ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ- ಬ.ಕಲ್ಯಾಣ ರಸ್ತೆಗಳ ದು:ಸ್ಥಿತಿ

Last Updated 20 ಜುಲೈ 2012, 9:55 IST
ಅಕ್ಷರ ಗಾತ್ರ

ಬಸವಕಲ್ಯಾಣ: ಭಾಲ್ಕಿ ಮತ್ತು ಬಸವಕಲ್ಯಾಣ ತಾಲ್ಲೂಕಿನ ಗಡಿಯಲ್ಲಿನ ರಸ್ತೆ ತೀರ ಹದಗೆಟ್ಟಿದ್ದರಿಂದ ವಾಹನ ಸಂಚಾರ ದುಸ್ತರವಾಗಿದೆ. ತಗ್ಗು ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಹೋಗುವುದೆಂದರೆ ತಂತಿ ಮೇಲೆ ಸರ್ಕಸ್ ಮಾಡಿದಂತೆ ಆಗುತ್ತಿದೆ.

ತಾಲ್ಲೂಕಿನ ಹುಲಸೂರದಿಂದ ಭಾಲ್ಕಿ ತಾಲ್ಲೂಕಿನ ರಾಚಪ್ಪ ಗೌಡಗಾಂವಗೆ ಹೋಗುವ ರಸ್ತೆ ಮತ್ತು  ಗೋರಟಾದಿಂದ ಮೊರಂಬಿಗೆ ಹೋಗುವ ರಸ್ತೆ ತೀರ ಕೆಟ್ಟಿದೆ. ಧನ್ನೂರದಿಂದ ಕಾದೆಪುರ ಮೂಲಕ ಹುಮನಾಬಾದ್ ತಾಲ್ಲೂಕಿನ ಘೋಡವಾಡಿಗೆ ಹೋಗುವ ರಸ್ತೆಯಲ್ಲಿಯೂ ಅಲ್ಲಲ್ಲಿ ತಗ್ಗುಗಳು ಬಿದ್ದಿವೆ.

ಡಾಂಬರು ಕಿತ್ತುಹೋಗಿದೆ. ಅನೇಕ ದಿನಗಳಾದರೂ ಇವುಗಳ ದುರಸ್ತಿ ಕಾರ್ಯ ನಡೆಯದೆ ಜನರು ತೊಂದರೆ ಅನುಭವಿಸಬೇಕಾಗಿದೆ.

ಭಾಲ್ಕಿ, ಔರಾದ್ ಮತ್ತು ಬೀದರಕ್ಕೆ ಹೋಗಲು ಗೋರಟಾ ರಸ್ತೆ ಅನುಕೂಲವಾಗಿದೆ. ಆ ಕಡೆಯವರು ಸೊಲ್ಲಾಪುರ, ಪುಣೆ, ಮುಂಬೈಗೆ ಇಲ್ಲಿಂದಲೇ ಹೋಗುತ್ತಾರೆ. ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಆದರೆ ರಸ್ತೆ ಸರಿ ಇಲ್ಲದ ಕಾರಣ ತೊಂದರೆ ಆಗುತ್ತಿದೆ.

ಬಸ್ ಹಾಗೂ ಇತರೆ ವಾಹನಗಳು ಈ ಕಡೆಯೊಮ್ಮೆ ಆ ಕಡೆಯೊಮ್ಮೆ ವಾಲುವುದರಿಂದ ಅವುಗಳಲ್ಲಿ ಕುಳಿತವರು ಎದುರಿನ ಸೀಟುಗಳಿಗೆ ಗಟ್ಟಿಯಾಗಿ ಹಿಡಿಯದಿದ್ದರೆ ಒಬ್ಬರ ಮೇಲೊಬ್ಬರು ಬೀಳಬೇಕಾಗುತ್ತದೆ. ಗರ್ಭೀಣಿ ಮಹಿಳೆ ಕುಳಿತರಂತೂ ಅವಳ ಸ್ಥಿತಿ ಹೇಳತೀರದಂತಾಗುತ್ತದೆ.

ಬೈಕ್ ನಡೆಸುವಾಗ ಸ್ವಲ್ಪವೂ ಎಚ್ಚರ ತಪ್ಪಿದರೆ ಅಪಘಾತ ಖಚಿತ ಎನ್ನಬಹುದು. ರಾತ್ರಿ ಹೊತ್ತಿನಲ್ಲಂತೂ ಇಲ್ಲಿಂದ ವಾಹನ ತೆಗೆದುಕೊಂಡು ಹೋಗುವುದು ಅಸಾಧ್ಯ ಎಂದೇ ಹೇಳಬೇಕು. ಇದಲ್ಲದೆ ಈ ರಸ್ತೆಗಳು ತೀರ ಇಕ್ಕಟ್ಟಾಗಿದ್ದರಿಂದ ಎದುರಿನಿಂದ ವಾಹನ ಬಂದರಂತೂ ಅಲ್ಲಿಂದ ಮುಂದೆ ಬರಬೇಕಾದರೆ ಸಾಕು ಸಾಕಾಗುತ್ತದೆ.

ಹಾಗೆ ನೋಡಿದರೆ, ಗೋರಟಾ- ಮುಚಳಂಬ ರಸ್ತೆಯನ್ನು ಔರಾದ್-ಸದಾಶಿವಗಡ ರಾಜ್ಯ ಹೆದ್ದಾರಿ ಎಂದು ಘೋಷಿಸಿ ಅನೇಕ ವರ್ಷಗಳಾಗಿವೆ. ಆದರೂ ಇದರ ಸುಧಾರಣಾ ಕಾರ್ಯ ಕಾರ್ಯ ನಡೆದಿಲ್ಲ. ಎರಡೂ ತಾಲ್ಲೂಕುಗಳ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಈ ಸಂಬಂಧ ಅನೇಕ ಸಲ ಮನವಿ ಸಲ್ಲಿಸಲಾಗಿದೆ ಆದರೂ ಯಾರೂ ಕ್ರಮ ಕೈಗೊಂಡಿಲ್ಲ. ಮುಂದಾದರೂ ನಿರ್ಲಕ್ಷ ತೋರಬಾರದು ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT