ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವ ಸಂಗೀತ

Last Updated 5 ಫೆಬ್ರುವರಿ 2011, 16:10 IST
ಅಕ್ಷರ ಗಾತ್ರ


ಇಷ್ಟಪಟ್ಟ ಹುಡುಗಿ ದೂರಾದಾಳು ಎಂಬ ಆತಂಕದಲ್ಲಿ ನಾಯಕ. ಅವನ ತಾಯಿ ಬಂದು ಕಿವಿಮಾತು ಹೇಳುತ್ತಾಳೆ-  ‘ಬದುಕು ಕಟ್ಟಿಕೋ... ಪ್ರೀತಿ ತಾನಾಗಿಯೇ ಸಿಗುತ್ತದೆ’. ಈ ದೃಶ್ಯದಿಂದ ನಾಯಕನ ಪ್ರೀತಿಗೆ ದಕ್ಕುವುದು ಬದುಕಿನ ಅರ್ಥ.

ರಸ್ತೆಬದಿಯಲ್ಲಿ ವಯಲಿನ್ ನುಡಿಸುವ ಮಗನನ್ನು ನೋಡಿ ಅಪ್ಪ ನೊಂದುಕೊಳ್ಳುತ್ತಾನೆ. ಒಬ್ಬನೇ ಮಗ ಏನಾದರೂ ಸಾಧಿಸದಿದ್ದರೆ ಹೇಗೆ ಎಂಬ ಮಧ್ಯಮವರ್ಗದ ಎಲ್ಲಾ ಅಪ್ಪಂದಿರಿಗೂ ಇರಬಹುದಾದ ಸಹಜವಾದ ನೋವು ಅದು. ಆ ನೋವು ಮುಂದೆ ನಲಿವಾದಾಗ, ಕಣ್ಣು ತೇವವಾಗಿಸಿಕೊಂಡ ಅದೇ ಅಪ್ಪ ದೂರದಲ್ಲಿರುವ ಮಗನ ಜೊತೆ ಫೋನಿನಲ್ಲಿ ಭಾವುಕನಾಗಿ ಮಾತನಾಡುತ್ತಾನೆ. ಎದೆ ತೇವಗೊಳ್ಳುತ್ತದೆ.

ಇಂಥ ಅಸಂಖ್ಯ ಭಾವುಕ ದೃಶ್ಯಗಳನ್ನು ‘ಕಾಲ್ಗೆಜ್ಜೆ’ ಚಿತ್ರ ಒತ್ತೊತ್ತಾಗಿಸಿಕೊಂಡಿದೆ. ಅಭಿರುಚಿಯೇ ಮಸುಕಾಗುತ್ತಿರುವ ಈ ದಿನಗಳಲ್ಲಿ ನಿರ್ದೇಶಕ ಎ.ಬಂಗಾರು ಮುಖ್ಯವೆನ್ನಿಸುವುದೇ ಈ ಕಾರಣಕ್ಕೆ. ‘ಸ್ಕ್ರೀನ್ ಪ್ಲೇ’ ದೃಷ್ಟಿಯಿಂದ ನಿರ್ದೇಶಕರು ಸಾವಧಾನದಿಂದ ಯೋಚಿಸಿರುವುದಕ್ಕೆ ಚಿತ್ರದಲ್ಲಿ ಸಾಕಷ್ಟು ಸುಳಿವುಗಳು ಸಿಗುತ್ತವೆ. ಬಹುಶಃ ಅವರು ‘ಸ್ಕ್ರೀನ್ ಪ್ಲೇ’ಯಲ್ಲಿ ಕಲ್ಪಿಸಿಕೊಂಡ ಸಂಗತಿಗಳು ದೃಶ್ಯಗಳಾಗಿ ಮೂಡಿದ ನಂತರ ತೀವ್ರತೆ ಕಳೆದುಕೊಂಡಿರಬಹುದೆಂಬುದಕ್ಕೂ ಸಾಕ್ಷಿಗಳುಂಟು.

ಅವಸರವಿಲ್ಲದೆ ಭಾವುಕ ನೆಲೆಗಟ್ಟಿನಲ್ಲೇ ಕಥನಗಳನ್ನು ಹೇಳುವುದು ನಿರ್ದೇಶಕರ ಉಮೇದು. ಇದು ಇಡೀ ಚಿತ್ರದಲ್ಲಿ ಕಾಣುತ್ತದೆ. ಈ ಏಕಮುಖಿ ಚಿಂತನೆಯ ಕಾರಣದಿಂದಾಗಿ ಚಿತ್ರಕ್ಕೆ ಲವಲವಿಕೆಯ ಗುಣವಿಲ್ಲ. ಹಾಗಿದ್ದೂ ನಾಟಕೀಯ, ಅತಿ ನಾಟಕೀಯ ಅಂಶಗಳಿಗೇನೂ ಕೊರತೆ ಇಲ್ಲ.

ಚಿತ್ರೀಕರಣ ಮಾಡುವ ಹಂತದಲ್ಲೇ ನಿರ್ದೇಶಕರಿಗೆ ತಮ್ಮ ಚಿತ್ರ ಬೋರ್ ಹೊಡೆಸದೇ ಇರಲಿ ಎಂದು ಅನ್ನಿಸಿರುವ ಸಾಧ್ಯತೆ ಇದೆ. ಹಾಗಾಗಿಯೇ ಏನೋ ಅಭಿರುಚಿಯ ದೃಷ್ಟಿಯಿಂದ ಚಿತ್ರದ ಮೈಕಟ್ಟಿಗೆ ಹೊಂದಿಕೆಯಾಗದ ಹಾಸ್ಯದೃಶ್ಯಗಳನ್ನು ಅವರು ಕೆಲವೆಡೆ ಸೇರಿಸಿಬಿಟ್ಟಿದ್ದಾರೆ. ಅವನ್ನು ಕೈಬಿಟ್ಟಿದ್ದಿದ್ದರೆ ಚಿತ್ರದ ಮೈಕಟ್ಟು ಇನ್ನಷ್ಟು ಸೊಗಸಾಗಿರುತ್ತಿತ್ತು.

ಭಾವಜಗತ್ತನ್ನು ಅನಾವರಣಗೊಳಿಸುವುದರಲ್ಲೂ ಬಂಗಾರು ಅವರದ್ದು ‘ಕಪ್ಪು-ಬಿಳುಪಿನ ದಾರಿ’ಯೇ ಹೌದು. ಒಳಿತು-ಕೆಡಕನ್ನು ಅವರು ತುಂಬಾ ಹತ್ತಿರದಲ್ಲಿಟ್ಟೇ ಕಥೆ ಹೇಳಿದ್ದಾರೆ. ಸದಭಿರುಚಿ ಭರಪೂರವಾಗಿರುವುದರಿಂದ ಅದು ಸಹನೀಯವೆನ್ನಿಸುತ್ತದೆ. ಅಂತ್ಯದಲ್ಲಿ ಮೆಲೋಡ್ರಾಮಾಗೆ ಮೊರೆಹೋಗುವ ನಿರ್ದೇಶಕರು ವಿನಾ ಕಾರಣ ನಾಯಕನ ತಾಯಿಯ ಸಾವಿನ ಸನ್ನಿವೇಶ ಸೃಷ್ಟಿಸಿದ್ದಾರೆ. ಈ ಪರಿಕಲ್ಪನೆ ಹದವರಿತದ್ದಲ್ಲ.

ಅನಂತನಾಗ್, ಸುಮಿತ್ರಾ ಅಭಿನಯಿಸಿರುವ ಪಾತ್ರಗಳ ಸಂಭಾಷಣೆ ಚಿತ್ರದ ಭಾವುಕತೆಯ ಅಂಶವನ್ನು ಹೆಚ್ಚಿಸಿದೆ. ತಾವು ಏನು ಮಾತನಾಡಿದರೂ ಚೆನ್ನ ಎನ್ನುವಂತೆ ಈ ಇಬ್ಬರೂ ಕಾಣುತ್ತಾರೆ. ನಾಯಕಿ ರೂಪಿಕಾ ನೃತ್ಯದಲ್ಲಿ, ಕಣ್ಣೋಟದಲ್ಲಿ ಲಾಲಿತ್ಯವಿದೆ. ನಾಯಕ ವಿಶ್ವಾಸ್ ಕೂಡ ಶ್ರದ್ಧೆಯಿಂದ ಅಭಿನಯಿಸಿದ್ದಾರೆ. ರಂಗಾಯಣ ರಘು-ಪವಿತ್ರಾ ಲೋಕೇಶ್ ಜೋಡಿಯ ಕೆಮಿಸ್ಟ್ರಿ ಕೂಡ ಚೆನ್ನಾಗಿ ಮೂಡಿಬಂದಿದೆ. ಈ ಇಬ್ಬರ ನಟನೆಗೂ ಧಾರಾಳವಾಗಿ ಅಂಕ ಕೊಡಬಹುದು.  ಸಂಗೀತ ನಿರ್ದೇಶಕ ಗಂಧರ್ವ ತಮ್ಮ ಮಾಧುರ್ಯಭರಿತ ಟ್ಯೂನ್‌ಗಳಿಂದ ಹೆಚ್ಚು ಆವರಿಸಿಕೊಂಡಿದ್ದಾರೆ. ಅವರ ಮಾಧುರ್ಯ ಮೋಹ ಎಷ್ಟಿದೆಯೆಂಬುದಕ್ಕೆ ಸಿನಿಮಾ ಸಂಗೀತದ ವೈವಿಧ್ಯದ ಕುರಿತು ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲದಿರುವುದೇ ಸಾಕ್ಷಿ. ವೀನಸ್ ಮೂರ್ತಿ ಕ್ಯಾಮೆರಾ ಎಲ್ಲವನ್ನೂ ಸುಂದರವಾಗಿ ತೋರಿಸಿದೆ. ಅದರಲ್ಲಿ ಚಿತ್ರದ ಓರೆಕೋರೆಗಳೂ ಸ್ಪಷ್ಟವಾಗಿ ಕಾಣುವುದು ಚೋದ್ಯದ ಸಂಗತಿ.  ನಾಯಕಿ ನೃತ್ಯ ಕಲಿಯುವ ಪರಿಕಲ್ಪನೆ ಚೆನ್ನಾಗಿದೆ. ಆದರೆ, ಪಾಠ ಹೇಳುವ ಮೇಷ್ಟರಾದ ರಾಜು ತಾಳೀಕೋಟೆ ಹಾಗೂ ಇತರೆ ವಿದ್ಯಾರ್ಥಿ ವೃಂದ ಬಫೂನುಗಳಂತೆ ವರ್ತಿಸುವಂತೆ ಮಾಡಿರುವುದು ಆ ಪರಿಕಲ್ಪನೆ ತಾಳ ತಪ್ಪಲು ಕಾರಣವಾಗಿದೆ.  ಒಳ್ಳೆಯ ಸಿನಿಮಾ ಮಾಡಬಲ್ಲ ವಿಶ್ವಾಸ ಹುಟ್ಟಿಸಿರುವ ಬಂಗಾರು, ಇನ್ನು ಮುಂದೆ ತಪ್ಪುಗಳನ್ನು ತಿದ್ದಿಕೊಳ್ಳಬಲ್ಲ ವೃತ್ತಿಪರತೆಯ ಛಾಯೆಯನ್ನೂ ‘ಕಾಲ್ಗೆಜ್ಜೆ’ಯಲ್ಲಿ ಉಳಿಸಿರುವುದು ಮೆಚ್ಚತಕ್ಕ ವಿಷಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT