ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಡ್‌ಬ್ಯಾಂಡ್ ಮಂತ್ರ ಪಠಿಸಿದ ಪ್ರಧಾನಿ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗ್ರಾಮೀಣ- ನಗರ ಪ್ರದೇಶಗಳ ನಡುವಿನ ಕಂದಕ ನಿವಾರಿಸಲು ಹಾಗೂ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) ಹೆಚ್ಚಿಸಲು ದೂರಸಂಪರ್ಕ ಮತ್ತು ಬ್ರಾಡ್‌ಬ್ಯಾಂಡ್ ಸೇವೆ ಗ್ರಾಮೀಣ ಪ್ರದೇಶಕ್ಕೂ ಲಭ್ಯವಾಗುವುದು ಅತ್ಯಗತ್ಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಪಾದಿಸಿದರು. ಇಲ್ಲದಿದ್ದರೆ ಸಾಮಾಜಿಕ ಸಮಗ್ರ ಬೆಳವಣಿಗೆ ಗುರಿಯನ್ನು ಸಾಧಿಸಲು ಆಗದು ಎಂದರು.

ಬ್ರಾಡ್‌ಬ್ಯಾಂಡ್ ಸವಲತ್ತು ಜನತೆಗೆ ಮಾಹಿತಿ ಹಾಗೂ ಜ್ಞಾನ ಲೋಕಕ್ಕೆ ಸುಲಭವಾಗಿ ಪ್ರವೇಶ ಒದಗಿಸುವ ಮೂಲಕ ಜೀವನಮಟ್ಟ ಸುಧಾರಿಸಲು ಕಾರಣವಾಗುತ್ತದೆ. ಬ್ರಾಡ್‌ಬ್ಯಾಂಡ್ ಸಂಪರ್ಕ ಹಾಗೂ ಜಿಡಿಪಿ ವೃದ್ಧಿಯ ನಡುವೆ ನೇರ ಸಂಬಂಧ ಇರುವುದು ಅಧ್ಯಯನಗಳಿಂದ ದೃಢಪಟ್ಟಿದೆ ಎಂದು 2012ನೇ ಸಾಲಿನ ದೂರಸಂಪರ್ಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಸಿಗುವಂತಾಗಿರುವುದು ಹಾಗೂ ದೂರಸಂಪರ್ಕ ಮೂಲಸೌಕರ್ಯದ ಲಭ್ಯತೆಯು ಸರ್ವರಿಗೂ ಗುಣಮಟ್ಟದ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಆಶಯಕ್ಕೆ ಪೂರಕವಾಗಿದೆ ಎಂದರು.

ದೂರವಾಣಿ ಸೌಲಭ್ಯ ಬಳಕೆ ಸಂಖ್ಯೆ ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರದಲ್ಲಿ ತುಂಬಾ ಹೆಚ್ಚಾಗಿದೆ. ರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ ಫೋನ್ ಸೌಲಭ್ಯವಿಲ್ಲದ ಶೇ 59ರಷ್ಟು ಜನರಲ್ಲಿ ಬಹುಪಾಲು ಜನರು ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರು ಎಂದು ಅವರು ತಿಳಿಸಿದರು.

ಪಾರದರ್ಶಕ ರೀತಿಯಲ್ಲಿ ತರಂಗಾಂತರ ಲಭ್ಯತೆ ಮತ್ತು ಮಂಜೂರಾತಿಗಾಗಿ ಸರ್ಕಾರ ಕ್ರಮ ತೆಗೆದುಕೊಂಡಿದೆ. ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸುವ ದಿಸೆಯಲ್ಲಿ ಹೆಜ್ಜೆ ಇಡಲಾಗಿದೆ. ಸಚಿವ ಕಪಿಲ್ ಸಿಬಲ್ ಅವರ ನೇತೃತ್ವದಲ್ಲಿ ಇಲಾಖೆಯು ತನ್ನ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಿದೆ. ದೂರಸಂಪರ್ಕ ವಲಯವು ಅನುಭವಿಸಿದ ಕಷ್ಟದ ದಿನಗಳು ಮುಗಿಯುತ್ತಿವೆ ಎಂದರು.

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಮಿಲಿಂದ್ ದೇವ್ರಾ ಮಾತನಾಡಿ, 2020ರ ವೇಳೆಗೆ ಎಲ್ಲಾ ಗ್ರಾಮಗಳಿಗೂ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ 100ರಷ್ಟು ದೂರಸಂಪರ್ಕ ಸಾಂದ್ರತೆ ಸಾಧಿಸುವ ಗುರಿ ಇದೆ ಎಂದರು.

ಗ್ರಾಮೀಣ ಪ್ರದೇಶಕ್ಕೆ ಅಧಿಕ ವೇಗದ ಅಂತರಜಾಲ ಸೌಲಭ್ಯ ಒದಗಿಸುವುದಕ್ಕೆ ಪೂರಕವಾಗಿ ಉದ್ಯಮ ರಂಗದೊಂದಿಗೆ ಸರ್ಕಾರ ಕೂಡ ಕಾರ್ಯನಿರ್ವಹಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT