ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಹಗರಣ: ಗೃಹ ಸಚಿವ ಆಶೋಕ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ

Last Updated 20 ಅಕ್ಟೋಬರ್ 2011, 11:25 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದ್ದ ಭೂಮಿಯನ್ನು ಕಾನೂನುಬಾಹಿರವಾಗಿ ಖರೀದಿಸಿ, ನಂತರ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಮೂಲಕ ಸರ್ಕಾರಿ ಬೊಕ್ಕಸಕ್ಕೆ ಅಂದಾಜು 50 ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಆರ್. ಅಶೋಕ್ ವಿರುದ್ಧ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಗುರುವಾರ ಆಜ್ಞಾಪಿಸಿದೆ.

ಆರ್.ಅಶೋಕ ವಿರುದ್ಧ ಜಯಕುಮಾರ್ ಹಿರೇಮಠ ಅವರು ದಾಖಲಿಸಿದ್ದ ಖಾಸಗಿ ದೂರನ್ನು ಅಂಗೀಕರಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ಅಶೋಕ ಅವರಿಂದ ಕಾನೂನು ಉಲ್ಲಂಘನೆ, ಅಕ್ರಮ ಡಿನೋಟಿಫಿಕೇಷನ್, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ  ತನಿಖೆಗೆ ಆದೇಶ ನೀಡಿದರು. ಪ್ರಕರಣದ ಬಗ್ಗೆ ಬುಧವಾರ ದೂರು ಸ್ವೀಕರಿಸಿದ್ದ ನ್ಯಾಯಾಧೀಶರು ಈ ಬಗ್ಗೆ ತೀರ್ಮಾನಿಸಲು ಈದಿನವನ್ನು ನಿಗದಿ ಪಡಿಸಿದ್ದರು.

ನಗರದ ಲೊಟ್ಟೆಗೊಲ್ಲಹಳ್ಳಿಯ ಎರಡು ಪ್ರತ್ಯೇಕ ಸರ್ವೆ ನಂಬರ್‌ಗಳ 23 ಗುಂಟೆ ಭೂಮಿಯನ್ನು ಖರೀದಿಸಿ, ನಂತರ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಪಡೆದ ಆರೋಪ ಈ ದೂರಿನಲ್ಲಿದೆ. ಹಿಂದೆ ಇದೇ ಆರೋಪದ ಮೇಲೆ ವಿಜಯನಗರದ ಮಂಜುನಾಥ್ ಎಂಬುವರು ಅಶೋಕ ವಿರುದ್ಧ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ` (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಕೆಲ ದಿನಗಳಲ್ಲೇ ದೂರನ್ನು ಹಿಂದಕ್ಕೆ ಪಡೆದಿದ್ದರು. ಎರಡನೇ ಬಾರಿ ದೂರು ದಾಖಲಾಗಿದೆ.

ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಅವರೊಂದಿಗೆ ಬುಧವಾರ ಬೆಳಿಗ್ಗೆ ವಿಶೇಷ ನ್ಯಾಯಾಲಯಕ್ಕೆ ಬಂದ ಹಿರೇಮಠ, 17 ಪುಟಗಳ ದೂರು ಮತ್ತು 30 ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದ್ದರು.

ಅಶೋಕ ಅವರನ್ನು ಮೊದಲನೇ ಆರೋಪಿಯನ್ನಾಗಿ ದೂರಿನಲ್ಲಿ ಹೆಸರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡನೇ ಆರೋಪಿ. ಅಶೋಕ ಖರೀದಿಸಿದ ಭೂಮಿ ಮೂಲ ಮಾಲೀಕರಾದ ಶಾಮಣ್ಣ ಮತ್ತು ರಾಮಸ್ವಾಮಿ ಅವರನ್ನು ಮೂರನೇ, ನಾಲ್ಕನೇ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ರಾಜಮಹಲ್ ವಿಲಾಸ ಎರಡನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು, ಭೂಮಿ ಸಂಪೂರ್ಣವಾಗಿ ಪ್ರಾಧಿಕಾರದ ವಶದಲ್ಲಿತ್ತು.

ಆದರೆ, ಸತ್ಯಾಂಶವನ್ನು ಮರೆಮಾಚಿ ಅಶೋಕ ಅವರು ಲೊಟ್ಟೆಗೊಲ್ಲಹಳ್ಳಿಯ ಸರ್ವೆ ನಂಬರ್ 10/1ರ ಒಂಬತ್ತು ಗುಂಟೆ ಮತ್ತು 10/11 ಎಫ್‌ನ 14 ಗುಂಟೆಯನ್ನು ಖರೀದಿಸಿದ್ದರು. 2003 ಮತ್ತು 2007ರಲ್ಲಿ ಕಾನೂನುಬಾಹಿರವಾಗಿ ಒಟ್ಟು 23 ಗುಂಟೆ ಭೂಮಿಯನ್ನು ಖರೀದಿಸಲಾಗಿತ್ತು ಎಂಬ ಆರೋಪ ದೂರಿನಲ್ಲಿದೆ.

`ಬಿಜೆಪಿ ಸರ್ಕಾರದಲ್ಲಿ  ಪ್ರಭಾವಿ ಸಚಿವರಾದ ಅಶೋಕ ಅವರು ಭೂಮಿಯ ಮೂಲ ಮಾಲೀಕರಾದ ಶಾಮಣ್ಣ ಮತ್ತು ರಾಮಸ್ವಾಮಿ ಅವರ ಹೆಸರಿನಲ್ಲಿ 2009ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ, ಲೊಟ್ಟೆಗೊಲ್ಲಹಳ್ಳಿಯ 23 ಗುಂಟೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿದ್ದರು. ಅದರ ಆಧಾರದಲ್ಲೇ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದರು` ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸುತ್ತಮುತ್ತ ಬಿಡಿಎ ಅಭಿವೃದ್ಧಿಪಡಿಸಿದ ಸ್ವತ್ತುಗಳು ಇರುವ ಪ್ರದೇಶದಲ್ಲಿ ಅಶೋಕ ಅವರು ಕಾನೂನುಬಾಹಿರವಾಗಿ ಭೂಮಿ ಖರೀದಿಸಿ, ನಂತರ ಅದನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಪಡೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT