ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಷಣ್ ಹೇಳಿಕೆ: ಅಣ್ಣಾ ದೂರ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಳೇಗಣ ಸಿದ್ಧಿ/ ನವದೆಹಲಿ, (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತಗಣನೆ ನಡೆಸುವಂತೆ ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ತಮ್ಮ ತಂಡದ ನಿಲುವಲ್ಲ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸ್ಪಷ್ಟಪಡಿಸಿದ್ದಾರೆ.

ಪ್ರಶಾಂತ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ತಂಡದ ಯಾರನ್ನೂ ಸಂಪರ್ಕಿಸಿರಲಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯವಾದ ಕಾರಣ ಯಾರ ಅನುಮತಿಯೂ ಅಗತ್ಯ ಇಲ್ಲ. ಹೀಗಾಗಿ ಅವರ ವ್ಯಕ್ತಿಗತ ಅಭಿಪ್ರಾಯಗಳಿಗೆ ತಂಡ ಯಾವ ರೀತಿಯಲ್ಲೂ ಹೊಣೆಯಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ. ಕಣಿವೆ ರಾಜ್ಯದ ಬಗ್ಗೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಯಾವ ರೀತಿಯಲ್ಲೂ ಸಮರ್ಥಿನೀಯವಲ್ಲ. ತಂಡ ಈ ಅಭಿಪ್ರಾಯಗಳನ್ನು ಸುತಾರಾಂ ಒಪ್ಪಲು ಸಾಧ್ಯವಿಲ್ಲ ಎಂದು ಅಣ್ಣಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದ್ದು, ಮುಂದೆಯೂ ಅದು ಭಾರತದ ಭಾಗವಾಗಿಯೇ ಉಳಿಯಬೇಕು. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದನ್ನು ನಾವು ಮಾಡುತ್ತೇವೆ. ಕಾಶ್ಮೀರಕ್ಕಾಗಿ ಏನು ಬೇಕೋ ಅದನ್ನು ಪ್ರಶಾಂತ್ ಮಾಡಲಿ. ಆದರೆ, ವಿವಾದದ ಕುರಿತು ಆರಂಭವಾಗಿರುವ ಮತಿಹೀನ ಚರ್ಚೆಗಳು ಕೂಡಲೇ ನಿಲ್ಲಲಿ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಶಾಂತ್ ತಂಡದಲ್ಲಿ ಮುಂದುವರಿಯುವರೇ ಅಥವಾ ಇಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಸ್ವಗ್ರಾಮ ರಾಳೇಗಣ ಸಿದ್ಧಿಯಲ್ಲಿ ಉತ್ತರಿಸಿದ ಅಣ್ಣಾ, `ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ವಿಷಯವನ್ನು ನಂತರ ನಿರ್ಧರಿಸಲಿದ್ದೇವೆ~ ಎಂದುತಿಳಿಸಿದರು.

 `ಪ್ರಶಾಂತ್ ಅವರನ್ನು ತಂಡದಿಂದ ಕೈಬಿಡುವಂತೆ ಅಣ್ಣಾ ಎಂದೂ ಸೂಚಿಸಿಲ್ಲ~ ಎಂದು ತಂಡದ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಮಾಜಿ ಐಪಿಎಸ್ ಅಧಿಕಾರಿ ಮತ್ತು ತಂಡದ ಮತ್ತೊಬ್ಬ ಸದಸ್ಯೆ ಕಿರಣ್ ಬೇಡಿ, ಅಣ್ಣಾ ಅವರ ಅಭಿಪ್ರಾಯವನ್ನೇ ಪುನರುಚ್ಚರಿಸಿದ್ದಾರೆ. ಈ ಮೊದಲು ತಂಡದಲ್ಲಿದ್ದ ಸ್ವಾಮಿ ಅಗ್ನಿವೇಶ್, ಜಮ್ಮು ಮತ್ತು ಕಾಶ್ಮೀರದ ಏಕತೆ ಮತ್ತು ಅಖಂಡ ಭಾರತದ ಪರ ಧ್ವನಿ ಎತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಎಲ್ಲ ರಾಜಕೀಯ ಪಕ್ಷಗಳೂ ಒಗ್ಗಟ್ಟಾಗಿ ಕ್ರಿಯಾ ಯೋಜನೆ ರೂಪಿಸಬೇಕು, ಅದೇ ಕಾಲಕ್ಕೆ ಕಣಿವೆ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಹಲ್ಲೆಕೋರರಿಗೆ ಜಾಮೀನು
ಪ್ರಶಾಂತ್ ಭೂಷಣ್ ಅವರ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳಿಗೆ ದೆಹಲಿಯ ಮೆಟ್ರೊಪಾಲಿಟನ್ ನ್ಯಾಯಾಲಯ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ. ಶ್ರೀರಾಮ ಸೇನೆಯ ದೆಹಲಿ ಅಧ್ಯಕ್ಷ ಇಂದ್ರ ವರ್ಮ ಮತ್ತು ಭಗತ್ ಸಿಂಗ್ ಸೇನಾದ ಕಾರ್ಯಕರ್ತರಾದ ವಿಷ್ಣು ಗುಪ್ತ, ತೇಜೇಂದ್ರ ಪಾಲ್ ಸಿಂಗ್ ಬಗ್ಗಾ ಅವರಿಗೆ ತಲಾ 25 ಸಾವಿರ ರೂಪಾಯಿ ವೈಯಕ್ತಿಕ ಭದ್ರತಾ ಠೇವಣಿ (ಬಾಂಡ್) ಮೇಲೆ ಜಾಮೀನು ನೀಡಲಾಗಿದೆ.

ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಸುಪ್ರೀಂಕೋರ್ಟ್ ಆವರಣ ಪ್ರವೇಶಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇದೇ ವೇಳೆ ತಳ್ಳಿಹಾಕಿದೆ.

ಠಾಕ್ರೆ ಶಹಬ್ಬಾಸ್‌ಗಿರಿ!
ಮುಂಬೈ (ಐಎಎನ್‌ಎಸ್): ಪ್ರಶಾಂತ್ ಅವರ ಮೇಲೆ ಹಲ್ಲೆ ನಡೆಸಿದ ಯುವಕರನ್ನು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅಭಿನಂದಿಸಿದ್ದಾರೆ. ಹಲ್ಲೆ ನಡೆಸಿದವರಿಗೆ ಶಹಬ್ಬಾಸ್‌ಗಿರಿ ಕೂಡಾ ನೀಡಿದ್ದಾರೆ. `ದೇಶವನ್ನು ಒಡೆಯುವ ಬಗ್ಗೆ ಮಾತನಾಡುವವರಿಗೆ ಇದೇ ರೀತಿ ಪಾಠ ಕಲಿಸಬೇಕು~ ಎಂದು ಅವರು ಪಕ್ಷದ ಮುಖವಾಣಿ `ಸಾಮ್ನಾ~ದಲ್ಲಿ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹಲ್ಲೆಗೂ ಮುನ್ನ ಭೂಷಣ್‌ಗೆ ಪತ್ರ
ನವದೆಹಲಿ, (ಐಎಎನ್‌ಎಸ್): ಜಮ್ಮು ಮತ್ತು ಕಾಶ್ಮೀರ ಕುರಿತು ವ್ಯಕ್ತಪಡಿಸಿರುವ ನಿಲುವನ್ನು ಬದಲಿಸಿಕೊಳ್ಳುವಂತೆ ಆರೋಪಿಗಳು, ಹಲ್ಲೆ ನಡೆಸುವ ಕೆಲ ಗಂಟೆಗಳ ಮುಂಚೆ ಪ್ರಶಾಂತ್ ಭೂಷಣ್ ಅವರಿಗೆ ಪತ್ರ ಬರೆದಿದ್ದರು. ಈ ವಿಷಯವನ್ನು ಹಲ್ಲೆ ನಡೆಸಿದ ಯುವಕ ಬಹಿರಂಗ ಪಡಿಸಿದ್ದಾನೆ. 

ಈ ಪತ್ರದ ಪ್ರತಿಯನ್ನು ಶುಕ್ರವಾರ ಬಿಡುಗಡೆ ಮಾಡಿದ ಶ್ರೀರಾಮ ಸೇನೆಯ ದೆಹಲಿ ಘಟಕದ ಅಧ್ಯಕ್ಷ ಇಂದ್ರ ವರ್ಮ, ಕಾಶ್ಮೀರ ಕುರಿತಾದ ನಿಲುವನ್ನು ಸ್ಪಷ್ಟಪಡಿಸುವಂತೆ ಭೂಷಣ್ ಅವರನ್ನು ಕೋರಿದ್ದಾರೆ.

`ಮಾಜಿ ಕಾನೂನು ಸಚಿವರ ಪುತ್ರರಾಗಿರುವ ನಿಮ್ಮ ಭಾರತ ವಿರೋಧಿ ನಿಲುವುಗಳಿಂದ ಮನಸ್ಸಿಗೆ ಘಾಸಿಯಾಗಿದೆ. ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾರೋ ನಿಮ್ಮ ದಾರಿ ತಪ್ಪಿಸಿದಂತಿದೆ. ನಿಮ್ಮ ನಿಲುವನ್ನು ಬದಲಿಸಿಕೊಳ್ಳಿ~ ಎಂಬ ಒಕ್ಕಣೆ ಅದರಲ್ಲಿದೆ. ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ ತಂಡದ ಸದಸ್ಯರೊಬ್ಬರ ಹೇಳಿಕೆ ಮಾತ್ರ ನೋವು ತಂದಿದೆ ಎಂದು ವರ್ಮ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಆರ್‌ಎಸ್‌ಎಸ್ ಬಹಿರಂಗ ಬೆಂಬಲ
ಗೋರಖ್‌ಪುರ, (ಪಿಟಿಐ): ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸಿರುವ ಹೋರಾಟಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಬಹಿರಂಗವಾಗಿ ಬೆಂಬಲ ಘೋಷಿಸಿದೆ.

ಭ್ರಷ್ಟಾಚಾರದ ವಿರುದ್ಧ ಯಾವುದೇ ವ್ಯಕ್ತಿ, ಸಂಘಟನೆ ಹೋರಾಟ ನಡೆಸಿದರೂ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಶುಕ್ರವಾರ ಇಲ್ಲಿ ಆರಂಭವಾದ ಸಂಘದ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಚಾರಕ ಪ್ರಮುಖ ಮನಮೋಹನ್ ವೈದ್ಯ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಆರೋಪಕ್ಕೆ ಪ್ರತಿಯಾಗಿ ಸ್ಪಷ್ಟನೆ ನೀಡಿದ್ದ ಅಣ್ಣಾ, ಆರ್‌ಎಸ್‌ಎಸ್ ತಮ್ಮ ಹೋರಾಟವನ್ನು ಬೆಂಬಲಿಸಿಲ್ಲ ಎನ್ನುವ ಮೂಲಕ ಸಂಘದಿಂದ ಅಂತರ ಕಾಪಾಡಿಕೊಳ್ಳಲು ಮುಂದಾಗಿದ್ದರು. ಅದರ ಬೆನ್ನಲ್ಲೇ ಸಂಘದ ಈ ಹೇಳಿಕೆ ಹೊರಬಿದ್ದಿದೆ.

ಕಾಶ್ಮೀರ ಭಾರತದ ಅಂಗ ಎಂಬ ಸಂಘದ ನಿಲುವು ಅಚಲ. ಆದರೆ, ಈ ವಿಷಯವಾಗಿ ಅಣ್ಣಾ ತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ವೈದ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT