೆು ವಾಲ್ ಸ್ಟ್ರೀಟ್~ ಚಳುವಳಿಯಲ್ಲಿ ಭಾಗವಹಿಸಿದ ಅಮೆರಿಕಾದ ಮೂಲನಿವಾಸಿಗಳಲ್ಲಿ  ಕೂಡ ಈ ಕಳಕಳಿ ವ್ಯಕ್ತವಾಗಿತ್ತು.ಈ  ಎಲ್ಲಾ ಚರ್ಚೆಗಳು ಆರಂಭಗೊಳ್ಳಲು ಕಾರಣಗಳಿವೆ. ಬಹಳ ಮುಖ್ಯವಾಗಿ ನಮ್ಮ ಬೌದ್ಧಿಕ ಚಿಂತನೆಗಳು, ನಮ್ಮ ದಿನನಿತ್ಯದ ಭಾಷೆಗಳು,  ದೇಸಿ ಸಂಕಥನಗಳು, ಆಭಿವೃದ್ಧಿಯ ಮಾದರಿಗಳು  ಈಗಲೂ ಪಾಶ್ಚಾತ್ಯ ಹಾಗೂ ಅಮೆರಿಕನ್  ಚಿಂತನೆಗಳ ಪ್ರಭಾವದಿಂದ ಹೊರತಾಗಿಲ್ಲ.
 
ಅವು  ನಮ್ಮ ದಿನನಿತ್ಯದ ಭಾಗಗಳಾಗಿ ಬಿಟ್ಟಿವೆ. ಈ ರೀತಿಯ ಚಿಂತನೆಗಳಿಂದ  ಬಿಡುಗಡೆ ಹೊಂದಲು  ಅಸಾಧ್ಯವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ.ಇವತ್ತಿನ ಜಾಗತೀಕರಣ ಅದನ್ನು ಇನ್ನಷ್ಟು ಗಟ್ಟಿ ಮಾಡುತ್ತಿದೆ ಅಲ್ಲದೇ ಅದರ ತಳಹದಿ ಇನ್ನಷ್ಟು  ವಿಸ್ತರಿಸುತ್ತಿದೆ. ಈ ಚಿಂತನೆ ಕೇವಲ ಮಾರ್ಕ್ಸ್‌ವಾದಿಗಳಿಗೆ ಸೀಮಿತಗೊಂಡಿಲ್ಲವೆಂದರೆ ತಪ್ಪಾಗಲಾರದು. ಇದರಲ್ಲಿ  ಗಾಂಧಿವಾದಿಗಳಿದ್ದಾರೆ, ಆಧುನಿಕೋತ್ತರ ವಾದಿಗಳಿದ್ದಾರೆ, ತೃತೀಯ ಜಗತ್ತಿನ ಚಿಂತಕರಿದ್ದಾರೆ.

ವಾಸ್ತವವಾಗಿ ವಸಾಹತುಶಾಹಿ ನಿಂತಿದ್ದೇ ದೇಶಿಯ ಬೌದ್ಧಿಕ ಚಿಂತನೆ, ಜ್ಞಾನಗಳ  ಕೊಡುಗೆಗಳ  ನಿರಾಕರಣೆಯಲ್ಲಿ.  ಈ ಕಾರಣದಿಂದಾಗಿಯೇ  ಅದು ವಿಜ್ಞಾನಕ್ಕೆ ಅರಬ್ ಜಗತ್ತು ನೀಡಿರುವ ಕೊಡುಗೆಯನ್ನು ನಿರಾಕರಿಸುತ್ತದೆ. ಆಫ್ರಿಕಾ ಜಗತ್ತು ಸಮಾಜವಾದಕ್ಕೆ ನೀಡಿದ ಕೊಡುಗೆ  `ಉಜಾಮ~ಅನ್ನು ಒಪ್ಪುವುದಿಲ್ಲ. ಲ್ಯಾಟೀನ್ ಅಮೆರಿಕಾ ಪ್ರಾಚೀನ ನಾಗರೀಕತೆಗೆ ನೀಡಿದ ಕೊಡುಗೆಯನ್ನು ಅದು ಗುರುತಿಸುವುದಿಲ್ಲ.ಇದಕ್ಕೆ ಭಾರತವೂ ಅಪವಾದವಲ್ಲ.

ಭಾರತದ  ಸಂದರ್ಭದಲ್ಲಿ ಥಟ್ಟೆಂದು ನೆನಪಾಗುವುದು ಮೆಕಾಲೆ. ಅವನ ಪ್ರಕಾರ ಭಾರತದ ಒಟ್ಟು  ಜ್ಞಾನ ಸಂಪತ್ತು ಅವನ ಲೈಬ್ರರಿಯಲ್ಲಿರುವ ಒಂದು ಪುಸ್ತಕದ ಸಾಲಿಗೆ ಸಮಾನ. ಈ ನಿರಾಕರಣೆ ಮುಂದೆ ಒಂದು ತಾತ್ವಿಕ ಬುನಾದಿಗೆ, ಶಾಶ್ವತವಾಗಿ ಪಾಶ್ಚಾತ್ಯ ಬೌದ್ಧಿಕ ಪರಂಪರೆಯ ಹಿಡಿತಕ್ಕೆ ದಾರಿ ಮಾಡಿಕೊಟ್ಟಿದ್ದನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ಈ ರೀತಿಯ ನಿರಾಕರಣೆ ಇವತ್ತು ಕೂಡ ಚಾಲ್ತಿಯಲ್ಲಿದೆ.

ಈ ಚರ್ಚೆ ಆರಂಭಗೊಂಡು ಹೆಚ್ಚು ಕಡಿಮೆ ಹದಿಮೂರು ವರುಷಗಳೇ ಕಳೆದು ಹೊಗಿವೆ. ಅದಕ್ಕೆ ಹೊಸತನ ಹಾಗೂ ದೃಷ್ಟಿಕೋನ ದೊರೆತದ್ದು ಜಾಗತೀಕರಣದ ಸಂದರ್ಭದಲ್ಲಿ  ಎಂದರೂ ತಪ್ಪಾಗಲಾರದು. ಇದು ಆರಂಭಗೊಂಡದ್ದು ವಾಸ್ಕೋಡ ಗಾಮ ಭಾರತಕ್ಕೆ  ಆಗಮಸಿದ  ಐನೂರು ವರುಷದ  ಆಚರಣೆ ಸಂದರ್ಭದಲ್ಲಿ. ಅವನ ಆಗಮನವನ್ನು ಹೇಗೆ ಅರ್ಥೈಸಬೇಕು ಹಾಗೂ  ಆಚರಿಸಬೇಕೆಂಬ ವಿವಾದದಿಂದ ಇದು ಹುಟ್ಟಿಕೊಂಡಿತ್ತು.

ಅದನ್ನು ವಿಜೃಂಭಣೆಯಿಂದ ಆಚರಿಸಬೇಕೆ? ಅಥವಾ ಅದನ್ನು ಪರಾಧೀನತೆಯ ದಿನವನ್ನಾಗಿ ಆಚರಿಸಬೇಕೆ? ಇಲ್ಲವೇ ರಾಜಾರಾಮ್ ಮೋಹನ್ ರಾಯ್ ಹೇಳಿದಂತೆ ಬಿಡುಗಡೆಯ ದಿನವನ್ನಾಗಿ ಆಚರಿಸಬೇಕೆ? ಈ ಸಂದರ್ಭದಲ್ಲಿ  ನಿರ್ವಸತೀಕರಣ ಚರ್ಚೆಗೆ  ಬೌದ್ಧಿಕ ಸ್ವರೂಪ ನೀಡಿದ್ದು ಭಾರತದ ಕೆಲವು  ಚಿಂತಕರು.
 
ಅವರಲ್ಲಿ  ಅಶೀಶ್ ನಂದಿ, ಗೋವಾದ ಕ್ಲಾಡ್ ಅಲ್ವರೀಸ್, ಎಂ.ಎಸ್ ರಾಜು, ಮೀರಾ ಶಿವಾ. ಕನ್ನಡದಲ್ಲಿ ಇವರ ಸಂಖ್ಯೆ ಕಡಿಮೆಯಾದರೂ,  ಡಿ.ಆರ್ ನಾಗರಾಜ್, ಯು.ಆರ್. ಅನಂತಮೂರ್ತಿ,ದೇವನೂರು ಮಹಾದೇವ ಮೊದಲಾದವರು ಈ ಬಗ್ಗೆ ಚಿಂತನೆ ನಡೆಸಿದ್ದಾರೆ. ಇವರ ಹಿಂಸೆಯ  ಪ್ರತಿರೋಧದ ಹಿನ್ನೆಲೆಯಲ್ಲಿ  ನಿರ್ವಸತೀಕರಣದ ವಾದ ದಟ್ಟವಾಗಿದೆ. 

 ವಾಸ್ತವವಾಗಿ ಈ  ಚರ್ಚೆ ಭಾರತಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಆಫ್ರಿಕಾದಲ್ಲಿ  ಇದರ ಕುರಿತು ಬಹಳ ಚರ್ಚೆಗಳು ನಡೆದಿವೆ. ಅದರಲ್ಲಿ ಫ್ರ್ರಾನ್ಸ್ ಫೆನೋ ಬಹಳ ಮುಖ್ಯನಾಗುತ್ತಾನೆ. ಅವನ ಪ್ರಕಾರ ನಿರ್ವಸತೀಕರಣ ಒಂದು ಐತಿಹಾಸಿಕ ಪ್ರಕ್ರಿಯೆ.ಅದನ್ನು ಒಂದು ಹಂತದಲ್ಲಿ ನೋಡಲು ಸಾಧ್ಯವಿಲ್ಲ.

ವಿಚಿತ್ರವೆಂದರೆ ಅವನು ನಿರ್ವಸತೀಕರಣಕ್ಕೆ ವಿರುದ್ಧವಾಗಿರುವ ವಸಾಹತುಶಾಹೀಕರಣವನ್ನು  ಸಾಂಸ್ಕೃತಿಕ ಪರಾಧೀನತೆ ಅಥವಾ ಅನನ್ಯತೆಯ  ಮೂಲಕ ನೋಡುತ್ತಾನೆ.  ಪರಾಧೀನತೆಯಿಂದ ವಿಮುಕ್ತಿ ಹೊಂದುವುದೇ ನಿರ್ವಸತೀಕರಣದ ಆರಂಭದ ಘಟ್ಟ ಎನ್ನುತ್ತಾನೆ. ಅವನು ಈ ವಾದವನ್ನು 1960 ದಶಕದಲ್ಲಿ ಮುಂದಿಡುತ್ತಾನೆ. ಇವತ್ತಿನ ಬಹಳಷ್ಟು ಸಾಮಾಜಿಕ ಚಳುವಳಿಗಳು, ಬೌದ್ಧಿಕ ಚಿಂತನೆಗಳು ಈ ವಾದವನ್ನು ಎತ್ತಿ ಹಿಡಿಯುತ್ತವೆ.

ಅಲ್ಲದೇ ಅದನ್ನು ನಿರ್ವಸತೀಕರಣದ ಪ್ರಮುಖ ಹಾಗೂ ಪ್ರಧಾನವಾದ ಸಾಧನವನ್ನಾಗಿ ಉಪಯೋಗಿಸುತ್ತವೆ.ಈ ಚರ್ಚೆಯ ಎರಡನೇ ಅಂಶವೆಂದರೆ ಪ್ರಸ್ತುತ ಚಾಲ್ತಿಯಲ್ಲಿರುವ  ಅಭಿವೃದ್ಧಿಯ ಮಾದರಿಗಳು. ಇವತ್ತಿನ ಸಂದರ್ಭದಲ್ಲಿ  ನಡೆಯುತ್ತಿರುವ ಒಕ್ಕಲೆಬ್ಬಿಸುವ ಪ್ರಕ್ರಿಯೆ, ಎರಡು ಲಕ್ಷಕ್ಕೂ ಹೆಚ್ಚು ರೈತರ ಆತ್ಮಹತ್ಯೆ, ಹೆಚ್ಚುತ್ತಿರುವ ಬಡತನದ ಸಂಖ್ಯೆ, ಅಧಿಕವಾಗುತ್ತಿರುವ ಗುಳೆ ಹೋಗುತ್ತಿರುವ ಜನರ ಸಂಖ್ಯೆ ಇತ್ಯಾದಿಗೆ ಮೂಲ ಕಾರಣ ನಾವು ಅಳವಡಿಸಿರುವ ಅಭಿವೃದ್ಧಿಯ ಮಾದರಿ.

ವಾಸ್ತವವಾಗಿ ಈ ಆಭಿವೃದ್ಧಿಯ ಮಾದರಿಗೆ ಪಾಶ್ಚಾತ್ಯ ಅಥವಾ ಅಮೆರಿಕಾ ದೇಶದ  ಅಭಿವೃದ್ದಿಯೇ ದೊಡ್ಡ ಮಾದರಿ.ಇದರಲ್ಲಿ ಚೀನಾ ಮಾದರಿಯನ್ನು ಕೂಡ ಸೇರಿಸಬಹುದು.  ಇದಕ್ಕೆ ಪರ‌್ಯಾಯವಾಗಿ ದೇಸಿ ಮಾದರಿಗಳನ್ನು ಕಟ್ಟುವ, ಪರೀಕ್ಷಿಸುವ, ನಿರ್ಮಿಸುವ ಅಥವಾ ಅದನ್ನು ಬೆಂಬಲಿಸುವ ಯೋಜನೆಗಳಿಲ್ಲ. ಈ ಅಭಿವೃದ್ಧಿಯ ಮಾದರಿ ಪಾಶ್ಚಾತ್ಯ ಮಾದರಿಯನ್ನು ಯಥಾವತ್ತಾಗಿ ಭಾರತದಲ್ಲಿ ಅಳವಡಿಸುತ್ತದೆ.

ಜಾಗತೀಕರಣದ ನಂತರದ ಅಭಿವೃದ್ಧಿಯ ಚೌಕಟ್ಟುಗಳನ್ನು ಗಮನಿಸಿದರೆ ಇದನ್ನು ಅರ್ಥಮಾಡಿಕೊಳ್ಳಬಹುದು. ವಾಸ್ತವವಾಗಿ ಇವತ್ತಿನ ಸಂದರ್ಭದಲ್ಲಿ ಐನೂರಕ್ಕೂ ಹೆಚ್ಚಿರುವ ವಿಶೇಷ ಆರ್ಥಿಕ ವಲಯಕ್ಕೆ ಚೀನಾ ದೇಶದ ವಿಶೇಷ ಆರ್ಥಿಕ ವಲಯವೇ ಮಾದರಿ. ಈ ಮಾದರಿಗೆ ವಿದೇಶಿ ಬಂಡವಾಳವನ್ನು ಸ್ವಾಗತಿಸುವುದು ಅಥವಾ ಆಕರ್ಷಿಸುವುದು ಪ್ರಮುಖ ಕಾಳಜಿ ಹೊರತು ರೈತರ ಆತ್ಮಹತ್ಯೆಯಲ್ಲ, ಅಥವಾ  ಅಭಿವೃದ್ಧಿಯ ನಿರಾಶ್ರಿತರಲ್ಲ.

ಇಲ್ಲಿರುವ ವಿಚಿತ್ರವೆಂದರೆ ನಿರ್ವಸತೀಕರಣವನ್ನು ಬರೇ ರಾಜಕೀಯ ಸ್ವಾತಂತ್ರ್ಯದಲ್ಲಿ  ನೋಡುವುದು ಸರಿಯಲ್ಲ. ಹಾಗೆ ನೋಡಿದರೆ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ. ಅದರಲ್ಲಿ ಅಮೆರಿಕಾದ ಕ್ರಾಂತಿಯನ್ನು ನಿರ್ವಸತೀಕರಣದ  ಭಾಗವಾಗಿ ನೋಡಲು ಸಾಧ್ಯವೇ ಎಂಬ ಜಿಜ್ಞಾಸೆ ಇದೆ.
 
ಒಂದೆಡೆ ಅಮೆರಿಕಾದ ಕ್ರಾಂತಿ ಪ್ರಜಾಪ್ರಭುತ್ವ ಚೌಕಟ್ಟಿಗೆ, ಸ್ವಾತಂತ್ರ್ಯಕ್ಕೆ  ಮಾದರಿಯಾದರೆ. ಇನ್ನೊಂದೆಡೆ  ಅಮೆರಿಕಾದ ಸ್ವಾತಂತ್ರ್ಯ ತೃತೀಯ ಜಗತ್ತಿನ ಅಭಿವೃದ್ಧಿಯ  ದುರಂತಕ್ಕೆ ಕಾರಣೀಭೂತವಾಗುತ್ತದೆ. ಈ ಸಂದರ್ಭದಲ್ಲಿ  ಅಮೆರಿಕಾದ ಸ್ವಾತಂತ್ರ್ಯವು ತೀವ್ರತರದ ವಸಾಹತುಶಾಹೀಕರಣಕ್ಕೆ ದಾರಿ ಮಾಡಿಕೊಟ್ಟದ್ದನ್ನು ನಾವು ಮರೆಯಬಾರದು. ದುರಂತವೆಂದರೆ ಇವತ್ತಿನ ಸಂದರ್ಭದಲ್ಲಿ ನಮ್ಮ ಹೆಚ್ಚಿನ ಬೌದ್ಧಿಕ ಚಿಂತನೆಗಳಿಗೆ, ಅಭಿವೃದ್ಧಿ ಮಾದರಿಗಳಿಗೆ ಅಮೆರಿಕಾವೇ ಅತೀ ದೊಡ್ಡ ಮಾದರಿ.
 
ಈ ಹಿಂದೆ ಬ್ರಿಟಿಷ್ ವಸಾಹತುಶಾಹಿ, ಫ್ರೆಂಚ್, ಸ್ಪೇನ್ ವಸಾಹತುಶಾಹಿ ಮಾಡಿದ ಕೆಲಸವನ್ನೇ ಅಮೆರಿಕಾ ಇವತ್ತು ನಾಜೂಕಾಗಿ ಮಾಡುತ್ತದೆ. ಅದು ತೃತೀಯ ಜಗತ್ತಿನ ಬೌದ್ಧಿಕ ಚಿಂತನೆಗಳನ್ನು ತಿರಸ್ಕರಿಸುವುದರೊಂದಿಗೆ , ಅಲ್ಲಿನ ಅಭಿವೃದ್ಧಿ ಮಾದರಿಗಳನ್ನು ನಿರ್ಧರಿಸುತ್ತದೆ ಹಾಗೂ ದೇಶಿಯ ಮಾದರಿಗಳನ್ನು ನಗಣ್ಯಗೊಳಿಸುತ್ತದೆ.

ಆ ದೇಶಗಳ ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಹಗರಣ ಮಾಡುತ್ತದೆ. ಅಮೆರಿಕಾದ ಕೆಲವು ವಿಶ್ವವಿದ್ಯಾಲಯಗಳು, ವಿವಿಧ ರಾಜಕೀಯ ಸಂಸ್ಥೆಗಳು, ಅದರೊಟ್ಟಿಗೆ ಬೆಸೆದುಕೊಂಡಿರುವ ಬಹುರಾಷ್ಟ್ರೀಯ ಕಂಪೆನಿಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿವೆ. ಇದಕ್ಕೆ ಪೂರಕವಾಗುವಂತೆ ಲ್ಯಾಟಿನ್ ಅಮೆರಿಕಾ ಆರ್ಥಿಕ ಬಿಕ್ಕಟ್ಟಿಗೆ ಶಿಕಾಗೋ ವಿ.ವಿಯ ಆರ್ಥಶಾಸ್ತ್ರ  ಪರಿಹಾರ ಸೂಚಿಸುತ್ತದೆ.

ಲ್ಯಾಟೀನ್  ಅಮೆರಿಕಾದ ಮೂಲ ನಿವಾಸಿಗಳ ಸಂಸ್ಕೃತಿಗೆ ಬಹು ರಾಷ್ಟ್ರೀಯ ಕಂಪೆನಿಗಳು,  ಪಿಜ್ಜಾ ಹಟ್‌ಗಳು, ಕೆಂಟಕಿ ಫ್ರೈಡ್ ಚಿಕನ್‌ಗಳು, ಮೋನ್ಸಾಂಟೋಗಳು ಪರಿಹಾರ ಸೂಚಿಸುತ್ತವೆ. ದುರಂತವೆಂದರೆ ಆಫ್ರಿಕಾದ ಬಡತನಕ್ಕೆ ಅಮೆರಿಕಾದ ಗೋಧಿ ಪರಿಹಾರ ಆಗುತ್ತದೆ.ಈ ಗೋಧಿಯ ಆಮದಿನಿಂದಾಗಿ ಆಫ್ರಿಕಾದ ಬಡತನ ನಿವಾರಣೆ ಬಿಡಿ, ಅಲ್ಲಿ ಸಾಯುವವರ ಸಂಖ್ಯೆ  ಕೂಡಾ ಕಡಿಮೆಯಾಗುತ್ತಿಲ್ಲ.

ಇದಕ್ಕೆ ಪರ‌್ಯಾಯವಾಗಿ ಹುಟ್ಟಿಕೊಂಡದ್ದು ನಿರ್ವಸತೀಕರಣ ವಾದಗಳು. ವಾಸ್ತವವಾಗಿ ನಿರ್ವಸತೀಕರಣದಲ್ಲಿ ಮೂರು ಹಂತಗಳಿವೆ, ಮೊದಲನೇ ಹಂತದಲ್ಲಿ  ನಿರಾಕರಣೆಗೆ ಕಾರಣೀಭೂತವಾದ ಅಂಶಗಳ ಹುಡುಕಾಟವಿದೆ ಎರಡನೇ ಹಂತದಲ್ಲಿ  ದೇಸಿಯ ನೆಲೆಗಳ ಪುನರ್ ಹುಡುಕಾಟವಿದೆ, ಮೂರನೆ ಹಂತದಲ್ಲಿ ಪಾಶ್ಚಿಮಾತ್ಯ ಮಾದರಿಗಳು ಮತ್ತು ಬೌದ್ಧಿಕ ಚಿಂತನೆಗಳ ವಿಮರ್ಶೆಗಳೊಂದಿಗೆ ಪರ್ಯಾಯಗಳ ಹುಡುಕಾಟವಿದೆ. 

ಇವೆಲ್ಲದರ ನಡುವೆ ಎರಡು ಸಮಸ್ಯೆಗಳು ಪ್ರಮುಖವಾಗಿ ಕಂಡು ಬರುತ್ತವೆ: ಒಂದನೆಯದಾಗಿ, ಸಾಂಸ್ಕೃತಿಕ ರೂಪಕವಾಗಿ ಬರುತ್ತಿರುವ ಪಾಶ್ಚಿಮಾತ್ಯ ಹಾಗೂ ಅಮೆರಿಕಾ ಮಾದರಿಗಳನ್ನು ಹೇಗೆ  ಸಾರಾಸಗಟಾಗಿ ತಿರಸ್ಕರಿಸುವುದು, ಎರಡನೆಯದಾಗಿ,ಪರ‌್ಯಾಯಗಳ ಹುಡುಕಾಟಗಳು  ಪಾಶ್ಚಿಮಾತ್ಯ ಮಾದರಿಗಳಿಗೆ ಗಟ್ಟಿಯಾದ ಪ್ರತಿರೋಧಗಳನ್ನು ನೀಡಬಹುದೇ? ಎನ್ನುವುದು.

ಪುಳೇಕರ್‌ರ ಶೂನ್ಯ ಕೃಷಿ , ಮೈಸೂರಿನ ನಿಸರ್ಗದ ದೇಸಿ ಮಾರಾಟ ಮಳಿಗೆ, ಪ್ರಸನ್ನರವರ ದೇಸಿ ಅಂಗಡಿ, ವಂದನಾ ಶಿವಾರವರ  ಬೀಜ ಪಂಚಾಯತ್  ಈ ಪ್ರತಿರೋಧಗಳ ಪ್ರಯತ್ನಗಳು. ಈ ಪ್ರತಿರೋಧಗಳು ಅಲ್ಲಲ್ಲಿ ಚದುರಿರುವ ಅಭಿವೃದ್ಧಿ ಮಾದರಿಗೆ ಪ್ರತಿರೋಧಗಳಾಗಿವೆಯೇ ಹೊರತು ಬೌದ್ಧಿಕ ಚಿಂತನೆಗಳ ಪ್ರತಿರೋಧಗಳಲ್ಲ.

ಈ ಸಂದರ್ಭದಲ್ಲಿ ಬೌದ್ಧಿಕ ಪ್ರತಿರೋಧಗಳನ್ನು ಯಾರು ನಿರ್ಮಿಸ ಬಹುದು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.ವಾಸ್ತವವಾಗಿ ನಮಗೆ ಈ ಸಂದರ್ಭದಲ್ಲಿ ಮತ್ತೊಬ್ಬ ಗಾಂಧಿ, ಫ್ರ್ರಾನ್ಸ್ ಫೆನೋ, ಡಿ.ಆರ್ ನಾಗರಾಜ್ ಬೇಕಾಗಿದ್ದಾರೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT