ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬ್ಯಾಟ್ಸ್‌ಮನ್ನರಿಗೆ ಸತ್ವಪರೀಕ್ಷೆ

ಕ್ರಿಕೆಟ್: ಪಾಕಿಸ್ತಾನ ವಿರುದ್ಧದ ಅಂತಿಮ ಒಂದು ದಿನದ ಪಂದ್ಯ ಇಂದು; ಒತ್ತಡದಲ್ಲಿ `ಮಹಿ' ಬಳಗ
Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ತೀವ್ರವಾದ ಚಳಿ ದೆಹಲಿಯನ್ನು ಬಾಧಿಸುತ್ತಿರುವಂತೆ ಭಾರತದ ಕೆಲವು ಬ್ಯಾಟ್ಸ್‌ಮನ್ನರಿಗೆ ನಡುಕ ಹುಟ್ಟಿದೆ. ಪಾಕಿಸ್ತಾನ ವಿರುದ್ಧ ಸರಣಿಯ ಅಂತಿಮ ಒಂದು ದಿನದ ಪಂದ್ಯದ ಕೊನೆಯಲ್ಲಿ ರಾಷ್ಟ್ರೀಯ ಆಯ್ಕೆಗಾರರು ಇಂಗ್ಲೆಂಡ್ ವಿರುದ್ಧ ಸರಣಿಗೆ ತಂಡವನ್ನು ಪ್ರಕಟಿಸಲಿದ್ದಾರೆ. ಹೀಗಾಗಿ ಫಿರೋಜ್‌ಷಾ ಕೋಟ್ಲ ಮೈದಾನದಲ್ಲಿ ಭಾನುವಾರದ ಪಂದ್ಯ ಅವರಿಗೆ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡ ತಂದಿದೆ.

ಭಾರತ ಈಗಾಗಲೇ 0-2 ಹಿನ್ನಡೆಯಲ್ಲಿದ್ದು ಬ್ಯಾಟ್ಸ್‌ಮನ್ನರ ವೈಫಲ್ಯ ಇದಕ್ಕೆ ಕಾರಣವಾಗಿದೆ. ಇದೇ ತಿಂಗಳ 11 ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳಿರುವ ಒಂದು ದಿನದ ಸರಣಿ ಆರಂಭವಾಗಲಿದೆ.
ವಿಶೇಷವಾಗಿ ಆರಂಭ ಆಟಗಾರ ವಿರೇಂದ್ರ ಸೆಹ್ವಾಗ್ ಅವರ ಮೇಲೆ ಆಯ್ಕೆಗಾರರ ಕಣ್ಣಿದೆ. ಟೆಸ್ಟ್ ಮತ್ತು ಒಂದು ದಿನದ ಪಂದ್ಯಗಳಲ್ಲಿ ಅವರ ಪ್ರದರ್ಶನ ಕುಸಿಯುತ್ತ ಬಂದಿದೆ.

ಈ ತಂಡದಲ್ಲಿ ಸ್ಥಳೀಯರಾಗಿರುವ ಮೊದಲ ಮೂವರು ಬ್ಯಾಟ್ಸಮನ್ನರಲ್ಲಿ ಒಬ್ಬರಾದ 35 ವರ್ಷದ ಸೆಹ್ವಾಗ್ ಶನಿವಾರ ಮಧ್ಯಾಹ್ನ `ನೆಟ್ಸ್' ವೇಳೆ ಗಂಭೀರ ಅಭ್ಯಾಸ ನಡೆಸಿದರು. ಬಳಿಕ ಅಲ್ಲಿಯೇ ಇದ್ದ ಇಬ್ಬರು ಆಯ್ಕೆಗಾರರ (ವಿಕ್ರಂ ರಾಥೋರ್ ಮತ್ತು ಸಾಬಾ ಕರೀಂ) ಜತೆ ಸುಮಾರು ಅರ್ಧತಾಸಿಗೂ ಹೆಚ್ಚು ಕಾಲ ಸಮಾಲೋಚನೆ ನಡೆಸುತ್ತಿರುವುದೂ ಕಂಡುಬಂತು. ಅವರ ನಂತರ ರಾಥೋರ್ ಜತೆ ಗಂಭೀರ್ ಮಾತನಾಡಿದರು.

ವಿಶ್ವ ಕಪ್ ಗೆದ್ದ ನಂತರ ಆಡಿರುವ 15 ಪಂದ್ಯಗಳಲ್ಲಿ ಎರಡರಲ್ಲಿ (ದಕ್ಷಿಣ ಆಫ್ರಿಕ ವಿರುದ್ಧ ವಿಶ್ವದಾಖಲೆಯ 219 ಮತ್ತು ಶ್ರೀಲಂಕಾ ವಿರುದ್ಧ 96) ಬಿಟ್ಟರೆ, ಉಳಿದ ಪಂದ್ಯಗಳಲ್ಲಿ `ವೀರೂ' ನಿರಾಸೆ ಮೂಡಿಸಿದ್ದಾರೆ.

ಇನ್ನೊಬ್ಬ ಸ್ಥಳೀಯ ಆಟಗಾರ ಗೌತಮ್ ಗಂಭೀರ್ ಕೂಡ ಇಂಗ್ಲೆಂಡ್ ವಿರುದ್ಧ ಸರಣಿಯ ವೇಳೆ ಅನುಭವಿಸಿದ ಹಿನ್ನಡೆಯಿಂದ ಹೊರಬಂದಿಲ್ಲ. ಈ ಸರಣಿಯಲ್ಲೂ ಅವರು ಅಂಥ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರೂ ಎಚ್ಚರಿಕೆ ವಹಿಸಬೇಕಾಗಿದೆ. ವರ್ಷದ ಬಹುತೇಕ ಅವಧಿಯಲ್ಲಿ ಗಮನ ಸೆಳೆದ ವಿರಾಟ್ ಕೊಹ್ಲಿ ಅವರಿಂದ ತವರಿನಲ್ಲಾದರೂ ಉತ್ತಮ ಇನಿಂಗ್ಸ್ ನಿರೀಕ್ಷಿಸಲಾಗಿದೆ.

ಈ ಮೂವರು ಸರಣಿಯಲ್ಲಿ ವಿಫಲರಾಗಿದ್ದು ಮಧ್ಯಮ ಕ್ರಮಾಂಕದ ಮೇಲೆ ಒತ್ತಡಕ್ಕೆ ಕಾರಣವಾಗಿದೆ. ನಾಯಕ ಎಂ.ಎಸ್.ದೋನಿ ಮಾತ್ರ ಈ ಸರಣಿಯ ಎರಡೂ ಪಂದ್ಯಗಳಲ್ಲಿ (ಅಜೇಯ 113 ಮತ್ತು ಅಜೇಯ 54) ಏಕಾಂಗಿಯಾಗಿ ಆಡಿದ್ದಾರೆ.

ಸತತವಾಗಿ ವಿಫಲರಾದ ರೋಹಿತ್ ಶರ್ಮಾ ಸ್ಥಾನದಲ್ಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ ಆಲ್‌ರೌಂಡರ್ ರವೀಂದ್ರ ಜಡೇಜ ಚೆಂಡಿನಿಂದ ಮಿಂಚಿದರೂ, ಬ್ಯಾಟಿನಿಂದ ಕೊಡುಗೆ ನೀಡಲಿಲ್ಲ. ಬ್ಯಾಟ್ಸ್‌ಮನ್ ಅಜಿಂಕ್ಯ ರೆಹಾನೆ ಈ ಪಂದ್ಯದಲ್ಲಿ ಆಡುವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬೌಲರ್‌ಗಳ ಒತ್ತಡ: ಪಾಕಿಸ್ತಾನದ ಬೌಲರ್‌ಗಳು- ವಿಶೇಷವಾಗಿ ಎಡಗೈ ವೇಗಿ ಜುನೇದ್ ಖಾನ್ ಆರಂಭದಿಂದಲೂ ಒತ್ತಡ ಹೇರುತ್ತ ಬಂದಿದ್ದಾರೆ. ಜುನೇದ್ ಎರಡೂ ಕಡೆ ಚೆಂಡನ್ನು ಹೊರಳಿಸಿ ಬ್ಯಾಟ್ಸ್‌ಮನ್ನರನ್ನು ಕಂಗೆಡಿಸಿದ್ದಾರೆ. ಅವರಿಗೆ ಉಮರ್ ಗುಲ್, ಮಹಮದ್ ಇರ್ಫಾನ್, ಸ್ಪಿನ್ನರುಗಳಾದ ಸೈಯ್ಯದ್ ಅಜ್ಮಲ್ ಮತ್ತು ಮಹಮದ್ ಹಫೀಜ್ ಬೆಂಬಲ ನೀಡುತ್ತ ಬಂದಿದ್ದಾರೆ. ಶೋಯೆಬ್ ಮಲಿಕ್ ಕೂಡ ಉಪಯುಕ್ತ ಬೌಲರ್.

`ಪಾಕ್ ದಾಳಿ ವೈವಿಧ್ಯಮಯವಾಗಿದ್ದು, ಬ್ಯಾಟ್ಸ್‌ಮನ್ನರ ಬೆಂಬಲದಿಂದ ಅದು ನಮಗಿಂತ ಹೆಚ್ಚು ಸಮತೋಲನ ಹೊಂದಿದೆ' ಎಂದು ದೋನಿ ಒಪ್ಪಿಕೊಳ್ಳುತ್ತಾರೆ.ಇನ್ನೊಂದು ಕಡೆ ಪಾಕಿಸ್ತಾನ ಕೊನೆಯ ಪಂದ್ಯದಲ್ಲಿ ಬದಲಾವಣೆಗೆ ಹೋಗುವ ಸಾಧ್ಯತೆ ಕಡಿಮೆ. ಒಂದೊಮ್ಮೆ ಮಾಡಿದರೂ, ವಿಫಲರಾಗಿರುವ ಮೂರನೇ ಕ್ರಮಾಂಕದ ಆಟಗಾರ ಅಜರ್ ಅಲಿ ಅವರನ್ನು ಕೈಬಿಟ್ಟು ಹ್ಯಾರಿಸ್ ಸೊಹೇಲ್ ಅವರಿಗೆ ಅವಕಾಶ ನೀಡಬಹುದು.

ನಾಸಿರ್ ಭಯ: ಭರವಸೆ ಮೂಡಿಸಿರುವ ಎಡಗೈ ಆರಂಭ ಆಟಗಾರ ನಾಸಿರ್ ಜಮ್ಷೆದ್ ಈ ಸರಣಿಯ ಎರಡೂ ಪಂದ್ಯ ಸೇರಿ ಭಾರತ ವಿರುದ್ಧ ಆಡಿರುವ ಮೂರೂ ಪಂದ್ಯಗಳಲ್ಲಿ ಶತಕ ದಾಖಲಿಸಿದ್ದಾರೆ. ಈ ಹಿಂದೆ 1982-83ರಲ್ಲಿ ಪಾಕ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಜಹೀರ್ ಅಬ್ಬಾಸ್ ಮಾತ್ರ, ಭಾರತ- ಪಾಕ್ ಸರಣಿಯಲ್ಲಿ ಬೆನ್ನುಬೆನ್ನಿಗೆ ಮೂರು ಶತಕ ಬಾರಿಸಿದ್ದರು. ಅವರನ್ನು ನಿಯಂತ್ರಿಸಲು ಉಪಾಯ ಕಂಡಕೊಳ್ಳಬೇಕಾಗಿದೆ.

ಇನ್ನೊಬ್ಬ ಆರಂಭ ಆಟಗಾರ ಮಹಮದ್ ಹಫೀಜ್ ಕೋಲ್ಕತ್ತದಲ್ಲಿ ಗುರುವಾರ ಆಡಿದ ರೀತಿಯೂ ಪಾಕ್ ಪಾಳಯದಲ್ಲಿ ಖುಷಿ ಮೂಡಿಸಿದೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಯೂನಿಸ್ ಖಾನ್ ಬಿಟ್ಟರೆ ಉಳಿದವರು ವಿಫಲರಾಗಿದ್ದಾರೆ. ಆದರೆ ಪಾಕಿಸ್ತಾನದ ಬೌಲರ್‌ಗಳು ಆ ಕೊರತೆ ತುಂಬಿಸಿದ್ದಾರೆ.

ತಂಡಗಳು ಇಂತಿವೆ:
ಭಾರತ: ಎಂ.ಎಸ್.ದೋನಿ (ನಾಯಕ), ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರವೀಂದ್ರ ಜಡೇಜ, ಅಜಿಂಕ್ಯಾ ರೆಹಾನೆ, ರವಿಚಂದ್ರನ್ ಅಶ್ವಿನ್, ಅಶೋಕ್ ದಿಂಡಾ, ಭುವನೇಶ್ವರ ಕುಮಾರ್, ಇಶಾಂತ್ ಶರ್ಮ, ರೋಹಿತ್ ಶರ್ಮ, ಅಮಿತ್ ಮಿಶ್ರಾ ಮತ್ತು ಶಮಿ ಅಹಮದ್ ಮತ್ತು ದಿನೇಶ್ ಕಾರ್ತಿಕ್.

ಪಾಕಿಸ್ತಾನ: ಮಿಸ್ಬಾ ಉಲ್ ಹಕ್, ಮಹಮದ್ ಹಫೀಜ್, ನಾಸಿರ್ ಜಮ್ಷೆದ್, ಅಜರ್ ಅಲಿ, ಯೂನಿಸ್ ಖಾನ್, ಕಮ್ರಾನ್ ಅಕ್ಮಲ್, ಶೋಯೆಬ್ ಮಲಿಕ್, ಉಮರ್ ಗುಲ್, ಸಯ್ಯದ್ ಅಜ್ಮಲ್, ಜುನೇದ್ ಖಾನ್, ಮಹಮದ್ ಇರ್ಫಾನ್, ಉಮರ್ ಅಕ್ಮಲ್, ವಹಾಬ್ ರಿಯಾಜ್.
ಪಂದ್ಯದ ಆರಂಭ: ಮಧ್ಯಾಹ್ನ12.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT