ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವುಕ ಭಾರತಿ

Last Updated 15 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಿಷ್ಣು ಇಲ್ಲದ ಮನೆ ಅಂಗಳ. ಅಲ್ಲಿ ಮುಗುಳ್ನಗುತ್ತಿದ್ದ ದೊಡ್ಡ ವಿಷ್ಣು ಭಾವಚಿತ್ರ. ಅದರ ಮುಂದೆ ನಿರಾಸೆ ತುಂಬಿಕೊಂಡು ಕುಳಿತಿದ್ದರು ಭಾರತಿ ವಿಷ್ಣುವರ್ಧನ್.  ಅವರು ನಿಧನಿಧಾನವಾಗಿ ಆಡಿದ ವಿಷಾದ ತುಂಬಿದ ಮಾತುಗಳಲ್ಲಿ ನೋವು ಬೆರೆತಿತ್ತು.

`ನನ್ನ ಪತಿಯನ್ನು ನನಗೇ ಕೊಟ್ಟಿದ್ದರೆ ಇಷ್ಟೊತ್ತಿಗೆ ಸಣ್ಣ ಜಾಗದಲ್ಲಿ ಅವರ ಸಮಾಧಿ ಮಾಡಿ ಕೈಲಾದಷ್ಟು ಕೆಲಸ ಮಾಡುತ್ತಿದ್ದೆ. ಈಗ ಸರ್ಕಾರ ತಾನೂ ಮಾಡುತ್ತಿಲ್ಲ. ನಮ್ಮ ಕೈಗಳನ್ನೂ ಕಟ್ಟಿಹಾಕಿದೆ~ ಎಂದು ನೋವಿನಿಂದ ನುಡಿದರು.

`ಒಂದೂವರೆ ವರ್ಷದಿಂದ ಸ್ಮಾರಕದ ವಿಚಾರದಲ್ಲಿ ಇಂದು ನಾಳೆ ಎಂದು ಸತಾಯಿಸುತ್ತಿರುವ ಸರ್ಕಾರದವರು ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಮುಂದಿನ ವಾರ ಅಂತಿಮವಾಗಿ ಒಂದು ಬಾರಿ ಭೇಟಿ ಮಾಡಿ ವಿಷಯ ತಿಳಿಸುವೆ.

ಸೆಪ್ಟೆಂಬರ್18ರೊಳಗೆ ಸರ್ಕಾರದಿಂದ ಅಂತಿಮ ತೀರ್ಮಾನ ಬರದಿದ್ದರೆ ಇನ್ನು ಮುಂದೆ ನಾನು ಈ ವಿಚಾರವನ್ನು ಪ್ರಸ್ತಾಪಿಸುವುದಿಲ್ಲ. ಅದನ್ನು ಕೈಚೆಲ್ಲಿ ಬಿಡುವೆ. ನನ್ನನ್ನು ಅಭಿಮಾನಿಗಳು ಕ್ಷಮಿಸಬೇಕು. ನನ್ನ ಪತಿ ಎಂದೂ ಯಾರ ಮುಂದೆಯೂ ಕೈಚಾಚಿ ಬಲವಂತ ಪಡಿಸಿದವರಲ್ಲ.
 
ಅದರಿಂದ ನಾನೂ ಯಾರ ಮುಂದೆಯೂ ಕೈಚಾಚಲು ಇಷ್ಟಪಡುವುದಿಲ್ಲ. ಅಭಿಮಾನ್ ಸ್ಟುಡಿಯೋದ ಆಂತರಿಕ ಸಮಸ್ಯೆಯನ್ನು ಸರ್ಕಾರಕ್ಕೆ ಬಗೆಹರಿಸುವುದು ಕಷ್ಟವಲ್ಲ. ನಟ ಬಾಲಕೃಷ್ಣ ಅವರ ಕುಟುಂಬದವರಿಗೆ ಸ್ಟುಡಿಯೋ ಸೇರಿಹೋಗಿದೆ. ನಾವು ಏನೂ ಮಾಡಲು ಆಗುತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ.
 
ಅಲ್ಲಿ `ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ~ ನಿರ್ಮಿಸಬೇಕೆಂದು ತೀರ್ಮಾನಿಸಲಾಗಿತ್ತು. ರಾಜ್ಯ ಸರ್ಕಾರ ತಕರಾರು ಸರಿಪಡಿಸಿ ಜಾಗ ಕೊಡದಿದ್ದರೆ ಅದು ಹೇಗೆ ಸಾಧ್ಯ?~ ಎಂದು ಅವರು ಬೇಸರಿಸಿಕೊಂಡರು.

`ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ತಮ್ಮ ನಿರ್ಮಾಣದ ಚಿತ್ರಕ್ಕೆ `ವಿಷ್ಣುವರ್ಧನ~ ಎಂದು ಹೆಸರಿಡಬೇಕು ಎಂದು ತೀರ್ಮಾನಿಸಿದರು. ನಾನು ವಿರೋಧಿಸಿದೆ. ಇದೀಗ ನಿರ್ಮಾಪಕರ ಸಂಘದಲ್ಲಿ ಸಂಧಾನ ನಡೆದು, ಚಿತ್ರವನ್ನು ನಮಗೆ ತೋರಿಸಿದ ನಂತರ ನಾವು ಒಪ್ಪಿದರಷ್ಟೇ ಚಿತ್ರಕ್ಕೆ ಆ ಹೆಸರು ಇಡಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.
 
ನಮ್ಮ ಒಪ್ಪಿಗೆ ಸಿಗುವವರೆಗೂ `ಪ್ರೊಡಕ್ಷನ್-48~ ಎಂದೇ ಚಿತ್ರವನ್ನು ಹೆಸರಿಸಬೇಕು ಎಂದು ಹೇಳಲಾಗಿದೆ. ಆದರೂ `ವಿಷ್ಣುವರ್ಧನ~ ಹೆಸರಿನಲ್ಲಿ ಜಾಹೀರಾತುಗಳು ಬರುತ್ತಿವೆ. ಅದರಲ್ಲಿ ಎಲ್ಲಿಯೂ ಸಂಧಾನದ ಬಗ್ಗೆ ಪ್ರಸ್ತಾಪ ಇಲ್ಲ. ಇದರಿಂದ ತುಂಬಾ ನೋವಾಗಿದೆ~ ಎಂದು ಭಾರವಾದ ದನಿಯಲ್ಲಿ ನುಡಿದರು.

ಸೆ.18 ವಿಷ್ಣುವರ್ಧನ್ ಅವರ 61ನೇ ವರ್ಷದ ಹುಟ್ಟುಹಬ್ಬ ಸಮಾರಂಭದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತಿ ವಿಷ್ಣುವರ್ಧನ್ ಮಾತುಗಳು ಹೀಗೆ ಭಾರವಾಗಿದ್ದವು.
 
ಹಿರಿಯ ನಟ ಶಿವರಾಂ. ವಿಷ್ಣುವರ್ಧನ್ ಹಿರಿಯ ಸೋದರ ರವಿಕುಮಾರ್, ನಟ ಅನಿರುದ್ಧ್ ಹಾಜರಿದ್ದರು.

ಕಾರ್ಯಕ್ರಮಗಳು
ಸೆ.17ರಂದು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ         ಎಸ್.ಪಿ.ಬಾಲಸುಬ್ರಹ್ಮಣ್ಯ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಪ್ರವೇಶ ಉಚಿತ. ಮುಖ್ಯಮಂತ್ರಿ ಸದಾನಂದ ಗೌಡ ಸಮಾರಂಭ ಉದ್ಘಾಟಿಸಲಿದ್ದಾರೆ.
ಸೆ.18ರಂದು ಜಯನಗರದ ಉದ್ಯಾನವನಕ್ಕೆ `ಸಾಹಸ ಸಿಂಹ ಡಾ.ವಿಷ್ಣುವರ್ಧನ್ ವಿಶ್ರಾಂತಿ ವನ~ ಎಂದು ಸರ್ಕಾರ ಹೆಸರಿಡಲಿದೆ. ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿ ರಕ್ತದಾನ ಶಿಬಿರ, ಸೂಪರ್ ಸ್ಪೆಶಾಲಿಟಿ ಐ ಹಾಸ್ಪಿಟಲ್‌ನ ಡಾ.ಮುರಳೀಧರ್ ನೇತೃತ್ವದಲ್ಲಿ ನೇತ್ರದಾನ ಮತ್ತು ತಪಾಸಣಾ ಶಿಬಿರ, ಡಾ.ಶ್ರೀನಿವಾಸ್ ನೇತೃತ್ವದಲ್ಲಿ ಹೋಮಿಯೋಪತಿ ವೈದ್ಯಕೀಯ ತಪಾಸಣೆ ಶಿಬಿರ ನಡೆಯಲಿದೆ.

ಸಮಾಧಿ ಸ್ಥಳದಲ್ಲಿ ದೇವರಚಿಕ್ಕನಹಳ್ಳಿಯ ಸಿಂಹಾದ್ರಿ ಸಂಘದ ವೆಂಕಟೇಶ್ ಅವರು ಸೆ.17 ಮತ್ತು ಸೆ.18ರಂದು ಅಭಿಮಾನಿಗಳಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT