ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಕೊಡದಿರಲು ಪ್ರತಿಜ್ಞೆ

ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಸ್ಥಳೀಯರ ಪ್ರತಿಭಟನೆ
Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ಮಂಗಳೂರು: ತಾಲ್ಲೂಕಿನ ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬೃಹತ್ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಸ್ಥಳೀಯರು ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.

`ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿ ಸ್ಥಾಪಿಸಲಾಗಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಆಗಿರುವ ಹಾನಿ ನಮ್ಮ ಕಣ್ಣ ಮುಂದಿದೆ. ಅದಕ್ಕಿಂತ ನಾಲ್ಕು ಪಟ್ಟು ದೊಡ್ಡದಾದ ಇನ್ನೊಂದು ಸ್ಥಾವರ ಇಲ್ಲಿ ನಿರ್ಮಾಣಗೊಳ್ಳಲು ಬಿಡುವುದಿಲ್ಲ, ಭೂ ಸ್ವಾಧೀನಕ್ಕಾಗಿ ಮುಂದಿಡುವ ಯಾವುದೇ ಆಮಿಷಗಳಿಗೂ ಬಲಿ ಬೀಳುವುದಿಲ್ಲ' ಎಂದು ಊರವರು ಒಕ್ಕೊರಲ ಪ್ರತಿಜ್ಞೆ ಮಾಡಿದರು.

ಯೋಜನೆಯ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. ಆದರೆ ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ನಿಡ್ಡೋಡಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಈ ಭಾಗದ ಜನಪ್ರತಿಧಿಗಳು, ಅಧಿಕಾರಿಗಳು ಸಹ ತಮ್ಮಲ್ಲಿ ಮಾಹಿತಿ ಇಲ್ಲ ಎಂಬ ಉತ್ತರ ನೀಡುತ್ತಿರುವುದರಿಂದ ಸರ್ಕಾರದ ಗಮನ ಸೆಳೆಯಲು ಮತ್ತು ಯೋಜನೆಗೆ ಆರಂಭದಲ್ಲೇ ಸ್ಥಳೀಯರ ವಿರೋಧ ಇದೆ ಎಂಬುದನ್ನು ತೋರಿಸಲು ಈ ಉಪವಾಸ ಸತ್ಯಾಗ್ರಹ ನಡೆಯಿತು.

ನಿಡ್ಡೋಡಿಯಂತಹ ಸಣ್ಣ ಊರಿನಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಮಳೆಯಲ್ಲೂ ಜಮಾಯಿಸಿ ಒಗ್ಗಟ್ಟು ಪ್ರದರ್ಶಿಸಿ, ಯೋಜನೆಯ ವಿರುದ್ಧ ಘೋಷಣೆ ಕೂಗಿದರು. ಯೋಜನೆಯನ್ನು ವಿರೋಧಿಸಿ ಮುಖ್ಯಮಂತ್ರಿ ಅವರಿಗೆ ಸಾಮೂಹಿಕವಾಗಿ ಪತ್ರ ಬರೆಯುವ ಚಳವಳಿಯೂ ಜತೆಯಲ್ಲೇ ನಡೆಯಿತು.

`ಮಾತೃಭೂಮಿ ಸಂರಕ್ಷಣಾ ಸಮಿತಿ' ನೇತೃತ್ವದಲ್ಲಿ ಈ ಸತ್ಯಾಗ್ರಹ ನಡೆಯಿತು. ನಿಡ್ಡೋಡಿ, ಕಲ್ಲಮುಡ್ಕೂರು ಮಾತ್ರವಲ್ಲದೆ, ಸುತ್ತಮುತ್ತಲಿನ ಮುಚ್ಚೂರು, ತೆಂಕ ಎಡಪದವು, ಬಡಗ ಎಡಪದವು, ತೆಂಕಮಿಜಾರು, ಬಡಗಮಿಜಾರು, ಪಾಲಡ್ಕ-ಪುತ್ತಿಗೆ, ನೀರುಡೆ, ಕಿನ್ನಿಗೋಳಿ, ಕಟೀಲು ಸಹಿತ ಎಲ್ಲಾ ಗ್ರಾಮಗಳಿಂದಲೂ ಜನ ತಂಡೋಪತಂಡವಾಗಿ ಬಂದು ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದರು. ಅಂಗಡಿ  ಮುಂಗಟ್ಟುಗಳನ್ನು ಮುಚ್ಚಲಾಗಿತ್ತು, ಬಸ್ ಸಂಚಾರ ಸ್ಥಗಿತಗೊಂಡಿತ್ತು.

ಸಂಸದ ನಳಿನ್ ಕುಮಾರ್ ಕಟೀಲ್, ಎಲ್ಲಾ ಪಕ್ಷಗಳ ಸ್ಥಳೀಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬೆಳಿಗ್ಗೆ ಸ್ಥಳಕ್ಕೆ ಬಂದ ಸಚಿವ ಅಭಯಚಂದ್ರ ಜೈನ್ ಅವರು ಯೋಜನೆಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ನಿರ್ಗಮಿಸಿದರು.

ರಸ್ತೆಯಲ್ಲಿ ಕುಳಿತು ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ಚದುರಿಸಿದರು. `ಇಂದಿನದು ಶಾಂತಿಯುತ ಪ್ರತಿಭಟನೆ, ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುವುದು ನಿಶ್ಚಿತ, ಸರ್ಕಾರ ತಕ್ಷಣ ತನ್ನ ನಿರ್ಧಾರವನ್ನು ಹಿಂಪಡೆಯಬೇಕು' ಎಂಬ ಎಚ್ಚರಿಕೆಯನ್ನು ಪ್ರತಿಭಟನಕಾರರು ನೀಡಿದರು.

ಏನಿದು ಯೋಜನೆ
ಮಂಗಳೂರಿನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ನಿಡ್ಡೋಡಿಯಲ್ಲಿ ಸುಮಾರು 700 ಎಕರೆಯಷ್ಟು ಸರ್ಕಾರಿ ಭೂಮಿ ಇದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಹಲವು ರಾಜ್ಯಗಳಲ್ಲಿ ಸ್ಥಾಪಿಸಲಿರುವ 4 ಸಾವಿರ ಮೆಗಾವಾಟ್ ಸಾಮರ್ಥ್ಯದ ಬೃಹತ್ ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ ಒಂದು ಯೋಜನೆಯನ್ನು ಇಲ್ಲಿ ಸ್ಥಾಪಿಸುವ ಪ್ರಸ್ತಾಪವೇ ವಿವಾದದ ಕೇಂದ್ರ ಬಿಂದು.

ಕಲ್ಲಿದ್ದಲು ಸಾಗಣೆಗೆ ಬಂದರು ಸಮೀಪದಲ್ಲೇ ಇರಬೇಕು ಎಂಬ ಕಾರಣಕ್ಕೆ ನಿಡ್ಡೋಡಿಯನ್ನು ಆಯ್ಕೆ ಮಾಡಿದಂತಿದ್ದು, ಸ್ಥಳೀಯ ಮಟ್ಟದಲ್ಲಿ ಯಾವ ಮಾಹಿತಿಯೂ ಇಲ್ಲ.

ಯೋಜನೆಗಾಗಿ 8 ಸಾವಿರ ಎಕರೆ ಜಮೀನಿನ ಅಗತ್ಯ ಇದೆ, ನಿಡ್ಡೋಡಿ, ಕಲ್ಲಮುಡ್ಕೂರು, ತೆಂಕಮಿಜಾರು, ಬಡಗಮಿಜಾರು ಗ್ರಾಮಗಳಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಗೊಳ್ಳಲಿದ್ದು, ಈ ಯೋಜನೆಯಿಂದ ಸುತ್ತಮುತ್ತಲಿನ ಮುಚ್ಚೂರು, ನೀರುಡೆ, ಕಟೀಲು, ಕಿನ್ನಿಗೋಳಿ, ಎಡಪದವು, ಬಡಗ ಎಡಪದವು, ಪುತ್ತಿಗೆ ಭಾಗದಲ್ಲಿ ವ್ಯಾಪಕ ಹಾನಿ ಉಂಟಾಗಲಿದೆ ಎಂಬ ಆತಂಕ ನೆಲೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT