ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದ ಐತಿಹಾಸಿಕ ಸಾಧನೆ

ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕದ ಸಂಭ್ರಮ
Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮಾಂಚೆಂಗ್ಲಾಬಾಕ್, ಜರ್ಮನಿ (ಪಿಟಿಐ/ ಐಎಎನ್‌ಎಸ್): ಭಾರತದ ಬಾಲಕಿಯರ ತಂಡದವರು ಮಾಂಚೆಂಗ್ಲಾಬಾಕ್‌ನಲ್ಲಿ ನಡೆದ ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಕಂಚು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.

ಮೂರನೇ ಸ್ಥಾನವನ್ನು ನಿರ್ಣಯಿಸಲು ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ರಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತು. ಜೂನಿಯರ್ ಮಹಿಳೆಯರ ವಿಶ್ವಕಪ್‌ನಲ್ಲಿ ಭಾರತ ತಂಡ ಪದಕ ಜಯಿಸಿದ್ದು ಇದೇ ಮೊದಲು.

ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದ ನಿಗದಿತ ಅವಧಿಯ ಬಳಿಕ ಉಭಯ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು. ಇದರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ನ ಮೊರೆಹೋಗಲಾಯಿತು.

ಶೂಟೌಟ್‌ನಲ್ಲಿ ಇಂಗ್ಲೆಂಡ್ ಪರ ಮೊದಲ ಅವಕಾಶ ತೆಗೆದುಕೊಂಡ ಅನ್ನಾ ಟೊಮನ್ ವಿಫಲರಾದರೆ, ಭಾರತದ ಪರ ಮೊದಲ ಅವಕಾಶ ತೆಗೆದುಕೊಂಡ ರಾಣಿ ಚೆಂಡನ್ನು ನಿಖರವಾಗಿ ಗುರಿ ಸೇರಿಸಿದರು (1-0). ಆ ಬಳಿಕ ಭಾರತದ ನವನೀತ್ ಕೌರ್, ವಂದನಾ ಕಟಾರಿಯಾ, ನವಜೋತ್ ಕೌರ್ ಹಾಗೂ ಇಂಗ್ಲೆಂಡ್‌ನ ಲೂಸಿ ಹ್ಯಾಮ್ಸ, ಶೋನಾ ಮೆಕಾಲಿನ್ ಮತ್ತು ಜೋ ಲೀ ಗೋಲು ಗಳಿಸಲು ವಿಫಲರಾದರು.

ಇಂಗ್ಲೆಂಡ್‌ನ ಎಮಿಲಿ ಡೆಫ್ರಾಂಡ್ (1-1) ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು. ಭಾರತದ ಪೂನಮ್ ರಾಣಿ ಮುಂದಿನ ಅವಕಾಶವನ್ನು ಹಾಳುಮಾಡಿಕೊಂಡ ಕಾರಣ ಪಂದ್ಯ `ಸಡನ್ ಡೆತ್'ಗೆ ಮುನ್ನಡೆಯಿತು.

ರಾಣಿ ಮತ್ತು ಎಮಿಲಿ ಗೋಲು ಗಳಿಸಿದ ಕಾರಣ 2-2 ರಲ್ಲಿ ಸಮಬಲ ಕಂಡುಬಂತು. ಆ ಬಳಿಕ ಪೂನಮ್ ರಾಣಿ ಮತ್ತು ಶೋನಾ ಮೆಕಾಲಿನ್ ಅವರ ಹೊಡೆತ ಗುರಿ ತಪ್ಪಿತು. ಅಂತಿಮವಾಗಿ ನವನೀತ್ ಕೌರ್ ಅತಿಯಾದ ಒತ್ತಡದ ನಡುವೆಯೂ ಗೋಲು ಗಳಿಸಿ ಭಾರತಕ್ಕೆ 3-2 ಮುನ್ನಡೆ ತಂದಿತ್ತರು. ಇಂಗ್ಲೆಂಡ್‌ನ ಅನ್ನಾ ಅವರ ಪ್ರಯತ್ನ ವಿಫಲವಾಗುತ್ತಿದ್ದಂತೆಯೇ ಭಾರತದ ಬಾಲಕಿಯರು ಗೆಲುವಿನ ಸಂಭ್ರಮ ಆಚರಿಸಿದರು.

ಇದಕ್ಕೂ ಮುನ್ನ ನಿಗದಿತ ಅವಧಿಯ ಆಟದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಪಂದ್ಯದ ಆರಂಭದಲ್ಲೇ ಇಂಗ್ಲೆಂಡ್‌ಗೆ ಪೆನಾಲ್ಟಿ ಅವಕಾಶ ಲಭಿಸಿತ್ತಾದರೂ, ಗೋಲು ಗಳಿಸಲು ವಿಫಲವಾಯಿತು.

13ನೇ ನಿಮಿಷದಲ್ಲಿ ರಾಣಿ ತಂದಿತ್ತ ಗೋಲಿನ ನೆರವಿನಿಂದ ವಿರಾಮದ ವೇಳೆಗೆ ಭಾರತ 1-0 ರಲ್ಲಿ ಮುನ್ನಡೆ ಸಾಧಿಸಿತ್ತು. ಎರಡನೇ ಅವಧಿಯಲ್ಲಿ ಇಂಗ್ಲೆಂಡ್ ತನ್ನ ಆಕ್ರಮಣದ ವೇಗ ಹೆಚ್ಚಿಸಿತು. ಮಾತ್ರವಲ್ಲ, ಅನ್ನಾ ಟೊಮನ್ 55ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ತಂದಿತ್ತರು. ಆ ಬಳಿಕ ಯಾವುದೇ ಗೋಲುಗಳ ದಾಖಲಾಗದ ಕಾರಣ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಮುನ್ನಡೆಯಿತು.

ತಲಾ ರೂ. 1 ಲಕ್ಷ ಬಹುಮಾನ
ನವದೆಹಲಿ (ಪಿಟಿಐ):
ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತ ತಂಡದ ಸದಸ್ಯರಿಗೆ ತಲಾ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ (ಎಚ್‌ಐ) ಪ್ರಕಟಿಸಿದೆ.

`ಭಾರತ ತಂಡದ ಎಲ್ಲ ಸದಸ್ಯರಿಗೆ ತಲಾ ಒಂದು ಲಕ್ಷ ರೂ. ನಗದು ಹಾಗೂ ಸಹಾಯಕ ಸಿಬ್ಬಂದಿಗೆ ತಲಾ ರೂ. 50 ಸಾವಿರ ಬಹುಮಾನ ನೀಡಲಾಗುವುದು' ಎಂದು ಎಚ್‌ಐ ಕಾರ್ಯದರ್ಶಿ ನರೀಂದರ್ ಬಾತ್ರಾ ಹೇಳಿದ್ದಾರೆ.

ತಂಡದ ಮುಖ್ಯ ಕೋಚ್ ನೀಲ್ ಹಾಗುಡ್ ಅವರಿಗೆ ಒಂದು ಲಕ್ಷ ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT