ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮುಡಿಗೆ ಅಂಧರ ವಿಶ್ವಕಪ್

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಕಪ್ ಕೈಜಾರಲಿದೆಯೇ ಎನ್ನುವ ಆತಂಕ, `ಟ್ರೋಫಿ ನಮ್ಮದಾಗಲಿ' ಎನ್ನುವ ಕ್ರೀಡಾಪ್ರೇಮಿಗಳ ಪ್ರಾರ್ಥನೆ, ಸಾಕಷ್ಟು ಭಾವುಕ ಮತ್ತು ರೋಚಕ ಕ್ಷಣಕ್ಕೆ ಸಾಕ್ಷಿಯಾದ ಅಂಧರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದವರು ಚಾಂಪಿಯನ್ ಆಗಿ ಹೊರಹೊಮ್ಮಿದರು.
ಉಸಿರು ಬಿಗಿ ಹಿಡಿದು `ಭಾರತ ಗೆಲ್ಲಲಿ' ಎಂದು ಪ್ರಾರ್ಥಿಸಿದ್ದ ಅಭಿಮಾನಿಗಳ ಹಾರೈಕೆ ಫಲಿಸಿದ ವಿಶೇಷ ಕ್ಷಣವದು.

`ನಮ್ಮ ದೇಶದಲ್ಲಿ ನಡೆಯುವ ವಿಶ್ವಕಪ್ ನಮ್ಮಲ್ಲಿಯೇ ಉಳಿಯಲಿ' ಎಂದು ಅಂಧ ಕಣ್ಣುಗಳಲ್ಲಿ ಕನಸು ಕಟ್ಟಿಕೊಂಡಿದ್ದ ಆಟಗಾರರ ದೊಡ್ಡ ಗುರಿ ಈಡೇರಿದ ಸಂಭ್ರಮದ ಸಂದರ್ಭವದು. 20ನೇ ಓವರ್‌ನ ಕೊನೆಯ ಎಸೆತದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಭೇರಿ ಬಾರಿಸುತ್ತಿದ್ದಂತೆ ಆತಿಥೇಯ ತಂಡದ ಕೇತನ್‌ಬಾಯಿ ಪಟೇಲ್ ಅಂಗಿ ಬಿಚ್ಚಿ ಗಾಳಿಯಲ್ಲಿ ತಿರುಗಿಸುತ್ತಾ ಕುಣಿದಾಡಿದರು. ಆಟಗಾರರು ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದರು. ಎಲ್ಲರ ಕಣ್ಣುಗಳಲ್ಲಿ ಹರ್ಷಧಾರೆ.   ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಸಡಗರ ಎಲ್ಲೆಲ್ಲೂ...

ಈ ಎಲ್ಲಾ ಅಭೂತಪೂರ್ವ ಸನ್ನಿವೇಶಕ್ಕೆ ಸೆಂಟ್ರಲ್ ಕಾಲೇಜು ಕ್ರೀಡಾಂಗಣ ಸಾಕ್ಷಿಯಾಯಿತು. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದುಕೊಂಡಿತು. ಕನ್ನಡಿಗ ಶೇಖರ್  ನಾಯ್ಕ ನೇತೃತ್ವದ ಪಡೆ ಲೆಕ್ಕಾಚಾರದಂತೆ ಬ್ಯಾಟಿಂಗ್ ಮಾಡಲು ಮುಂದಾಯಿತು. ಆದರೆ, ಲೀಗ್ ಹಂತದಲ್ಲಿ ಪಾಕಿಸ್ತಾನದ ವಿರುದ್ಧ ಕಂಡಿದ್ದ ಸೋಲಿನ `ಸೇಡು' ತಂಡವನ್ನು ಕಾಡುತ್ತಿತ್ತು.

ಈ ಸೇಡಿಗೆ `ಮುಯ್ಯಿ' ತೀರಿಸಲು ಕಾತರದಿಂದ ಕಾದು ಕುಳಿತಿದ್ದ ಭಾರತ 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 258 ರನ್ ಕಲೆ ಹಾಕಿತು.ಟೂರ್ನಿಯ ಉದ್ದಕ್ಕೂ ಅಬ್ಬರದ ಆಟದ ಮೂಲಕವೇ ತಂಡವನ್ನು ಕಾಪಾಡಿದ್ದ ಗುಜರಾತಿನ್ ಕೇತನ್ ಈ ಪಂದ್ಯದಲ್ಲಿಯೂ ಭಾರತಕ್ಕೆ ಆಸರೆಯಾದರು. ಬಿ-1 ವಿಭಾಗದ ಈ ಬ್ಯಾಟ್ಸ್‌ಮನ್ ಕೇವಲ 43 ಎಸೆತಗಳಲ್ಲಿ  98 ರನ್ ಕಲೆ ಹಾಕಿದರು.

ಆದರೆ, ಶತಕ ಗಳಿಸುವ ಕನಸು ಮಾತ್ರ ನನಸಾಗಲಿಲ್ಲ. ಪಾಕ್ ತಂಡದ ಮಹಮ್ಮದ್ ಜಮೀರ್ ಅವರು ಕೇತನ್ ವಿಕೆಟ್ ಪಡೆಯುವ ಮೂಲಕ ಭಾರತದ ರನ್ ಓಟಕ್ಕೆ ಲಗಾಮು ಹಾಕಿದರು. ಆರಂಭಿಕ ಬ್ಯಾಟ್ಸ್‌ಮನ್ ಪ್ರಕಾಶ್ ಜಯರಾಮಯ್ಯ (43, 24ಎಸೆತ) ಬೇಗನೇ ವಿಕೆಟ್ ಒಪ್ಪಿಸಿದ್ದು ಆತಿಥೇಯರ ಆತಂಕಕ್ಕೆ ಕಾರಣವಾಗಿತ್ತು.

ಭಾರತವನ್ನು ಅವರ ತವರು ನೆಲದಲ್ಲಿಯೇ ಬಗ್ಗು ಬಡಿಯುವ ಲೆಕ್ಕಾಚಾರ ಹೊಂದಿದ್ದ ಪಾಕ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಸ್ಪೋಟಕ ಬ್ಯಾಟ್ಸ್‌ಮನ್ ಮಹಮ್ಮದ್ ಅಕ್ರಮ್ ಭಾರೀ ಭರವಸೆ ಮೂಡಿಸಿದ್ದರು. ಈ ಆಟಗಾರ ವೆಸ್ಟ್ ಇಂಡೀಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕೇವಲ 85 ಎಸೆತಗಳಲ್ಲಿ 264 ರನ್ ಗಳಿಸಿದ್ದರು. ಇವರು ಮತ್ತೆ ಆರ್ಭಟಿಸಬಹುದೇ ಎನ್ನುವ ಆತಂಕ ಮೂಡಿತ್ತು.

ಆದರೆ, ಅಕ್ರಮ್ 32 ರನ್ ಗಳಿಸಿದ್ದ ವೇಳೆ ಕೇತನ್ ಪಟೇಲ್ ಎಸೆತದಲ್ಲಿ ವೆಂಕಟೇಶ್ ಕೈಗೆ ಕ್ಯಾಚ್ ನೀಡಿದರು. ಈ ವೇಳೆ ಭಾರತ ಟ್ರೋಫಿ ಗೆದ್ದಂತೆ ಸಂಭ್ರಮಿಸಿತು. ಕೊನೆಗೆ 20 ಓವರ್‌ಗಳು ಮುಕ್ತಾಯವಾದಾಗ ಪಾಕ್ ತಂಡ ಎಂಟು ವಿಕೆಟ್ ನಷ್ಟಕ್ಕೆ 229 ರನ್ ಮಾತ್ರ ಕಲೆ ಹಾಕಿತು.

`ವಿಜಯೀ ಭಾರತ' ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಪ್ರಶಸ್ತಿಯ ಹೊಸ್ತಿಲಲ್ಲಿ ಮುಗ್ಗಿರಿಸಿದ ಪಾಕ್ ತಂಡದ ನಾಯಕ ಅಬ್ಬಾಸಿ ಸೇರಿದಂತೆ ಇತರ ಆಟಗಾರರು ಕಣ್ಣೀರು ಹಾಕಿದರು.

ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 258. (ಪ್ರಕಾಶ್ ಜಯರಾಮಯ್ಯ 43, ಅಜಯ್ ಕುಮಾರ್ ರೆಡ್ಡಿ 25, ಕೇತನ್‌ಭಾಯಿ ಪಟೇಲ್ 98, ಡಿ. ವೆಂಕಟೇಶ್ 21; ಮಹಮ್ಮದ್ ಅಕ್ರಮ್ 39ಕ್ಕೆ2, ಸಲೀಮ್ 44ಕ್ಕೆ2, ಮಹಮ್ಮದ್ ಜಮೀಲ್ 24ಕ್ಕೆ2). ಪಾಕಿಸ್ತಾನ  20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 229. (ಮಹಮ್ಮದ್ ಅಕ್ರಮ್ 32, ಅಲಿ ಮೂರ್ತುಜಾ 38, ಅಮೀರ್ ಇಶಾಫಿಕ್ 28, ಮಹಮ್ಮದ್ ಜಮೀಲ್ 47, ಮಹಮ್ಮದ್ ಜೋಹಿಬ್ ಗಫೂರ್ 33, ಮಹಮ್ಮದ್ ಅಯಾಜ್ 14; ಅಜಯ್ ಕುಮಾರ್ ರೆಡ್ಡಿ 34ಕ್ಕೆ1, ಶೇಖರ್ ನಾಯ್ಕ 44ಕ್ಕೆ1, ಪಂಕಜ್ ಭುಯೆ 37ಕ್ಕೆ, ಕೇತನ್‌ಭಾಯಿ ಪಟೇಲ್ 47ಕ್ಕೆ1).

ಫಲಿತಾಂಶ: ಭಾರತಕ್ಕೆ 29 ರನ್ ಗೆಲುವು. ಪಂದ್ಯ ಶ್ರೇಷ್ಠ: ಅಜಯ್ ಕುಮಾರ್ ರೆಡ್ಡಿ. ಟೂರ್ನಿ ಶ್ರೇಷ್ಠ: ಕೇತನ್‌ಭಾಯಿ ಪಟೇಲ್ (ಬಿ-1 ವಿಭಾಗ). ಪ್ರಕಾಶ್ ಜಯರಾಮಯ್ಯ (ಬಿ-2 ವಿಭಾಗ) ಮತ್ತು ಅಜಯ್‌ಕುಮಾರ್ ರೆಡ್ಡಿ (ಬಿ-3 ವಿಭಾಗ).

ರೋಚಕ 20ನೇ ಓವರ್
ಬೆಂಗಳೂರು:
ಪಾಕಿಸ್ತಾನ ಗೆಲುವು ಸಾಧಿಸಬೇಕಾದರೆ 20ನೇ ಓವರ್‌ನಲ್ಲಿ 33 ರನ್ ಅಗತ್ಯವಿತ್ತು. ಈ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಕೇವಲ 11 ಎಸೆತಗಳಲ್ಲಿ 69 ರನ್ ಗಳಿಸಿರುವ ದಾಖಲೆ ಇರುವುದರಿಂದ ಭಾರತ ಮತ್ತು ಪಾಕ್ ತಂಡಗಳ ನಡುವಿನ ಕೊನೆಯ ಓವರ್ ಸಾಕಷ್ಟು ರೋಚಕತೆಯಿಂದ ಕೂಡಿತ್ತು.
`ಕಮಾನ್ ಇಂಡಿಯಾ' ಎನ್ನುವ ಸ್ಫೂರ್ತಿಭರಿತ ಮಾತುಗಳು ಆಟಗಾರರಿಗೆ ಪ್ರೇರಣೆಯಾದವು.

ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ, ಸಯ್ಯದ್ ಕೀರ್ಮಾನಿ ಸೇರಿದಂತೆ ಪ್ರಮುಖ ಗಣ್ಯರು ಕೊನೆಯ ಓವರ್ ಅನ್ನು ನಿಂತುಕೊಂಡೆ ವೀಕ್ಷಿಸಿದರು.  `ಭಾರತ ಗೆಲುವು ಸಾಧಿಸಲಿದೆ' ಎನ್ನುವ ಆದಮ್ಯ ವಿಶ್ವಾಸ ಹೊಂದಿದ್ದರೂ, ಸ್ಥಳೀಯ ಕ್ರೀಡಾಪ್ರೇಮಿಗಳ ಮನದಲ್ಲಿ ಮಾತೇ ಹೊರಡದಂತಹ ಆತಂಕ. ಅಂತಿಮ ಓವರ್‌ನ ಕೊನೆಯ ಎಸೆತದಲ್ಲಿ ಅಜಯ್ ಕುಮಾರ್ ರೆಡ್ಡಿ ಭಾರತಕ್ಕೆ ಗೆಲುವು ತಂದುಕೊಡುತ್ತಿದ್ದಂತೆ,  ಅಭಿಮಾನಿಗಳು ಮನದಲ್ಲಿ ಅದುಮಿಟ್ಟುಕೊಂಡಿದ್ದ ಸಂಭ್ರಮ ನೃತ್ಯದ ರೂಪದಲ್ಲಿ ಹೊರಹೊಮ್ಮಿತು.

20ನೇ ಓವರ್‌ನ ಕೊನೆಯ ಆರು ಎಸೆತಗಳು ಹೇಗಿದ್ದವು ಎನ್ನುವ ವಿವರ ಇಲ್ಲಿದೆ.
ಬೌಲಿಂಗ್: ಅಜಯ್ ಕುಮಾರ್ ರೆಡ್ಡಿ


*1ನೇ ಎಸೆತ ಇಶಾನ್ ಅಬ್ಬಾಸಿ 1 ರನ್
*2ನೇ ಎಸೆತ ಜೋಯಿಬ್ ಗಫೂರ್ ಒಂದು ರನ್ ಕದಿಯಲು ಯತ್ನಿಸಿದಾಗ ಅಬ್ಬಾಸಿ ರನ್ ಔಟ್
*ನೇ ಎಸೆತ ಹೊಸ ಬ್ಯಾಟ್ಸ್‌ಮನ್ ಇಫ್ತಿಕಾರ್ ಹುಸೇನ್ ರನ್ ಇಲ್ಲ
*4ನೇ ಎಸೆತ ಸ್ಟ್ರೈಕ್ ಇಫ್ತಿಕಾರ್ ಹುಸೇನ್ ರನ್ ಇಲ್ಲ
*ನೇ ಎಸೆತ ಸ್ಟ್ರೈಕ್ ಇಫ್ತಿಕಾರ್ ಹುಸೇನ್ 1 ರನ್ (ನೋ ಬಾಲ್)
*6ನೇ ಎಸೆತ ಸ್ಟ್ರೈಕ್ ಇಫ್ತಿಕಾರ್ ಹುಸೇನ್ ರನ್ ಇಲ್ಲ
*7ನೇ ಎಸೆತ ಜೊಹಿಬ್ ಗಫೂರ್ 1 ರನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT