ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಹಕ್ಕುಪತ್ರಕ್ಕಾಗಿ ಗಿರಿಜನರ ಅಲೆದಾಟ

Last Updated 23 ಫೆಬ್ರುವರಿ 2012, 10:25 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ಅನುಷ್ಠಾನಗೊಂಡಿದ್ದರೂ, ಇಂದಿಗೂ 800 ಗಿರಿಜನರಿಗೆ ಭೂ ಹಕ್ಕುಪತ್ರ ಹಾಗೂ 133 ಪೋಡುಗಳಿಗೆ ಸಮುದಾಯ ಹಕ್ಕುಪತ್ರವೇ ಸಿಕ್ಕಿಲ್ಲ!

ಅನುಸೂಚಿತ ಬುಡಕಟ್ಟುಗಳ ಮತ್ತು ಇತರೇ ಪಾರಂಪರಿಕ ಅರಣ್ಯವಾಸಿಗಳ(ಅರಣ್ಯ ಹಕ್ಕು ಮಾನ್ಯತೆ) ಕಾಯ್ದೆ 2006 ಮತ್ತು ನಿಯಮ- 2008ರ ಅನ್ವಯ ಅರಣ್ಯದಲ್ಲಿ ವಾಸಿಸುವ ಹಾಗೂ ಕಾಡಂಚಿನಲ್ಲಿರುವ ಗಿರಿಜನರಿಗೆ ಹಕ್ಕುಪತ್ರ ನೀಡುವುದು ಕಡ್ಡಾಯ. ಆದರೆ, ಕೊಳ್ಳೇಗಾಲ, ಯಳಂದೂರು ಹಾಗೂ ಚಾಮರಾಜನಗರ ತಾಲ್ಲೂಕಿನ ಪೋಡುಗಳ ಗಿರಿಜನರು ಎರಡು ತಿಂಗಳ ಹಿಂದೆಯೇ ಉಪವಿಭಾಗ ಮಟ್ಟದ ಸಮಿತಿಗೆ ಅರ್ಜಿ ಸಲ್ಲಿಸಿದ್ದರೂ, ಸಭೆ ನಡೆಸಿ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಫಲಾನುಭವಿಗಳ ಆರೋಪ.

ಗ್ರಾಮ ಅರಣ್ಯ ಹಕ್ಕು ಸಮಿತಿಯ ಒಪ್ಪಿಗೆ ಪಡೆದು ಗ್ರಾಮ ಸಭೆ ನಡೆಸಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ತಾಲ್ಲೂಕುಮಟ್ಟದಲ್ಲಿರುವ ಗಿರಿಜನ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೌಲಭ್ಯ ಕಲ್ಪಿಸಲು ನಿರ್ಲಕ್ಷ್ಯವಹಿಸಿದ್ದಾರೆ. ಯಳಂದೂರು- 30, ಕೊಳ್ಳೇಗಾಲ- 750 ಹಾಗೂ ಚಾಮರಾಜನಗರ ತಾಲ್ಲೂಕಿನ 20 ಫಲಾನುಭವಿಗಳು ಅರ್ಜಿಸಲ್ಲಿಸಿ ತಿಂಗಳು ಉರುಳಿದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಭೂ ಹಕ್ಕುಪತ್ರ ನೀಡುವ ಮೊದಲು ಜಮೀನಿನ ಸಮೀಕ್ಷೆ ನಡೆಸಬೇಕಿದೆ. ಆದರೆ, ಈ ಪ್ರಕ್ರಿಯೆ ಕೂಡ ನಡೆದಿಲ್ಲ. ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂಬುದು ಗಿರಿಜನರ ದೂರು.

ಉಪವಿಭಾಗ ಮಟ್ಟದ ಸಮಿತಿಯಲ್ಲಿ ಫಲಾನು ಭವಿಗಳ ಪಟ್ಟಿ ಅನುಮೋದನೆಗೊಂಡ ನಂತರ ಜಿಲ್ಲಾಮಟ್ಟದ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ. ಈ ಸಮಿತಿಯ ಒಪ್ಪಿಗೆ ಸಿಕ್ಕಿದ ನಂತರವಷ್ಟೇ ಅರ್ಹರಿಗೆ ಸೌಲಭ್ಯ ಸಿಗಲಿದೆ. ಆದರೆ, ಸಭೆ ನಡೆಸಿ ಜಿಲ್ಲಾ ಸಮಿತಿಗೆ ಫಲಾನುಭವಿಗಳ ಪಟ್ಟಿಯನ್ನು ಶಿಫಾರಸು ಮಾಡುವ ಕಾರ್ಯವೇ ನಡೆದಿಲ್ಲ.

ಸಮುದಾಯ ಹಕ್ಕುಪತ್ರವೂ ಇಲ್ಲ

ಕಾಯ್ದೆ ಅನ್ವಯ ಕಿರುಅರಣ್ಯ ಉತ್ಪನ್ನ ಸಂಗ್ರಹಿಸಲು ಗಿರಿಜನರಿಗೆ ಸಮುದಾಯ ಹಕ್ಕುಪತ್ರ ನೀಡಬೇಕಿದೆ. ಈ ಹಕ್ಕುಪತ್ರ ಸಿಕ್ಕಿದರೆ 28 ಕಿರುಅರಣ್ಯ ಉತ್ಪನ್ನ ಸಂಗ್ರಹಿಸಲು ಗಿರಿಜನರಿಗೆ ಅವಕಾಶ ಸಿಗಲಿದೆ.
ಇದರಲ್ಲಿ ಜೇನುತುಪ್ಪ, ಮಾಗಳಿ ಬೇರು, ಹೊಂಗೆಕಾಯಿ, ಮುತ್ತುಗದ ಎಲೆ, ಮರಪಾಚಿ, ವನಗೊನೆ ಸೊಪ್ಪು, ತಾರೆಕಾಯಿ, ಕಾಡುಮೆಣಸು, ಅಂಟುವಾಳ, ಜೇನುಮೇಣ, ಮಾವಿನಕಾಯಿ, ಮೆಣಸಿಗೆ, ಸೀಗೆಕಾಯಿ, ಅರಳೆಕಾಯಿ, ಕೆಂದೆಕಾಯಿ ಬೀಜ, ಔಷಧಿ ಗಿಡಗಳು, ನೆಲ್ಲಿಕಾಯಿ, ಅರಳೆಗಂಟು, ನೇರಳೆಹಣ್ಣು, ತಿನ್ನುವ ಸೊಪ್ಪುಗಳು, ಕಾಡುಶುಂಠಿ, ಮೇಣ, ಬೂರಗಮೊಗ್ಗು, ಕಂಚಳ ಬೀಜ, ಕಾಡು ಅರಿಸಿನ, ಕಸಪೊರಕೆ, ಬೂರದಹತ್ತಿ ಹಾಗೂ ತಿನ್ನುವ ಕಾಡಿನ ಹಣ್ಣುಗಳು ಸೇರಿವೆ.

ಎರಡರಿಂದ ಮೂರು ಪೋಡಿನಂತೆ ಒಟ್ಟು 133 ಪೋಡುಗಳಿಗೆ ಸಮುದಾಯ ಹಕ್ಕು ನೀಡಲು 79 ಸಮಿತಿ ರಚಿಸಲಾಗಿದೆ. ಆದರೆ, ಸಮಿತಿಗಳಿಗೂ ಮಾನ್ಯತೆ ಸಿಕ್ಕಿಲ್ಲ.

1,516 ಮಂದಿಗೆ ಹಕ್ಕುಪತ್ರ

ಕಳೆದ ವರ್ಷ ಜಿಲ್ಲಾಡಳಿತದಿಂದ ಗಿರಿಜನರಿಗೆ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿತು. ಪ್ರಥಮ ಹಂತದಲ್ಲಿ 2,146 ಅರ್ಜಿ ಸ್ವೀಕರಿಸಿ ಒಟ್ಟು 1,516 ಗಿರಿಜನರಿಗೆ ಭೂ ಹಕ್ಕುಪತ್ರ ಹಾಗೂ 25 ಸಮುದಾಯ ಹಕ್ಕುಪತ್ರ ವಿತರಿಸಲಾಗಿದೆ.

ಯಳಂದೂರು- 97, ಚಾಮರಾಜನಗರ- 409, ಗುಂಡ್ಲುಪೇಟೆ- 18 ಹಾಗೂ ಕೊಳ್ಳೇಗಾಲ ತಾಲ್ಲೂಕಿನ 992 ಗಿರಿಜನರಿಗೆ ಭೂ ಹಕ್ಕುಪತ್ರ ನೀಡಲಾಗಿದೆ. ಒಟ್ಟು 2,481.78 ಎಕರೆ ಜಮೀನು ವಿತರಿಸಲಾಗಿದೆ. ಯಳಂದೂರಿನ 8 ಮತ್ತು ಚಾಮರಾಜನಗರ ತಾಲ್ಲೂಕಿನ 17 ಸಮಿತಿಗಳಿಗೆ ಮಾತ್ರವೇ ಸಮುದಾಯ ಹಕ್ಕುಪತ್ರ ಸಿಕ್ಕಿದೆ. ಹೀಗಾಗಿ, ಉಳಿದ ಪೋಡಿನ ಗಿರಿಜನರು ತೊಂದರೆ ಅನುಭವಿಸುವಂತಾಗಿದೆ.

`ಉಪವಿಭಾಗ ಮಟ್ಟದ ಸಮಿತಿಯಿಂದ ಶಿಫಾರಸು ಮಾಡಿದ ಅರ್ಜಿಗಳನ್ನು ಜಿಲ್ಲಾ ಸಮಿತಿಯಲ್ಲಿ ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಸದ್ಯಕ್ಕೆ ಜಿಲ್ಲಾಮಟ್ಟದಲ್ಲಿ ಯಾವುದೇ ಅರ್ಜಿ ಬಾಕಿ ಉಳಿದಿಲ್ಲ. ಉಪವಿಭಾಗ ಮಟ್ಟದಿಂದ ಫಲಾನುಭವಿಗಳ ಪಟ್ಟಿ ಬಂದಿಲ್ಲ. ಅಲ್ಲಿಂದ ಅರ್ಜಿಗಳು ಬಂದ ನಂತರವಷ್ಟೇ ಜಿಲ್ಲಾ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆದು ಅರ್ಹ ಗಿರಿಜನರಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ~ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಗರತ್ನಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT