ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರನ್ನು ಶಿಕ್ಷಿಸಲು ಕಾನೂನು ತಿದ್ದುಪಡಿ ಅಗತ್ಯ

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ದತ್ತು ಸಲಹೆ
Last Updated 10 ಜನವರಿ 2014, 19:54 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದ ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ವಿಚಾರಣೆಗೆ ಸರ್ಕಾರ ನಿಗದಿತ ಗಡುವಿನೊಳಗೆ ಅನುಮತಿ ನೀಡದಿದ್ದರೆ, ಆ ಬಳಿಕ ತನಿಖಾ ಸಂಸ್ಥೆ ನೇರವಾಗಿ ಆರೋಪಪಟ್ಟಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಪ್ರತಿಪಾದಿಸಿದರು.

ಲೋಕಾಯುಕ್ತ ಕಚೇರಿಯಲ್ಲಿ ಶುಕ್ರವಾರ ನಡೆದ ‘ಲೋಕಾಯುಕ್ತ ದಿನ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಭ್ರಷ್ಟಾ­ಚಾರದ ಆರೋಪ ಹೊತ್ತವರ ವಿರುದ್ಧ ಸಕ್ಷಮ ಪ್ರಾಧಿಕಾರಗಳು ಮೂರು ತಿಂಗಳೊಳಗೆ ವಿಚಾರಣೆಗೆ ಅನುಮತಿ ನೀಡಬೇಕೆಂದು ಸುಪ್ರೀಂ­ಕೋರ್ಟ್‌ ಮಾರ್ಗಸೂಚಿ ರೂಪಿಸಿದೆ.

ಆದರೂ, ನಿಗದಿತ ಗಡುವಿನೊಳಗೆ ವಿಚಾರಣೆಗೆ ಅನುಮತಿ ನೀಡದಿರುವ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ಗಮನಿಸಿದ್ದೇನೆ. ಮೂರು ತಿಂಗಳ ಬಳಿಕವೂ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ದೊರೆಯದಿದ್ದರೆ, ನೇರವಾಗಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಬೇಕಿದೆ. ಅದಕ್ಕೆ ಪೂರಕವಾಗಿ ಕಾನೂನು ತಿದ್ದುಪಡಿ ತರಬೇಕು’ ಎಂದರು.

ಲೋಕಾಯುಕ್ತ ಕಡ್ಡಾಯವಾಗಲಿ: ಈಗ ದೇಶದ 19 ರಾಜ್ಯಗಳಲ್ಲಿ ಮಾತ್ರ ದುರಾಡಳಿತ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ವ್ಯವಸ್ಥೆ ಇದೆ. ಒಡಿಶಾದಲ್ಲಿ ಲೋಕಾಯುಕ್ತವನ್ನು ಅಸ್ತಿತ್ವಕ್ಕೆ ತಂದು, ಅಷ್ಟೇ ವೇಗದಲ್ಲಿ ಮುಚ್ಚಲಾಯಿತು. ಹರಿಯಾಣದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ವಿಸರ್ಜಿಸುವ ಸುಗ್ರೀವಾಜ್ಞೆ ರಾತ್ರೋರಾತ್ರಿ ಜಾರಿಗೆ ಬಂತು. ಪಂಜಾಬ್‌ನಲ್ಲೂ ಸುಗ್ರೀವಾಜ್ಞೆ ಮೂಲಕ ಲೋಕಾಯುಕ್ತವನ್ನು ಮುಚ್ಚಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಲೋಕಾಯುಕ್ತ ಸಂಸ್ಥೆಯು ಯಾವಾಗಲೂ ದೂರುದಾರರು ಮತ್ತು ಆಪಾದಿತ ಸಾರ್ವಜನಿಕ ಸೇವಕರ ನಡುವೆ ವಕೀಲನಂತೆ ಕೆಲಸ ಮಾಡಬೇಕು. ಎಲ್ಲ ಪ್ರಕರಣಗಳಲ್ಲೂ ಏಕಾಏಕಿ ತೀರ್ಪಿನ ರೂಪದ ನಿರ್ಣಯ ಕೈಗೊಳ್ಳಬಾರದು. ಎಲ್ಲ ಪ್ರಯತ್ನಗಳೂ ವಿಫಲವಾದರೆ ಮಾತ್ರ ತೀರ್ಪಿನ ರೂಪದ ನಿರ್ಣಯ ಕೈಗೊಳ್ಳಬೇಕು’ ಎಂದು ನ್ಯಾ.ದತ್ತು ಹೇಳಿದರು.

‘ತೀರ್ಪು ನೀಡುವುದಿಲ್ಲ’: ನ್ಯಾ.ದತ್ತು ಅವರ ಅಭಿ­ಪ್ರಾಯವನ್ನು ಅಲ್ಲಗಳೆದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು, ‘ಲೋಕಾಯುಕ್ತ ಯಾವತ್ತೂ ತೀರ್ಪು ನೀಡುವ ಸಂಸ್ಥೆಯಲ್ಲ. ದೂರುಗಳನ್ನು ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವ ಕೆಲಸವನ್ನು ಮಾತ್ರ ಮಾಡುತ್ತದೆ. ಲೋಕಾಯುಕ್ತ ಸಲ್ಲಿಸುವ ವರದಿ­ಗಳನ್ನು ಪರಿಶೀಲಿಸಿ ಸರ್ಕಾರ ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಲೋಕಪಾಲ ಕಾಯ್ದೆ ಸರಿ ಇಲ್ಲ: ‘ಸಂಸತ್ತು ಒಪ್ಪಿಗೆ ನೀಡಿರುವ ಲೋಕಪಾಲ ಮಸೂದೆಯು ಭ್ರಷ್ಟರನ್ನು ಪತ್ತೆಹಚ್ಚಿ, ಶಿಕ್ಷಿಸುವುದಕ್ಕೆ ಪೂರಕವಾಗಿಲ್ಲ. ಭ್ರಷ್ಟರ ರಕ್ಷಣೆಗಾಗಿಯೇ ಮಸೂದೆಯನ್ನು ರೂಪಿಸಿದಂತಿದೆ. ಈಗ ಸಂಸತ್ತು ಅಂಗೀಕರಿಸಿರುವ ಮಸೂದೆಯಂತೆ ಲೋಕಪಾಲ ಅಸ್ತಿತ್ವಕ್ಕೆ ಬಂದರೆ ಅದು ರಾಷ್ಟ್ರ­ಮಟ್ಟದ ಒಂದು ಪಂಚಾಯತ್‌ ಸಂಸ್ಥೆಯಂತಾ­ಗುತ್ತದೆ’ ಎಂದು ನಿವೃತ್ತ ಲೋಕಾಯುಕ್ತ ಎನ್‌.ವೆಂಕಟಾಚಲ ಟೀಕಿಸಿದರು.

‘ಈಗ ಸರ್ಕಾರಗಳೇ ಭ್ರಷ್ಟಾಚಾರವನ್ನು ಸಮ­ರ್ಥಿ­ಸಿ­ಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ಭ್ರಷ್ಟರನ್ನು ಶಿಕ್ಷಿಸಲು ಪ್ರಯತ್ನಿಸಿದರೆ, ಸರ್ಕಾರ­ದಿಂದಲೇ ಅಡ್ಡಿಗಳು ಎದುರಾಗುತ್ತವೆ’ ಎಂದು ಸುಪ್ರೀಂ-­ಕೋರ್ಟ್‌ ನಿವೃತ್ತ ಮುಖ್ಯ ನ್ಯಾ. ಎಂ.ಎನ್‌. ವೆಂಕಟಾಚಲಯ್ಯ ಬೇಸರ ವ್ಯಕ್ತಪಡಿಸಿದರು.

‘ಕೈಕಟ್ಟಿ ಹಾಕಿದಂತಾಗಿದೆ’
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ‘ಪ್ರಥಮ ಮಾಹಿತಿ ವರದಿ’ ದಾಖಲಿಸಿದ ಬಳಿಕವೇ ಸರ್ಕಾರಿ ನೌಕರರ ವಿರುದ್ಧ ಕಾರ್ಯಾ­ಚರಣೆ ನಡೆಸಬೇಕು ಎಂಬ ನ್ಯಾಯಾಲಯದ ಆದೇಶದಿಂದ ಲೋಕಾಯುಕ್ತ ಪೊಲೀಸರ ಕೈಕಟ್ಟಿ ಹಾಕಿದಂತಾಗಿದೆ. ತಕ್ಷಣ ದೊರೆತ ಮಾಹಿತಿ ಆಧರಿಸಿ ದಿಢೀರ್‌ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಲೋಕಾ ಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್‌ ರಾವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT