ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭೂಮಿ ಹಬ್ಬ'ದಲ್ಲಿ ಭೂಮ್ತಾಯಿಗೆ ನಮನ

Last Updated 21 ಏಪ್ರಿಲ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: ಹಾಡು, ಕುಣಿತಗಳೊಂದಿಗೆ ಭೂಮಿ ತಾಯಿಯ ಹುಟ್ಟುಹಬ್ಬ ಭಾನುವಾರ ವಿಶಿಷ್ಟ ರೀತಿಯಲ್ಲಿ ನಡೆಯಿತು. `ಬೆಳಗಾಗ ನಾನೆದ್ದು ಯಾರ‌್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ' ಎಂದು `ಭೂಮ್ತಾಯಿ'ಯನ್ನು ಸ್ಮರಿಸಿಕೊಳ್ಳಲಾಯಿತು. ಭೂಮಿಗೆ ಒದಗಿರುವ ಆಪತ್ತುಗಳ ಬಗ್ಗೆ ಹಾಗೂ ಮುಂದಿನ ಪೀಳಿಗೆಗೂ ಈ ತಾಯಿಯ ಮಡಿಲನ್ನು ಸುರಕ್ಷಿತವಾಗಿರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಸರ ಪ್ರೇಮಿಗಳು ಚರ್ಚೆ ನಡೆಸಿದರು.

ಇದೆಲ್ಲ ನಡೆದದ್ದು ಗ್ರೀನ್ ಪಾತ್ ಸಂಸ್ಥೆಯು ಆರ್‌ಎಂವಿ ಎರಡನೇ ಹಂತದ ಸಾವಯವ ಮಳಿಗೆಯಲ್ಲಿ ವಿಶ್ವ ಭೂ ದಿನದ ಅಂಗವಾಗಿ ಆಯೋಜಿಸಿದ್ದ `ಭೂಮಿಹಬ್ಬ'ದಲ್ಲಿ.

ನಾದಂ ತಂಡದ ಸದಸ್ಯರು ನೃತ್ಯದ ಮೂಲಕ ಭೂಮಿ ತಾಯಿಗೆ ನಮನ ಸಲ್ಲಿಸಿದರು. ಜಂಬೆ ಬಾಲು ತಂಡದವರು ಹುಲಿ ವೇಶದ ಮೂಲಕ ಮತ್ತು ಭೂಮಿ ಬಳಗದ ಸದಸ್ಯರು ಹಸಿರು ಗೀತೆಗಳನ್ನು ಹಾಡುವ ಮೂಲಕ ಭೂಮಿಹಬ್ಬಕ್ಕೆ ಮೆರಗು ತಂದರು.

ನಂತರ ಮಾತನಾಡಿದ ಪರಿಸರವಾದಿ ಸುರೇಶ್ ಹೆಬ್ಳೀಕರ್, `ಅತಿಯಾದ ನಗರೀಕರಣದಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರಿಗೆ ಅದರ ಬೆಳವಣಿಗೆಯೇ ಕಂಟಕ. ನಗರದಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚಾಗಲೂ ಇದೇ ಮುಖ್ಯ ಕಾರಣ' ಎಂದು ಅಭಿಪ್ರಾಯಪಟ್ಟರು.

`ಪ್ರಸ್ತುತ ದಿನಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ನೀಡಬೇಕಿದೆ. ಸಾವಯವ ಕೃಷಿಯ ಬಗ್ಗೆ ಜನತೆ ಒಲವು ತೋರಬೇಕಿದೆ. ಸಾವಯವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಕೊಳ್ಳುವ ಮೂಲಕ ಪರಿಸರ ಸ್ನೇಹಿಯಾದ ಈ ಕೃಷಿ ಪದ್ಧತಿಯನ್ನು ಬೆಳೆಸಬೇಕು' ಎಂದರು.

ಸಂಗೀತ ವಿದುಷಿ ಡಾ.ಶ್ಯಾಮಲಾ ಜಿ. ಭಾವೆ ಮಾತನಾಡಿ, `ಭೂಮಿಯನ್ನು ತಾಯಿ ಎಂದು ಪೂಜಿಸುವುದು ನಮ್ಮ ಸಂಸ್ಕೃತಿ. ಆದರೆ, ಆಧುನಿಕತೆಯ ಪ್ರಭಾವದಿಂದ ಈ ಭಾವನೆ ಜನ ಮಾನಸದಿಂದ ದೂರಾಗುತ್ತಿದೆ. ಭೂಮಿ ತಾಯಿಯ ಋಣವನ್ನು ನಾವು ಮರೆಯಬಾರದು. ನಮ್ಮ ಉಳಿವಿಗೆ ಭೂಮಿಯೇ ಆಧಾರ. ಭೂಮಿಯನ್ನೇ ನಾವು ನಾಶ ಮಾಡುತ್ತಾ ಹೋದರೆ, ಅದು ನಮ್ಮ ವಿನಾಶಕ್ಕೆ ದಾರಿಯಾಗುತ್ತದೆ' ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಸಂಚಾರ ಸಾವಯವ ಮಳಿಗೆಗೆ ಚಾಲನೆ ನೀಡಲಾಯಿತು. `ಸಾವಯವ ಉತ್ಪನ್ನಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚಾಗಿದೆ. ಆದರೆ, ಪೂರೈಕೆ ಸಮರ್ಪಕವಾಗಿಲ್ಲ. ಹೀಗಾಗಿ ನಗರದಲ್ಲಿ ಆರು ವರ್ಷಗಳ ಹಿಂದೆ ಸಾವಯವ ಮಳಿಗೆಯನ್ನು ತೆರೆಯಲಾಯಿತು. ಈಗ ಸಾವಯವ ಉತ್ಪನ್ನಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸಂಚಾರ ಮಳಿಗೆಯನ್ನು ಆರಂಭಿಸಲಾಗಿದೆ' ಎಂದು ಸಂಸ್ಥೆಯ ಸ್ಥಾಪಕ ಎಚ್.ಆರ್.ಜಯರಾಮ್ ತಿಳಿಸಿದರು.

ಸಂಚಾರ ಸಾವಯವ ಮಳಿಗೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 99009 11777

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT