ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವನಿತೆಯರಿಗೆ ರಿಲೆ ಬಂಗಾರ

ಪೂವಮ್ಮ ಚಿನ್ನದ ಓಟ: ರೆಂಜಿತ್, ಆಶಾ ರಾಯ್ ಬೆಳ್ಳಿ ಬೆಡಗು
Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಪುಣೆ: ಭಾರತದ ಪಾಳಯ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಅಂತಿಮ ದಿನ ಸಂತಸದ ಅಲೆಯಲ್ಲಿ ತೇಲಿತು. ಕರ್ನಾಟಕದ ಎಂ.ಆರ್.ಪೂವಮ್ಮ ನಿರ್ಣಾಯಕ ಹಂತದಲ್ಲಿ ತೋರಿದ ಅದ್ಭುತ ಸಾಮರ್ಥ್ಯದಿಂದ ಭಾರತ  4x400 ಮೀಟರ್ಸ್ ರಿಲೆ ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಇದಲ್ಲದೆ ಎರಡು ರಜತ ಹಾಗೂ ಐದು ಕಂಚಿನ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡ ಭಾರತ ಪದಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು.

ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಮಂದಿ ಭಾರತದ ವನಿತೆಯರ ಸಾಮರ್ಥ್ಯ ನೋಡಿ ಬೆರಗುಗೊಂಡರು. ವಿಕಾಸ್ ಗೌಡ ತಂದಿತ್ತ ಚಿನ್ನದ ನಂತರ ಭಾರತ ಗಳಿಸಿದ ಮೊದಲ ಬಂಗಾರ ಇದಾಗಿದ್ದರಿಂದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಈ ಓಟದ ಮೊದಲ ಹಂತದಲ್ಲಿ ನಿರ್ಮಲ ಉತ್ತಮವಾಗಿಯೇ ಓಡಿದರು. ಜಪಾನ್‌ನ ಚಿಬಾ ಅಸಾಮಿ ಅವರು ಅವೋಕಿ ಸಯಾಕಾ ಅವರ ಕೈಗೆ ಬ್ಯಾಟನ್ ನೀಡಿದ ಮರು ಕ್ಷಣದಲ್ಲಿಯೇ ನಿರ್ಮಲ ಅವರು ಟಿಂಟು ಲುಕಾ ಕೈಗೆ ಬ್ಯಾಟನ್ ತಲುಪಿಸಿದರು. ಎರಡು ಗಂಟೆ ಮೊದಲು 800 ಮೀಟರ್ಸ್ ಓಟದಲ್ಲಿ ಪಾಲ್ಗೊಂಡು ಮೂರನೆಯವರಾಗಿ ಗುರಿ ಮುಟ್ಟಿದ್ದ ಕೇರಳದ ಕಣ್ಣೂರಿನ ಟಿಂಟು ಒಂದಿನಿತೂ ಬಳಲಿದಂತೆ ಕಂಡು ಬರಲಿಲ್ಲ. ತಮ್ಮ ಓಟವನ್ನು ಎಲ್ಲರಿಗಿಂತ ಮುಂದಾಗಿ ಮುಗಿಸಿ ಬ್ಯಾಟನನ್ನು ಅನು ಮರಿಯಮ್ ಜೋಸ್ ಕೈಗಿತ್ತರು. ಅನು ಇಂತಹ ಸದವಕಾಶವನ್ನು ವ್ಯರ್ಥಗೊಳಿಸಲಿಲ್ಲ. 

ಚೀನಾದ ಕ್ಯುಂಗ್ಯು ಮತ್ತು ಜಪಾನ್‌ನ ಸಟೋಮಿ ಅವರು ತಮ್ಮನ್ನು ಹಿಂದಿಕ್ಕಲು ಒಂದಿನಿತೂ ಅವಕಾಶ ನೀಡದೆ ಸುರಕ್ಷಿತ ಅಂತರದಲ್ಲಿಯೇ ಪೂವಮ್ಮ ಅವರ ಕೈಗೆ ಬ್ಯಾಟನ್ ಒಪ್ಪಿಸುತ್ತಿದ್ದಂತೆಯೇ ಇಡೀ ಕ್ರೀಡಾಂಗಣದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಏಕೆಂದರೆ ಪೂವಮ್ಮ ಬಿಲ್ಲಿನಿಂದ ಬಿಟ್ಟ ಬಾಣದಂತೆ ಓಡಿದ ಪರಿಯನ್ನು ನೋಡಿ ಕ್ರೀಡಾಪ್ರಿಯರು ಹುಚ್ಚೆದ್ದು ಕುಣಿದರು. ಮಚ್ಚೇಟ್ಟಿರ ಪೂವಮ್ಮ ಗುರಿ ಮುಟ್ಟಿದಾಗ ಜಪಾನಿನ ಕಿರ ಮುನಾಮಿ ಮತ್ತು ಚೀನಾದ ಯಾನ್‌ಮಿನ್ ಜಾವೊ ಸುಮಾರು 15 ಅಡಿಗಳಷ್ಟು ಹಿಂದಿದ್ದರು.

ದಿನದ ಕೊನೆಯಲ್ಲಿ ಭಾರತದ ವನಿತೆಯರಿಗೆ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಕ್ರೀಡಾಂಗಣದಲ್ಲಿ ಜನಗಣಮನ ಮೊಳಗುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ಕಿಕ್ಕಿರಿದಿದ್ದವರೆಲ್ಲಾ ಧ್ವನಿಗೂಡಿಸಿದ್ದು ರಾಷ್ಟ್ರಗೀತೆಯ ಸದ್ದು ಆಗಸವನ್ನು ತಲುಪಿದಂತಿತ್ತು. ಈ ರಿಲೆ ತಂಡ ಮುಂದಿನ ತಿಂಗಳು ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿದೆ.

ಈ ರಿಲೆ ಓಟದಲ್ಲಿ ಏಷ್ಯಾ ಅಥ್ಲೆಟಿಕ್ಸ್‌ನ ಕೂಟ ದಾಖಲೆ ಭಾರತದ ಹೆಸರಿನಲ್ಲಿಯೇ ಇದೆ. 2005ರಲ್ಲಿ ಇಂಚೋನ್‌ನಲ್ಲಿ ನಡೆದಿದ್ದ ಈ ಕೂಟದಲ್ಲಿ  ಭಾರತದ ರಾಜ್‌ವಿಂದರ್ ಕೌರ್, ಗೀತಾ ಸೆಟ್ಟಿ, ಚಿತ್ರಾ ಸೋಮನ್, ಮಂಜಿತ್ ಕೌರ್ 3ನಿಮಿಷ 30.93ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಮಾಡಿದ್ದರು.
ಪುರುಷರ 4x400ಮೀಟರ್ಸ್ ರಿಲೆ ಓಟದಲ್ಲಿ ಸೌದಿ ಅರೆಬಿಯಾ ತಂಡದವರು 3 ನಿಮಿಷ 02,53ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ಕೂಟ ದಾಖಲೆಯೊಂದಿಗೆ ಸ್ವರ್ಣ ಗೆದ್ದರು. 1998ರಲ್ಲಿ ಜಪಾನಿನ ಫುಕುವೊಕಾದಲ್ಲಿ ನಡೆದಿದ್ದ ಈ ಕೂಟದಲ್ಲಿ ಜಪಾನ್ ತಂಡದವರು ನಿರ್ಮಿಸಿದ್ದ 3ನಿಮಿಷ 02.61ಸೆಕೆಂಡುಗಳ ದಾಖಲೆಯನ್ನು ಸೌದಿ ತಂಡ ಅಳಿಸಿ ಹಾಕಿತು. ಈ ಸ್ಪರ್ಧೆಯಲ್ಲಿ ಭಾರತದ ದೇವಿಂದರ್ ಸಿಂಗ್, ಸಚಿನ್ ರೋಬಿ, ಮಹಮ್ಮದ್ ಕುಂಞ, ಆರೋಕ್ಯ ರಾಜೀವ್ ತಮ್ಮ ಶಕ್ತಿ ಮೀರಿ ಓಡಿದರಾದರೂ 3ನಿಮಿಷ 06.01ಸೆಕೆಂಡುಗಳಲ್ಲಷ್ಟೇ ಗುರಿ ತಲುಪಲು ಶಕ್ತರಾಗಿ 4ನೇ ಸ್ಥಾನಕ್ಕಿಳಿದರು.

ಭಾರತದ ದ್ಯುತಿ ಚಾಂದ್ ಮತ್ತು ಆಶಾರಾಯ್ 200ಮೀಟರ್ಸ್ ಓಟದ ಕೊನೆಯ 80 ಮೀಟರ್ಸ್‌ನಲ್ಲಿ ತೋರಿದ ಸಾಮರ್ಥ್ಯ ಅನನ್ಯ. ಇಬ್ಬರೂ ಅಂತಿಮ ಕ್ಷಣದಲ್ಲಿ ಕಜಕಸ್ತಾನದ ವಿಕ್ಟೋರಿಯಾಗೆ ತೀವ್ರ ಪೈಪೋಟಿ ನೀಡಿದರು. ಕೊನೆಗೆ ದ್ಯತಿ ಚಾಂದ್ ಮತ್ತು ಜಪಾನ್‌ನ ಫುಕುಶಿಮಾ ನಡುವೆ ಫೋಟೊ ಫಿನಿಶ್ ಫಲಿತಾಂಶ ಮೂಡಿ ಬಂದಿತು. ಭಾರತದ ಇನ್ನೊಬ್ಬ ಸ್ಪರ್ಧಿ ಸ್ರಬಾನಿ ನಂದಾ (24.38ಸೆ.) ಏಳನೇಯವರಾಗಿ ಗುರಿ ಮುಟ್ಟಿದರು.

ಸತತ ಎರಡು ಸಲ ಮುಕ್ತ ರಾಷ್ಟ್ರೀಯ ಕೂಟದಲ್ಲಿ ಚಿನ್ನ ಗೆದ್ದಿರುವ ಪಶ್ಚಿಮ ಬಂಗಾಳದ ಸಿಂಗೂರಿನ ಆಶಾ ಪ್ರಸಕ್ತ ದಕ್ಷಿಣ ರೈಲ್ವೆನಲ್ಲಿ ಉದ್ಯೋಗಿಯಾಗಿದ್ದಾರೆ. ಇವರು ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಅಂತರ ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ತೋರಿದ ಸಾಮರ್ಥ್ಯವನ್ನು (23.59ಸೆ.) ಇಲ್ಲಿ ತೋರಿಸಲಾಗಲಿಲ್ಲ. ಕಂಚಿನ ಪದಕ ಗೆದ್ದ ದ್ಯುತಿ ಪ್ರಕಾರ ಮಳೆಯಿಂದಾಗಿ ಟ್ರ್ಯಾಕ್ ಮೇಲೆ ಹೆಚ್ಚಿನ ಹಿಡಿತ ಸಿಗಲಿಲ್ಲ. ದ್ಯುತಿ ಅವರಿಗೆ ಇದು ಮೊದಲ ಅಂತರರಾಷ್ಟ್ರೀಯ ಪದಕ. ಇವರು ಉಕ್ರೇನ್‌ನಲ್ಲಿ ನಡೆಯಲಿರುವ ವಿಶ್ವ ಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಭಾನುವಾರ ರಾತ್ರಿಯೇ ಇಲ್ಲಿಂದ ಹೊರಟರು. ಪುರುಷರ 200 ಮೀಟರ್ಸ್ ಓಟದ ಫೈನಲ್‌ಗೆ ಭಾರತದ ಓಟಗಾರರು ಅರ್ಹತೆ ಪಡೆಯಲಿಲ್ಲ.

400ಮೀಟರ್ಸ್ ಹರ್ಡಲ್ಸ್‌ನಲ್ಲಿ 4ನೇ ಲೇನ್‌ನಲ್ಲಿ ಓಡಿದ ಭಾರತದ ಸತೀಂದರ್ ಸಿಂಗ್ ಮೊದಲ ಹರ್ಡಲ್ ದಾಟಿದಾಗ ಐದನೇ ಸ್ಥಾನದಲ್ಲಿದ್ದರು. ನಂತರ ಚೇತರಿಕೆ ಕಾಣುತ್ತಾ ಹೋದ ಅವರು ನಿರ್ಣಾಯಕ ಕ್ಷಣದಲ್ಲಿ ಜಪಾನಿನ ಯೂಟಾ ಇಮಾಜೆಕಿ ಅವರನ್ನು ಹಿಂದಿಕ್ಕಿದ ಪರಿ ರೋಚಕವಾಗಿತ್ತು.

ಭಾರತದ ಒಲಿಂಪಿಯನ್ ರೆಂಜಿತ್ ಮಹೇಶ್ವರಿ ತಮ್ಮ ಐದನೇ ಯತ್ನದಲ್ಲಿ 16.76 ಮೀಟರ್ಸ್ ದೂರ ಜಿಗಿಯುವ ಮೂಲಕ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ರಜತ ಪದಕವನ್ನು ತಂದು ಕೊಟ್ಟರು. ಭಾರತದ ಇನ್ನೊಬ್ಬ ಸ್ಪರ್ಧಿ ಅರ್ಪಿಂದರ್ ಸಿಂಗ್ ಕೂಡಾ ತಮ್ಮ ಐದನೇ ಯತ್ನದಲ್ಲಿ 16.58 ಮೀಟರ್ಸ್ ಜಿಗಿದು ಮೂರನೇ ಸ್ಥಾನ ಪಡೆದರು. ಆದರೆ ಭಾರತದ ಮಹಮ್ಮದ್ ಸಲಾವುದ್ದೀನ್ (15.71ಮೀ.) ಆರನೇ ಸ್ಥಾನಕ್ಕಿಳಿದರು. ಭಾರತದ ಇನ್ನೊಬ್ಬ ಸ್ಪರ್ಧಿ ನಿಖಿಲ್ ಚಿತ್ತರಸು ಕೇವಲ 2.15 ಮೀಟರ್ಸ್ ಎತ್ತರ ಜಿಗಿಯಲಷ್ಟೇ ಶಕ್ತರಾದರು.

ಮಹಿಳೆಯರ 800 ಮೀಟರ್ಸ್ ಓಟದಲ್ಲಿ ಭಾರತದ ಟಿಂಟು ಲುಕಾ ಅವರು ಮೊದಲ ಸುತ್ತು ಮುಗಿದಾಗ ಮುನ್ನಡೆಯಲ್ಲಿದ್ದರು. ಆದರೆ ಇನ್ನೇನು 50 ಮೀಟರ್‌ಗಳಿವೆ ಎನ್ನುವಾಗ ಚೀನಾದ ವಾಂಗ್ ಚುಂಗ್ಯು ಮುನ್ನಡೆದರು. ಇದಾಗಿ ಟಿಂಟು ಹತ್ತು ಮೀಟರ್‌ಗಳಷ್ಟು ಓಡಿದಾಗ ಬಹರೇನ್‌ನ ರೆಗಾಸಾ ವೇಗ ಹೆಚ್ಚಿಸಿಕೊಂಡರು. ಟಿಂಟು ಗುರಿ ತಲುಪಿದಾಗ ಮೂರನೇ ಸ್ಥಾನದಲ್ಲಿದ್ದರು. ಭಾರತದ ಇತರ ಸ್ಪರ್ಧಿಗಳಾದ ಸುಷ್ಮಾದೇವಿ (2ನಿ.06.87ಸೆ.) ಮತ್ತು ಎಂ.ಗೋಮತಿ (2ನಿ.10.74ಸೆ.) ಕ್ರಮವಾಗಿ 6 ಮತ್ತು 7ನೇಯವರಾಗಿ ಗುರಿ ತಲುಪಿದರು.

ಪುರುಷರ 5000 ಮೀಟರ್ಸ್ ಓಟದಲ್ಲಿ ನಿರೀಕ್ಷೆಯಂತೆ ರೆಗಸಾ ಮೂಟೂ, ಅಲೆಮು ಬೆಕೆಲೆ, ಎಮಾದ್ ಹಾಮೆದ್ ನಡುವೆ ಕೊನೆಯ ಕ್ಷಣಗಳವರೆಗೂ ರೋಚಕ ಪೈಪೋಟಿ ಮೂಡಿ ಬಂದಿತ್ತು. ಕೊನೆಯ ಸುತ್ತಿನವರೆಗೂ ಅಲೆಮು ಬೆಕೆಲೆ ಮುನ್ನಡೆ ಕಾಪಾಡಿಕೊಂಡಿದ್ದರು. ಆದರೆ ಕೊನೆಯ 120 ಮೀಟರ್ಸ್‌ಗಳಿರುವಾಗ ಬಹರೇನ್‌ನವರೇ ಆದ ರೆಗಸಾ ಮೂಟೂ ವೇಗ ಹೆಚ್ಚಿಸಿಕೊಂಡು ಮೊದಲಿಗರಾಗಿ ಗುರಿ ತಲುಪಿದರು. 19ನೇ ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಅಲೆಮು ಇಲ್ಲಿ ಬೆಳ್ಳಿಯ ಪದಕ ಗಳಿಸಿದರು.  ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾರತದ ಜಿ.ಲಕ್ಷ್ಮಣನ್ (14ನಿ.17.01ಸೆ.) ಮತ್ತು ನಿತೇಂದರ್ ಸಿಂಗ್ (14ನಿ.19.43ಸೆ.) ಕ್ರಮವಾಗಿ 4 ಮತ್ತು 5ನೇಯವರಾಗಿ ಗುರಿ  ತಲುಪಿದರು.

ಮಹಿಳೆಯರ 5000 ಮೀಟರ್ಸ್ ಓಟದಲ್ಲಿ ಯುನೈಟೆಡ್ ಅರಬ್ ಎಮಿರೆಟಸ್‌ನ ಬೆತ್ಲೆಹೆಮ್ ನೂತನ ಕೂಟ ದಾಖಲೆ (15ನಿ.12.84ಸೆ.) ಯೊಂದಿಗೆ ಗುರಿ ತಲುಪಿದರು. ಜಪಾನಿನ ಕೋಬೆಯಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಇದೇ ಅಥ್ಲೆಟಿಕ್ಸ್ ಕೂಟದಲ್ಲಿ ಬಹರೇನ್‌ನ ತೆಜಿತು ದಾಬಾ ಚಾಲ್‌ಚಿಸಾ 15ನಿಮಿಷ 22.48ಸೆಕೆಂಡುಗಳಲ್ಲಿ ಓಡಿ ನಿರ್ಮಿಸಿದ್ದ  ದಾಖಲೆಯನ್ನು ಬೆತ್ಲೆಹೆಮ್ ಅಳಿಸಿದರು. ತೆಜಿತು ದಾಬಾ ಭಾನುವಾರ ಓಡಿದರಾದರೂ (15ನಿ.38.63ಸೆ.) ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT