ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 2-6-1963

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಆಹಾರ ವಸ್ತುಗಳ ಬೆಲೆ ಏರದು
ನವದೆಹಲಿ, ಜೂನ್ 1 - ಸರ್ಕಾರದ ಬಳಿ ಅಕ್ಕಿ, ಗೋಧಿ ಮತ್ತು ಸಕ್ಕರೆ ಸಾಕಷ್ಟು ದಾಸ್ತಾನಿದೆಯೆಂದೂ ಆದಕಾರಣ ಆ ವಸ್ತುಗಳ ಬೆಲೆ ಏರುವುದೆಂಬ ಇಲ್ಲವೆ ಅವುಗಳ ಬಗ್ಗೆ ಪಡಿತರ ಪದ್ಧತಿಯನ್ನು ಜಾರಿಗೆ ತರಲಾಗುವುದೆಂಬ ಶಂಕೆ ಅನಗತ್ಯವೆಂದೂ ಯೋಜನಾ ಮಂಡಲಿ ಸದಸ್ಯ ಶ್ರೀ ಶ್ರೀಮನ್ನಾರಾಯಣ್ ಅವರು ಇಂದು ಇಲ್ಲಿ ತಿಳಿಸಿದರು.

ಅಕ್ಕಿಯ ಉತ್ಪಾದನೆಯಲ್ಲಿ ಕೇವಲ ಹತ್ತು ಲಕ್ಷ ಟನ್‌ಗಳಷ್ಟು ಮಾತ್ರ ಇಳುವರಿ ಉಂಟಾಗಿದೆಯೆಂದೂ, ದಕ್ಷಿಣ ಭಾರತದ ಜನರು ಸ್ವಲ್ಪ ಸಂಯಮದಿಂದ ಅಕ್ಕಿಯನ್ನು ಬಳಸಿದರೆ ಗಾಬರಿಗೆ ಕಾರಣವೇ ಇರುವುದಿಲ್ಲವೆಂದೂ ಅವರು ಹೇಳಿದರು.

ಗಡಿಯಲ್ಲಿ ಮುನ್ನೆಚ್ಚರಿಕೆ
ಡಾರ್ಜಿಲಿಂಗ್, ಜೂನ್ 1 - ನಮ್ಮ ಗಡಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಚೀಣಿ ಸೇನಾ ಜಮಾವಣೆ ನಡೆದಿರುವುದು ಸರ್ಕಾರಕ್ಕೆ ತಿಳಿದಿದೆಯೆಂದು ರಕ್ಷಣಾ ಸಚಿವ ಶ್ರೀ ವೈ. ಬಿ. ಚವಾನರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿ `ಆದರೆ ನಾವು ಜಾಗರೂಕತೆಯಿಂದಿದ್ದೇವೆ' ಎಂದರು. `ಚೀಣೀಯರನ್ನು ನಾವು ನಂಬುವಂತಿಲ್ಲ; ಅಪಾಯವು ಸದಾ ಇದ್ದೇ ಇರುತ್ತದೆ' ಎಂದೂ ಅವರು ಹೇಳಿದರು.

ಪೋಪರಿಗೆ ಮತ್ತೆ ಪ್ರಜ್ಞಾಹೀನತೆ
ವ್ಯಾಟಿಕನ್ ನಗರ, ಜೂನ್ 1 - ಇಂದು ಬೆಳಿಗ್ಗೆ ಸ್ವಲ್ಪ ವೇಳೆ ಪ್ರಜ್ಞೆಯಿಂದಿದ್ದ ಪೋಪ್‌ಜಾನ್ ಅವರಿಗೆ ಮಧ್ಯಾಹ್ನ 4-41ರಲ್ಲಿ ಪುನಃ ಪ್ರಜ್ಞೆ ತಪ್ಪಿತೆಂದು ವಕ್ತಾರರೊಬ್ಬರು ತಿಳಿಸಿದರು. ಈ ಸಂಜೆ ಅವರ ಅಂಗಾಂಗಗಳು ಉಡುಗುತ್ತಿದ್ದು ಬಲಹೀನರಾಗುತ್ತಿದ್ದರೆಂದೂ ವ್ಯಾಟಿಕನ್ ರೇಡಿಯೊ ಈ ರಾತ್ರಿ ತಿಳಿಸಿತು.
ಬೆಳಿಗ್ಗೆ ಪ್ರಜ್ಞೆ ಬಂದು ಎಚ್ಚೆತ್ತಿದ್ದಾಗ ಪೋಪರು ಎದ್ದು ಕುಳಿತು ಸ್ವಲ್ಪ ಕಾಫಿ ಕುಡಿದು ಕೊಠಡಿಯಲ್ಲಿ ಸೇರಿದ್ದ ತಮ್ಮ ಸಹೋದರರೊಡನೆ ಸಂಭಾಷಿಸಿದರು.

ಚಂಡಮಾರುತದಲ್ಲಿ ಸತ್ತವರ ಸಂಖ್ಯೆ ಹದಿನೈದು ಸಾವಿರ
ಢಾಕ, ಜೂನ್ 1 - ಚಂಡಮಾರುತಕ್ಕೆ ಗುರಿಯಾಗಿರುವ ಚಿತ್ತಗಾಂಗ್ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ ಏಳುಸಾವಿರಕ್ಕೇರಿದೆಯೆಂದು ಇಂದು ಇಲ್ಲಿ ದೊರೆತ ಅಧಿಕೃತ ಅಂಕಿ ಅಂಶಗಳು ತಿಳಿಸುತ್ತವೆ.

ಕಾಕ್ಸ್‌ಬಜಾರ್ ಸಬ್‌ಡಿವಿಷನ್ನಿನಲ್ಲಿ ಸತ್ತ ಮೂರುಸಾವಿರ ಜನರು ಇವರಲ್ಲಿ ಸೇರಿದ್ದಾರೆ. ಸಮುದ್ರ ದಂಡೆಗಳಿಂದ, ನದಿಗಳಿಂದ ಮತ್ತು ಭಗ್ನಾವಶೇಷಗಳಿಂದ ಇನ್ನೂ ಶವಗಳನ್ನು ಎತ್ತಿಹಾಕುತ್ತಿರುವ ಕಾರಣ ಸತ್ತವರ ಸಂಖ್ಯೆ ಇನ್ನೂ ಏರುವ ಸಂಭವವಿದೆ.

ಚಿತ್ತಗಾಂಗ್, ನೌಖಾಲಿ ಮತ್ತಿತರ ತೀರಪ್ರದೇಶಗಳ ಜಿಲ್ಲೆಗಳಲ್ಲಿ ಚಂಡಮಾರುತದ ಕಾರಣ ಸತ್ತವರ ಸಂಖ್ಯೆ ಹದಿನೈದು ಸಾವಿರಕ್ಕೂ ಮೀರಬಹುದೆಂದು ಅನಧಿಕೃತ ಅಂದಾಜುಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT