ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾಶಂಕರ ಕಾರ್ಖಾನೆ ಆರಂಭಕ್ಕೆ ಸಹಕಾರ

Last Updated 24 ಫೆಬ್ರುವರಿ 2011, 9:35 IST
ಅಕ್ಷರ ಗಾತ್ರ

ವಿಜಾಪುರ: ಇಂಡಿ ತಾಲ್ಲೂಕಿನ ಮರಗೂರಿನ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಪುನಶ್ಚೇತನಗೊಳಿಸಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ರೈತರು ಮುಂದೆ ಬಂದರೆ ಕಾರ್ಖಾನೆಯ ಪುನಶ್ಚೇತನಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.ನಗರ ಹೊರ ವಲಯದಲ್ಲಿ ಜಿ.ಪಂ. ಮಾಜಿ ಸದಸ್ಯ, ರೈತ ಮುಖಂಡ ಅಣ್ಣಪ್ಪ ಖೈನೂರ ಸ್ಥಾಪಿಸಿದ ಕೊಹಿನೂರ ಕೋಲ್ಡ್ ಸ್ಟೋರೆಜ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಳ್ಳೊಳ್ಳಿ ಮತಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ ಶಂಕುಸ್ಥಾಪನೆ ನೇರವೇರಿದ್ದು, ಇನ್ನು ಪ್ರಾರಂಭವಾಗದ ಕಾರಣ ನನಗೂ ಕೂಡ ತುಂಬಾ ನೋವಾಗಿದೆ. ಯಾರೇ ಈ ಕಾರ್ಖಾನೆಯನ್ನು ಪುನರಾರಂಭಕ್ಕೆ ಮುಂದೆ ಬಂದರೆ ನನ್ನ ಕೈಲಾಗುವ ಸಹಾಯ ಮಾಡುವೆ’ ಎಂದು ಹೇಳಿದರು.

‘ರೈತರಿಂದಲೇ ಈ ದೇಶದ ಅಭಿವೃದ್ಧಿಯಾಗಬೇಕಾಗಿದೆ. ಅಣ್ಣಪ್ಪ ಖೈನೂರರಂತಹ ರೈತರು ಮುಂದೆ ಬಂದು ಇಂತಹ ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ಮಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಎಲ್ಲಾ ಕಾಲದಲ್ಲೂ ತರಕಾರಿ/ಹಣ್ಣುಗಳನ್ನು ಸಿಗುವಂತೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ರಾಜ್ಯ ಸರಕಾರದಿಂದ ಯಾವುದೇ ಸಹಾಯ-ಸಹಕಾರ ನೀಡಲು ತಾವು ಬದ್ಧರಾಗಿರುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಬಿ.ಜಿ.ಪಾಟೀಲ (ಹಲಸಂಗಿ) ಮಾತನಾಡಿ, ‘ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ರೈತರಿಗೆ ತೊಂದರೆ ತಪ್ಪಿದ್ದಲ್ಲ. ಸರಕಾರಗಳು ರೈತರಿಗೆ ಸಾಲಮನ್ನಾ, ಬಡ್ಡಿ ಮನ್ನಾದಂತಹ ಯೋಜನೆಗಳನ್ನು ಜಾರಿಗೊಳಿಸುವುದು ಬೇಡ. ಮುಳವಾಡ, ಗುತ್ತಿ ಬಸವಣ್ಣ ಏತ ನೀರಾವರಿಗಳಂತಹ ಯೋಜನೆಗಳನ್ನು ಜಾರಿಗೊಳಿಸಿದರೆ ರೈತರು ಸಾಕಷ್ಟು ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ’ ಎಂದರು.

‘ಹಿಂದಿನ ರಾಜಕೀಯಗಿಂತ ಈಗಿನ ರಾಜಕೀಯ ಬಹಳ ಹೊಲಸಾಗಿದೆ. ರಾಜಕೀಯಕ್ಕೆ ರೈತರು ಮುಂದೆ ಬರಬೇಕಾದ ಪರಿಸ್ಥಿತಿ ಈಗ ಈ ರಾಜ್ಯಕ್ಕೆ ಎದುರಾಗಿದೆ. ಆಗಿನ ರಾಜಕೀಯ ಈಗಿನ ರಾಜಕೀಯಕ್ಕೆ ಬಹಳ ವ್ಯತ್ಯಾಸವಿದೆ. ಆಗಿನ ರಾಜಕೀಯ ಕೇವಲ ಸಮಾಜ ಸೇವೆಗಾಗಿ ಬಳಕೆಯಾಗುತ್ತಿತ್ತು. ಆದರೆ ಇಂದು ರಾಜಕೀಯ ಕೇವಲ ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದೆ’ ಎಂದು ಶಾಸಕ ಆರ್.ಆರ್.ಕಲ್ಲೂರ ವಿಷಾದ ವ್ಯಕ್ತಪಡಿಸಿದರು.

ಜ್ಞಾನಯೋಗಾಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಜಿ.ಪಂ. ಮಾಜಿ ಉಪಾಧ್ಯಕ್ಷ ಬಾಬುಸಾಹುಕಾರ ಮೇತ್ರಿ, ಜಿ.ಪಂ. ಸದಸ್ಯ ತಮ್ಮಣ್ಣ ಹಂಗರಗಿ, ಹಿರಿಯ ಮುಖಂಡ ಎಸ್.ಡಿ.ಕುಮಾನಿ, ಜಿ.ಪಂ. ಮಾಜಿ ಸದಸ್ಯ ರೈತ ಮುಖಂಡ ಅಣ್ಣಪ್ಪ ಖೈನೂರ, ಪ್ರೊ. ಎ.ಎಂ.ಪಾಟೀಲ, ಇಂಡಿ, ಮತ್ತಿತರರು ಉಪಸ್ಥಿತರಿದ್ದರು. ಪೂಜಾರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT