ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌ನಲ್ಲಿ ಹೊಸ ಹೆಜ್ಜೆಗಳು...

Last Updated 3 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬ್ಯಾಸ್ಕೆಟ್‌ಬಾಲ್ ಕ್ರೀಡೆ ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಹೊಸ ಆಯಾಮ ಪಡೆದುಕೊಂಡಿದೆ. ಹಿಂದೆ ನಗರಕೇಂದ್ರಿತವಾಗಿದ್ದಂತಹ ಈ ಕ್ರೀಡೆ ಇದೀಗ ತೀರಾ ಹಿಂದುಳಿದ ಪ್ರದೇಶಗಳಲ್ಲಿಯೂ ತನ್ನ ಹೆಜ್ಜೆಗುರುತುಗಳನ್ನು ಮೂಡಿಸತೊಡಗಿದೆ. ಕರ್ನಾಟಕದ ಮಟ್ಟಿಗಂತೂ ಈ ಕ್ರೀಡೆಗೆ ಪೂರಕವಾದ ಸೌಲಭ್ಯಗಳು ಹಿಂದಿಗಿಂತ ಈಗ ಬಹಳಷ್ಟು ಹೆಚ್ಚಾಗಿದೆ.

ಇದೀಗ ಬೆಂಗಳೂರಿನಲ್ಲಿ ನಡೆದ ಫೆಡರೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯನ್ನೇ ಸೂಕ್ಷ್ಮವಾಗಿ ಗಮನಿಸಿದರೆ, ಛತ್ತೀಸ್‌ಗಡ, ಜಾರ್ಖಂಡ್‌ನಂತಹ ರಾಜ್ಯಗಳ ಸಾಮರ್ಥ್ಯ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಫಡರೇಷನ್ ಕಪ್‌ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಪಂಜಾಬ್ ಪೊಲೀಸ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಒಎನ್‌ಜಿಸಿ ತಂಡಗಳ ಪ್ರಾಬಲ್ಯ ಎಂದಿನಂತೆ ಮುಂದುವರಿದಿದೆ.

ನಾನು 40 ವರ್ಷಗಳ ಹಿಂದೆ ಬೆಂಗಳೂರಲ್ಲಿ ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದಾಗ ಈಗಿರುವಂತಹ ಸೌಲಭ್ಯಗಳು ಇರಲಿಲ್ಲ, ನಿಜ. ಆದರೆ ಅಂದು ಆಡುತ್ತಿದ್ದ ನಮ್ಮೆಲ್ಲರಲ್ಲಿಯೂ ಆಟದ ಬಗ್ಗೆ ಅತೀವ ಪ್ರೀತಿ ಇತ್ತು. ಆ ದಿನಗಳಲ್ಲಿ ಹಣವನ್ನು ನಾವು ನಿರೀಕ್ಷೆ ಮಾಡುತ್ತಿರಲೇ ಇಲ್ಲ. ಸಿಗುತ್ತಲೂ ಇರಲಿಲ್ಲವೆನ್ನಿ. ಎಷ್ಟೇ ಪ್ರತಿಕೂಲ ಪರಿಸ್ಥಿತಿ ಇದ್ದರೂ ಹೊಂದಿಕೊಂಡು ಹೋಗುವಂತಹ ಮನೋಭಾವ ಆಗಿನ ಬಹುತೇಕ ಎಲ್ಲಾ ಆಟಗಾರರಲ್ಲಿಯೂ ಕಂಡು ಬರುತಿತ್ತು.

ಆದರೆ ಈಗ ಆ ದಿನಗಳಲ್ಲಿ ನಾವು ಕನಸುಮನಸ್ಸಿನಲ್ಲಿ ಎಣಿಸದಂತಹ ಸೌಲಭ್ಯಗಳು ಇಂದಿನ ಆಟಗಾರರಿಗೆ ಸಿಗುತ್ತಿವೆ. ಆದರೆ ಮನೋಧರ್ಮ ಮಾತ್ರ ಹಿಂದಿನಂತಿಲ್ಲ. ಆಟದ ಮೇಲಿನ ದಟ್ಟ ಪ್ರೀತಿಗಿಂತಲೂ ಅದರಿಂದ ಸಿಗಬಹುದಾದ ಹಣ ಅಥವಾ ಲಾಭನಷ್ಟಗಳ ಬಗ್ಗೆಯೇ ಬಹುತೇಕ ಆಟಗಾರರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಪರಿಶ್ರಮ ಪಡುವುದರಿಂದ ಹಣ ಸಿಗಲೇ ಬೇಕು ನಿಜ, ಆದರೆ ಅದೇ ಮುಖ್ಯ ಗುರಿಯಾಗಿರಬಾರದು. ಇವತ್ತು ಆಟದ ಮೇಲಿನ ದಟ್ಟ ಪ್ರೀತಿಯ ಜತೆಗೆ ಅರ್ಪಣಾ ಮನೋಭಾವ ಇರುವವರ ಸಂಖ್ಯೆ ತೀರಾ ಕಡಿಮೆ ಎಂಬುದು ನನ್ನ ಅನಿಸಿಕೆ.

ದಕ್ಷಿಣ ಭಾರತದ ಮಟ್ಟಿಗೆ ಕರ್ನಾಟಕ, ಆಂಧ್ರಗಳನ್ನು ಬ್ಯಾಸ್ಕೆಟ್‌ಬಾಲ್ ವಲಯಗಳೆಂದೇ ಗುರುತಿಸುತ್ತಿದ್ದರು. ಈಚೆಗೆ ಅದಕ್ಕೆ ಕೇರಳವೂ ಸೇರಿಕೊಂಡಿದೆ. ಕೇವಲ ಒಂದೂವರೆ ದಶಕದಲ್ಲಿ ಒಎನ್‌ಜಿಸಿ ಸಂಸ್ಥೆಯು ಬ್ಯಾಸ್ಕೆಟ್‌ಬಾಲ್ ತಂಡವನ್ನು ಕಟ್ಟಿದ ಪರಿ ಅನನ್ಯ. ಇನ್ನು ನಾವು ಆಡುತ್ತಿದ್ದ ದಿನಗಳಿಗಿಂತಲೂ ಹಿಂದಿನಿಂದಲೇ ರೈಲ್ವೆ ಇಲಾಖೆಯು ಈ ಕ್ರೀಡೆಗೆ ಇನ್ನಿಲ್ಲದ ಬೆಂಬಲ ನೀಡುತ್ತಲೇ ಇತ್ತು. ಬ್ಯಾಂಕುಗಳ ಮಟ್ಟಿಗೆ ಹೇಳುವುದಿದ್ದರೆ ಈ ನಾಡಿನ ವಿಜಯಾ ಬ್ಯಾಂಕ್ ಕಳೆದ ಮೂರು ದಶಕಗಳಿಂದಲೂ ಉತ್ತಮ ಆಟಗಾರರಿಗೆ ನೇಮಕಾತಿ ನೀಡುತ್ತಾ, ದೇಶದಲ್ಲಿ ಈ ಕ್ರೀಡೆಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದೆ. ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ತಂಡ ಕೂಡಾ ಹಿಂದಿನಿಂದಲೂ ಗಮನ ಸೆಳೆಯುತ್ತಲೇ ಬಂದಿದೆ.

ಆಗ ಪ್ರಮುಖ ಚಾಂಪಿಯನ್‌ಷಿಪ್‌ಗಳನ್ನು ಬೆಂಗಳೂರಿನಲ್ಲಿ ನಡೆಸಲು ಅನುಕೂಲತೆ ಇರಲಿಲ್ಲ. ಆದರೆ ಈಗ ಇಲ್ಲಿ ಅತ್ಯುತ್ತಮ ಸೌಲಭ್ಯಗಳಿವೆ. ಆ ದಿನಗಳಲ್ಲಿ ನಮ್ಮ ಕಲ್ಪನೆಗೂ ಎಟುಕದಿದ್ದ ರೀತಿಯಲ್ಲಿ ಅತ್ಯಾಧುನಿಕ ಒಳಾಂಗಣ ಕ್ರೀಡಾಂಗಣ ವ್ಯವಸ್ಥೆಯಾಗಿದೆ. ಆದರೆ ಆ ದಿನಗಳಲ್ಲಿ ನಾವು ಸಂಜೆ ಹೊತ್ತು ಅಭ್ಯಾಸ ನಡೆಸುತ್ತಿದ್ದುದನ್ನು ನೋಡಲಿಕ್ಕೇ ನೂರಾರು ಜನ ಸೇರುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಎಲ್ಲಿದೆ. ಸೌಲಭ್ಯಗಳು ಹೆಚ್ಚಾಗಿವೆ. ಆದರೆ ಈ ಕ್ರೀಡೆಯನ್ನು ಪ್ರೀತಿಸುವ ಮಂದಿ ಕಡಿಮೆಯಾಗಿದ್ದಾರಾ?

ಈ ಕ್ರೀಡೆಯ ತಂತ್ರಗಳಿಗೆ ಸಂಬಂಧಿಸಿದಂತೆ ಹೇಳುವುದಿದ್ದರೆ ವೈಜ್ಞಾನಿಕ ನೆಲೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಆಟ ಇನ್ನಷ್ಟೂ ಚುರುಕು ಪಡೆದುಕೊಂಡಿದೆ. ಇಂದು ಬೇರೆ ತಂಡಗಳ ಆಟದ ದೃಶ್ಯಸುರುಳಿಗಳನ್ನು ನೋಡುತ್ತಾ ಮತ್ತೊಂದು ತಂಡ ಅಭ್ಯಾಸ ನಡೆಸುವುದನ್ನು ನಾನು ಕಂಡಿದ್ದೇನೆ. ಇತರ ತಂಡಗಳ ದೌರ್ಬಲ್ಯಗಳ ಅಧ್ಯಯನವೂ ನಡೆಯುತ್ತೆ. ನಮ್ಮ ಮಟ್ಟಿಗೆ ಹೇಳುವುದಿದ್ದರೆ ಶಾಲಾಮಟ್ಟದಲ್ಲಿ, ತಾಲ್ಲೂಕು, ಜಿಲ್ಲಾ ಮಟ್ಟಗಳಲ್ಲಿ ಅತಿ ಹೆಚ್ಚು ಟೂರ್ನಿಗಳು ನಡೆದಾಗ ಹೆಚ್ಚು ಪ್ರತಿಭಾವಂತರು ಬರಲು ಸಾಧ್ಯ. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಹೆಚ್ಚು ಗಟ್ಟಿಮುಟ್ಟಾದ ಆಟಗಾರರು ಕಂಡು ಬರುತ್ತಾರೆ.

ಆದರೆ ಭಾರತದಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳು ಬಹಳ ಕಡಿಮೆ. ಅಂತಹ ಪೈಪೋಟಿ ಹೆಚ್ಚಿದಾಗ ಭಾರತ ಅಂತರರಾಷ್ಟ್ರೀಯ ಕೂಟಗಳಲ್ಲಿ ತನ್ನ ಮೇಲರಿಮೆ ತೋರಬಹುದಾಗಿದೆ. ಯೂರೋಪ್ ಮತ್ತು ಅಮೆರಿಕಾದ ಕಟ್ಟುಮಸ್ತಾದ ಆಟಗಾರರ ಎದುರು ನಮಗೆ `ಶಕ್ತಿಶಾಲಿ' ಆಟ ತೋರಲು ಒಂದಿನಿತು ಸಮಸ್ಯೆ ಎನಿಸಿದರೂ, ಆಟದ ತಂತ್ರದಲ್ಲಿ ನುರಿತು ಅವರಿಗೆ ಸಡ್ಡು ಹೊಡೆಯಲು ಸಾಧ್ಯವಿದೆ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು.

ಈ ಕ್ರೀಡೆಗೆ ಭಾರತದಲ್ಲಿ ಅದ್ಭುತವಾದ ಭವಿಷ್ಯವಿದೆ. ಕರ್ನಾಟಕದಲ್ಲಿಯೂ ಮುಂದಿನ ದಿನಗಳಲ್ಲಿ ಈ ಕ್ರೀಡೆ ಅತಿ ಜನಪ್ರಿಯತೆ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಕೆ.ಗೋವಿಂದರಾಜ್ ಅವರ ನೇತೃತ್ವದಲ್ಲಿ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು, ಪ್ರತಿಭಾನ್ವೇಷಣೆಯ ನಿಟ್ಟಿನಲ್ಲಿ ರಾಜ್ಯ ಸಂಸ್ಥೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
1979ರ ಸುಮಾರಿಗೆ ಜಪಾನ್‌ನಲ್ಲಿ ನಡೆದಿದ್ದ ಎಬಿಸಿ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದ ಭಾರತ ತಂಡದಲ್ಲಿ ನಾನಿದ್ದೆ.

ಆಗ ಪಂದ್ಯವೊಂದನ್ನು ಆಡಲು ನಮ್ಮನ್ನು ಗಗನಚುಂಬಿ ಕಟ್ಟಡವೊಂದರತ್ತ ಕರೆದೊಯ್ದಿದ್ದಾಗ ಅಚ್ಚರಿಗೊಂಡಿದ್ದೆವು. ಅಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ಬ್ಯಾಸ್ಕೆಟ್‌ಬಾಲ್ ಅಂಗಣವಿತ್ತು. ಅಂತಹ ನೂರಾರು ಕಟ್ಟಡಗಳಲ್ಲಿಯೂ ಆಗ ಬ್ಯಾಸ್ಕೆಟ್‌ಬಾಲ್ ಅಂಕಣಗಳಿದ್ದವಂತೆ. ಆ ದಿನಗಳಲ್ಲೇ ಜಪಾನ್ ಈ ಕ್ರೀಡೆಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ವ್ಯಾಪಕಗೊಳಿಸಿತ್ತು. ನಂತರದ ದಿನಗಳಲ್ಲಿ ಚೀನಾ ಈ ಕ್ರೀಡೆಗೆ ಮಹತ್ತರ ಪ್ರಾಮುಖ್ಯತೆ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಏರಿದ ಎತ್ತರ ಅನನ್ಯ. ಭಾರತದಲ್ಲಿಯೂ ಈ ಮಟ್ಟದಲ್ಲಿ ಎತ್ತರದ ಚಟುವಟಿಕೆ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT